ಕರುನಾಡಿನ ಕರಾವಳಿಯ ಚಿಕ್ಕ ಪ್ರದೇಶ ತುಳುನಾಡು. ಇಲ್ಲಿಯ ಆಚರಣೆಗಳು ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇದನ್ನು ನಾವು ಸೂಕ್ಷ್ಮವಾಗಿ ಹುಡುಕುತ್ತಾ ಹೋದಾಗ ನಮಗೆ ತೆರೆದುಕೊಳ್ಳುವ ಮಜಲುಗಳು ಅನೇಕ. ಪ್ರತಿಯೊಂದು ಆಚರಣೆಯು ತನ್ನದೇ ಆದ ಪ್ರಾಮುಖ್ಯತೆವನ್ನು ಎತ್ತಿ ಹಿಡಿಯುತ್ತದೆ. ಇಲ್ಲಿ ಬರುವ ಆಚರಣೆಗಳು ಮಾನವನ ಪ್ರಾಮುಖ್ಯವನ್ನು ತೋರಿಸುತ್ತದೆ. ಕೆಲವು ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕೆ, ಮನೆತನದಿಂದ ಮನೆತನಕ್ಕೆ ಭಿನ್ನವಾಗಿ ಕಂಡು ಬರುವುದು ತುಳುನಾಡಿನ ವಿಶೇಷತೆ. ಇಂದಿನ ಗ್ರಾಮೀಣ ಜೀವನಕ್ಕೆ ನಗರ ಬದುಕಿನ ಪ್ರಭಾವದಲ್ಲಿಯು ತುಳುನಾಡಿನ ಆಚರಣೆಗಳು ತನ್ನ ಪಾವಿತ್ರ್ಯತೆಯನ್ನು ಕಾಪಾಡಿಕೊಂಡಿರುವುದು ಇಲ್ಲಿನ ಜನರ ನಂಬಿಕೆ ಮತ್ತು ಭಕ್ತಿಗೆ ಕನ್ನಡಿಯನ್ನು ಹಿಡಿದಂತಿದೆ.
ಚಿತ್ರದಲ್ಲಿ ಕಾಣುತ್ತಿರುವುದು ಮಣ್ಣಿನ ಮಡಕೆಯಾದರು ಇದು ವಿಭಿನ್ನವಾದ ಆಕೃತಿಯನ್ನು ಹೊಂದಿದ್ದು, ಇದನ್ನು ತುಳು ಬಾಷೆಯಲ್ಲಿ ‘ಮೂರಿಲೆ ಕುದ್ಪೆ’ ಎಂದು ಕರೆಯಾಲಾಗುತ್ತದೆ. ‘ಮೂರಿಲೆ ಕುದ್ಪೆ’ ಅಂದರೆ ಕನ್ನಡದಲ್ಲಿ ‘ನಾಗ ನೆಲೆಸುವ ಮಣ್ಣಿನ ಪಾತ್ರೆ’ ಎಂದು ಹೇಳಲಾಗುತ್ತದೆ. ಈ ‘ಮೂರಿಲೆ ಕುದ್ಪೆ’ಯನ್ನು ಬನದಲ್ಲಿ ನೆಲೆಸುವ ಹಾವುಗಳಿಗೆ ನಲೆಸಲು ಇಡಲಾಗುತ್ತದೆ. ಈ ಮಡಕೆಯನ್ನು ಸಾಮಾನ್ಯವಾಗಿ ಕುಂಬಾರರೆ ತಯಾರಿಸುತ್ತಾರೆ. ಪ್ರತಿಯೊಂದು ಕುದ್ಪೆಯು ತನ್ನದೆ ಆದ ಆಕೃತಿಯಲ್ಲಿ ವಿಶೇಷತೆಯನ್ನು ಹೊಂದಿದೆ. ಇದನ್ನು ಇಡುವ ಬನದಲ್ಲಿ ವರ್ಷಕ್ಕೆ ಒಂದು ದಿವಸ, ಹೆಚ್ಚಾಗಿ ಡಿಸೆಂಬರ್ ತಿಂಗಳಲ್ಲಿ ಪೂಜೆ ಮಾಡಲಾಗುತ್ತದೆ ಎಂದು ಕುಂಬ್ರದ ಮಾಂಕು ಮುಗೇರ ಉರ್ವ ಹೇಳುತ್ತಾರೆ.
ತುಳುನಾಡಿನಲ್ಲಿ ಹಲವು ಜಾತಿಗಳು ಇವೆ. ಇದು ಇಲ್ಲಿ ತನ್ನದೆ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂಬುದು ವಾಸ್ತವವೂ ಹೌದು. ತುಳುನಾಡಿನಲ್ಲಿ ಹೆಚ್ಚಾಗಿ ಕಂಡು ಬರುವ ಬನಕ್ಕೆ ಒಬ್ಬರು ‘ಕಾಪಾಡ’ ಎಂದು ಇರುತ್ತಾರೆ. ‘ಕಾಪಾಡ’ ಎಂದರೆ ‘ಕಾಯುವವ’ ಎಂದು ಹೇಳಲಾಗುತ್ತದೆ. ಇವರು ಮುಗೇರ ಜಾತಿಗೆ ಸೇರಿದವರಾಗಿರುತ್ತಾರೆ. ಬನದಲ್ಲಿ ಯಾವುದೇ ಪೂಜೆ ನಡೆಯಬೇಕಿದ್ದರೂ ಅಲ್ಲಿ ‘ಕಾಪಾಡ’ರ ಉಪಸ್ಥಿತಿ ಇರಬೇಕು ಮತ್ತು ಅಲ್ಲಿ ಪಾವಿತ್ರ್ಯತೆಯಯು ಇವರ ಮೂಲಕವೇ ನಡೆದರೆ ಮಾತ್ರ ಸರಿಹೋಗುವುದು, ಇಲ್ಲವಾದರೆ ಅನಾಹುತ ತಪ್ಪದು ಎಂದು ‘ಕಾಪಾಡ’ರಾಗಿರುವ ಮಾಂಕು ಮುಗೇರ ಉರ್ವ ಹೇಳುತ್ತಾರೆ.
ಈ ‘ಮೂರಿಲೆ ಕುದ್ಪೆ’ ಎಲ್ಲಾ ಕಡೆಯಲ್ಲಿ ಕಂಡು ಬರುವುದಿಲ್ಲ. ತರವಾಡು ಮನೆಗಳಿಗೆ ಸೇರಿದ ಬನಗಳಲ್ಲಿ ಮಾತ್ರ ಕಂಡು ಬರುತ್ತದೆ ಎಂದು ಮಾಂಕು ಮುಗೇರ ಉರ್ವ ಹೇಳುತ್ತಾರೆ. ಈ ಅಪರೂಪದ ‘ಮೂರಿಲೇ ಕುದ್ಪೆ’ ಪುತ್ತೂರಿನ ವಕೀಲ ಕುಂಬ್ರ ದುರ್ಗಾಪ್ರಸಾದ್ರವರು ತಮ್ಮ ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ.