ಲಕ್ಷ್ಮೇಶ್ವರ: ಮಾರ್ಚ್ ಮತ್ತು ಮೇ ತಿಂಗಳಿನ ಉರಿ ಬಿಸಿಲಲ್ಲಿ ಮಾಗಿ ಉಳುಮೆಗಾಗಿ ಹೊಲಕ್ಕೆ ಹೋಗುವ ಪ್ರತಿಯೊಬ್ಬ ರೈತನ ಬೆನ್ನ ಮೇಲೆ ನೀರು ತುಂಬಿದ ತತ್ರಾಣಿ ಸಾಮಾನ್ಯವಾಗಿ ಕಾಣ ಸಿಗತ್ತಿತ್ತು. ಒಬ್ಬಿಬ್ಬರು ಹೊಲಕ್ಕೆ ಹೋಗುವಾಗ ಇದೇ ತತ್ರಾಣಿಯಲ್ಲಿ ಕುಡಿಯಲು ನೀರು ತೆಗೆದುಕೊಂಡು ಹೋಗುವುದು ಆಗ ಸಾಮಾನ್ಯವಾಗಿತ್ತು. ಆದರೆ ಈ ಪಾಸ್ಟಿಕ್ ಯುಗದಲ್ಲಿ ತತ್ರಾಣಿ ತನ್ನ ಅಸ್ಥಿತ್ವ ಕಳೆದು ಕೊಂಡಿದೆ. ಅದನ್ನು ತಯಾರಿಸುತ್ತಿದ್ದ ಕುಂಬಾರರ ಬದುಕೂ ಬೀದಿಗೆ ಬಿದ್ದಿದೆ.
ಬಿಂದಿಗೆಗಿಂತ ಸಣ್ಣದಾದ ಮಣ್ಣಿನಿಂದ ಮಾಡಿದ ಮಡಿಕೆಯೇ ತತ್ರಾಣಿ. ಒಂದು ತತ್ರಾಣಿಯಲ್ಲಿ ಕನಿಷ್ಠ ಎರಡರಿಂದ ಮೂರು ಲೀಟರ್ ನೀರು ತುಂಬಬಹುದು. ತತ್ರಾಣಿ ತಯಾರಿಸಲು ಕುಂಬಾರರು ಬಹಳ ಪ್ರಯಾಸ ಪಡುತ್ತಿದ್ದರು. ಬೇಸಿಗೆ ಕಾಲದಲ್ಲಿ ಇದು ಪ್ರಿಜ್ನಂತೆ ಕೆಲಸ ಮಾಡುತ್ತದೆ. ಇದರಲ್ಲಿ ನೀರು ತುಂಬಿಸಿ ನೆರಳಿರುವ ಜಾಗದಲ್ಲಿ ಇಟ್ಟರೆ ಇಡೀ ದಿನ ನೀರು ತಂಪಾಗಿ ಇರುತ್ತದೆ. ಹೀಗಾಗಿ ಬೇಸಿಗೆ ಸಮಯದಲ್ಲಿ ರೈತರು ಹಾಗೂ ಸಾರ್ವಜನಿಕರು ತತ್ರಾಣಿ ಉಪಯೋಗಿಸುವುದು ರೂಢಿಯಲ್ಲಿತ್ತು. ಆದರೆ ಈಗ ಕಾಲ ಬದಲಾಗಿದೆ. ರೈತರು ತತ್ರಾಣಿಯಲ್ಲಿ ನೀರು ಒಯ್ಯುವ ಬದಲು ಪ್ಲಾಸ್ಟಿಕ್ ಬಾಟಲ್ಗಳಲ್ಲಿ ನೀರು ಒಯ್ಯುತ್ತಿದ್ದಾರೆ. ಹೀಗಾಗಿ ಈಗ ತತ್ರಾಣಿಗೆ ಬೇಡಿಕೆ ಕಡಿಮೆಯಾಗಿ ಬಿಟ್ಟಿದೆ.
`ಮದ್ಲ ರೈತರು ತತ್ರಾಣಿ ಖರೀದಿ ಮಾಡಾಕ ನಮ್ಮತ್ರ ಬರ್ತಿದ್ರು. ಆದ್ರ ಈಗ ಕಾಲ ಬದ್ಲಾಗೇತಿ. ಯಾವೊಬ್ಬ ರೈತರೂ ತತ್ರಾಣಿ ಕೇಳಾಕ ಬರಂಗಿಲ್ರೀ. ಹಿಂಗಾಗಿ ತತ್ರಾಣಿ ಮಾಡೋದನ್ನ ನಾವ್ ಬಂದ್ ಮಾಡೇವಿ’ ಎಂದು ಕುಂಬಾರಿ ಕೆಯನ್ನೇ ಕಾಯಕವನ್ನಾಗಿ
ಮಾಡಿಕೊಂಡಿರುವ ಫಕ್ಕೀರಪ್ಪ ಕುಂಬಾರ ನೋವಿನಿಂದ ಹೇಳುತ್ತಾರೆ.
`ತತ್ರಾಣ್ಯಾಗ ನೀರ ಯಾವಾಗ್ಲೂ ತಂಪ ಇರ್ತಿದ್ವು. ಅದರಾಗಿನ ನೀರ ಕುಡದ್ರ ಒಟ್ಟ ಬಿಪಿ, ಸುಗರ್ ನಮ್ಹತ್ರ ಸುಳೀತಿದ್ದಿಲ್ರೀ. ಆದ್ರ ಈ ಮಾತು ಮಂದಿಗೆ ತಿಳಿವಲ್ದು. ಪ್ಲಾಸ್ಟಿಕ್ ಬಾಟ್ಲಿ ನೀರು ಆರೋಗ್ಯ ಒಳ್ಳೇದ ಅಲ್ಲ ಅಂತ ಗೊತ್ತಿದ್ರೂ ಅದರಾಗ ನೀರ ಕುಡೀತಾರ’ ಎಂದು ಶಿಗ್ಲಿಯ ಪ್ರಗತಿಪರ ರೈತ ಶಿವಾನಂದ ಮೂಲಿಮನಿ ಹೇಳುತ್ತಾರೆ. `ತತ್ರಾಣಿಗೆ ನಮ್ಮ ಹಳೇ ಕಾಲದ ಪ್ರಿಜ್ ಇದ್ದಂಗ. ಅದು ವಾತಾವರಣದಾಗಿನ ತಂಪನ ಹೀರಕೊಂಡು ನೀರನ್ನ ಯಾವಾಗಲೂ ತಂಪ ಮಾಡತೈತಿ. ಆದ್ರ ಈಗ ಪ್ಲಾಸ್ಟಿಕ್ ಬಾಟಲ್ಗಳಲ್ಲಿ ನೀರು ಒಯ್ಯೋದು ಒಂದು ಫ್ಯಾಷನ್ ಆಗೈತಿ. ಅಲ್ಲದ ತತ್ರಾಣಿ ಸ್ವಲ್ಪ ಭಾರ ಇರತೈತಿ.
ಹಿಂಗಾಗಿ ಅದರಾಗ ನೀರು ತಗೊಂಡ ಹೋಗಾಕ ರೈತರು ಮನಸ ಮಾಡಂಗಿಲ್ಲ. ಆದ್ದರಿಂದ ತತ್ರಾಣಿಗೆಯನ್ನ ರೈತರು ಮರತಾರ’ ಎಂದು ಲಕ್ಷ್ಮೇಶ್ವರದ ಸಾವಯವ ಕೃಷಿಕ ಬಸವರಾಜ ಬೆಂಡಿಗೇರಿ ಹೇಳುತ್ತಾರೆ. ಪ್ಲಾಸ್ಟಿಕ್ ಬಾಟಲ್ಗಳಲ್ಲಿ ನೀರು ತೆಗೆದುಕೊಂಡು ಹೋಗುವುದು ಅಪಾಯ ಅಂತ ಗೊತ್ತಿದ್ದರೂ ಜನರು ಮತ್ತೆ ಮತ್ತೆ ಅವೆ ಬಾಟಲ್ಗಳಲ್ಲಿ ನೀರು ಒಯ್ಯುವುದನ್ನು ಮರೆಯುವುದಿಲ್ಲ. ಒಮ್ಮೆ ಉಪಯೋಗಿಸಿದ ಬಾಟಲ್ಅನ್ನು ಹಾಳು ಮಾಡಬೇಕು ಎಂದು ಕಂಪೆನಿ ತಿಳಿಸಿದ್ದರೂ ಸಹ ಮೇಲಿಂದ ಮೇಲೆ ಅವೇ ಬಾಟಲ್ನಲ್ಲೇ ಜನರು ನೀರು ತುಂಬಿಸಿಟ್ಟುಕೊಂಡು ಕುಡಿಯುತ್ತಾರೆ. ಹೀಗಾಗಿ ಭವಿಷ್ಯದಲ್ಲಿ ಇದು ನಮ್ಮ ಜೀವಕ್ಕೆ ಆಪಾಯ ತರಬಲ್ಲದು.
ಪ್ಲಾಸ್ಟಿಕ್ ಬಾಟಲ್ಗಳ ಬಳಕೆ ಈಗ ಹೆಚ್ಚಾಗಿದೆ. ಹೀಗಾಗಿ ತತ್ರಾಣಿಗಳಿಗೆ ಬಳಕೆ ಈಗ ಬಹಳ ಕಡಿಮೆಯಾಗಿದ್ದು ಅದರ ಬೇಡಿಕೆ ಪಾತಾಳಕ್ಕೆ ಕುಸಿದಿದೆ. ಆದರೆ ಇದು ಕುಂಬಾರಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮೊದಲು ಎಲ್ಲರೂ ಅನಿವಾರ್ಯವಾಗಿ ತತ್ರಾಣಿ ಬಳಸುತ್ತಿದ್ದರು. ಆಗ ಕುಂಬಾರರು ವಿವಿಧ ನಮೂನೆಯ ಆಕಾರದ ತತ್ರಾಣಿಗಳನ್ನು ತಯಾರಿಸುತ್ತಿ ್ದದರು. ಆದರೆ ಪ್ಲಾಸ್ಟಿಕ್ಬಾಟಲ್ ಬಳಕೆಗೆ ಬಂದ ಮೇಲೆ ತತ್ರಾಣಿಯನ್ನು ಕೇಳುವವರೇ ಇಲ್ಲವಾಗಿದೆ.


