ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕುಂದಾಪುರದ ಎಂ.ಎಂ. ಹೆಗ್ಡೆ ಪ್ರತಿಷ್ಠಾನದ ವತಿಯಿಂದ ನೀಡುವ ‘ಎಂ. ಎಂ. ಹೆಗ್ಡೆ ಪ್ರಶಸ್ತಿ’ ಯನ್ನು ಹಿರಿಯ ಯಕ್ಷಗಾನ ಪುರುಷ ವೇಷಧಾರಿ ಕಕ್ಕುಂಜೆ ಅನಂತ ಕುಲಾಲ ಅವರಿಗೆ ನೀಡಲಾಗುವುದು.
ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರು ವೀರಭದ್ರ ನಾಯಕ್ ಅವರಿಂದ ಹೆಜ್ಜೆ ಕಲಿತ ಇವರು ನೆರೆಯ ಗ್ರಾಮದವರಾದ ಗುರು ನಾರಣಪ್ಪ ಉಪ್ಪೂರ, ಶಿರಿಯಾರ ಮಂಜು ನಾಯ್ಕ, ಹಳ್ಳಾಡಿ ಮಂಜಯ್ಯ ಶೆಟ್ಟಿ ಅವರಿಂದ ಮಾತುಗಾರಿಕೆ ಕಲಿತು ವಿವಿಧ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಎಂ.ಎಂ. ಹೆಗ್ಡೆ ಅವರ ಗರಡಿಯಲ್ಲಿ ಪಳಗಿದ ಇವರ ಹೆಜ್ಜೆಗಾರಿಕೆಯಲ್ಲಿ ಹಾರಾಡಿ ಕುಷ್ಟ ಗಾಣಿಗರ ಕಿರು ಹೆಜ್ಜೆಯನ್ನು ಗಮನಿಸಬಹುದು. ಮಾರಣಕಟ್ಟೆ ಒಂದೇ ಮೇಳದಲ್ಲಿ ಸುದೀರ್ಘ 40 ವರ್ಷ ಪುಂಡು ವೇಷ, ಪುರುಷ ವೇಷಗಳಲ್ಲಿ ರಂಜಿಸಿದ್ದಾರೆ.
ಪ್ರಸ್ತುತ ಅನಾರೋಗ್ಯದಿಂದ ಇರುವ ಇವರಿಗೆ ಹುಣ್ಸೆಮಕ್ಕಿಯಲ್ಲಿರುವ ಅವರ ಸ್ವಗೃಹದಲ್ಲಿ ಆಗಸ್ಟ್ 8ರಂದು ಎಂ. ಎಂ. ಹೆಗ್ಡೆ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ


