ಉದ್ಯಮಿಯಾಗಿ ಮುಂಬಯಿ ಕುಲಾಲ ಸಂಘದ ಸಕ್ರಿಯ ಸದಸ್ಯರಾಗಿ, ಸಮಾಜದ ಏಳಿಗೆಗಾಗಿ ದುಡಿದವರಲ್ಲಿ ಸುಂದರ ಕರ್ಮರನ್ ಕೂಡಾ ಪ್ರಮುಖರು. ಮೂಲತಃ ಮೂಡಬಿದ್ರೆ ಸಮೀಪದ ಹಂಡೇಲ್ ನವರಾದ ಇವರು 14ರ ಹರೆಯದಲ್ಲಿ ಮುಂಬಯಿಗೆ ಆಗಮಿಸಿದರು. ವಡಾಲದ ಎನ್. ಕೆ. ಇ. ಎಸ್. ಶಾಲೆಯಲ್ಲಿ ಶಿಕ್ಷಣ ಪೂರೈಸಿ, ಜೆ. ಜೆ. ಕಾಲೇಜ್ ಆಫ್ ಆರ್ಟ್ಸ್ ಅನ್ನು ಸೇರಿಕೊಂಡು, ಕಮರ್ಷಿಯಲ್ ಆರ್ಟಿಸ್ಟ್ ಆಗಿ ತರಬೇತಿ ಪೂರ್ಣಗೊಳಿಸಿದರು.
ಕರ್ಮರನ್ ಅವರು ತಮ್ಮ ಅತ್ಯುನ್ನತ ಮಟ್ಟದ ಜಾಹೀರಾತುಗಳು, ಆಕರ್ಷಕವಾದ ಛಾಯಾಚಿತ್ರಗಳಿಗಾಗಿ ರಾಷ್ಟ್ರಪತಿಯಿಂದ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಬೆಳಕು ಮತ್ತು ನೆರಳಿನ ವಿಶಿಷ್ಟ ಸಂಯೋಜನೆಯನ್ನು ತೋರ್ಪಡಿಸುವ ಅದ್ಭುತ ಛಾಯಚಿತ್ರಕಾರರಾಗಿದ್ದ ಅವರು ಮುಂಬಯಿ ಕುಲಾಲ ಸಂಘದಲ್ಲಿ ಕಳೆದ ನಾಲ್ಕು ದಶಕಗಳಿಂದ ಸಕ್ರಿಯರಾಗಿದ್ದರು. ಸೂರ್ಯ, ಸುವಿಧಾ ಎಂಬ ಜಾಹೀರಾತು ಸಂಸ್ಥೆಯನ್ನು ಸ್ಥಾಪಿಸಿದ್ದ ಅವರು, ಕುಲಾಲ ಸಂಘ ಸಿಎಸ್ ಟಿ – ಮುಲುಂಡ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾಗಿ, ಸದಾ ಚಟುವಟಿಕೆಯಿಂದ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.
ಸಂಘದ ಪ್ರತಿಯೊಂದು ಯೋಜನೆ, ಕಾರ್ಯಕ್ರಮದ ಡಿಸೈನ್ ಹಾಗೂ ಅಮೂಲ್ಯ ತ್ತೈಮಾಸಿಕದ ಮುಖಪುಟವನ್ನು ಬಹಳ ಸುಂದರವಾಗಿ ಮಾಡಿಕೊಡುತ್ತಿದ್ದರು. ಯುವ ಪೀಳಿಗೆಗೆ ಮಾರ್ಗದರ್ಶಕರಾಗಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುತ್ತಿದ್ದರು. ಕರ್ಮರನ್ ಅವರು ಮಕ್ಕಳಿಗಾಗಿನ ಪ್ರತಿ ವರ್ಷ ಸಂಘದ ಮಹಾಸಭೆಯಂದು ಸೂರ್ಯ ಸುವಿಧ ಚಿತ್ರಕಲೆ ಸ್ಪರ್ಧೆ ಪ್ರಾರಂಭಿಸಿ, ಮಕ್ಕಳ ಪ್ರತಿಭೆಗೆ ಪ್ರೋತ್ಸಾಹಿಸುತ್ತಿದ್ದರು. ಸುಂದರ ಕರ್ಮರನ್ ಅವರು ೨೦೧೫, ಮೇ 20 ರಂದುತನ್ನ 75ನೇ ವಯಸ್ಸಿನಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.