ಕುಂಬಾರ/ಕುಲಾಲ ಸಮಾಜದ ಪ್ರಗತಿಗೆ ಶ್ರಮಿಸಿದವರಲ್ಲಿ ದಿ. ಬಿ. ಮಹಾಬಲ ಹಾಂಡ ಅವರೂ ಪ್ರಮುಖರು. ಮೂಲತಃ ಕುಂದಾಪುರ ತಾಲೂಕಿನ ಬಾಲೋಡಿಯವರಾದ ಹಾಂಡ ಪೊಲೀಸ್ ಇಲಾಖೆಯ ಉದ್ಯೋಗಿಯಾಗಿದ್ದರು. ಮಂಗಳೂರು ಬಂದರು ಪೊಲೀಸ್ ಠಾಣೆ ಸಹಿತ ಹಲವು ಕಡೆ ಸಹಾಯಕ ಸಬ್ ಇನ್ಸ್ ಪೆಕ್ಟರ್ (ಎಎಸ್ಸೈ) ಆಗಿದ್ದ ಮಹಾಬಲ ಹಾಂಡ ಮಣ್ಣಗುಡ್ಡೆಯಲ್ಲಿ ನೆಲೆಸಿದ್ದರು.
ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘದ ಸ್ಥಾಪಕ ಸದಸ್ಯ ಹಾಗೂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮಹಾಬಲ ಹಾಂಡ ಅವರು ಸಿದ್ಧಾಪುರದ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ, ಮಂಗಳೂರು ಶ್ರೀದೇವಿ ದೇವಸ್ಥಾನ ಮತ್ತು ಕುಲಶೇಖರದ ಶ್ರೀ ವೀರ ನಾರಾಯಣ ದೇವಸ್ಥಾನದ ಜೀರ್ಣೋದ್ಧಾರದ ಮೂಲ ಪ್ರೇರಕರು ಹಾಗೂ ನಾಯಕತ್ವವನ್ನು ವಹಿಸಿದ್ದರು. ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘ (ಮಾತೃ ಸಂಘ)ದ ಅಧ್ಯಕ್ಷರಾಗಿ 3 ವರ್ಷ ಕಾಲ ಮುನ್ನಡೆಸಿದ್ದರು. ಅಲ್ಪ ಕಾಲದ ಅಸೌಖ್ಯದಿಂದ ಬಳಲಿದ ಅವರು ೨೦೧೧ರ ಸೆಪ್ಟೆಂಬರ್ ೨೩ರಂದು ನಿಧನರಾದರು.
ದಿI ಬಾಲೋಡಿ ಮಹಾಬಲ ಹಾಂಡರ ಒಂದು ನೆನಪು….
ಆಗಿನ್ನೂ ಜಗತ್ತು ಆಧುನಿಕತೆಗೆ ಮೈ ತೆರೆದುಕೊಳ್ಳುತ್ತಿರುವ ತೊಂಬತ್ತರ ದಶಕದ ಉತ್ತರಾರ್ಧದ ಪರ್ವಕಾಲ. ಮನುಕುಲದ ಮೂಲಜರು ಎಂಬ ಹೆಗ್ಗಳಿಕೆಗೆ ಪಾತ್ರರಾದ ಕುಂಬಾರರು ಸರಿ ಸುಮಾರು ಅರುವತ್ತು ಪ್ರತಿಶತ ಕೃಷಿ ಮತ್ತು ಕುಂಬಾರಿಕೆಯನ್ನು ನೆಚ್ಚಿಕೊಂಡು ಬದುಕು ಕಟ್ಟಿಕೊಂಡ ಕಾಲವದು. ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಮೂಲ ಬಂಡವಾಳ ಮಾಡಿಕೊಂಡು ಕಠಿಣ ಪರಿಶ್ರಮದಿಂದ ಸಂತೃಪ್ತ ಬದುಕಿಗಾಗಿ ತಡಕಾಡುತಿದ್ದ ಸಂಕೀರ್ಣ ಕಾಲಘಟ್ಟ. ಜೀವನದ ಬಹುಪಾಲಿನ ಕಠಿಣ ದುಡಿಮೆಯು ಕೇವಲ ಹೊಟ್ಟೆ ಬಟ್ಟೆಯ ಚಿಂತೆ ನೀಗಿಸಲು ಸೀಮಿತವಾಗಿತ್ತೇ ವಿನಃ ಸಮಾಜ, ಸಂಘಟನೆಗಳ ವಿಚಾರ ಯೋಚಿಸವಷ್ಟು ಸಮಯ ನೀಡದ ವ್ಯಸ್ತ ಬದುಕಿನ ಕ್ಷಣ, ದಿನಗಳು.

ಅಂತಹ ದಿನಮಾನದಲ್ಲಿಯೂ ಗಾಢಾಂಧಕಾರದ ನಡುವೆ ಅಪರೂಪಕ್ಕೆ ಗೋಚರಿಸುವ ತೇಜೋ ಪುಂಜದಂತೆ ಅಧಮ್ಯ ಜೀವನೋತ್ಸಾಹ ತುಂಬಿಕೊಂಡ ತರುಣರ ಪಡೆ ಅಲ್ಲಲ್ಲಿ ಸಮುದಾಯ ಸಂಘಟನೆ ಕಟ್ಟುವ ದೂರ ದೃಷ್ಟಿಯ ಧೃಡ ಹೆಜ್ಜೆಯಿಟ್ಟಿದ್ದರು. ಅಂದಿನ ಮುಂಚೂಣಿಯ ನಾಯಕರಲ್ಲಿ ದಿವಂಗತ ಬಾಲೋಡಿ ಮಹಾಬಲ ಹಾಂಡರ ಹೆಸರು ಸದಾ ಸ್ಮರಣೀಯ.
ಸಾಧನೆಯ ಮೇರು ಶಿಖರವಾಗಿ, ಬದುಕನ್ನು ಚರಿತ್ರೆಯಾಗಿಸಿ, ಅಕಾಲದಲ್ಲಿ ಕಾಲಗರ್ಭದಲ್ಲಿ ಲೀನರಾದ ಸಮುದಾಯದ ಅನರ್ಘ್ಯ ರತ್ನ ದಿ! ಬಾಲೋಡಿ ಮಹಾಬಲ ಹಾಂಡರು ಕ್ರಮಿಸಿದ ಜೀವನ ಪಥದ ಎಡರು ತೊಡರು ಹೆಜ್ಜೆಗಳ ಅಗಾಧತೆಯನ್ನು ಅಕ್ಷರಾವಲೋಕನದ ಚಿತ್ತಾರದಲ್ಲಿ ಪಡಿ ಮೂಡಿಸುವ ಪುಟ್ಟ ಪ್ರಯತ್ನ.
ಕುಂದಾಪುರ ತಾಲೂಕಿನ ಸಿದ್ದಾಪುರದ ಕೃಷಿ ಕುಟುಂಬವೊಂದರಲ್ಲಿ 1948ರಲ್ಲಿ ಅನುಜರಿಬ್ಬರ ಮುದ್ದಿನ ಸಹೋದರನಾಗಿ ಲೋಕದ ಬೆಳಕನ್ನು ಕಂಡ ಹಾಂಡರ ಜನ್ಮದಾತರು ಪದ್ಮ ಹಾಂಡ ಮತ್ತು ಕೊಗ್ಗು ಹಾಂಡ್ತಿ. ಬದುಕು ಬಡತನದ ತೋಳ ತೆಕ್ಕೆಯಲ್ಲಿ ಸಿಲುಕಿ ಉಸಿರು ಕಟ್ಟುವ ಸಂದಿಗ್ದತೆಯಲ್ಲಿಯೂ ಎರಡಕ್ಷರದ ವಿದ್ಯೆ ಬಾಳಿಗೆ ಭವ್ಯ ಬೆಳಕು ತೋರೀತು ಎಂದರಿತಿದ್ದ ಚುರುಕು ಮತಿಯ ಹಾಂಡರ ಮೆಟ್ರಿಕ್ ವರೆಗಿನ ಕಲಿಕೆ ಸಿದ್ದಾಪುರದ ಸರ್ಕಾರಿ ಶಾಲೆಯಲ್ಲಿಯೇ.
ತದನಂತರದ ವಿದ್ಯೆಗೆ ಪೂರ್ಣ ವಿರಾಮ ನೀಡಿ ಪುಟ್ಟ ನೌಕರಿ ಅರಸಿ ಹೊರಟ ಹಾಂಡರಿಗೆ ಸಿಕ್ಕಿದ್ದು 1968ರಲ್ಲಿ ಪೊಲೀಸ್ ಇಲಾಖೆಯಲ್ಲಿ ಸಾಮಾನ್ಯ ಪೇದೆಯ ಕೆಲಸ. ಮಂಗಳೂರಿನ ಪಣಂಬೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವ ಮೂಲಕ ತನ್ನ ವೃತ್ತಿ ಬದುಕಿಗೆ ಮುನ್ನುಡಿ ಬರೆದರು. ಜೀವನ ನಿಂತ ನೀರಾಗದೆ ಸದಾ ಚಲನಶೀಲತೆ ಹೊಂದಿರಬೇಕು ಎನ್ನುವ ಕ್ರೀಯಾಶೀಲ ವ್ಯಕ್ತಿತ್ವದ ಹಾಂಡರ ದಕ್ಷ ಮತ್ತು ಪ್ರಾಮಾಣಿಕ ಸೇವೆಯ ಫಲವಾಗಿ ಮುಂದಿನ ದಿನಗಳಲ್ಲಿ ಮುಖ್ಯ ಪೇದೆಯ ಸ್ಥಾನಕ್ಕೆ ಮುಂಬಡ್ತಿ ಪಡೆದರು. ಸಾಧಿಸುವ ಛಲ, ನಿರಂತರ ಪ್ರಯತ್ನ, ನಿರ್ದಿಷ್ಟ ಗುರಿ ತಲುಪುವ ಹಪಾಹಪಿ ಖಂಡಿತ ಯಶಸ್ಸಿನ ಬಾಗಿಲು ತೆರೆಸುತ್ತದೆ ಎನ್ನುವುದಕ್ಕೆ ಜ್ವಲಂತ ಸಾಕ್ಷಿಯಾದ ಹಾಂಡರ ಕಾರ್ಯ ವೈಖರಿ ಮತ್ತು ಕಾರ್ಯದಕ್ಷತೆ ಅವರನ್ನು ಸಬ್ಇನ್ಸ್ಪೆಕ್ಟರ್ ಹುದ್ದೆಗೇರಿಸಿತು. ಹೀಗೆ ವೃತ್ತಿ ಜೀವನದಲ್ಲಿ ಮೇಲ್ದರ್ಜೆಯ ಸ್ಥಾನಕ್ಕೆ ಏರುತ್ತಾ ಯಶಸ್ಸಿನ ಉತ್ತುಂಗಕ್ಕೆ ಏರಿದ ಹಾಂಡರ ವೃತ್ತಿ ಬದುಕಿನ ಇದು ಒಂದು ಮಜಲಾದರೆ ಪ್ರವೃತ್ತಿಯಲ್ಲಿ ನಮ್ಮ ಸಮುದಾಯ ಮತ್ತು ಸಮಾಜಕ್ಕೆ ಒಂದು ಶಕ್ತಿಯಾಗಿ ನಿಂತಿದ್ದರು.
ಅಪಾರ ದೈವ ಭಕ್ತರಾದ ಹಾಂಡರು ತಮ್ಮ ಮನೆಯ ಹತ್ತಿರ ಹಲವಾರು ವರ್ಷಗಳಿಂದ ಮಳೆ ಬಿಸಿಲು ಗಾಳಿಗೆ ಮೈಯೊಡ್ಡಿ ಶಿಥಿಲಾವಸ್ಥೆಯಲ್ಲಿ ಪಾಳು ಬಿದ್ದ ಸಾಲಿಗ್ರಾಮ ಶಿಲಾಮಯ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಲಿಂಗ ಮತ್ತು ಪರಿವಾರ ದೈವಗಳ ಗುಡಿ ಹಾಗೂ ನಾಗದೇವರ ಬಿಂಬ ಸಾನಿಧ್ಯವನ್ನು ಕಂಡಿದ್ದರು. ದೇವಸ್ಥಾನದ ದುರವಸ್ಥೆಯ ಬಗ್ಗೆ ಮತ್ತು ಅದನ್ನು ದುರಸ್ಥಿ ಗೊಳಿಸುವ ಬಗ್ಗೆ ಚಿಂತನೆ ನಡೆಸಿ ಆ ಕಡು ಕಷ್ಟದ ಕಾಲದಲ್ಲಿ ತಾತ್ಕಾಲಿಕ ಮುಳಿ ಹುಲ್ಲಿನ ಛಾವಣಿ ನಿರ್ಮಿಸುವ ಮೂಲಕ ದೈವ ಸಾನಿಧ್ಯವನ್ನು ಪುನಶ್ಚೇತನಗೊಳಿಸಿದ್ದರು. ಸ್ಥಳೀಯ ಪುರೋಹಿತರಿಂದ ಪೂಜಾ ಕೈಂಕರ್ಯ ನಡೆಯುವಂತೆ ವ್ಯವಸ್ಥೆ ಮಾಡಿಸಿದ್ದರು. ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ದೊರೆತರೆ ಬ್ರಹ್ಮ ಲಿಂಗೇಶ್ವರ ದೇವರಿಗೆ ದೇವಸ್ಥಾನ ಕಟ್ಟುವೆ ಅನ್ನುವ ಅವರ ಸಂಕಲ್ಪಕ್ಕೆ ಬ್ರಹ್ಮಲಿಂಗೇಶ್ವರ ಅಸ್ತು ಎಂದು ಅನುಗ್ರಹ ಮುದ್ರೆ ಒತ್ತಿದ ಕಾಲಕ್ಕೆ 1986ರಲ್ಲಿ ಒಂದು ಸುಂದರವಾದ ದೇವಸ್ಥಾನವನ್ನು ತಮ್ಮ ಮುಂದಾಳುತ್ವದಲ್ಲಿ ಊರವರ ಸಹಕಾರದಿಂದ ಕಟ್ಟಿ ಬ್ರಹ್ಮಲಿಂಗೇಶ್ವರ ಪರಿವಾರದ ದೈವಗಳ ಮತ್ತು ನಾಗದೇವರ ಬಿಂಬವನ್ನು ಪ್ರತಿಷ್ಠೆ ಮಾಡಿಸುವ ಮೂಲಕ ಜೀರ್ಣಾವಸ್ಥೆಯಲ್ಲಿದ್ದ ದೇವಸ್ಥಾನಕ್ಕೆ ಕಾಯಕಲ್ಪ ನೀಡಿದರು. ದೈವಸ್ಥಾನದ ಆಡಳಿತ ಮೊಕ್ತೇಸರರಾಗಿ ದೇವಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ತನು ಮನ ಧನದ ಸಹಕಾರ ನೀಡುವ ಮೂಲಕ ಧಾರ್ಮಿಕ ಕೇಂದ್ರವೊಂದನ್ನು ಪುನರುತ್ಥಾನಗೊಳಿಸಿ ಸಮಾಜದಲ್ಲಿ ಧರ್ಮ ಜಾಗೃತಿ ಮತ್ತು ದೈವ ಭಕ್ತಿ ಉದ್ದೀಪನ ಗೊಳ್ಳಲು ಪ್ರೇರಕ ಶಕ್ತಿಯಾದರು.
ಈಗಲೂ ಕುಂದಾಪುರ ತಾಲೂಕಿನ ಸಿದ್ದಾಪುರದ ಹೊಳೆ ಕೋಣಿಯಲ್ಲಿ ಬ್ರಹ್ಮಲಿಂಗೇಶ್ವರ ದೇವರ ದೇವಸ್ಥಾನ ಇದೆ. 2015ರಲ್ಲಿ ಹಾಂಡರು ಕಾಲವಶವಾದ ನಂತರ ಅವರ ಅಣ್ಣನ ಮಗಳ ಗಂಡ ನಾಗರಾಜ್ (ASI) ಅವರ ಮೇಲುಸ್ತುವಾರಿಯಲ್ಲಿ ಮತ್ತೊಮ್ಮೆ ದೇವಸ್ಥಾನದ ಜೀರ್ಣೋದ್ಧಾರಗೊಂಡು ದೈವ ದೇವರ ಪುನರ್ ಪ್ರತಿಷ್ಠೆ ನಡೆದು ಶರಣು ಬಂದ ಭಕ್ತ ಜನಕ್ಕೆ ಬ್ರಹ್ಮಲಿಂಗೇಶ ಅಭಯ ಹಸ್ತನಾಗಿ ನಿಂತಿದ್ದಾನೆ.
ವೃತ್ತಿ ಮತ್ತು ಪ್ರವೃತ್ತಿಯನ್ನು ಒಂದು ತಪಸ್ಸಿನಂತೆ ಸ್ವೀಕರಿಸಿದ್ದ ಹಾಂಡರ ಇಚ್ಚಾಶಕ್ತಿಗೆ ಆನೆಯ ಬಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭ ಒಂದು ಘನಸ್ತರದ ಹುದ್ದೆಯಲ್ಲಿ ಅಧಿಕ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಸಮಯದಲ್ಲೂ ಸಮುದಾಯ ಸಂಘಟನೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 2000ನೇ ಇಸವಿಯಿಂದ 2005ರವರೆಗೆ ದ.ಕ ಜಿಲ್ಲಾ ಮಾತೃ ಸಂಘದ ಅಧ್ಯಕ್ಷತೆಯನ್ನು ವಹಿಸಿಕೊಂಡು ಹಲವಾರು ಅವಿಸ್ಮರಣೀಯ ಕಾರ್ಯಕ್ರಮಗಳ ರೂವಾರಿಯಾದರು. ಅತೀ ವಿಜ್ರಂಭಣೆಯಿಂದ ನಡೆದ ಮಾತೃ ಸಂಘದ ಅಮೃತ ಮಹೋತ್ಸವ ಒಂದಾದರೆ ಮಂಗಳೂರಿನ ಶ್ರೀ ವೀರನಾರಾಯಣ ದೇವಸ್ಥಾನವನ್ನು ನಡೆಸಲು ಸಾಧ್ಯವಿಲ್ಲ ಎಂದು ಅಂದಿನ ದೇವಸ್ಥಾನದ ಕಮಿಟಿಯವರು ಮನವಿ ಕೊಟ್ಟಾಗ ತಕ್ಷಣ ಸ್ಪಂದಿಸಿ ಹೊಸ ಕಮಿಟಿಯನ್ನು ರಚಿಸಿದರು. ಇವರ ಅಧ್ಯಕ್ಷತೆಯಲ್ಲಿ ಶ್ರೀ ದೇವಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ ಶಿಲಾಮಯ ದೇವಸ್ಥಾನದ ಪುನರ್ ಪ್ರತಿಷ್ಠೆ ಕಾರ್ಯವೂ ನಡೆಯಿತು.
ಮಂಗಳೂರಿನ ಹೃದಯ ಭಾಗದಲ್ಲಿ ಈ ಎರಡು ದೇವಸ್ಥಾನಗಳು ಕುಲಾಲ ಸಮುದಾಯದ ಶಿರೋ ಮುಕುಟದಂತೆ ನಿತ್ಯ ಪೂಜೆ ಕೈಂಕರ್ಯದಿಂದ ಮೊದಲ್ಗೊಂಡು ವಾರ್ಷಿಕ ಜಾತ್ರಾ ಮಹೋತ್ಸವದ ವರೆಗೆ ವಿಶೇಷ ಪೂಜಾ ಪುರಸ್ಕಾರ ನಡೆದು ಕುಲಾಲ ಬಾಂಧವರ ಸಾಂಘಿಕ ಒಗ್ಗಟ್ಟನ್ನು ಜಗತ್ತಿಗೆ ಸಾರುತ್ತಿವೆ.
ದೂರದ ಮಲೆನಾಡಿನ ತಪ್ಪಲಿನ ಬುಡದಲ್ಲಿ ಬದುಕು ಕಟ್ಟಿಕೊಂಡಿರುವ ನನಗೆ ಹಾಂಡರ ಬಗ್ಗೆ ಅಪಾರ ಗೌರವ ಮತ್ತು ಅಭಿಮಾನಕ್ಕೆ ಕಾರಣವಾದ ಹಲವಾರು ಸಂಗತಿಗಳ ನಡುವೆ ಸಂಘಟನಾ ದೃಷ್ಟಿಯಲ್ಲಿ ಹಾಂಡರು ನಮಗೆ ಪ್ರಾತಃ ಸ್ಮರಣೀಯರು.
ಶೃಂಗೇರಿಯ ಆ ಮಲೆನಾಡು ಭಾಗದ ಕುಗ್ರಾಮವೊಂದರ ಉತ್ಸಾಹಿ ಯುವಕರಲ್ಲಿ ಸಮುದಾಯ ಸಂಘಟನೆಯ ಕಿಡಿಯನ್ನು ಹೊತ್ತಿಸಿದ್ದೇ ಈ ಮಹಾಬಲ ಹಾಂಡರು. ಅಯಸ್ಕಾಂತೀಯ ಸೆಳೆತದ ಅವರ ಘನ ವ್ಯಕ್ತಿತ್ವದ ನೆನಪುಗಳು ಹಚ್ಚ ಹಸಿರಾಗಿರುವಂತೆ, ಅವರ ಬಗ್ಗೆ ಎಳ್ಳಷ್ಟೂ ತಿಳಿಯದ ನನಗೆ ಎರಡಕ್ಷರ ಬರೆದಾದರೂ ಅವರನ್ನು ಈ ದಿನ ಸ್ಮರಿಸಿಕೊಳ್ಳದಿದ್ದರೆ ನನ್ನ ಬರವಣಿಗೆಯ ಕಾಯಕಕ್ಕೆ ನಾ ಎಸಗಿದ ಬಲು ದೊಡ್ಡ ದ್ರೋಹ ಎಂದರಿತು ಪೆನ್ನು ಕೈಗೆತ್ತಿಕೊಂಡೆ.
ಚಿಗುರು ಮೀಸೆಯ ಸಮುದಾಯದ ತರುಣರ ಕಂಡರೆ ಅವರಿಗೆ ವಿಶೇಷ ಅಭಿಮಾನ, ಅಕ್ಕರೆ. ಬಹುಶ: ಅವರಿಗೆ ಈ ಯುವಕರಲ್ಲಿ ಭವಿಷ್ಯದ ಸಮುದಾಯದ ಬಲಿಷ್ಠ ನಾಯಕರು ಕಾಣುತಿದ್ದರೋ ಏನೋ. ಸಂಘಟನೆಯ ಸಭೆ ಸಮಾರಂಭದಲ್ಲಿ ಬಿಳಿ ಜುಬ್ಬ ಪೈಜಾಮ ತೊಟ್ಟು ತನ್ನ ಘನ ವರ್ಚಸ್ಸಿನಿಂದ ಹಿರಿ ಕಿರಿಯ ಗಣ್ಯರ ನಡುವೆ ಗಹನವಾದ ಚರ್ಚೆಯಲ್ಲಿ ತೊಡಗಿದ್ದರೂ ಕೂಡ ಅರೆಕ್ಷಣ ತಮ್ಮೆಲ್ಲಾ ಘನಸ್ತಿಕೆಯನ್ನು ಬದಿಗಿಟ್ಟು ಸಮಾರಂಭಕ್ಕೆ ನಾನಾ ಭಾಗಗಳಿಂದ ಆಗಮಿಸಿರುವ ಯುವಕರ ತಂಡದ ಬಳಿ ಸಾಗಿ ಕುಶಲೋಪಚಾರವನ್ನು ವಿಚಾರಿಸುವ ಪರಿ ಎಲ್ಲರನ್ನು ಮಂತ್ರ ಮುಗ್ಧಗೊಳಿಸಿತಿತ್ತು. ಒಂದು ದೇಶಾವರಿ ನಗೆ, ತಿಳಿ ಹಾಸ್ಯ ಮೈ ತಡವಿ ಮಾತನಾಡಿಸುವ ಅಪ್ಯಾಯತೆ ಅನ್ಯರಲ್ಲ ಆಪ್ತರಿವರೆನ್ನುವ ಭಾವನೆಯ ಕಟ್ಟಿಕೊಡುತಿತ್ತು. ಯುವಕರನ್ನು ಹುರಿದುಂಬಿಸಲೆಂದೇ ಸಣ್ಣ ಪುಟ್ಟ ಸಂಘಟನೆಗಳ ವಾರ್ಷಿಕ ಕಾರ್ಯಕ್ರಮಗಳಿಗೆ ವೈಯಕ್ತಿಕ ನೆಲೆಯಲ್ಲಿ ಒಂದಿಷ್ಟು ದೇಣಿಗೆ, ಕಾಣಿಕೆ ಕೊಟ್ಟು ಯುವಕರನ್ನು ಕ್ರೀಯಾಶೀಲರಾಗಿಸುವ ಅವರ ದೂರದೃಷ್ಟಿಯ ಹಿಂದಿದ್ದದ್ದು ಬಲಿಷ್ಠ ಸಮುದಾಯ ಸಂಘಟನೆಗೆ ಹಾಕಬೇಕಾಗಿದ್ದ ಭದ್ರ ಬುನಾದಿ.
ಈ ಹೊತ್ತು ಸಂಘಟನೆ ಅವರ ಆಶಯದಂತೆ ಬೆಳೆದಿದೆ, ಬೆಳೆಯುತಿದೆ. ದೊಡ್ಡ ದೊಡ್ಡ ವೇದಿಕೆಗಳಲ್ಲಿ ನಮ್ಮ ಸಮುದಾಯದ ಉನ್ನತ ನಾಯಕರ ಧ್ವನಿ ಸಮುದಾಯದ ಧ್ವನಿಯಾಗಿ ಮೊಳಗುವಾಗ ಆಗುವ ಹೆಮ್ಮೆ ಸಂತಸದ ನಡುವೆಯೂ ಅವರಿಲ್ಲದ ನೋವಿನ ಚಳುಕೊಂದು ದಿಗ್ಗನೆದ್ದು ಮನದಾಳಕ್ಕಿಳಿದು ಮನಸ್ಸನ್ನ ಕದಡುತ್ತದೆ. ಒಂದು ಸಂಸ್ಮರಣೆ ಕಾರ್ಯಕ್ರಮ, ಸಾಧಕರಿಗೊಂದು ಅವರ ಹೆಸರಿನ ಪ್ರಶಸ್ತಿ ಫಲಕದಂತಹ ಕಾರ್ಯಕ್ರಮಗಳ ನಡೆಸಿ ಅವರ ಸಮುದಾಯದ ಸೇವೆಯನ್ನು ಯುವ ಪೀಳಿಗೆಗೆ ನೆನಪಾಗಿಸುವ ಗುರುತರ ಹೊಣೆಗಾರಿಕೆ ನಮ್ಮದೆನ್ನುವ ಅನಿಸಿಕೆ ನನ್ನದು.
ಬರೆದು ಬದುಕು ಇಲ್ಲ ಬರೆಯುವಂತೆ ಬದುಕು ಅನ್ನುವ ಮಾತನ್ನು ಮತ್ತೆ ನೆನಪಿಸಿ ಸಾಗರೋಪಾದಿಯ ತಮ್ಮ ಅಗಾಧ ವ್ಯಕ್ತಿತ್ವದಲ್ಲಿ ಅಣು ಬಿಂಧುವಿನಷ್ಟು ಅಕ್ಷರ ರೂಪಕ್ಕಿಳಿಸಲು ಪ್ರೇರಣೆಯಾದ ತಮ್ಮ ನಿಸ್ವಾರ್ಥ ಸಮರ್ಪಣಾ ಮನೋಭಾವಕ್ಕೆ ವಿನಮ್ರತೆಯಿಂದ ತಲೆಬಾಗುತ್ತಾ ನನ್ನ ಬರಹಕ್ಕೊಂದು ಪೂರ್ಣ ವಿರಾಮದ ಚುಕ್ಕಿ.
ಬರಹ :- ಸತೀಶ್ ಕಜ್ದೋಡಿ ಮಾಳ.
ಮಾಹಿತಿ ಕೃಪೆ:- ಶ್ರೀ ಮತಿ ಸಾವಿತ್ರಿ ಮಹಾಬಲ ಹಾಂಡ.
(ಕುಲಾಲ ಚಾವಡಿ ವಾಟ್ಸಪ್ ಬಳಗದ “ಪುಸ್ತಕ ಜೋಳಿಗೆ ಬಾಳಿನ ದೀವಿಗೆ” ಪಠ್ಯ ಪರಿಕರ ವಿತರಣೆಯ ಸಂದರ್ಭದಲ್ಲಿ ದಿ! ಬಾಲೋಡಿ ಮಹಾಬಲ ಹಾಂಡರ ಸಂಸ್ಮರಣೆ ಪ್ರಯುಕ್ತ ಬರೆದ ಪರಿಚಯ ಲೇಖನ)
‘ವಾರೆಂಟ್ ಸ್ಪೆಷಲಿಸ್ಟ್’, ದಿಟ್ಟ ಪೊಲೀಸ್ ಬಾಲಾಡಿ ಮಹಾಬಲ ಹಾಂಡರವರ ಅಪರೂಪದ ಕಹಾನಿ!
http://youtube.com/watch?v=EXDgWUw96Jg

