ಕುಲಾಲ ಸಮೂದಾಯದ ಅಭಿವೃದ್ಧಿಗಾಗಿ ದುಡಿದವರಲ್ಲಿ ಮುಖಂಡ ಡಾ. ಎಚ್ ಎಂ ಸುಬ್ಬಯ್ಯ ಕೂಡಾ ಒಬ್ಬರು. ಮುಂಬಯಿಯ ಖ್ಯಾತ ವೈದ್ಯರಾಗಿದ್ದ ಅವರು ಮುಂಬಯಿ ಕುಲಾಲ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೂಲತಃ ಮೂಡಬಿದ್ರಿ ಸಮೀಪದ ಪುತ್ತಿಗೆ ಪದವು ಗ್ರಾಮದ ಮೋನಪ್ಪ ಮೇಸ್ತ್ರಿ ಅವರ ಪುತ್ರರಾದ ಸುಬ್ಬಯ್ಯ ಅವರು, ಕಷ್ಟದಿಂದಲೇ ವಿದ್ಯಾಭ್ಯಾಸ ಆರಂಭಿಸಿ, ಎಂಬಿಬಿಎಸ್ ಮುಗಿಸಿ , ಮುಂಬೈಗೆ ತೆರಳಿ ಅಲ್ಲಿ ವೈದ್ಯರಾಗಿದ್ದರು. ಮುಂಬಯಿ ಸೆಂಟ್ರಲ್ ನ ಕಾಮಾಟಿಪುರದಲ್ಲಿ ಕ್ಲಿನಿಕ್ ಹೊಂದಿದ್ದ ಇವರು ಆ ಪರಿಸರದಲ್ಲಿ ಹೆಸರುವಾಸಿಯಾಗಿದ್ದರು.
ಮುಂಬೈ ಕುಲಾಲ ಸಂಘದ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಸುಬ್ಬಯ್ಯ ಅವರು, ಸಂಘದ ಜ್ಯೋತಿ ಕೋ ಆಪರೇಟಿವ್ ಸೊಸೈಟಿಯ ಸ್ಥಾಪಕ ಸದಸ್ಯರಾಗಿದ್ದರು. ಇವರ ಅವಧಿಯಲ್ಲಿ ಸಂಘ ಅಭಿವೃದ್ಧಿ ಹೊಂದಿದ್ದು, ಆಧುನಿಕ ಹಾಗೂ ವೈಜ್ಞಾನಿಕವಾಗಿ ಚಿಂತಿಸುತ್ತಿದ್ದ ಇವರು ಸಮುದಾಯದ ಉನ್ನತಿಗೆ ಅನೇಕ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಇವರ ಮುತುವರ್ಜಿಯಲ್ಲಿ ಮಂಗಳೂರಿನ ಕುಲಾಲ ಭವನ ನಿರ್ಮಾಣವಾಗಿತ್ತು.
ಅಸೌಖ್ಯದ ಕಾರಣದಿಂದ ಮುಂಬೈಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸುಬ್ಬಯ್ಯ ಅವರು ಚಿಕಿತ್ಸೆ ಫಲಕಾರಿಯಾಗದೆ ೨೦೧೩, ಜುಲೈ 13 ರ ಶನಿವಾರ ಅಸ್ತಂಗತರಾದರು.