ಕುಂ.ವೀ. ಎಂಬ ಎರಡಕ್ಷರ ನೆನೆದಾಗ ಗೋಚರಿಸುವುದು ಜಮೀನ್ದಾರಿ ಪದ್ಧತಿಯ ಗತ್ತು, ಅಹಂಕಾರ, ದರ್ಪ, ಅಟ್ಟಹಾಸ ಇವುಗಳಿಗೆ ಸಿಕ್ಕಿ ನಲುಗುವ ಕೆಳವರ್ಗದ ಜನತೆಯ ಅಸಹಾಯಕತೆ, ರಕ್ತಸಿಕ್ತ ಬದುಕಿನ ಪುಟಗಳ ಅನಾವರಣ ಇವುಗಳ ವಿವರಣೆಯ ಕತೆ – ಕಾದಂಬರಿಗಳಲ್ಲಿ ಬಳಸಿರುವ ಬಳ್ಳಾರಿ ಪ್ರದೇಶದ ಸೊಗಡಿನ ಭಾಷೆಯ ಕಾದಂಬರಿ ಕರ್ತೃ.
ಕುಂಬಾರ ವೀರಭದ್ರಪ್ಪ (ಕುಂ.ವೀ) ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ. ತಂದೆ ಕುಂಬಾರ ಹಾಲಪ್ಪ, ತಾಯಿ ಕೊಟ್ರವ್ವ. ಪ್ರಾರಂಭಿಕದಿಂದ ಹೈಸ್ಕೂಲಿನವರೆಗೆ ಕೊಟ್ಟೂರಿನಲ್ಲಿ. ತುಮಕೂರಿನ ಸಿದ್ಧಗಂಗೆಯಲ್ಲಿ ಟಿ.ಸಿ.ಎಚ್ ಹಾಗೂ ಕನ್ನಡ ಸ್ನಾತಕೋತ್ತರ ಪದವಿ
ಇದರ ವಂಶದಲ್ಲಿಯೇ ಪ್ರಥಮ ಅಕ್ಷರಸ್ಥರೆನಿಸಿ ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಪಡೆದ ಪರಿಣತಿ. ತಂದೆಯು ಸುಳ್ಳಿನ ಕಥೆಗಳನ್ನು ಅತಿರಂಜನೀಯವಾಗಿ ವ್ಯಾಖ್ಯಾನಿಸುತ್ತಿದ್ದುದನ್ನು ಕೇಳಿ ಕೇಳಿ ಇವರ ಮನಸ್ಸಿನಲ್ಲಿಯೂ ಕತೆಗಾರನೊಬ್ಬನ ಉದಯಕ್ಕೆ ಕಾರಣವಾಯಿತು. ಆರನೆಯ ತರಗತಿಯಲ್ಲಿದ್ದಾಗಲೇ ತಂದೆಯಿಂದ ಬಂದ ಬಳುವಳಿಯಾಗಿ ಇವರೂ ಕೂಡಾ ಅತಿರೋಚಕವಾಗಿ, ಮಾಂತ್ರಿಕತೆಯ ಸೊಬಗನ್ನು ತುಂಬಿ ನಿರರ್ಗಳವಾಗಿ ಕತೆ ಹೇಳತೊಡಗಿದರೆ ಸಹಾಪಾಠಿಗಳೇನು ಶಿಕ್ಷಕರೂ ಮಂತ್ರ ಮುಗ್ಧರಾಗಿ ಕತೆ ಕೇಳುತ್ತಿದ್ದರಂತೆ.
ಉದ್ಯೋಗಕ್ಕಾಗಿ ಸೇರಿದ್ದು ಶಾಲಾ ಶಿಕ್ಷಕರಾಗಿ. ಆಂಧ್ರ ಕರ್ನಾಟಕ ಗಡಿವಿಭಾಗದ ಹಲವಾರು ಶಾಲೆಗಳಲ್ಲಿ ಉಪಾಧ್ಯಾಯರಾಗಿ ಕಾರ್ಯನಿರ್ವಹಿಸಿ ೨೦೦೯ರಲ್ಲಿ ನಿವೃತ್ತಿ.
ನಗರ ಪ್ರದೇಶದ ಕನ್ನಡ ಕೃತಕವಾದದ್ದು, ಬೋನ್ಸಾಯ್ ಗಿಡದಂತೆ ಟ್ರಿಮ್ ಆದದ್ದು, ಹಳ್ಳಿಗಾಡಿನ ಭಾಷೆ ಜೀವಂತ ಭಾಷೆ, ಹಳ್ಳಿಗಳೇ ಸಾಹಿತ್ಯದ ಶಕ್ತಿ ಕೇಂದ್ರಗಳು, ಹಳ್ಳಿಯ ಬದುಕಿನ ಚಿತ್ರಣಗಳೇ ನನ್ನ ಎಲ್ಲ ಸಾಹಿತ್ಯದ ಸತ್ವ, ಅಸಲಿ – ಪ್ರಾಮಾಣಿಕವಾಗಿರುವಂತಹದು ಎನ್ನುವ ಕುಂ.ವೀ.ಯವರು ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳನ್ನು, ಸಂಘರ್ಷಗಳನ್ನು ಕತೆ – ಕಾದಂಬರಿಗಳ ಮೂಲಕ ಚಿತ್ರಿಸತೊಡಗಿದ್ದಾರೆ.ಇವರ ಬರೆಹವು ಪ್ರಾದೇಶಿಕ ಮತ್ತು ಜನಾಂಗೀಯ ಭಾಷೆಯ ಸೊಗಡಿನಿಂದ ಕೂಡಿದ್ದು, ಗ್ರಾಮೀಣ ಬದುಕಿನ ಒಳಪದರಗಳಲ್ಲಿ ಹರಡಿರುವ ಸಾಂಸ್ಕೃತಿಕ, ನೆಲೆಗಳ ಚಿತ್ರಣಗಳನ್ನು ಯಥಾವತ್ತಾಗಿ ಮೂಡಿಸಿದ್ದಾರೆ.
ಹೀಗೆ ಬರೆದ ಮೊದಲ ಕತೆ ‘ಬಲಿ’. ತಮ್ಮೂರಿನ ಜಾತ್ರೆಯಲ್ಲಿ ನಡೆಯುತ್ತಿದ್ದ ಪ್ರಾಣಿಬಲಿ ಕುರಿತು ಬರೆದ ಕತೆ ಇದಾಗಿತ್ತು. ಆಗಿನ್ನೂ ಇವರು ಟಿ.ಸಿ.ಎಚ್. ವಿದ್ಯಾರ್ಥಿ. ಈ ಕತೆಯು ಬಳ್ಳಾರಿ ಜಿಲ್ಲೆಯ ಕಥಾಸಂಕಲನದಲ್ಲಿಯೂ ಸೇರ್ಪಡೆಯಾಗಿದೆ. ನಂತರ ಬರೆದ ಕತೆ ಕಾಡಿನ ಅವ್ಯವಹಾರ, ಗೊಂದಲಗಳ ಬಗ್ಗೆ ಬರೆದ ಕತೆ, ಗಾರ್ಡ್, ಫಾರೆಸ್ಟ್ ಅಧಿಕಾರಿಗಳ ವೃತ್ತಿಗೆ ಸಂಚಕಾರ ತರುವಷ್ಟು ಪ್ರಬಲ ಪರಿಣಾಮ ಬೀರಿದ ಕತೆಯಾಗಿದ್ದು, ಹೊರಗಿನ ಯಾವುದೇ ಒತ್ತಡಕ್ಕೂ ಮಣಿಯದೆ ತಾನು ಬರೆದದ್ದೆ ಸರಿ ಎಂದು ವಾದಿಸಿ ಪ್ರತಿಭಟನಾ ಮನೋಭಾವವನ್ನು ರೂಢಿಸಿಕೊಂಡರು.
ದಲಿತ ಜನಾಂಗವು ಮೌನವಾಗಿ ಅನುಭವಿಸುತ್ತಿರುವ ನೋವು, ಹತಾಶೆ, ಕೀಳರಿಮೆ ಇವುಗಳನ್ನು ಯಥಾವತ್ತಾಗಿ ಚಿತ್ರಿಸುತ್ತಾ ಬಂದಿದ್ದು, ಹೀಗೆ ಬರೆದ ಕಥೆಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲೆಲ್ಲಾ ಪ್ರಕಟಗೊಂಡಿದ್ದು ಇನ್ನಾದರೂ ಸಾಯಬೇಕು, ಡೋಮ ಮತ್ತು ಇತರ ಕತೆಗಳು, ಕುಂ.ವೀ. ಕಥೆಗಳು, ಸುಶೀಲ ಎಂಬ ನಾಯಿಯೂ ವಾಗಿಲಿ ಎಂಬ ಗ್ರಾಮವೂ ಮುಂತಾದ ೧೪ ಕಥಾ ಸಂಕಲನಗಳಲ್ಲಿ ಸೇರಿವೆ.
ಇವರು ಬರೆದ ಮೊಟ್ಟಮೊದಲ ಕಾದಂಬರಿ ‘ಕಪ್ಪು’. ಚೊಚ್ಚಿಲ ಕೃತಿಗೇ ಕರ್ನಾಟಕ ಸಾಹಿತ್ಯ ಅಕಾಡಮಿಯ ಪ್ರಶಸ್ತಿಯನ್ನು (೧೯೮೩) ಪಡೆದುಕೊಂಡಿದ್ದಾರೆ. ನಂತರ ಪ್ರಕಟವಾದ ಕಾದಂಬರಿಗಳು ಮನಮೆಚ್ಚಿದ ಹುಡುಗಿ, ಪ್ರತಿಧ್ವಂದಿ, ಪ್ರೇಮವೆಂಬ ಹೊನ್ನುಡಿ, ದ್ವಾವಲಾಪುರ, ಪಕ್ಷಿಗಳು, ಕೆಂಡದಮಳೆ ಮೊದಲಾದ ೧೭ ಕಾದಂಬರಿಗಳು ಪ್ರಕಟಗೊಂಡಿವೆ.
ಚಾರ್ಲಿಚಾಪ್ಲಿನ್, ಸುಭದ್ರಮ್ಮ ಮನ್ಸೂರ್, ನೇತಾಜಿ ಸುಭಾಷ್ ಚಂದ್ರ ಬೋಸ್, ರಾಹುಲ ಸಾಂಕೃತ್ಯಾಯನ ಮೊದಲಾದ ಜೀವನ ಚರಿತ್ರೆಗಳಲ್ಲದೆ ಕವನ ಸಂಕಲನ – ದಿವಿ ಸೀಮೆಯ ಹಾಡು, ಆತ್ಮಕಥೆ – ಗಾಂಧಿಕ್ಲಾಸು ಹಾಗೂ ವಿಮರ್ಶೆ – ಜಮೀನ್ದಾರಿ ವ್ಯವಸ್ಥೆ ಮತ್ತು ತೆಲುಗು ಸಾಹಿತ್ಯ ಮುಂತಾದ ಕೃತಿಗಳೂ ಸೇರಿ ಒಟ್ಟು ೩೮ ಕೃತಿಗಳನ್ನು ರಚಿಸಿದ್ದಾರೆ.ತೆಲುಗಿನಿಂದಲೂ ಹಲವಾರು ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದು ತೆಲುಗುಕಥೆ, ಒಂದು ಪೀಳಿಗೆಯ ತೆಲುಗು ಕಥೆಗಳು, ಚಿನ್ನದ ತೆನೆ, ತನ್ನ ಮಾರ್ಗ ಈ ನಾಲ್ಕು ಕಥಾಸಂಕಲನಗಳನ್ನು ಕೇಂದ್ರ ಸಾಹಿತ್ಯ ಅಕಾಡಮಿಯು ಹೊರತಂದಿದೆ.
ಕರ್ನಾಟಕ ಸಾಹಿತ್ಯ ಅಕಾಡಮಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡಮಿ ಮತ್ತು ಕರ್ನಾಟಕ ಚಲನಚಿತ್ರ ಸಹಾಯಧನ ಸಮಿತಿ ಮುಂತಾದ ಸಮಿತಿಗಳ ಸದಸ್ಯರಾಗಿದ್ದಲ್ಲದೆ ಕನ್ನಡ ವಿಶ್ವವಿದ್ಯಾಲಯದ ವಿಸಿಟಿಂಗ್ ಫೆಲೊ ಗೌರವಕ್ಕೂ ಪಾತ್ರರಾಗಿದ್ದಾರೆ. ಮನಮೆಚ್ಚಿದ ಹುಡುಗಿ ಕಾದಂಬರಿಯು ‘ಬೇಟೆ’ ಚಲನಚಿತ್ರವಾಗಿ ಬೇಲಿಯ ಹೂಗಳು ‘ದೊರೆ’ಯಾಗಿ, ಕೆಂಡದ ಮಳೆ ಕರೆವಲ್ಲಿ ಉದಕವಾಗಿದ್ದವರ ಕಥೆಯು ‘ಕೆಂಡದ ಮಳೆ’ಯಾಗಿ, ಕೊಟ್ರೇಶಿ ಹೈಸ್ಕೂಲಿಗೆ ಸೇರಿದ್ದು ‘ಕೊಟ್ರೇಶಿ ಕನಸು’ ಆಗಿ (ಆತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆದ ಚಿತ್ರ), ಬೇಲಿ ಮತ್ತು ಹೊಲ, ಭಗವತಿಯ ಕಾಡು ಮುಂತಾದವುಗಳು ಚಲನಚಿತ್ರವಾಗಿದ್ದಲ್ಲದೆ ಕೂರ್ಮಾವತಾರ ಕಾದಂಬರಿಯು ಚಲನಚಿತ್ರವಾಗಿ ಕೇಂದ್ರ ಸರಕಾರದ ರಜತ ಕಮಲ ಪ್ರಶಸ್ತಿ ಪಡೆದಿದೆ.
ಇವರ ಸೃಜನಶೀಲ ಬರಹಕ್ಕಾಗಿ ‘ಕಪ್ಪು’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೮೩); ‘ಡೋಮ ಮತ್ತು ಇತರ ಕಥೆಗಳು’ ಕಥಾಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ (೧೯೮೭); ‘ಶಾಮಣ್ಣ’ ಕಾದಂಬರಿಗೆ ಹುನಗುಂದದ ಸಾರಂಗ ಮಠ ಪ್ರತಿಷ್ಠಾನ ಪ್ರಶಸ್ತಿ (೧೯೯೯), ಸಿರಿಸಂಗಿ ಲಿಂಗರಾಜ ಪ್ರತಿಷ್ಠಾನ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿಯ ಪ್ರಶಸ್ತಿ; ‘ಬೇಲಿ ಮತ್ತು ಹೊಲ’ ಕಾದಂಬರಿಗೆ ವರ್ಧಮಾನ ಉದಯೋನ್ಮುಖ ಪ್ರಶಸ್ತಿ (೧೯೯೮); ‘ಭಗವತಿಯ ಕಾಡು’ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ಮತ್ತು ಪುತ್ತೂರಿನ ಉಗ್ರಾಣ ಪ್ರತಿಷ್ಠಾನ ಪ್ರಶಸ್ತಿ (೧೯೮೯); ‘ಅರಮನೆ’ ಕಾದಂಬರಿಗೆ ಲದ್ವಾ ಪ್ರತಿಷ್ಠಾನ ಪ್ರಶಸ್ತಿ ಮತ್ತು ವೀಚಿ ಪ್ರತಿಷ್ಠಾನ ಪ್ರಶಸ್ತಿ (೨೦೦೬), ಅಲ್ಲದೆ ಚದುರಂಗ ಪ್ರಶಸ್ತಿ ಮತ್ತು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ (೨೦೦೭) ಗಳಲ್ಲದೆ ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ (೨೦೦೧), ರಾಜ್ಯೋತ್ಸವ ಪ್ರಶಸ್ತಿ (೨೦೦೫), ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ (೨೦೦೬)ಗಳ ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (೨೦೧೧) ಕೂಡಾ ದೊರೆತಿರುವುದಲ್ಲದೆ ಕುಂ.ವೀ. ಸಾಹಿತ್ಯದ ಬಗ್ಗೆ ೬ ವಿದ್ಯಾರ್ಥಿಗಳು ಪಿಎಚ್.ಡಿ. ಪದವಿ ಮತ್ತು ೮ ವಿದ್ಯಾರ್ಥಿಗಳು ಎಂ.ಫಿಲ್. ಪದವಿ ಪಡೆದಿದ್ದಾರೆ.
ಕುಂಬಾರ ವೀರಭದ್ರಪ್ಪ (ಕುಂವೀ) ಪರಿಚಯ:
ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ, ೧ ಅಕ್ಟೋಬರ್, ೧೯೫೩ರಂದು. ಎಂ.ಎ ಪದವೀಧರರು. ಆಂಧ್ರಪ್ರದೇಶದ ವಂದವಾಗಿಲಿ, ಗೂಳ್ಯಂ ಮತ್ತು ಹಿರೇಹಾಳುಗಳಂಥ ಹಳ್ಳಿಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮೂರುವರೆ ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವರು.
ಸದ್ಯಕ್ಕೆ ಕೊಟ್ಟೂರಲ್ಲಿ ನೆಲೆಸಿದ್ದಾರೆ.
ಕೃತಿಗಳು: ಕಥಾ ಸಂಕಲನಗಳು:
ಇನ್ನಾದರೂ ಸಾಯಬೇಕು (೧೯೮೨), ಡೋಮ ಮತ್ತಿತರ ಕಥೆಗಳು(೧೯೮೫), ಕುಂವೀ ಕಥೆಗಳು (೧೯೮೫), ಭಗವತಿ ಕಾಡು (೧೯೯೦), ನಿಜಲಿಂಗ (೧೯೯೪), ಸುಶೀಲೆ ಎಂಬ ನಾಯಿಯೂ ವಾಗಿಲಿ ಎಂಬ ಗ್ರಾಮವೂ (೧೯೯೫), ಅಪೂರ್ವ ಚಿಂತಾಮಣಿ ಕತೆ (೧೯೯೬), ಭಳಾರೆ ವಿಚಿತ್ರಂ(೨೦೦೨), ಕೂಳೆ(೨೦೦೭), ಕುಂವೀ ಆಯ್ದ ಕಥೆಗಳು(೨೦೦೭), ಬರೀ ಕಥೆಯಲ್ಲೋ ಅಣ್ಣಾ (ಸಮಗ್ರ ಕಥಾಸಂಕಲನ ೨೦೧೦), ಮಣ್ಣೇ ಮೊದಲು (೨೦೦೪), ನಿಗಿನಿಗಿ ಹಗಲು (೨೦೦೭), ರಾಯಲಸೀಮೆ (೨೦೦೮), ಸೂರ್ಯನ ಕೊಡೆ(೨೦೧೧), ಎಂಟರ್ ದಿ ಡ್ರಾಗನ್ (೨೦೧೩).
ಕಾದಂಬರಿಗಳು:
ಕಪ್ಪು (೧೯೮೦), ಬೇಲಿ ಮತ್ತು ಹೊಲ (೧೯೮೨), ಆಸ್ತಿ (೧೯೮೩), ಹನುಮ (೧೯೮೪), ದ್ಯಾವಲಾಪುರ (೧೯೮೩), ಪಕ್ಷಿಗಳು (೧೯೮೫), ಪ್ರತಿದ್ವಂಧಿ (೧೯೮೫), ಪ್ರೇಮವೆಂಬ ಹೊನ್ನುಡಿ (೧೯೮೫), ಕೆಂಡದ ಮಳೆ (೧೯೮೬), ಕೊಟ್ರ ಹೈಸ್ಕೂಲಿಗೆ ಸೇರಿದ್ದು (೧೯೯೨) ಶಾಮಣ್ಣ (೧೯೯೮), ಯಾಪಿಲು (೨೦೦೧), ಅರಮನೆ (೨೦೦೪), ಆರೋಹಣ (೨೦೦೯), ಹೇಮರೆಡ್ಡಿ ಮಲ್ಲಮ್ಮನ ಕಥೆಯು (೨೦೧೨), ಏಕಾಂಬರ (೨೦೧೨).
ಅನುವಾದ:
ತೆಲುಗು ಕಥೆ-೩೦ ತೆಲುಗು ಕಥೆಗಳ ಕನ್ನಡ ಅನುವಾದ (೧೯೯೮), ಒಂದು ಪೀಳಿಗೆಯ ತೆಲುಗು ಕಥೆಗಳು-ಒಕ ತರಂ ತೆಲುಗು ಕಥೆಗಳ ಕಥಾ ಸಂಕಲನದ ೩೬ ಕಥೆಗಳ ಕನ್ನಡ ಅನುವಾದ (೨೦೦೧), ಚಿನ್ನದ ತೆನೆ- ತೆಲುಗಿನ ಬಂಗಾರು ಕಥಲು ಸಂಕಲನದ ೭೬ ತೆಲುಗು ಕಥೆಗಳ ಕನ್ನಡ ಅನುವಾದ(೨೦೧೦), ತನ್ನ ಮಾರ್ಗ- ತೆಲುಗಿನ ಡಾ. ಅಬ್ಬೂರಿ ಛಾಯದೇವಿಯವರ ತನ ಮಾರ್ಗಂ ಸಂಕಲನದ ೨೮ ಕಥೆಗಳ ಕನ್ನಡ ಅನುವಾದ (೨೦೧೧). ಈ ಐದು ಅನುವಾದಿತ ಸಂಕಲನಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ.
ಕವನ ಸಂಕಲನ:
ದಿವಿ ಸೀಮೆಯ ಹಾಡು(೧೯೭೬)
ಜೀವನ ಚರಿತ್ರೆ:
ಚಾಪ್ಲಿನ್(೧೯೯೯), ಸುಭದ್ರಮ್ಮ ಮನ್ಸೂರು, ನೇತಾಜಿ ಸುಭಾಳ್ಚಂದ್ರ ಬೋಸ್, ರಾಹುಲ ಸಾಂಕೃತ್ಯಾಯನ, ಶ್ರೀಕೃಷ್ಣದೇವರಾಯ.
ವಿಮರ್ಶೆ:
ಜಮೀನ್ದಾರಿ ವ್ಯವಸ್ಥೆ ಮತ್ತು ತೆಲುಗು ಸಾಹಿತ್ಯ.
ಆತ್ಮಕಥೆ:
ಗಾಂಧಿಕ್ಲಾಸು.
ಚಲನಚಿತ್ರಗಳಾದ ಕೃತಿಗಳು:
ಮನ ಮೆಚ್ಚಿದ ಹುಡುಗಿ, ಕೆಂಡದಮಳೆ, ದೊರೆ, ಕೊಟ್ರೇಶಿ ಕನಸು (ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ), ಬೇಲಿ ಮತ್ತು ಹೊಲ, ಭಗವತಿ ಕಾಡು, ಕೂರ್ಮಾವತಾg (ರಜತ ಕಮಲ ರಾಷ್ಟ್ರಪ್ರಶಸ್ತಿ, ವೈಯಕ್ತಿಕವಾಗಿ ಅತ್ಯುತ್ತಮ ಕಥಾಲೇಖಕ ಪ್ರಶಸ್ತಿ)- ಇವು ಇವರ ಕಥೆ ಕಾದಂಬರಿಗಳಾಧರಿತ ಚಲನಚಿತ್ರಗಳು.
ಇನ್ನಿತರ ವಿವರಗಳು:
ಇವರ ಕಥೆ, ಕಾದಂಬರಿಗಳ ಬಗ್ಗೆ ಎಂಟು ಎಂ.ಫಿಲ್ ಪ್ರಬಂಧಗಳು, ಏಳು ಪಿಎಚ್.ಡಿ ಮಹಾಪ್ರಬಂಧಗಳು ಪ್ರಕಟಗೊಂಡಿವೆ. ಇವರ ಬಹುತೇಕ ಕಥೆ ಕಾದಂಬರಿಗಳನ್ನು ನಾಡಿನ ಹಲವು ವಿಶ್ವವಿದ್ಯಾಲಯಗಳು ಪದವಿ ಹಾಗೂ ಸ್ನಾತಕೋತ್ತರ ತರಗತಿಗಳಿಗೆ ಪಠ್ಯವಾಗಿರಿಸಿದೆ. ಇವರ ಹಲವಾರು ಕಥೆಗಳು ಇಂಗ್ಲೀಷ್ ಹಾಗೂ ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಅಲ್ಲದೆ ಹತ್ತಾರು ಕಥೆಗಳು ಕಿರುಚಿತ್ರಗಳಾಗಿ ದೃಶ್ಯಮಾಧ್ಯಮಗಳಲ್ಲಿ ಪ್ರಸಾರಗೊಂಡಿವೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯತ್ವ, ಚಲನಚಿತ್ರ ಸಹಾಯಧನ ಸಮಿತಿಯ ಸದಸ್ಯತ್ವ, ಅನುವಾದ ಸಾಹಿತ್ಯ ಅಕಾಡೆಮಿ ಸದಸ್ಯತ್ವ ಮತ್ತು ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಲೇಖಕ, ಕೇಂದ್ರ ಸಾಹಿತ್ಯ ಅಕಾಡೆಮಿಯ ರೆಸಿಡೆಂಟ್ ರೈಟರ್ ಹೊಣೆಗಳನ್ನೂ ಕುಂವೀ ನಿರ್ವಹಿಸಿರುವರು.
ಪುರಸ್ಕಾರಗಳು:
ಇವರು ತಮ್ಮ ಕೃತಿಗಳಿಗೆ ಎರಡು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನವನ್ನು, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿಯನ್ನು ಪಡೆದಿರುವರಲ್ಲದೆ ತಮ್ಮ ಮಹಾ ಕಾದಂಬರಿ ಅರಮನೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೨೦೦೮) ಪಡೆದಿದ್ದಾರೆ.
ಅಲ್ಲದೆ ಕಾಂತಾವರದ ವರ್ಧಮಾನ ಉದಯೋನ್ಮುಖ ಪ್ರಶಸ್ತಿ, ಪುತ್ತೂರಿನ ಉಗ್ರಾಣ ಪ್ರಶಸ್ತಿ, ತುಮಕೂರಿನ ವೀಚಿ ಪ್ರತಿಷ್ಠಾನ ಪ್ರಶಸ್ತಿ, ಅಥಣಿಯ ಸಿರಸಂಗಿ ಲಿಂಗರಾಜ ಪ್ರಶಸ್ತಿ, ಕುಮಟಾದ ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ, ಮಂಗಳೂರಿನ ಸಂದೇಶ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ (೨೦೦೪) ಸೇರಿದಂತೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯವು ಕುಂವೀಯವರಿಗೆ ೨೦೧೧ರ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ನೃಪತುಂಗ ಪ್ರಶಸ್ತಿಯನ್ನು ೧೩-೧೨-೨೦೧೪ ರಂದು ಬೆಂಗಳೂರಿನಲ್ಲಿ ಕುಂವೀಯವರಿಗೆ ಹಸ್ತಾಂತರಿಸಲಾಯಿತು.