ಡಾನ್ಸ್ ಕ್ರೇಝ್ ಚಿಕ್ಕ ಮಕ್ಕಳಿಂದಲೇ ಶುರುವಾಗಿರುತ್ತದೆ. ಡಾನ್ಸ್ನಿಂದ ತಮ್ಮ ಪ್ರತಿಭೆ ಅನಾವರಣ ಮಾಡಿಕೊಳ್ಳುವ ವೇದಿಕೆಯೂ ದೊರೆಯುತ್ತದೆ. ಡಾನ್ಸ್ನಿಂದ ಪಬ್ಲಿಕ್ ಅಟ್ರ್ಯಾಕ್ಟ್ ಮಾಡಬಹುದು ಎಂಬ ಕ್ರೇಝ್ ಯುವಕರದು. ರಿಯಾಲಿಟಿ ಶೋ ವೀಕ್ಷಿಸುವ ಯವ ಜನತೆ ಅವರಂತೆ ತಾನೇಕೆ ಆಗಬಾರದು ಎಂಬ ಪ್ರಶ್ನೆಯೊಂದಿಗೆ ಡಾನ್ಸ್ ಕ್ಲಾಸ್ ಗೆ ಸೇರುತ್ತಿದ್ದಾರೆ. `ಫಿಲ್ಮ್ ನಲ್ಲಾದರೂ ಛಾನ್ಸ್ ಸಿಗುತ್ತದೆ. ಕೊರಿಯೊಗ್ರಾಫ಼ರ್ ಆದರೆ ಇನ್ನೂ ಚೆನ್ನಾಗಿರುತ್ತದೆ’ ಎಂಬ ಕನಸು ಅವರದು. ಇಂತಹ ಡಾನ್ಸ್ , ಸಮಾಜಸೇವೆ, ಕಿರು ಸಿನಿಮಾ ನಿರ್ದೇಶನ ಹೀಗೆ ಎಲ್ಲ ರಂಗಗಳಲ್ಲೂ ಮಿಂಚುತ್ತಿರುವ ಪ್ರತಿಭೆಯೇ ರಂಜಿತ್ ಕುಲಾಲ್.
ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ರಂಜಿತ್ ಕುಲಾಲ್ ಬಾಲ್ಯಾವಸ್ಥೆಯಲ್ಲಿಯೇ ಬಹುಮುಖ ಪ್ರತಿಭೆಯನ್ನು ಹೊಂದಿದ್ದ. ಎಳವೆಯಲ್ಲೇ ಹಾಡು, ಕುಣಿತವೆಂದರೆ ಅತ್ಯಾಸಕ್ತಿಯಿಂದ ಉಲ್ಲಸಿತಗೊಳ್ಳುವ ಈತ, ತನ್ನ ಊರಾದ ಪಕ್ಕಲಡ್ಕ ಯುವಕ ಮಂಡಲ ಸಾಂಸ್ಕೃತಿಕ ತಂಡ PYM ಟ್ರೂಪ್ಸ್ ನಲ್ಲಿ ಗುರುತಿಸಿಕೊಂಡಿದ್ದಾನೆ. ಅಲ್ಲದೇ ಸ್ಥಳೀಯ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದ ಡಾನ್ಸ್ ಸ್ಪರ್ಧೆಗಳಲ್ಲಿ ನರ್ತಿಸಿ ಹಲವು ಪ್ರಶಸ್ತಿಗಳನ್ನು ತಂದು ಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ.
ರಂಜಿತ್ ತಾನು ಡಾನ್ಸ್ ಮಾಡುವ ಜೊತೆಗೆ, ಕಲಿಯ ಬೇಕೆಂಬ ಹಂಬಲ ಇರುವ ಹಲವಾರು ಬಡ ಕುಟುಂಬದ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡುತ್ತಿರುವುದು ಈತನ ವಿಶೇಷ ಗುಣ. ಇಷ್ಟೇ ಅಲ್ಲ ಡಿವೈಎಫ್ಐಯಂತಹ ಜನಪರ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಆ ಮುಖಾಂತರ ಸ್ಥಳೀಯ ಸಮಸ್ಯೆಗಳಿಗೆ, ಜನರ ಕಷ್ಟ ಕಾರ್ಪನ್ಯಗಳಿಗೆ ಸ್ಪಂದಿಸುವ ಗುಣದಿಂದ ಈತ ಸ್ಥಳೀಯ ಎಲ್ಲ ಸಮುದಾಯದ ಜನರಿಗೆ ಹಾಗೂ ಯುವಕರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾನೆ.
ರಂಜಿತ್ ಕುಲಾಲ್ ಈ ಬಾರಿ ಹೊಸ ಪ್ರಯೋಗಕ್ಕೆ ಹೊರಟಿದ್ದಾನೆ. ಈಗಾಗಲೇ ಹದಿಹರೆಯದ ಯುವಕ ಯುವತಿಯರ ನಡುವೆ ಸಾಮಾನ್ಯವಾಗಿರುವ ಪ್ರೀತಿ (ಲವ್) ಎಂಬ ವಿಷಯಾಧಾರದ ಒಂದು ಕಿರು ಚಿತ್ರವನ್ನು ರಚಿಸಿ ನಿರ್ದೇಶಿಸುತ್ತಿದ್ದಾನೆ .ಚಿತ್ರದ ಹೆಸರು `ಸೆಕೆಂಡ್ ಚಾನ್ಸ್’ (SECOND CHANCE ). ಇತ್ತೀಚೆಗೆ ಯೂಟ್ಯೂಬ್ ನಲ್ಲಿ ಅದು ಲೋಕಾರ್ಪಣೆಗೊಂಡಿದೆ. ಈ ಯುವ ಪ್ರತಿಭೆ ಇನ್ನು ಮುಂದೆಯೂ ಹಲವು ಚಿತ್ರಗಳನ್ನು ರಚಿಸುವ ಉದ್ದೇಶವನ್ನಿಟ್ಟುಕೊಂಡಿದ್ದಾನೆ. ಆತನ ಎಲ್ಲಾ ಯೋಜನೆ ಫಲಿಸಲಿ ಎಂಬುದು ನಮ್ಮ ಆಶಯ.
* ಸಂತೋಷ್ ಬಜಾಲ್



