ಹಾಸನ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕೊರೊನಾ ವಿರುದ್ಧ ದಣಿವರಿಯದೆ ಕೆಲಸ ಮಾಡುತ್ತಿದ್ದ ವೈದ್ಯರೊಬ್ಬರು ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಹಾಸನದಲ್ಲಿ ಸಂಭವಿಸಿದೆ.
ಹಾಸನ ಜಿಲ್ಲೆಯ ಆಲೂರು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿವಕಿರಣ್ ಕುಂಬಾರ ಮೃತ ದುರ್ದೈವಿ ವೈದ್ಯ. ಮೂಲತಃ ದಾವಣಗೆರೆಯವರಾದ ಇವರು ಕೊರೊನಾ ವಿರುದ್ಧ ರಜೆಯಿಲ್ಲದೇ ನಿರಂತರವಾಗಿ ಕೆಲಸ ಮಾಡುತ್ತಿದ್ದರು. ಕೆಲಸದ ಸಮಯದಲ್ಲಿ ತಲೆನೋವಿನಿಂದ ಬಳಲಿದ್ದ ಅವರು, ಸಹೋದ್ಯೋಗಿಗಳ ಬಳಿ ಈ ಬಗ್ಗೆ ಹೇಳಿಕೊಂಡಿದ್ದರು. ಆದರೆ ಐದು ದಿನದ ಹಿಂದೆ ಕರ್ತವ್ಯದಲ್ಲಿದ್ದಾಗಲೇ ಶಿವಕಿರಣ್ ತಲೆತಿರುಗಿ ಬಿದ್ದಿದ್ದರು.
ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
5 ದಿನ ವೆಂಟಿಲೇಶನ್ ನಲ್ಲಿ ಇದ್ದ ಡಾ. ಶಿವಕಿರಣ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ಕೊರೊನಾ ಸಮಯದಲ್ಲಿ ಕೆಲಸದ ಒತ್ತಡವೇ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಮೃತ ವೈದ್ಯರ ಕೊರೊನಾ ಟೆಸ್ಟ್ ಮಾಡಲಾಗಿದ್ದು, ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಶಿವಕಿರಣ್ ಅವರು ರಾಜ್ಯ ಕುಂಭ ವೈದ್ಯ ಕೂಟದ ಸಕ್ರಿಯ ಸದಸ್ಯರಾಗಿದ್ದು, ಇವರ ನಿಧನಕ್ಕೆ ಕುಂಭ ವೈದ್ಯ ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.