ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ವಿಧಿ ಬಡವರ ವಿಚಾರದಲ್ಲಿ ಕೆಲವೊಂದು ಬಾರಿ ತುಂಬಾ ಕ್ರೂರಿ ಆಗುತ್ತಾನೆ. ಕಷ್ಟಗಳನ್ನು ಕೊಟ್ಟವರಿಗೆ ಮತ್ತೇ ಕಷ್ಟಗಳನ್ನು ನೀಡುತ್ತಾನೆ. ವಾಮಂಜೂರು ಸಮೀಪದ ಪಚ್ಚನಾಡಿಯಲ್ಲಿ ತೀರಾ ಬಡತನದಲ್ಲಿರುವ ತಾಯಿ-ಮಗಳ ಪುಟ್ಟ ಸಂಸಾರದ ಕಣ್ಣೀರಿನ ಕಥೆ ಕೇಳಿದರೆ ಎಂತಹ ನಿಷ್ಠರುಣಿಗೂ ಕಣ್ಣೀರು ಸ್ಫುರಿಸೀತು.
ಪಚ್ಚನಾಡಿ ಗ್ರಾಮದ ಸಂತೋಷ್ ನಗರ ನಿವಾಸಿ ದಿ. ದೇಜಪ್ಪ ಅವರ ಪತ್ನಿ ಗೋಪಿಕೃಷ್ಣ (66ವರ್ಷ) ಮಾರಕ ಲಿವರ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣವಿಲ್ಲದೆ, ಸದ್ಯ ಊಟಕ್ಕೂ ತತ್ವಾರ ಎದುರಾಗಿದೆ.ಗೋಪಿ ಅವರ ಪತಿ ತೀರಿಕೊಂಡಿದ್ದರೆ, ಅವರ ಮಗಳು ಚಂಚಲಾಕ್ಷಿ ಅವರು ಬೇರೆಯವರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಮನೆ ನಡೆಸುತ್ತಿದ್ದರು. ಇವರ ಪತಿ ವಿಜಯ ಕುಮಾರ್ ಅವರೂ ಎರಡು ವರ್ಷದ ಹಿಂದೆ ನ್ಯುಮೋನಿಯಾದಿಂದ ತೀರಿಕೊಂಡಿದ್ದು, ಎಸ್ಸೆಸೆಲ್ಸಿ ಓದುತ್ತಿರುವ ಒಬ್ಬಳು ಮಗಳಿದ್ದಾಳೆ. ಹಲವು ತಿಂಗಳಿನಿಂದ ಮನೆಯಲ್ಲಿ ಹಾಸಿಗೆ ಹಿಡಿದಿರುವ ತಾಯಿಯ ಆರೈಕೆಗೆ ಮಾಡಲು ಇವರು ಕೆಲಸಕ್ಕೆ ಹೋಗದೇ ಮನೆಯಲ್ಲೇ ಉಳಿದುಕೊಳ್ಳಬೇಕಾದ ಸ್ಥಿತಿ. ಅದರ ಜೊತೆ ಮಗಳಿಗೆ ಶಿಕ್ಷಣ ನೀಡುವ ಹೊಣೆಗಾರಿಕೆಯೂ ಇದೆ. ಚಿಕ್ಕ ಮನೆಯಲ್ಲಿ ವಾಸಿಸುತ್ತಿರುವ ಇವರಿಗೆ ಇದೀಗ ಕುಟುಂಬ ನಿರ್ವಹಣೆ ತೀರಾ ಕಷ್ಟವಾಗಿದೆ. ಲಾಕ್ ಡೌನ್ ಸಮಯ ಒಪ್ಪೊತ್ತಿನ ಊಟಕ್ಕೂ ತತ್ವಾರ ಬಂದೊದಗಿದೆ.
ಕಷ್ಟಗಳ ಮೇಲೆ ಕಷ್ಟವನ್ನೇ ಕಂಡಿರುವ ಚಂಚಲಾಕ್ಷಿ ಅವರು ಒಂದೆಡೆ ತಾಯಿ ಚಿಕಿತ್ಸೆಯ ಖರ್ಚು, ಓದಿನಲ್ಲಿ ತುಂಬಾ ಪ್ರತಿಭಾನ್ವಿತೆಯಾಗಿರು ಮಗಳ ಶಿಕ್ಷಣದ ಜವಬ್ದಾರಿಯನ್ನು ನಿರ್ವಹಿಸಲಾಗದೇ ಹತಾಶರಾಗಿ ಸಹೃದಯಿ ದಾನಿಗಳಾದ ತಮ್ಮ ಬಳಿ ಕೈಮುಗಿದು ಆರ್ಥಿಕ ಸಹಾಯವನ್ನು ಯಾಚಿಸುತ್ತಿದ್ದಾರೆ. ತಮ್ಮಿಂದ ಆದಷ್ಟು ಕಿಂಚಿತ್ ಸಹಾಯ ಮಾಡಿದರೆ ಈ ಬಡಕುಟುಂಬಕ್ಕೆ ಅದೇ ದೊಡ್ಡ ಆಧಾರವಾದಿತು. ನೀವು ನೀಡುವ ಚಿಕ್ಕ ಮೊತ್ತವೂ ಸುಮಸ್ಯೆಯ ಬೇಗುದಿಯಲ್ಲಿ ಬೇಯುತ್ತಿರುವ ಬಡಕುಟುಂಬಕ್ಕೆ ಕೊಂಚ ನಿಟ್ಟುಸಿರು ಬಿಡಲು ಸಹಕಾರಿಯಾದೀತು.