ಶಾಸ್ತ್ರೀಯವಾಗಿ ಕುಂಬಾರಿಕೆ ಕಲಿಸುವ ದೇಶದ ಏಕೈಕ ಸಂಸ್ಥೆ
ಬೆಳಗಾವಿ: ಕರ್ನಾಟಕದಲ್ಲಿ ಶಾಸ್ತ್ರೀಯವಾಗಿ ಕುಂಬಾರಿಕೆ ಕೌಶಲ / ತರಬೇತಿ ನೀಡುವ ಏಕೈಕ ಸರ್ಕಾರಿ ಕೇಂದ್ರ ಇದು. ಇಲ್ಲಿ 2 ತಿಂಗಳ ಟೆರ್ರಾಕೋಟ ಆರ್ಟ್ವೇರ್ ಕೋರ್ಸ್, 4 ತಿಂಗಳ ವೀಲ್ ಪಾಟರಿ ಕೋರ್ಸ್, ಅಡ್ವಾನ್ಸ್ ಪಾಟರಿ ಕೋರ್ಸ್ ಇದೆ. ಒಂದು ತಿಂಗಳ ಜಿಗರ್ಜಾಲಿ ಹಾಗೂ ಸ್ಲಿಪ್ ಕಾಸ್ಟಿಂಗ್ ಪ್ರೋಸಸ್ ಕೋರ್ಸ್ ಇದೆ. ಒಂದರ ನಂತರ ಒಂದು ಬ್ಯಾಚ್ ಆರಂಭಿಸಲಾಗುತ್ತದೆ….
‘ಆರೋಗ್ಯಕ್ಕೆ ಅಪಾಯಕಾರಿಯಾದ ಪ್ಲಾಸ್ಟಿಕ್ನಂತಹ ವಸ್ತುಗಳ ಬಳಕೆ ಕಡಿಮೆಯಾಗುತ್ತಿದೆ. ಮಣ್ಣಿನ ಪರಿಕರಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಮಾರುಕಟ್ಟೆಯೂ ವಿಸ್ತಾರವಾಗುತ್ತಿದೆ. ಮಣ್ಣಿನ ಉತ್ಪನ್ನಗಳ ತಯಾರಿಕೆ ಕಲಿಯಲು ಆಸಕ್ತಿ ತೋರುವವರು ಹೆಚ್ಚಾಗುತ್ತಿದ್ದಾರೆ. ಅದರಲ್ಲಿ ವಿದ್ಯಾವಂತರೇ ಹೆಚ್ಚು..’
ಮಣ್ಣಿನ ಮಗ್ವೊಂದನ್ನು ಕೈಯಲ್ಲಿ ಹಿಡಿದ ನಾಗೇಶ್ ಗೋವರ್ಧನ್, ಮಣ್ಣಿನ ಉತ್ಪನ್ನಗಳು ಹಾಗೂ ಕುಂಬಾರಿಕೆ ಕೌಶಲ ಕಲಿಯಲು ಬೇಡಿಕೆ ಹೆಚ್ಚುತ್ತಿರುವ ಕುರಿತು ಮಾಹಿತಿ ನೀಡುತ್ತಾ ಹೊರಟರು.
ಬೆಳಗಾವಿ ಜಿಲ್ಲೆಯ ಖಾನಾಪುರದ ಹೊರವಲಯದಲ್ಲಿರುವ ‘ಕೇಂದ್ರೀಯ ಗ್ರಾಮ ಕುಂಬಾರಿಕೆ ಸಂಸ್ಥೆ’(ಸಿವಿಪಿಐ- ಸೆಂಟ್ರಲ್ ವಿಲೇಜ್ ಪಾಟರಿ ಇನ್ಸ್ಟಿಟ್ಯೂಟ್)ಯ ಸಹಾಯಕ ನಿರ್ದೇಶಕರಾಗಿರುವ ನಾಗೇಶ್ ಗೋವರ್ಧನ್ ಈ ಕೇಂದ್ರದಲ್ಲಿ ಕುಂಬಾರಿಕೆ ಕಲೆ, ಕೌಶಲವನ್ನು ಉಳಿಸುವ ಕುರಿತು ನಡೆಯುತ್ತಿರುವ ಪ್ರಯತ್ನಗಳನ್ನು ವಿವರಿಸಿದರು.
1954ರಲ್ಲಿ ಈ ಕೇಂದ್ರ ಆರಂಭವಾಗಿದೆ. ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಇಲಾಖೆಯ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಈ ಕೇಂದ್ರವನ್ನು ಆರಂಭಿಸಿದೆ. ಇಲ್ಲಿನ ಕುಂಬಾರಿಕೆಯ ಚಕ್ರಗಳಿಂದ ಸಾವಿರಾರು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. ಬದಲಾದ ಕಾಲಕ್ಕೆ ತಕ್ಕಂತೆ ಕೌಶಲವನ್ನು ಹೊಂದಿಸಿಕೊಂಡಿರುವ ಈ ಕೇಂದ್ರ, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ.
ಮೊದಲು ಮಾನವ ಚಾಲಿತ ಚಕ್ರಗಳಿದ್ದವು. ಈಗ ವಿದ್ಯುತ್ಚಾಲಿತ ಚಕ್ರಗಳನ್ನು ಬಳಸಿ ಮಣ್ಣಿನಿಂದ ಕರಕುಶಲ ವಸ್ತುಗಳನ್ನು ಸಿದ್ಧಪಡಿಸಲಾಗುತ್ತಿದೆ. ಜತೆ ಜತೆಗೆ ಕೌಶಲಯುಕ್ತ ಕಲಾವಿದರು ಇಲ್ಲಿಂದ ತಯಾರಾಗುತ್ತಿದ್ದಾರೆ. ರಜಾದಿನಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ದಿನಗಳಲ್ಲಿ ಇಲ್ಲಿನ ‘ಚಕ್ರ’ಗಳು ತಿರುಗುತ್ತಲೇ ಇರುತ್ತವೆ; ಕಲಾಕೃತಿಗಳನ್ನು ಸೃಷ್ಟಿಸುತ್ತಿರುತ್ತವೆ. ಈ ಕೇಂದ್ರದಲ್ಲಿ ರಾಜ್ಯದವರಷ್ಟೇ ಅಲ್ಲದೇ, ಹೊರ ರಾಜ್ಯಗಳ ವಿದ್ಯಾರ್ಥಿಗಳು ಕುಂಬಾರಿಕೆ ಕಲೆ ಕಲಿಯುತ್ತಿದ್ದಾರೆ; ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿ ಕಲಿತ ಅದೆಷ್ಟೋ ಮಂದಿ ಸ್ವಂತ ಉದ್ಯಮ ಕಂಡುಕೊಂಡು, ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರಂತೆ.
ವಿವಿಧ ಕೋರ್ಸ್ಗಳು
ಕರ್ನಾಟಕದಲ್ಲಿ ಶಾಸ್ತ್ರೀಯವಾಗಿ ಕುಂಬಾರಿಕೆ ಕೌಶಲ / ತರಬೇತಿ ನೀಡುವ ಏಕೈಕ ಸರ್ಕಾರಿ ಕೇಂದ್ರ ಇದು. ಇಲ್ಲಿ 2 ತಿಂಗಳ ಟೆರ್ರಾಕೋಟ ಆರ್ಟ್ವೇರ್ ಕೋರ್ಸ್, 4 ತಿಂಗಳ ವೀಲ್ ಪಾಟರಿ ಕೋರ್ಸ್, ಅಡ್ವಾನ್ಸ್ ಪಾಟರಿ ಕೋರ್ಸ್ ಇದೆ. ಒಂದು ತಿಂಗಳ ಜಿಗರ್ಜಾಲಿ ಹಾಗೂ ಸ್ಲಿಪ್ ಕಾಸ್ಟಿಂಗ್ ಪ್ರೋಸಸ್ ಕೋರ್ಸ್ ಇದೆ. ಒಂದರ ನಂತರ ಒಂದು ಬ್ಯಾಚ್ ಆರಂಭಿಸಲಾಗುತ್ತದೆ.
ಪ್ರತಿ ಬ್ಯಾಚ್ಗೆ ಸರಾಸರಿ 20 ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ಹಾಸ್ಟೆಲ್ ಸೌಲಭ್ಯ ಕೂಡ ಇದೆ. ಹಾಸ್ಟೆಲ್ನಲ್ಲಿ ಉಳಿಯುವವರಿಗೆ ₹ 1,200 ಶಿಷ್ಯವೇತನ ಹಾಗೂ ಇತರರಿಗೆ ₹700 ಶಿಷ್ಯವೇತನ (ಸ್ಟೈಫಂಡ್) ದೊರೆಯುತ್ತದೆ. ಕುಂಬಾರಿಕೆ ಹಿನ್ನೆಲೆಯ ಕುಟುಂದವರು ಮಾತ್ರವಲ್ಲದೇ. ಎಂ.ಎಸ್ಸಿ. ಕೃಷಿ, ಎಂಜಿನಿಯರಿಂಗ್ ಮತ್ತಿತರ ಪದವೀಧರರು ಕೂಡ ಇಲ್ಲಿ ತರಬೇತಿ ಪಡೆದ ಉದಾಹರಣೆಗಳಿವೆ. ಇಲ್ಲಿ ತರಬೇತಿ ಮುಗಿಸಿ ಪ್ರಮಾಣಪತ್ರ ಪಡೆದವರು ಉದ್ಯಮ ಆರಂಭಿಸಲು ಕೇಂದ್ರ ಸರ್ಕಾರದಿಂದ ಸಾಲ ಸೌಲಭ್ಯ ಪಡೆಯುವುದಕ್ಕೂ ಅವಕಾಶವಿದೆ. ಹವ್ಯಾಸಕ್ಕಾಗಿ ಕಲಿಯುವವರು ₹ 1,500 ಶುಲ್ಕ ತುಂಬಬೇಕು. ಸಂಸ್ಥೆಯಲ್ಲಿ ಮೂವರು ಪ್ರಾಯೋಗಿಕ ಶಿಕ್ಷಕರಿದ್ದಾರೆ. ಹೊರಗುತ್ತಿಗೆಯಲ್ಲಿ ಐದು ಮಂದಿ ಕೆಲಸ ಮಾಡುತ್ತಿದ್ದಾರೆ. 20 ಯಂತ್ರಗಳಿವೆ.
‘10ಸಾವಿರಕ್ಕೂ ಹೆಚ್ಚು ಮಂದಿ ಇಲ್ಲಿ ತರಬೇತಿ ಪಡೆದಿದ್ದಾರೆ. ಈ ಸಾಂಪ್ರದಾಯಿಕ ಕಲೆಯನ್ನು ಶಾಸ್ತ್ರೀಯ ಹಾಗೂ ಪ್ರಾಯೋಗಿಕವಾಗಿ ಕಲಿಸಲಾಗುತ್ತದೆ. ನುರಿತ ಟ್ರೇನರ್ಗಳಿದ್ದಾರೆ. ಆಗಾಗ ಸಂಪನ್ಮೂಲ ವ್ಯಕ್ತಿಗಳೂ ಬರುತ್ತಾರೆ. ಆಂಧ್ರಪ್ರದೇಶ, ತಮಿಳುನಾಡು ಮೊದಲಾದ ಕಡೆಗಳಿಂದಲೂ ವಿದ್ಯಾರ್ಥಿಗಳು ಬಂದು ಕಲಿತು ಹೋಗಿದ್ದಾರೆ. ಪ್ರತಿ ವರ್ಷ ಸರಾಸರಿ 60 ರಿಂದ 70 ಮಂದಿ ಕುಂಬಾರಿಕೆ ಕಲೆ ಕಲಿಯುತ್ತಿದ್ದಾರೆ. ಇದರಿಂದಲೇ ಹಲವರು ಜೀವನ ರೂಪಿಸಿಕೊಂಡಿದ್ದಾರೆ. ಶಾಸ್ತ್ರೀಯವಾಗಿ ಕುಂಬಾರಿಕೆ ಕಲೆ ಕಲಿಸುವ ದೇಶದ ಏಕೈಕ ಸಂಸ್ಥೆ ಇದಾಗಿದೆ. ಕಾಲಕ್ಕೆ ತಕ್ಕಂತೆ ವಿನ್ಯಾಸಗಳನ್ನು ವೈಜ್ಞಾನಿಕವಾಗಿ ಅಭ್ಯರ್ಥಿಗಳಿಗೆ ಕಲಿಸಿಕೊಡಲಾಗುತ್ತಿದೆ’ಎನ್ನುತ್ತಾರೆ ಗೋವರ್ಧನ್.
ಖುಷಿಯ ಕಲಿಕೆ…
ಕೇಂದ್ರಕ್ಕೆ ಭೇಟಿ ನೀಡಿದಾಗ, ವೀಲ್ಪಾಟರಿ ಕೋರ್ಸ್ಗೆ ಸೇರಿದ್ದ ಧಾರವಾಡದ ಪೂಜಾ ಎಸ್. ಚಲನವರ್ ಮಣ್ಣು ಕಲೆಸುತ್ತಾ, ‘ಇದೊಂದು ಯೂನಿಕ್ ಕಲೆ. ಕಲಿಯುವುದಕ್ಕೆ ಖುಷಿ ಇದೆ. ಕಾಲೇಜಿನ ಶಿಕ್ಷಣಕ್ಕಿಂತ ಈ ಪ್ರಾಯೋಗಿಕ ಕಲಿಕೆ ವಿಶೇಷವಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು. ‘ಮಣ್ಣಿನಿಂದ ಆಕರ್ಷಕ ಕಲೆಗಳು ಮೂಡುವುದನ್ನು ನೋಡಿದರೆ ಖುಷಿಯಾಗುತ್ತದೆ. ಸಾಲ ಸೌಲಭ್ಯ ಸಿಕ್ಕರೆ ಇದಕ್ಕೆ ಸಂಬಂಧಿಸಿದ ಉದ್ಯಮ ಆರಂಭಿಸುತ್ತೇನೆ’ ಎಂದು ಕನಸುಗಳನ್ನು ಹಂಚಿಕೊಂಡರು.
ಮುಂದಿನ ಕೊಠಡಿಯಲ್ಲಿ ಬೆಳಗಾವಿಯ ಅನಗೋಳದ ರಾಜು ಲೋಹಾರ್, ಪತ್ನಿ ಸಹಿತವಾಗಿ ಬಂದು ತರಬೇತಿ ಪಡೆ ಯುತ್ತಿದ್ದರು. ಅವರನ್ನು ಮತನಾಡಿಸಿದಾಗ ‘ಆಸಕ್ತಿಯಿಂದಾಗಿ ಕಲಿಯುತ್ತಿದ್ದೇನೆ. ವಿವಿಧ ವಿನ್ಯಾಸದ ಪಾಟ್ಗಳನ್ನು ತಯಾರಿಸಿ ಮಾರಾಟ ಮಾಡುವ ಉದ್ದೇಶವಿದೆ’ ಎಂದು ಅನಿಸಿಕೆ ಹಂಚಿ ಕೊಂಡರು. ಇಲ್ಲೀಗ ಕಲಿಯುತ್ತಿರುವವರಲ್ಲಿ ಆರು ಮಂದಿ ವಿದ್ಯಾರ್ಥಿನಿಯರೇ ಆಗಿರುವುದು ವಿಶೇಷ. ಈ ಕೇಂದ್ರದಲ್ಲಿ ಎಲ್ಲ ಜಾತಿ, ಜನಾಂಗ, ಧರ್ಮದವರೂ, ವಯಸ್ಸು – ಲಿಂಗಬೇಧವಿಲ್ಲದೇ ತರಬೇತಿ ಪಡೆಯಬಹುದು. ಅರ್ಜಿ ಆಹ್ವಾನಿಸಿದಾಗ, ಅರ್ಜಿ ಸಲ್ಲಿಸಿ, ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು.
ಸಂಪನ್ಮೂಲ ಕೇಂದ್ರ, ಪಾಠಶಾಲೆ
ಇದು ಸಂಪನ್ಮೂಲ ಕೇಂದ್ರವೂ ಹೌದು. ವಿನ್ಯಾಸ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಪಾಠಶಾಲೆಯೂ ಹೌದು. ಏಕೆಂದರೆ, ಇಲ್ಲಿಗೆ ನವ ಉದ್ಯಮಿಗಳಿಗಷ್ಟೇ ಅಲ್ಲದೇ, ಶಾಲಾ–ಕಾಲೇಜುಗಳು ವಿದ್ಯಾರ್ಥಿಗಳಿಗೆ, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೂ ತರಬೇತಿ ಶಿಬಿರಗಳನ್ನೂ ನಡೆಸಲಾಗುತ್ತಿದೆ.
‘ಪ್ಲಾಸ್ಟಿಕ್ನಿಂದಾಗುವ ತೊಂದರೆ ಅರಿತ ಜನರು, ಮಣ್ಣಿನ ಉತ್ಪನ್ನಗಳನ್ನು ಖರೀದಿಸಲು ಮುಂದಾಗಿದ್ದಾರೆ. ಇವುಗಳನ್ನು ಮಣ್ಣಿನ ಉತ್ಪನ್ನಗಳನ್ನು ತಯಾರಿಸುವ ಕೌಶಲ ಇರುವವರು ಬಹಳ ಕಡಿಮೆ ಇದ್ದಾರೆ. ಆ ಬೇಡಿಕೆ ಪೂರೈಸುವಂತಹ ಕೌಶಲದಾರರನ್ನು ತಯಾರಿಸುವಲ್ಲಿ ನಮ್ಮ ಸಂಸ್ಥೆ ಸಹಕಾರಿಯಾಗಿದೆ’ ಎನ್ನುತ್ತಾರೆ ದಶಕದಿಂದ ಕೇಂದ್ರದಲ್ಲಿ ತರಬೇತುದಾರರಾಗಿರುವ ವೆಂಕಟೇಶ್ ಗುಂಡು ಕುಂಬಾರ್. ಈ ಕೇಂದ್ರದಲ್ಲಿ ತರಬೇತಿಗೆ ಬೇಡಿಕೆ ಇದ್ದಂತೆ, ಇಲ್ಲಿ ತಯಾರಾಗುವ ವಿಶೇಷ ವಿನ್ಯಾಸದ ಹಣತೆಗಳಿಗೂ ಬೇಡಿಕೆ ಇದೆಯಂತೆ.
ಸದ್ಯ ಕೇಂದ್ರದಲ್ಲಿ ನಲ್ವತ್ತು ಚಕ್ರಗಳಿವೆ. ಅವುಗಳನ್ನೇ ಬಳಸಿಕೊಂಡು ತರಬೇತಿ ಕೊಡುತ್ತಿದ್ದಾರೆ. ತರಬೇತಿಯಲ್ಲಿ ವಿದ್ಯಾವಂತರೂ ಕಲಿಯಲು ಆಸಕ್ತಿ ವಹಿಸುತ್ತಿದ್ದಾರೆ. ಅನೇಕ ಶಾಲೆಗಳ ಶಿಕ್ಷಕರು ಇಲ್ಲಿಗೆ ಬಂದು ಕಲಿತು, ತಮ್ಮ ತಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಕರಕುಶಲ ಕಲೆಯನ್ನು ಹೇಳಿಕೊಡುತ್ತಿದ್ದಾರೆ. ಈ ಕೇಂದ್ರ ಕೆಲವರಿಗೆ ಜೀವಕ್ಕೆ ಬೇಕಾದ ಉದ್ಯಮ ಕಲ್ಪಿಸಲು ನೆರವಾಗಿದೆ. ಮಕ್ಕಳಿಗೆ ಕಲಿಕಾ ಆಸಕ್ತಿಯನ್ನೂ ಹೆಚ್ಚಿಸುತ್ತಿದೆ’ ಎನ್ನುವುದು ಇಲ್ಲಿನ ತರಬೇತುದಾರರ ಅನುಭವದ ನುಡಿ. ಇಂಥ ಕೌಶಲ ಅಭಿವೃದ್ಧಿ ಕೇಂದ್ರ, ಈಚೆಗೆ ಮಲಪ್ರಭಾ ನದಿ ಪ್ರವಾಹದಿಂದ ಜಲಾವೃತವಾಗಿತ್ತು. ಆಗ, ಯಂತ್ರಗಳು ಕೂಡ ಮುಳುಗಡೆಯಾಗಿದ್ದವು. ನಂತರ, ದುರಸ್ತಿ ಮಾಡಿಸಲಾಗಿದೆ.
ಮಲಪ್ರಭೆ ನದಿ ದಂಡೆಯಲ್ಲಿ…
ಮಲಪ್ರಭಾ ನದಿ ದಂಡೆಯ ಮೇಲೆ ಈ ಕೇಂದ್ರವಿದೆ. ನದಿ ಪಾತ್ರದಲ್ಲಿ ದೊರೆಯುವ ಜೇಡಿಮಣ್ಣನ್ನು ತಂದು ವಿವಿಧ ಹಂತಗಳಲ್ಲಿ ಸಂಸ್ಕರಿಸಲಾಗುತ್ತದೆ. ಇದಕ್ಕೆ ಹಲವು ಯಂತ್ರಗಳನ್ನು ಬಳಸುತ್ತಾರೆ. ಪಣತಿ, ಕಪ್, ಹೂಜಿ, ಪೇಪರ್ವೇಯ್ಟ್, ಕುಂಡಗಳು, ತಾಟು, ನೀರು ಕಾಯಿಸುವ ಗಡಿಗೆ, ಒಲೆಗಳು, ಅಡುಗೆ ಮಾಡಲು ಬಳಸುವ ಮಡಿಕೆಗಳು, ಚಹಾಲೋಟ, ಬೌಲ್, ಕಪ್, ನರ್ಸರಿ ಪಾಟ್ಗಳು, ವಿವಿಧ ರೀತಿಯ ಗಾರ್ಡನ್ ಪಾಟ್ಗಳು, ಫ್ಲವರ್ ಪಾಟ್ಗಳು, ಹ್ಯಾಂಗಿಂಗ್ ಗಾರ್ಡನ್ ಪಾಟ್, ವಾಟರ್ ಪಾಟ್ ಹೀಗೆ… ಹತ್ತಾರು ವಿನ್ಯಾಸದ ಪದಾರ್ಥಗಳನ್ನು ಮಾಡುವ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತಿದೆ.
ಚಿಕ್ಕ ಮಾರಾಟ ಮಳಿಗೆಯೂ ಇದೆ. ಅಲ್ಲಿ ವಿವಿಧ ರೀತಿಯ ಪಾಟ್ಗಳು ₹20ರಿಂದ ₹200ರವರೆಗೆ ದೊರೆಯುತ್ತವೆ. ಗೋವಾ, ಮುಂಬೈ, ಪುಣೆ, ಧಾರವಾಡ ಮೊದಲಾದ ಕಡೆಗಳಿಂದ ಗ್ರಾಹಕರು ಬರುತ್ತಾರೆ. ಮನೆಗಳು, ಸಂಸ್ಥೆಗಳ ಉದ್ಯಾನಗಳ ಅಲಂಕಾರಕ್ಕಾಗಿ ಆಕರ್ಷಕ ಕುಂಡಗಳನ್ನು ತೆಗೆದುಕೊಂಡು ಹೋಗುತ್ತಾರೆ. ಕೇಂದ್ರದಲ್ಲಿ ಚಿಕ್ಕದಾದ ಮಳಿಗೆ ಕೂಡ ಇದೆ. ಕೇಂದ್ರದಲ್ಲಿ ತರಬೇತಿ ವೇಳೆಲೆ ವಿದ್ಯಾರ್ಥಿಗಳು ಸಿದ್ಧಪಡಿಸಿದ ಹಾಗೂ ಅನುಭವಿ ಕಲಾವಿದರಿಂದ ತರಬೇತಿ ವೇಳೆ ಮಾಡಿಸಿದ ಎಕ್ಸ್ಕ್ಲೂಸಿವ್ ಕಲಾಕೃತಿಗಳನ್ನು ಇಡಲಾಗಿದೆ.
ಕುಂಬಾರ ಸಶಕ್ತೀಕರಣ ಯೋಜನೆ
ಕೇಂದ್ರ ಸರ್ಕಾರವು ಕುಂಬಾರ ಸಶಕ್ತೀಕರಣ ಯೋಜನೆ ಆರಂಭಿಸಿದೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ವಿನಯ್ ಕುಮಾರ್ ಸಕ್ಸೇನಾ, ಸಿಇಒ ಪ್ರೀತಾ ವರ್ಮ ಕಳೆದ ವರ್ಷ 5 ಸಾವಿರ ಚಕ್ರಗಳನ್ನು ಕುಂಬಾರರಿಗೆ ವಿತರಿಸಿದ್ದಾರೆ.
ಕೃಷಿ ಮಹಾವಿದ್ಯಾಲಯದಲ್ಲಿ ಡಿಪ್ಲೊಮಾ ವೃತ್ತಿಪರ ಕೋರ್ಸ್
‘ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮದಲ್ಲಿ ಶೇ 25ರಿಂದ ಶೇ 35ರವರೆಗೆ ಸಹಾಯಧನದಲ್ಲಿ ಸಾಲ ಸೌಲಭ್ಯ ದೊರೆಯುತ್ತದೆ. ಇಲ್ಲಿನ ಪ್ರಮಾಣಪತ್ರ ಹೊಂದಿದವರಿಗೆ ಸಾಲ ಸೌಲಭ್ಯ ನೀಡಲು ಆದ್ಯತೆ ಕೊಡಲಾಗುತ್ತದೆ. ಸ್ವಂತ ಉದ್ಯಮ ಆರಂಭಿಸಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಮೆರಿಟ್ ಆಧರಿಸಿ ಪಾರದರ್ಶಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಕಳೆದ ವರ್ಷ ಆಯೋಗವು ₹ 2 ಸಾವಿರ ಕೋಟಿಯನ್ನು ಗುಡಿ ಕೈಗಾರಿಕೆಗಳಿಗೆಂದೇ ಸಹಾಯಧನ ನೀಡಿದೆ’ಎನ್ನುವ ಮೂಲಕ ಕುಂಬಾರಿಕೆ ಕಲೆ ಕಲಿತವರಿಗೆ ಭವಿಷ್ಯವಿದೆ ಹಾಗೂ ಸರ್ಕಾರದ ನೆರವೂ ಸಿಗುತ್ತದೆ ಎಂದು ಗೋವರ್ಧನ್ ವಿವರಿಸುತ್ತಾರೆ.
ಎಂ. ಮಹೇಶ (ಕೃಪೆ:ಪ್ರಜಾವಾಣಿ)