ಕುಂದಾಪುರದಲ್ಲಿ ಮೊಳಹಳ್ಳಿ ವೆಂಕಟ್ ಕುಲಾಲ್ ಎಂದರೆ ಇವರ್ಯಾರು ಎಂದು ಯಾರಿಗೂ ಗೊತ್ತಾಗಲಿಕ್ಕಿಲ್ಲ. ಆದರೆ ಎಂ.ವಿ. ಕುಲಾಲ್ ಅಂದರೆ ಯಾರು ಎಂದು ಗೊತ್ತಿಲ್ಲದವರೇ ಇಲ್ಲ ಎನ್ನಬಹುದು. ಇವರೇ ಕುಂದಾಪುರದ ಶ್ರೀಮಂಜುನಾಥ ಹೈಟೆಕ್ ಆಸ್ಪತ್ರೆಯ ರೂವಾರಿ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ ನಾಗಪ್ಪ ಕುಲಾಲ್ ಹಾಗೂ ಕಾವೇರಮ್ಮ ದಂಪತಿಗಳ ಏಕಮಾತ್ರ ಪುತ್ರರಾಗಿ ಜನಿಸಿದ ವೆಂಕಟ ಕುಲಾಲ್ ತಂದೆಯ ಊರಾದ ಹಾಲಾಡಿಯಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸುವಷ್ಟರಲ್ಲಿ ತಂದೆ-ತಾಯಿಯರಿಬ್ಬರೂ ಇಹಲೋಕ ತ್ಯಜಿಸಿಯಾಗಿತ್ತು. ಅನಾಥನಾದ ಬಾಲಕ ವೆಂಕಟ್ ತನ್ನ ಅಜ್ಜಿಯ ಮನೆಯನ್ನು ಆಶ್ರಯಿಸಬೇಕಾಯಿತು. ಬಹುತೇಕ ಬಾಲ್ಯದ ಜೀವನವನ್ನು ಅಜ್ಜಿಯ ಮನೆಯಲ್ಲೇ ತಂದೆ ತಾಯಿಯ ಆಶ್ರಯವಿಲ್ಲದೆ ಬೆಳೆಯಬೇಕಾದ ಸಂಧಿಗ್ದ ಸ್ಥಿ ತಿ ಬಂದೊದಗಿತು. ಆಶ್ರಯವೇ ಇಲ್ಲದ ಮೇಲೆ ವಿದ್ಯಾಭ್ಯಾಸದ ಮಾತೆಲ್ಲಿ? ಸುಮಾರು ೨ ವರ್ಷಗಳಷ್ಟು ಕಾಲ ವಿದ್ಯಾಭ್ಯಾಸಕ್ಕೆ ಕಡಿವಾಣ ಬಿತ್ತು. ಅದೃಷ್ಟವೆಂಬಂತೆ ಪ್ರಾಥಮಿಕ ಶಿಕ್ಷಣ ಮುಗಿಸಿದ ಹಾಲಾಡಿಯಲ್ಲಿ ಪ್ರೌಢಶಾಲೆಯು ಆಗ ತಾನೇ ಹೊಸದಾಗಿ ಆರಂಭಗೊಂಡಿತ್ತು. ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ವೆಂಕಟ್ ಅವರನ್ನು ಅಲ್ಲಿಯ ಅಧ್ಯಾಪಕ ವೃಂದ ಗುರುತಿಸಿತು. ಇದು ಮುಂದಿನ ವಿದ್ಯಾಭ್ಯಾಸಕ್ಕೆ ನಾಂದಿಯಾಯಿತು. ಮುಂದೆ ಹತ್ತಿರದ ಶಂಕರನಾರಾಯಣ ಕಾಲೇಜಿನಲ್ಲಿ ಮತ್ತು ಉಡುಪಿಯ ಪ್ರತಿಷ್ಟಿತ ಎಂಜಿಎಂ ಕಾಲೇಜಿನಲ್ಲಿ ಪಿಯುಸಿ ಪೂರ್ಣವಾದ ನಂತರ ಉತ್ತಮ ಅಂಕ ಗಳಿಸಿದ್ದರ ಪರಿಣಾಮ ವೈದ್ಯಕೀಯ ವಿದ್ಯಾಭ್ಯಾಸದ ಆಯ್ಕೆಗೆ ದಾರಿ ಸುಗಮವಾಯಿತು. ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆಯುವ ಮುಖೇನ ವೈದ್ಯಕೀಯ ಸೇವೆಗೆ ಪಾದರ್ಪನೆಗೈದರು.
ವೃತ್ತಿ ಜೀವನ :
ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಅಸಿಸ್ಟೆಂಟ್ ಸರ್ಜನ್ ಆಗಿ ಸರ್ಕಾರಿ ಉದ್ಯೋಗಕ್ಕೆ ಸೇರ್ಪಡೆಯಾದರು. ಈ ಉದ್ಯೋಗದಲ್ಲಿ ವಿವಿಧ ಜಿಲ್ಲೆಯಲ್ಲಿ ೮-೧೦ ವರ್ಷಗಳ ಸೇವೆಯನ್ನು ಸಲ್ಲಿಸಿದರು. ಈ ಮಧ್ಯೆ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಸೀಟು ಸಿಕ್ಕರೂ ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ, ತಮ್ಮ ತಾಲೂಕಾದ ಕುಂದಾಪುರದಲ್ಲಿ 1978ರಲ್ಲಿ ಸ್ವಂತ ಪರಿಶ್ರಮದಿಂದ ಆರಂಭಿಸಿದ ಆಸ್ಪತ್ರೆಯೇ ಶ್ರೀ ಮಂಜುನಾಥ ನರ್ಸಿಂಗ್ ಹೋಮ್.
ಕುಲಾಲರ ನಿರಂತರ ಶ್ರಮ, ಜನರ ಪ್ರೋತ್ಸಾಹ, ಆಸ್ಪತ್ರೆ ಸಿಬ್ಬಂದಿಗಳ ಪ್ರಾಮಾಣಿಕ ಸೇವೆ ಮತ್ತು ಸಹಕಾರದೊಂದಿಗೆ 15 ಹಾಸಿಗೆಯುಳ್ಳ ಆಸ್ಪತ್ರೆಯು 1999ರ ಹೊತ್ತಿಗೆ 50 ಹಾಸಿಗೆಯೊಂದಿಗೆ ಸಕಲ ಸಲಕರಣೆಯನ್ನು ಹೊಂದಿ ಸುಸಜ್ಜಿತ ಹೈಟೆಕ್ ಆಸ್ಪತ್ರೆಯಾಗಿ ಮಾರ್ಪಟ್ಟಿತು. ಈ ಭಾಗದ ಅತ್ಯಂತ ಜನಪ್ರಿಯ ಹಾಗೂ ಎಲ್ಲ ವರ್ಗದ ಜನರ ಇತಿಮಿತಿಗಳಿಗೆ ಅವರ ಕೈಗೆಟಕುವ ರೀತಿಯಲ್ಲಿ ಸೇವೆ ನೀಡುವ, ಜನಸಾಮಾನ್ಯರಿಗೆ ಸ್ಪಂದಿಸುವಂತಹ ಆಸ್ಪತ್ರೆಯೆಂದು, `ಬಡವರ ಬಂಧು’ ಕುಲಾಲರ ಆಸ್ಪತ್ರೆಯೆಂದು ಈಗಲೂ ಜನಜನಿತವಾಗಿದೆ.
ಕುಲಾಲರ ಕುಟುಂಬ :
ಪತ್ನಿ, ಮೂವರು ಹೆಣ್ಣು ಮಕ್ಕಳು, ಅಳಿಯಂದಿರು ಹಾಗು ಮೊಮ್ಮಕ್ಕಳಿರುವ ತುಂಬು ಕುಟುಂಬ ಕುಲಾಲರದು. ಮೊದಲ ಮಗಳು ಅಂಜಲಿ ಕೂಡ ವೈದ್ಯೆ, ಅಳಿಯ ಸತೀಶ್ ಕುಮಾರ್ ಇಂಜಿನಿಯರ್ ಆಗಿ ಹೊರದೇಶದಲ್ಲಿದ್ದಾರೆ. ದ್ವಿತೀಯ ಪುತ್ರಿ ಶಕೀಲ ನೇತ್ರತಜ್ಞೆ. ಈಕೆಯ ಪತಿ ಸಚಿನ್ ಕುಮಾರ್ ಕೂಡಾ ನೇತ್ರತಜ್ಞರು. ಇಬ್ಬರೂ ಉಡುಪಿಯ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೊನೆಯ ಪುತ್ರಿ ಪ್ರತಿಮಾ ಬಿಇ, ಎಂಬಿಎ ಮುಗಿಸಿ ಮಂಜುನಾಥ ಆಸ್ಪತ್ರೆಯಲ್ಲಿ ಸಿಇಓ ಆಗಿ ಆಸ್ಪತ್ರೆಯನ್ನು ಉನ್ನತಿಕರಣಗೊಳಿಸುವಲ್ಲಿ ತಂದೆ ಹಾಗೂ ಪತಿಯ ಸಹಕಾರದೊಂದಿಗೆ ಶ್ರಮಿಸುತ್ತಿದ್ದಾರೆ. ಈಕೆಯ ಪತಿ ವಿನೋದ್ ಕುಮಾರ್ ಕೂಡ ಇದೇ ಆಸ್ಪತ್ರೆಯಲ್ಲಿ ವೈದ್ಯರು. ಇನ್ನು ಆದಿತ್ಯ, ಆರ್ಯ, ಅನನ್ಯ ಮತ್ತು ಅಪೂರ್ವ್ ಇವರು ಕುಲಾಲರ ಮುದ್ದಿನ ಮೊಮ್ಮಕ್ಕಳು.
ಇನ್ನು ಕುಲಾಲರ ಜೀವನ ನಡಿಗೆಯಲ್ಲಿ ಸದಾ ಅವರ ಹಿಂಬಾಲಕರಾಗಿ, ಪ್ರೇರಕ ಶಕ್ತಿಯಾಗಿ ದುಡಿಯುತ್ತಿರುವ ಕುಲಾಲರ ಧರ್ಮಪತ್ನಿ ಪಾರ್ವತಿ ಅವರು ಗ್ರಹಿಣಿ. ಆಸ್ಪತ್ರೆಯ ಪಾಲುದಾರರಾಗಿಯೂ ನಿರಂತರ ಸಹಕಾರ, ಪ್ರೋತ್ಸಾಹ ನೀಡುತ್ತಾ ಕುಲಾಲರ ಏಳಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಎಂ ವಿ ಕುಲಾಲ್ ತಮ್ಮ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಯಶಸನ್ನು ಗಳಿಸಲಿ. ಅವರ ಸೇವೆ ರಾಜ್ಯದ ಎಲ್ಲಾ ಕುಲಾಲ ಬಾಂಧವರಿಗೂ ತಲುಪುವಂತಾಗಲಿ ಎಂಬುದು `ಕುಲಾಲ್ ವರ್ಲ್ಡ್ ಡಾಟ್ ಕಾಂ’ ಹಾರೈಕೆ.