ಹೈಸ್ಕೂಲ್ನಲ್ಲಿ ಕಬಡ್ಡಿ ಮತ್ತು ಖೋ ಖೋ, ಪಿಯುಸಿಯಲ್ಲಿ ಕುಸ್ತಿ, ಪದವಿಯಲ್ಲಿ ಪವರ್ಲಿಫ್ಟಿಂಗ್- ಇದು ದೀಪಾ ಕುಲಾಲ್ ನಡೆದುಬಂದ ಹಾದಿ. ಈ ದೀಪಾ ಮಂಗಳೂರು ಸಮೀಪದ ಕುದ್ರೋಳಿ ಗೋಕರ್ಣನಾಥೇಶ್ವರ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ.
ಪ್ರೌಢಶಾಲೆಯಲ್ಲಿದ್ದಾಗ ಕಬಡ್ಡಿ ಆಟ ಕಲಿತರು. ರಾಜ್ಯಮಟ್ಟದ ಕಬಡ್ಡಿಯಲ್ಲಿ 3 ಬಾರಿ ವಿಜೇತೆ. ಕ್ರೀಡಾ ಕ್ಷೇತ್ರದ ಸಾಧನೆಗೆ ಗೆಲುವು ಸ್ಫೂರ್ತಿ ಆಯಿತು. ಕುಸ್ತಿಯಲ್ಲೂ ಆಸಕ್ತಿ. ಕೋಚ್ ಸಂದೀಪ್ ಮಾರ್ಗದರ್ಶನದಲ್ಲಿ ಮೈಸೂರು ದಸರಾ ಕುಸ್ತಿಯಲ್ಲೂ ಮಿಂಚಿದರು.
ಆರಂಭದಲ್ಲಿ ಪವರ್ಲಿಫ್ಟಿಂಗ್ ಬಗ್ಗೆ ಅರಿತಿರಲಿಲ್ಲ. ತರಬೇತುದಾರರಾದ ಸತೀಶ್ ಕುದ್ರೋಳಿ ಮತ್ತು ವಿನೋದ್ರಾಜ್ರ ಮಾರ್ಗದರ್ಶನದೊಂದಿಗೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು. ಕಳೆದ ವರ್ಷ ಸುರತ್ಕಲ್ನಲ್ಲಿ ನಡೆದ ರಾಜ್ಯಮಟ್ಟದ ವೇಟ್ಲಿಫ್ಟಿಂಗ್ನಲ್ಲಿ ಗಳಿಸಿದ್ದು ಚೊಚ್ಚಲ ಪದಕ. ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಚಿನ್ನದ ಪದಕ ಕುಲಾಲ್ರ ಪಟ್ಟಿ ಸೇರಿದವು.
ಹಿಮಾಚಲ ಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಪವರ್ಲಿಫ್ಟಿಂಗ್ಗೂ ದೀಪಾ ಆಯ್ಕೆಯಾಗಿದ್ದಾರೆ. ದೀಪಾಳ ಸಾಧನೆಗೆ ಮಂಗಳೂರು ಕುಲಾಲ್ ಸಂಘ, ದಾಸ್ ಪ್ರಮೋಶನ್ ನರ್ಸಿಂಗ್ ಹೋಂ ಸಂಸ್ಥೆ, ಉರ್ವಾ ಯುವಕ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಯಂಗ್ ಅಚೀವರ್ ಅವಾರ್ಡ್ಗೂ ಇವರು ಪಾತ್ರರು. ಇವರಿಗೆ ಸರ್ಕಾರದ 50 ಸಾವಿರ ರು. ಶಿಷ್ಯವೇತನ ಲಭಿಸಿದೆ.
ದೀಪಾ ಮಂಗಳೂರಿನ ಉರ್ವಾ ಸಮೀಪದ ಲಕ್ಷ್ಮಣ್ ಸಾಲ್ಯಾನ್-ರಾಜೀವಿ ದಂಪತಿಯ ಪುತ್ರಿ. ಕುಟುಂಬದ ಆರ್ಥಿಕ ಪರಿಸ್ಥಿತಿ ಅನುಕೂಲವಾಗಿಲ್ಲ. ಭವಿಷ್ಯದಲ್ಲಿ ರಾಷ್ಟ್ರ ಮೆಚ್ಚುವ ಕ್ರೀಡಾಪಟು ಆಗಬೇಕೆಂಬ ಮಹತ್ವದ ಕನಸು ದೀಪಾ ಕುಲಾಲ್ರದು.
ಪದಕಗಳ ಸಾಲು
ರಾಜಸ್ಥಾನದಲ್ಲಿ ನಡೆದ ಏಷ್ಯನ್ ಪವರ್ಲಿಫ್ಟಿಂಗ್ನಲ್ಲಿ ಕುಲಾಲ್ 4 ಚಿನ್ನ. ಕಲ್ಲಿಕೋಟೆಯಲ್ಲಿ ನಡೆದ ಹಿರಿಯರ ಪವರ್ಲಿಫ್ಟಿಂಗ್ನಲ್ಲಿ ಬೆಳ್ಳಿ. ಹಿಮಾಚಲ ಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟ ಡೆಡ್ ಲಿಫ್ಟ್ ವಿಭಾಗದಲ್ಲಿ (47ರಿಂದ 105 ಕೆ.ಜಿ.) ಚಿನ್ನ. ಲಖ್ನೋದಲ್ಲಿನ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ನಲ್ಲಿ ಬೆಳ್ಳಿ. ಹೈದರಾಬಾದ್ನಲ್ಲಿ ದಕ್ಷಿಣ ಭಾರತ ವಲಯ ವಿಭಾಗದಲ್ಲಿ ಬೆಳ್ಳಿ. ಇತ್ತೀಚೆಗೆ ಕೇರಳದಲ್ಲಿ ನಡೆದ ದಕ್ಷಿಣ ಭಾರತದ 52 ಕೆ.ಜಿ. ಪವರ್ ಲಿಫ್ಟಿಂಗ್ನಲ್ಲಿ 2 ಬೆಳ್ಳಿ, 1 ಚಿನ್ನ. ಕಿನ್ನಿಗೋಳಿಯಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಿತೆ.
ಪ್ರಥಮಗಳ ಸರಮಾಲೆ
2012ರಲ್ಲಿ ರಾಜಸ್ಥಾನದಲ್ಲಿ ನಡೆದ ಏಷ್ಯನ್ ಪವರ್ಲಿಫ್ಟಿಂಗ್ನಲ್ಲಿ ಹಲವು ದೇಶಗಳ ಸ್ಪರ್ಧಾಳುಗಳನ್ನು ಸೋಲಿಸಿ ಸ್ನ್ಯಾಚ್ 90 ಕೆ.ಜಿ. ವಿಭಾಗದಲ್ಲಿ ಪ್ರಥಮ, ಬೆಂಚ್ 47 ಕೆ.ಜಿ. ವಿಭಾಗದಲ್ಲಿ ಪ್ರಥಮ, ಮತ್ತು ಡೆಡ್ 100 ಕೆ.ಜಿ. ವಿಭಾಗದಲ್ಲಿ ಪ್ರಥಮಳೆನಿಸಿದರು ದೀಪಾ.