ಕಾಪು(ಕುಲಾಲ ವರ್ಲ್ಡ್ ಡಾಟ್ ಕಾಮ್): ಕಳೆದ ಮೂರು ದಶಕಗಳಿಂದ ತುಳು ರಂಗಭೂಮಿ ಮತ್ತು ಸಿನಿಮಾಗಳಲ್ಲಿ ವೃತ್ತಿಪರವಾಗಿ ಗುರುತಿಸಿಕೊಂಡು ಅಭಿನಯ ಕಲೆಯಲ್ಲಿ ತನ್ನದೇ ಆದ ಛಾಪು ಮೂಡಿಸಿ ಜನಮನಗೆದ್ದಿರುವ ಕಲಾವಿದ ಬಂಟ್ವಾಳದ ತಿಮ್ಮಪ್ಪ ಕುಲಾಲ್ ಅವರಿಗೆ ಕಾಪು ವಲಯ ಕುಲಾಲ ಸಂಘದ ವತಿಯಿಂದ `ರಂಗ ಭೂಷಣ’ ಬಿರುದು ನೀಡಿ ಸನ್ಮಾನಿಸಲಾಯಿತು. ಇತ್ತೀಚೆಗೆ ನಡೆದ ಕಾಪು ಕುಲಾಲ ಸಂಘದ ಆರನೇ ವಾರ್ಷಿಕೋತ್ಸವ ಸಂದರ್ಭ ಈ ಬಿರುದನ್ನು ಪ್ರದಾನ ಮಾಡಲಾಯಿತು. ಈ ಸಂದರ್ಭ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ ಹಾಗೂ ಕುಲಾಲ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಅಭಿನಯ ಕಲೆಯಲ್ಲಿ ಕುಲಾಲ್ ಕಮಾಲ್ :
ಎತ್ತರದ ಆಕರ್ಷಕ ಮೈಕಟ್ಟು, ದೇಹಕ್ಕೆ ಒಪ್ಪುವಂತಹ ಗಡಸು ಧ್ವನಿ, ವಿಲನ್ ರೋಲ್ಗೆಂದೇ ಮಾಡಿಸಿದಂತಹ ಮ್ಯಾನರಿಸಂ…. ತುಳು ಚಿತ್ರದಲ್ಲಿ ವಿಲನ್ ಪಾತ್ರಕ್ಕೆ ಜೀವ ತುಂಬಿದ ಮತ್ತೊಬ್ಬ ನಟ ತಿಮ್ಮಪ್ಪ ಕುಲಾಲ್ ಬಿ.ಸಿ.ರೋಡು. ತುಳು ಚಲನ ಚಿತ್ರ ಹಾಗೂ ನಾಟಕರಂಗದಲ್ಲಿ ಹಾಸ್ಯ ಹಾಗೂ ನೆಗಟಿವ್ ರೋಲ್ನಲ್ಲಿ ಪೇಕ್ಷಕರ ಮನಗೆದ್ದ ಬಂಟ್ವಾಳದ ಈ ನಟ ಎಲ್ಲರಿಗೂ ಚಿರಪರಿಚಿತ.
ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿ ಬೇಡಿಕೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಬಂಟ್ವಾಳದ ವಿವಿಧ ನಾಟಕ ತಂಡಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಇಂದು ತುಳು ಚಿತ್ರರಂಗದಲ್ಲಿಯೂ ವಿವಿಧ ಪಾತ್ರಗಳನ್ನು ನಿರ್ವಹಿಸುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ತಿಮ್ಮಪ್ಪ ಕುಲಾಲ್ಗೆ ರಂಗಭೂಮಿಯಲ್ಲಿ 30 ವರ್ಷಗಳ ಅನುಭವ. ಬಿ.ಆರ್ ಕುಲಾಲ್ ಅವರ ಮಂಗಳ ಸೂತ್ರ ನಾಟಕದಲ್ಲಿ ಎಸ್ಐ ಪ್ರದೀಪನಾಗಿ ನಾಟಕರಂಗ ಪ್ರವೇಶ. ಬಳಿಕ ಹಿರಿಯ ನಾಟಕಕಾರ ಶಾಂತರಾಮ ಕಲ್ಲಡ್ಕ ಅವರ ಗರಡಿಯಲ್ಲಿ ಪಳಗಿದ ಈ ನಟ ದೇವದಾಸ್ ಕಾಪಿಕಾಡ್ ಅವರ ಈರ್ ದೂರ …? ನಾಟಕದ ಮೂಲಕ ಚಾಪರ್ಕ ಕಲಾ ತಂಡಕ್ಕೆ ಎಂಟ್ರಿ. ಅಲ್ಲಿಂದ ಇಲ್ಲಿಯವರೆಗೆ ಸುಮಾರು 27 ವರ್ಷಗಳ ಕಾಲ ಕಾಪಿಕಾಡ್ ಅವರ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ಹಾಸ್ಯಪಾತ್ರ, ವಿಲನ್ ಮಾತ್ರವಲ್ಲದೆ 80ರ ವಯಸ್ಸಿನ ವೃದ್ಧ , ಸ್ತ್ರೀಪಾತ್ರಗಳನ್ನು ನಿರ್ವಹಿಸಿ ತಾನೊಬ್ಬ ಅದ್ಭುತ ಕಲಾವಿದ ಎನ್ನುವುದನ್ನು ತೋರಿಸಿಕೊಟ್ಟವರು. ದೇಶವಿದೇಶಗಳಲ್ಲಿ 10 ಸಾವಿರಕ್ಕಿಂತಲೂ ಅಧಿಕ ನಾಟಕಪ್ರದರ್ಶನ ನೀಡಿದ ಕೀರ್ತೀ ಇವರದ್ದು. ಇದೀಗ ಇವರಿಗೆ ರಂಗಭೂಮಿಯೇ ಬದುಕಾಗಿದೆ. ರಂಗಭೂಮಿಯೇ ಸರ್ವಸ್ವವಾಗಿದೆ.
ಚಲನಚಿತ್ರಕ್ಕೂ ಸೈ:
ತುಳು ನಾಟಕದಲ್ಲಿ ಮಿಂಚಿದ ಕುಲಾಲ್ ತುಳು ಚಿತ್ರರಂಗದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ. ಈಗಾಗಲೇ ತೆರೆ ಕಂಡಿರುವ ತೆಲಿಕೆದ ಬೊಳ್ಳಿ, ಚಾಲಿಪೋಲಿಲು, ಸೂಂಬೆ, ಚಂಡಿಕೋರಿ, ಬರ್ಸ ಮುಂತಾದ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರಗಳಾದ ಚೆಲ್ಲಾಪಿಲ್ಲಿ, ಸಿಂಪಲ್ಲಾಗ್ ಇನ್ನೊಂದು ಲವ್ಸ್ಟೋರಿ ಮೊಡ್ಲಾದ ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಾಧಕಲ್ಯಾಣ ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದಾರೆ. ವಿವಿಧ ನಾಟಕತಂಡದಲ್ಲಿ ಕಲಾವಿದರಾಗಿ ಕಾಣಿಸಿಕೊಂಡಿದ್ದ ನನ್ನ ಪ್ರತಿಭೆಯನ್ನು ಗುರುತಿಸಿ ಅವಕಾಶ ನೀಡಿದ್ದು ದೇವದಾಸ್ ಕಾಪಿಕಾಡ್ ಅವರು. ನಾಟಕ ಮಾತ್ರವಲ್ಲದೆ ಚಲನ ಚಿತ್ರದಲ್ಲೂ ಅಭಿನಯಿಸಲು ಅವಕಾಶ ನೀಡಿರುವ ಅವರೇ ನಮ್ಮ ಗುರುಗಳು ಎಂದು ವಿನಯತೆಯಿಂದ ನೆನೆಪಿಸಿಕೊಳ್ಳುತ್ತಾರೆ ತಿಮ್ಮಪ್ಪ ಕುಲಾಲ್.