`ಮೋಕೆದ ಸಿಂಗಾರಿ.. ಉಂತುದೆ ವೈಯ್ಯಾರಿ… ‘ , `ಪಕ್ಕಿಲು ಮೂಜಿ ಒಂಜೆ ಗೂಡುಡು ಬದ್ಕೊಂದುಡುಗೆ’ `ಪಗೆತ ಪುಗೆನಾ… ‘ ಈ ಹಾಡುಗಳನ್ನು ಕೇಳದ ತುಳುವರಿದ್ದಾರೆಯೇ ? ೭೦ರ ದಶಕದಲ್ಲಿ ಗ್ರಾಮೋಫೋನ್ , ರೇಡಿಯೋಗಳಲ್ಲಿ ಎಲ್ಲೆಲ್ಲೂ ಇವರ ಹಾಡಿನದ್ದೇ ಗುಂಗು. ಇಂಥ ಎಂದೂ ಮರೆಯಲಾಗದ ಹಾಡುಗಳನ್ನು ರಚಿಸಿದವರೇ ನಮ್ಮ ಹೆಮ್ಮೆಯ ಕವಿ ಮಂಗಳೂರಿನ ಎಮ್.ಕೆ. ಸೀತಾರಾಮ್ ಕುಲಾಲ್. ಕುಲಾಲ್ ಕನ್ನಡ ತುಳು ನಾಟಕ ರಂಗಗಳಿಗೆ ಸಲ್ಲಿಸಿದ ಅಮೂಲ್ಯ ಕೊಡುಗೆಗಳಿಂದ ಬಹುಮಾನ್ಯರಾದವರು.
ಬಂಟ್ವಾಳ ತಾಲೂಕಿನ ಕೊಲ್ನಾಡು ಎಂಬ ಪುಟ್ಟ ಗ್ರಾಮದಲ್ಲಿ ಎಂ ಕಾಂತಪ್ಪ ಮಾಸ್ತರ್ ಮತ್ತು ದೇವಕಿ ದಂಪತಿಯ ಸುಪುತ್ರನಾಗಿ ೧೯೪೦ರಲ್ಲಿ ಜನಿಸಿದ ಸೀತಾರಾಮ್ ಕುಲಾಲ್ ಎಳವೆಯಿಂದಲೂ ನಾಟಕ ಸಾಹಿತ್ಯದ ಕೃಷಿಯನ್ನು ನಡೆಸುತ್ತಾ ಬಂದವರು. ಇದು ಅವರಿಗೆ ರಕ್ತಗತವಾಗಿಯೇ ಒಲಿದಿತ್ತು. ಇವರ ತಂದೆ ಕಾಂತಪ್ಪ ಅವರು ಮೊದಲು ಅಧ್ಯಾಪಕರಾಗಿದ್ದರು. ಬಳಿಕ ಅವರು ಕಂದಾಯ ಇಲಾಖೆಯ ಗ್ರಾಮೀಣ ಕ್ಷೇಮಾಭಿವೃದ್ಧಿ ಅಧಿಕಾರಿಯಾಗಿ ಸೇವೆಗೆ ಸೇರಿಕೊಂಡಿದ್ದರು. ಅಲ್ಲಿಂದ ಬಳಿಕ ಜಿಲ್ಲಾ ಸಹಕಾರ ಇಲಾಖೆಗೆ ವೃತ್ತಿಯನ್ನು ಬದಲಾಯಿಸಿ ಬಳಿಕ ನಿವೃತ್ತಿಯಾದರು. ಅಧ್ಯಾಪಕರಾಗಿದ್ದ ಸಂದರ್ಭದಲ್ಲಿ ಇವರು ೪ ಮತ್ತು ೫ನೇ ತರಗತಿಗೆ ಗಣಿತ ಪಾಠ ಪುಸ್ತಕವನ್ನೂ ರಚಿಸಿದ್ದರು. ಉತ್ತಮ ಕವಿಯೂ ಆಗಿದ್ದ ಅವರು, ಎರಡನೇ ವಿಶ್ವ ಯುದ್ಧ ಸಂದರ್ಭದಲ್ಲಿ ಅದಕ್ಕೆ ಪೂರಕವಾಗಿ ರಚಿಸಿದ ಕವನವೊಂದಕ್ಕೆ ಆಗಿನ ಮದ್ರಾಸ್ ಸರಕಾರದಿಂದ ೧೦೦ ರೂ. ಇನಾಮು ದೊರೆತಿತ್ತು. ಅಲ್ಲದೆ ಅವರು ನಾಟಕ ಕಲಾವಿದರೂ, ಉತ್ತಮ ತಬಲಾ ಪಟುವೂ ಕೂಡಾ ಆಗಿದ್ದರು.
ಇಂತಹಾ ಬಹುಮುಖ ಪ್ರತಿಭೆಯ ಮಗನಾದ ಸೀತಾರಾಮ್ ಕುಲಾಲ್, ಮೆಟ್ರಿಕ್ ವರೆಗೆ ಓದಿ, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿಯಲ್ಲಿ ಉದ್ಯೋಗಿಯಾಗಿ ಸೇವೆಗೆ ಸೇರಿಕೊಂಡು, ಬಳಿಕ ಸೀನಿಯರ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ೨೦೦೫ರಲ್ಲಿ ಕರ್ನಾಟಕ ತುಳು ಅಕಾಡೆಮಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಕುಲಾಲರ ಪ್ರಥಮ ನಾಟಕ ‘ದಾಸಿಪುತ್ರ’. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಅರುತ್ತೊಂಬತ್ತು ನಾಟಕಗಳನ್ನು ರಚಿಸಿದ್ದು, ‘ಮಣ್ಣ್ದ ಮಗಲ್ ಅಬ್ಬಕ್ಕ’ ನಾಟಕ ಅತ್ಯಂತ ಯಶಸ್ವಿ ಪ್ರಯೋಗಗಳನ್ನು ಕಂಡಿದೆ. ಕನ್ನಡದ ಅಬ್ಬಕ್ಕ ನಾಟಕ 1962ರಲ್ಲೇ ಆಗಿನ ಜಿಲ್ಲಾಧಿಕಾರಿ ಯಚ್. ನಾಗೇಗೌಡರು ಕೊಡಮಾಡಿದ ಪ್ರಥಮ ಬಹುಮಾನ ಗಳಿಸಿಕೊಂಡಿದೆ.
ದೃಶ್ಯ ರೂಪಕಗಳನ್ನು ರಚಿಸಿ ಶಾಲೆಗಳಲ್ಲಿ ಪ್ರದರ್ಶಿಸುವುದೂ ಇವರ ಮೆಚ್ಚಿನ ಹವ್ಯಾಸವೇ. ತುಳು ಕನ್ನಡ ನಾಟಕಗಳಿಗೆ ಮುನ್ನೂರೈವತ್ತಕ್ಕೂ ಮೀರಿ ಹಾಡುಗಳನ್ನು ರಚಿಸಿ ಜನಮೆಚ್ಚಿಗೆ ಗಳಿಸಿದ ಶ್ರೀ ಕುಲಾಲ್ ತುಳು ಸಿನೇಮಾಗಳಿಗೂ ತನ್ನ ಹಾಡುಗಳಿಂದಲೇ ವಿಶೇಷ ಮನ್ನಣೆ ತಂದು ಕೊಟ್ಟವರು. ‘ಶ್ರೀ ಕ್ಷೇತ್ರ ಕಟೀಲು’ ಭಕ್ತಿಗೀತೆಗಳ ಧ್ವನಿಸುರುಳಿ, ‘ತುಳುವ ಮಲ್ಲಿಗೆ’ ಧ್ವನಿಸುರುಳಿಯ ಹಾಡುಗಳು ತುಂಬ ಪ್ರಖ್ಯಾತವಾಗಿವೆ. ‘ಕಡಲನಾಡ ಕಲಾವಿದರು’ ಸಂಸ್ಥೆಯಲ್ಲಿದ್ದು 51 ವರ್ಷ ಈ ಸಂಸ್ಥೆಯನ್ನು ನಡೆಸಿಕೊಂಡು ಬಂದ ಸೀತಾರಾಮ ಕುಲಾಲ್ ಸ್ವತ: ನಟಿಸಿದ ಎಂಟು ನಾಟಕಗಳು ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಗೆದ್ದಿವೆ. ‘ಉಡಲ್ದ ತುಡರ್’ ತುಳು ಚಿತ್ರದ ಕಥೆ ಮತ್ತು ಸಂಭಾಷಣೆಗೆ ಪ್ರಶಸ್ತಿಗಳು ಸಂದಿವೆ. ಇವರು ರಚಿಸಿದ ಸಿನೇಮಾ ಮತ್ತು ನಾಟಕದ ಬಹಳಷ್ಟು ಹಾಡುಗಳು ತುಳು ನಾಡಿನವರ ಬಾಯಲ್ಲಿ ನಿರಂತರ ಅನುರಣಿಸುವಂಥವೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸೀತಾರಾಮ ಕುಲಾಲ್ ಹಲವಾರು ಸಾಧನೆಗಳಿಗಾಗಿ ಅಭಿನಂದನಾರ್ಹರು. ‘ತುಳುಭವನ’ಕ್ಕೆ ಸರಕಾರದಿಂದ ನಿವೇಶನವನ್ನು ಪಡೆದುದು, ತುಳು ಪಠ್ಯ ಯೋಜನೆಗೆ ಬುನಾದಿ ಹಾಕಿದ್ದು, ತುಳುಲಿಪಿ ಓಲೆಗಳ ಸಂಗ್ರಹದ ಪ್ರಯತ್ನ, ಕುಪ್ಪಂ ವಿಶ್ವವಿದ್ಯಾಲಯದ ಸಂಪರ್ಕದಲ್ಲಿ ಪಿಯಚ್.ಡಿ, ಎಮ್.ಫಿಲ್.ಯೋಜನೆ ಆರಂಭಿಸಿದ್ದು, ಅಕಾಡೆಮಿಯ ವತಿಯಿಂದ ಹತ್ತು ಸಿ.ಡಿ. ಗಳಲ್ಲಿ ತುಳು ಜಾನಪದ ನೃತ್ಯ, ದೈವದ ಕುಣಿತ, ತುಳುನಾಡಿನ ಪ್ರೇಕ್ಷಣೀಯ ಸ್ಥಳಗಳು, ಅಕಾಡೆಮಿ ನಡೆದು ಬಂದ ದಾರಿ ಇತ್ಯಾದಿಗಳನ್ನು ದಾಖಲಿಸಿದ್ದು, ತುಳುವನ್ನು ಸಂವಿಧಾನದಲ್ಲಿ ಸೇರ್ಪಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದು, ‘ಬಲೇ ತುಳು ಕಲ್ಪುಗ’ ಕಾರ್ಯಕ್ರಮವನ್ನು ಆರಂಭಿಸಿದ್ದು ಇತ್ಯಾದಿ ಇಲ್ಲಿ ಉಲ್ಲೇಖನಾರ್ಹ ಸಾಧನೆಗಳು.
‘ರಂಗಕಲಾಭೂಷಣ’ ‘ತುಳು ರತ್ನ’ ‘ಪೆರ್ಮೆದ ತುಳುವೆ’ ‘ತುಳುಸಿರಿ’ ‘ತುಳು ಸಾಹಿತ್ಯ ರತ್ನಾಕರ’ ‘ತೌಳವ ಪ್ರಶಸ್ತಿ’ ಇತ್ಯಾದಿ ಪ್ರಶಸ್ತಿಗಳಿಂದ ಪುರಸ್ಕೃತರಾಗಿ, ಊರು, ಪರವೂರು, ಪರರಾಜ್ಯ, ಪರದೇಶಗಳಲ್ಲಿ ಸನ್ಮಾನಿತರಾಗಿ, ಸದಾ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಯ ಮೇಲ್ಮೆಗಾಗಿ ದುಡಿಯಲು ಮುಂದಾಗುವ ಶ್ರೀ ಸೀತಾರಾಮ ಕುಲಾಲ್ರವರ ಬಹುಮುಖ ಪ್ರತಿಭೆ, ಬಹುಮುಖ ಸಾಧನೆಗಳನ್ನು ಪರಿಗಣಿಸಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2014ರ ಸಾಲಿನ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ. ಯೌವ್ವನದ ದಿನಗಳಲ್ಲಿ ಉತ್ತಮ ಕ್ರಿಕೆಟ್ ಮತ್ತು ವಾಲಿಬಾಲ್ ಆಟಗಾರರಾಗಿದ್ದ, ಕುಲಾಲ್ ಕೇರಂ ಮತ್ತು ಚೆಸ್ ಆಟದಲ್ಲೂ ಎತ್ತಿದ ಕೈ. ೧೯೮೫ರಲ್ಲಿ ಶುಭಾ ಎಂಬಾಕೆಯನ್ನು ವರಿಸಿದ ಕುಲಾಲ್ ಅವರದ್ದು ಸoತೃಪ್ತ ಕುಟುಂಬ.
ಬರಹ : ದಿನೇಶ್ ಬಿ. ಐ