ಬೆಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ದೀಪಗಳ ಹಬ್ಬದಲ್ಲಿ ಹಣತೆಗಳ ಕಾರು ಬಾರು ಬಲು ಜೋರು. ಆದರೆ ಇಂದಿನ ಆಧುನಿಕ ಬದುಕಿನಲ್ಲಿ ಕುಂಬಾರ ನಲುಗಿ ಹೋಗಿದ್ದಾನೆ. ಆಧುನಿಕತೆಯ ಬಿರುಗಾಳಿಗೆ ಸಿಲುಕಿ ಕುಂಬಾರರ ಮಣ್ಣಿನ ಹಣತೆ ಆರುತ್ತಿದ್ದು, ಕುಂಬಾರರ ಬದುಕು ಕತ್ತಲಾಗುತ್ತಿದೆ.
ಕತ್ತಲೆಯ ತೊರೆದು ಬೆಳಕು ಹರಡುವ ದೀಪಾವಳಿ ಹಬ್ಬಕ್ಕೆ ದಿನಗಳಷ್ಟೇ ಬಾಕಿ ಇದೆ. ಹಬ್ಬಕ್ಕೆ ಹಣತೆಗಳೇ ಪ್ರಮುಖ ಆಕರ್ಷಣೆ. ಆದರೆ, ಹಣತೆ ತಯಾರಿಗೆ ಕತ್ತಲು ಕವಿದಿದ್ದು, ಮಾರುಕಟ್ಟೆಯಲ್ಲಿ ತಕ್ಕಮಟ್ಟಿಗೆ ಬೇಡಿಕೆ ಇದ್ದರೂ ಪೂರೈಕೆ ಇಲ್ಲದೆ ಬೆಳಗಿನ ಹಬ್ಬದ ಸಂಭ್ರಮ ಸೊರಗಿದೆ. ಜೇಡಿ ಮಣ್ಣಿನಿಂದ ತಯಾರಿಸಿದ ಹಣತೆಗಳ ಬಳಕೆ ಕಡಿಮೆಯಾದಂತೆ, ತಯಾರಿಕೆಯೂ ಕಡಿಮೆಯಾಗಿದ್ದು, ಅಗತ್ಯವಿದ್ದಷ್ಟೂ ಸಿಗುತ್ತಿಲ್ಲ. ದಶಕದ ಹಿಂದಿನವರೆಗೂ ಹಣತೆ ಮಾಡುವ ಕುಂಬಾರರ ಕುಟುಂಬಗಳಿಗೆ ದೀಪಾವಳಿ ಬಂತೆಂದರೆ ಅದೊಂದು ಅಕ್ಷರಶಃ ಅವರ ಬದುಕಿನ ಬೆಳಕಿನ ಹಬ್ಬವೇ ಆಗಿತ್ತು. ದೀಪಾವಳಿಗೆ ಎರಡು ತಿಂಗಳು ಮುಂಚೆಯೇ ಲಾರಿಗಟ್ಟಲೆ ಜೇಡಿ ಮಣ್ಣನ್ನು ತಂದು ಹದ ಮಾಡಿ ಮನೆಯೊಳಗೆ, ಅಂಗಳ, ಖಾಲಿ ಜಾಗ ಇದ್ದಲ್ಲೆಲ್ಲ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹಣತೆಗಳನ್ನು ಮಾಡಿ ಆರಲು ಇಡುತ್ತಿದ್ದರು. ಬಳಿಕ ಅದನ್ನು ಚೆನ್ನಾಗಿ ಸುಟ್ಟು ಮಾರುಕಟ್ಟೆಗೆ ತರುತ್ತಿದ್ದರು.
ಗ್ರಾಹಕರಂತೂ ಮುಗಿಬಿದ್ದು ಮಣ್ಣಿನ ಹಣತೆಗಳನ್ನು ಒಬ್ಬೊಬ್ಬರು 30-40 ಹಣತೆಗಳನ್ನು ಒಯ್ಯುತ್ತಿದ್ದರು. ಈಗ ಅದೆಲ್ಲವೂ ಇತಿಹಾಸವಾಗಿದೆ. ಬೆರಳೆಣಿಕೆ ಸಂಖ್ಯೆಯಲ್ಲಿ ಮಣ್ಣಿನ ಹಣತೆ ಒಯ್ಯುವರ ಸಂಖ್ಯೆಯೂ ವಿರಳವಾಗುತ್ತಿದೆ. ಹೀಗಾಗಿ ಕುಂಬಾರರ ಬಾಳಿಗೆ ದೀಪಾವಳಿ ಬೆಳಕು ನೀಡುವ ಹಬ್ಬವಾಗಿ ಉಳಿದಿಲ್ಲ.
ಎಲ್ಇಡಿ ದೀಪದ ಮೆರಗು: ಆಧುನಿಕತೆ ಎಷ್ಟು ವೇಗವಾಗಿ ಸಾಗಿದೆ ಎಂದರೆ ಇಲ್ಲಿಯವರೆಗೂ ಮಣ್ಣಿನ ಹಣತೆ ಯಾಗವನ್ನು ಆವರಿಸಿದ್ದ ಪಿಂಗಾಣಿ ದೀಪಗಳೂ ಈಗ ಮರೆಯಾಗುತ್ತಿದ್ದು ಗ್ರಾಹಕರು ಎಲ್ಇಡಿ ದೀಪಗಳಿಗೆ ಮೋರೆ ಹೋಗುತ್ತಿದ್ದಾರೆ. ಮಾರುಕಟ್ಟೆಗೆ ಎಲ್ಸಿಡಿ ದೀಪಗಳು ಬಂದಿದ್ದು ಕಡಿಮೆ ವಿದ್ಯುತ್ ನಿಂದ ಹೆಚ್ಚು ಪ್ರಕಾಶಮಾನವಾಗಿ ದೀರ್ಘ ಕಾಲದವರೆಗೆ ಬೆಳಕು ನೀಡಲು ಮುಂದಾಗಿದ್ದು, ಇವುಗಳಿಗೆ ಈಗ ಗ್ರಾಹಕರು ಮುಗಿಬೀಳುತ್ತಿದ್ದಾರೆ.
ಆಧುನಿಕತೆಯ ಭರಾಟೆಯ ಕಾರಣದಿಂದ ಈ ಮಣ್ಣಿನ ಹಣತೆ ಮೂಲೆ ಸೇರಿದರೆ, ಕೆಲವೇ ಕೆಲವು ಕಟ್ಟಾ ಸಂಪ್ರದಾಯಸ್ಥರಷ್ಟೇ ಮಣ್ಣಿನ ಹಣತೆ ಖರೀದಿಸುವಂತಾಗಿದೆ. ಹಲವಾರು ವರ್ಷಗಳಿಂದ ಕಂಬಾರಿಕೆ ವೃತ್ತಿ ಮಾಡಿಕೊಂಡು ಬಂದವರು ಈಗ ಬೇರೆ ವೃತಿಯತ್ತ ಮುಖ ಮಾಡಿದ್ದಾರೆ. ಆದರೆ, ಕುಂಬಾರಿಕೆಯಿಂದ ಕುಟುಂಬ ನಿರ್ವಹಣೆ ಹೊರತುಪಡಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಆಗುತ್ತಿಲ್ಲ.
ಜಿಎಸ್ಟಿ ಪ್ರಭಾವ: ಹಣತೆಗಳನ್ನು ಪಶ್ಚಿಮ ಬಂಗಾಳ, ರಾಜಸ್ತಾನ, ಗುಜರಾತ್, ತಮಿಳುನಾಡು, ಆಂದ್ರಪ್ರದೇಶಗಳಿಂದ ದೀಪಗಳನ್ನು ಆಮದು ಮಾಡಿಕೊಳ್ಳಲಾಗುತ್ತೆ. ಜೊತೆಗೆ ಕರ್ನಾಟಕದಿಂದ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಹಣತೆಗಳನ್ನ ತರಿಸಿಕೊಳ್ಳಲಾಗುತ್ತೆ. ಆದರೆ ಹಲವು ರಾಜ್ಯದಲ್ಲಿ ನೆರೆಯಿಂದಾಗಿ ಬರಬೇಕಾದ ಹಣತೆಗಳು ಬರದೇ ಇರುವುದು ಕಂಡು ಬಂದಿದೆ. ಅಲ್ಲದೆ, ಈ ಬಾರಿ ಜಿಎಸ್ಟಿ ಕೂಡ ಸೇರಿದೆ. ಸೀಮಿತ ಹಣತೆಗಳನ್ನು ಮಾತ್ರ ಖರೀದಿ ಮಾಡಲಾಗುತ್ತಿದೆ ಎಂದು ವರ್ಣ ಸ್ಟೋರ್ನ ಮಾಲಕ ಅರುಣ್ ಬೇಸರ ವ್ಯಕ್ತಪಡಿಸಿದರು.
ಚೀನಿ ಮಣ್ಣಿನ ಹಣತೆಗಳು, ಹೊಳಪಿನ ಮೈಮಾಟವುಳ್ಳ, ವೈವಿಧ್ಯಮಯ ಕಲಾ ಚಿತ್ತಾರ ಹೊಂದಿರುವ ಪಿಂಗಾಣಿ ಹಣತೆಗಳಿಗೆ ಬಹುತೇಕ ಜನರು ಮಾರುಹೋಗುತ್ತಿದ್ದಾರೆ. ದಶಕದ ಹಿಂದೆ ಲಕ್ಷ ಲಕ್ಷ ಹಣತೆಗಳನ್ನು ತಮ್ಮ ಮನೆ ಮುಂದೆ ಮಾರಾಟ ಮಾಡುತ್ತಿದ್ದ ಕುಂಬಾರ ಕುಟುಂಬಗಳು ಐದಾರು ವರ್ಷಗಳಿಂದ ಸಾವಿರ ಲೆಕ್ಕದಲ್ಲಿ ಹಣತೆಗಳನ್ನು ಮಾರಾಟ ಮಾಡಿ ತಮ್ಮ ಬದುಕಿನ ಬಂಡಿ ಸಾಗಿಸುತ್ತಿವೆ. ಹಣತೆ ತಯಾರಿಸಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರು ಈಗ ಬೇರೆ ವೃತ್ತಿಯತ್ತ ಮುಖ ಮಾಡಿದ್ದಾರೆ ಎಂದು ಕುಂಬಾರ ಸಮುದಾಯದ ರವಿಕುಮಾರ್ ಸಂಕಟ ವ್ಯಕ್ತಪಡಿಸಿದ್ದಾರೆ.
ನಗರದಾದ್ಯಂತ ಬೆಳಕಿನ ಹಬ್ಬ ದೀಪಾವಳಿಗೆ ಸಿದ್ಧತೆ ನಡೆದಿದೆ. ನಾನಾ ವಿನ್ಯಾಸಗಳ ಹಣತೆ, ಬಣ್ಣ ಬಣ್ಣದ ಆಕಾಶಬುಟ್ಟಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಮಕ್ಕಳು, ಹಿರಿಯರು ಪಟಾಕಿ ಖರೀದಿಗೆ ಮುಂದಾಗಿದ್ದರೆ, ಜನತೆ ಪೂಜಾ ಸಾಮಗ್ರಿ, ಹೊಸ ಬಟ್ಟೆಗಳ ಖರೀದಿಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆಗಳಲ್ಲಿ ಈಗಾಗಲೇ ಜನಜಂಗುಳಿ ಮನೆ ಮಾಡಿದೆ.
– ಬಾಬುರೆಡ್ಡಿ ಚಿಂತಾಮಣಿ
ಕೃಪೆ : ವಾರ್ತಾಭಾರತಿ