ದೆಹಲಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಪಶ್ಚಿಮ ದೆಹಲಿಯ ಉತ್ತಮನಗರ ಪ್ರದೇಶದಲ್ಲೊಂದು ಕುಂಬಾರ ಗ್ರಾಮ ಉಂಟು. ಅದನ್ನು ಕುಂಬಾರ ಕಾಲನಿ ಎಂದೇ ಕರೆಯುತ್ತಾರೆ. ಬಹುತೇಕರು ನೆರೆಯ ಹರಿಯಾಣ ಮತ್ತು ರಾಜಸ್ತಾನದವರು. 1968ರಲ್ಲಿ ಇವರಿಗೆ ಇಲ್ಲಿ ನಿವೇಶನಗಳನ್ನು ಹಂಚಿಕೊಡಲಾಗಿತ್ತು. ದೇಶದ ಅತಿದೊಡ್ಡ ಕುಂಬಾರರ ಕಾಲನಿಯಿದು. 400ಕ್ಕೂ ಹೆಚ್ಚು ಮನೆಗಳು. ಮುಖ್ಯಬೀದಿಯಲ್ಲಿ ಮಡಿಕೆ ಕುಡಿಕೆ ಹೂಜಿ ಕುಂಡ, ಬೋಗುಣಿ, ಹಾಗೂ ಮಣ್ಣಿನ ಕಲಾಕೃತಿಗಳ ಅಂಗಡಿಗಳು. ಓಣಿಗಳಲ್ಲಿ ಕುಂಬಾರಿಕೆಯ ಕಮ್ಮಟಗಳು.
ರಾಷ್ಟ್ರಪ್ರಶಸ್ತಿ ಪಡೆದ ಕುಂಬಾರಿಕೆ ಕಲಾವಿದರೂ ಇಲ್ಲಿದ್ದಾರೆ. ಆದರೆ ಬಹುತೇಕರು ಹೊಸತನ, ಹೊಸ ತಂತ್ರಜ್ಞಾನ, ವಿನ್ಯಾಸಗಳನ್ನು ಕಲಿಯಲು ಆಸಕ್ತಿ ತೋರುತ್ತಿಲ್ಲ. ಮಾರುಕಟ್ಟೆಯ ಸ್ಪರ್ಧೆಗೆ ತಮ್ಮನ್ನು ಒಡ್ಡಿಕೊಳ್ಳಲಾರದೆ ಸೋಲುತ್ತಿದ್ದಾರೆ. ಶೇ. 40ರಷ್ಟು ಮನೆಗಳು ಈಗಾಗಲೆ ಕುಂಬಾರಿಕೆಯನ್ನು ಬಿಟ್ಟುಕೊಟ್ಟಿವೆ. ಜೀವನಯಾಪನೆಗೆ ಎಷ್ಟೋ ಮಂದಿ ಸೈಕಲ್ ರಿಕ್ಷಾ ತುಳಿಯುತ್ತಿದ್ದಾರೆ. ಅವರ ಮಕ್ಕಳು ಮರಿಗಳು ಡ್ರೈವರ್, ಮೆಕ್ಯಾನಿಕ್, ಎ. ಸಿ. ದುರಸ್ತಿ ಇತ್ಯಾದಿ ಕೆಲಸಗಳನ್ನು ಅವಲಂಬಿಸುತ್ತಿದ್ದಾರೆ. ಹಣತೆಗಳ ಹಬ್ಬ ದೀಪಾವಳಿ ಕೂಡ ಇವರ ನಿತ್ಯ ಬದುಕಿನ ಕತ್ತಲನ್ನು ಚೆದುರಿಸಿಲ್ಲ. ಮಣ್ಣಿನ ಹಣತೆಗಳನ್ನು ಕೊಳ್ಳುವವರಿಲ್ಲ. ಚೀನೀ ವಿದ್ಯುದ್ದೀಪಗಳ ಸರಗಳು ಇವರ ಹಣತೆಗಳ ವ್ಯಾಪಾರವನ್ನು ಕಸಿದಿವೆ. ಗಾಜು ಮತ್ತು ಪ್ಲಾಸ್ಟಿಕ್ ಹಾವಳಿಯಿಂದಾಗಿ ಇವರು ತಯಾರಿಸುವ ಇತರೆ ವಸ್ತುಗಳನ್ನು ಕೇಳುವವರಿಲ್ಲ. ಅಲ್ಯೂಮಿನಿಯಂ ಬಂದಾಗಲೆ ಅರ್ಧವಾಗಿದ್ದ ಕುಂಬಾರಿಕೆ ಈಗ ಕಡೆಯುಸಿರು ಬಿಡತೊಡಗಿದೆ.
ಗ್ರಾಮೀಣ ಕುಶಲ ಕಲೆಯನ್ನು ಪ್ರೋತ್ಸಾಹಿಸುವ ಮಾತಾಡಿದ್ದ ಗಾಂಧೀ ಮಹಾತ್ಮನ 150ನೆಯ ಜಯಂತಿ ಆಚರಿಸುತ್ತಿದೆ ದೇಶ. ಇಂತಹ ಸಂದರ್ಭದಲ್ಲಿ ಕುಂಬಾರರ ಅಸ್ತಿತ್ವವೇ ಅಳಿವಿನ ಅಂಚು ತಲುಪಿರುವುದು ವಿಡಂಬನೆ. ಕಾಲನಿ ಕಳೆದು ಹೋದ ಕಲೆಯ ವಸ್ತುಸಂಗ್ರಹಾಲಯ ಆಗಿಬಿಡುವ ದಿನಗಳು ದೂರವಿಲ್ಲ ಎಂಬುದು ಇವರ ಆತಂಕ. ಈ ಕಾಲನಿ ಈಗಾಗಲೆ ವಿಶೇಷವಾಗಿ ವಿದೇಶಿ ಪ್ರವಾಸಿಗಳಲ್ಲಿ ಜನಪ್ರಿಯ ಪ್ರೇಕ್ಷಣೀಯ ಸ್ಥಳ. ತಂಡ ತಂಡಗಳಲ್ಲಿ ಬಂದು ಮಣ್ಣು ಕಲೆಯಾಗಿ ಅರಳುವ ಬೆರಗನ್ನು ನೋಡುತ್ತಾರೆ. ಫೋಟೋ ತೆಗೆಯುತ್ತಾರೆ. ತೆಗೆಯಿಸಿಕೊಳ್ಲುತ್ತಾರೆ. ಕುಂಬಾರ ಚಕ್ರವನ್ನು ತಿರುಗಿಸಿ ಮುದಗೊಳ್ಳುತ್ತಾರೆ. ಡೆಲ್ಲಿ ಫೋಟೋಗ್ರಫಿ ಕ್ಲಬ್ ನವರ ಯಾತ್ರೆ ತಿಂಗಳಿಗೆರಡು ಸಲ ತಪ್ಪದು.
ಮಾಲಿನ್ಯದ ಆರೋಪ ಈ ಕಾಲನಿಯನ್ನು ಇನ್ನಷ್ಟು ಕಂಗೆಡಿಸಿದೆ. ರಾಜಸ್ತಾನದ ಬರಪೀಡಿತ ಪ್ರದೇಶಗಳಿಂದ ಮತ್ತು ಹರಿಯಾಣದಿಂದ ಈ ಸಮುದಾಯ ಇಲ್ಲಿಗೆ ಬಂದು ಬೀಡು ಬಿಟ್ಟಾಗ ಸುತ್ತಮುತ್ತ ಕೃಷಿ ಪ್ರದೇಶ. ಇದೀಗ ಗಿಜಿಗುಡುವ ವಸತಿ ಪ್ರದೇಶ. ತಾವು ತಯಾರಿಸಿದ ವಸ್ತುಗಳನ್ನು ಸುಟ್ಟು ಗಟ್ಟಿ ಮಾಡಲು ರಾತ್ರಿ ಮೂರು ತಾಸು ಭಟ್ಟಿ ಹೊತ್ತಿಸುತ್ತಾರೆ. ಕಟ್ಟಿಗೆ, ಮರದ ಹೊಟ್ಟಿನ ಉರುವಲು ಕಪ್ಪು ಹೊಗೆಯನ್ನು ಎಬ್ಬಿಸುತ್ತದೆ. ಮಾಲಿನ್ಯದ ದೂರು ರಾಷ್ಟ್ರೀಯ ಹಸಿರು ನ್ಯಾಯಪೀಠದ ತನಕ ಹೋಗಿದೆ. ನೋಟಿಸುಗಳು ಬಂದಿವೆ. ಅಡುಗೆ ಅನಿಲ ಬಳಸುವ ಭಟ್ಟಿಗಳು ಈ ಸಮಸ್ಯೆಗೆ ಪರಿಹಾರ. ಆದರೆ ಇವುಗಳನ್ನು ತಾವೇ ಕಟ್ಟಿಕೊಳ್ಳುವಷ್ಟು ಹಣಕಾಸಿನ ಅನುಕೂಲ ಇವರಿಗಿಲ್ಲ.
ಪತ್ರಿಕೆಗಳು, ಟೀವಿ ಚಾನೆಲ್ ಗಳು ಪ್ರತಿ ದಿವಾಳಿಗೆ ಮುನ್ನ ಈ ಕಾಲನಿಯನ್ನು ನೆನಪಿಸಿಕೊಳ್ಳುತ್ತವೆ. ಮುಂದಿನ ದೀಪಾವಳಿ ತನಕ ಮರೆತುಬಿಡುತ್ತವೆ. ಇದು ಕೇವಲ ದೆಹಲಿಯ ಉತ್ತಮನಗರದ ಕುಂಬಾರ ಕಾಲನಿಯ ಕತೆಯಿರಲಾರದು. ದೇಶದ ಬಹುತೇಕ ಎಲ್ಲ ಕುಂಬಾರಿಕೆ ಚಕ್ರಗಳು ಸೊರಗತೊಡಗಿರುವ ವ್ಯಥೆಯಿದು.



