ಪೆರ್ಡೂರು ಕುಂಬಾರರ ಗುಡಿ ಕೈಗಾರಿಕೆ ಸಂಘದಿಂದ ಪರಿಸರ ಸ್ನೇಹಿ ಯೋಜನೆ
ಉಡುಪಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಕುಂಬಾರಿಕೆಯಲ್ಲಿ ಆಧುನಿಕತೆಯ ಸ್ಪರ್ಶ ನೀಡುತ್ತಿರುವ ಪೆರ್ಡೂರು ಕುಂಬಾರರ ಗುಡಿ ಕೈಗಾರಿಕೆ ಸಂಘವು ಇದೀಗ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಪ್ಲಾಸ್ಟಿಕ್ ನಿಷೇಧದ ಹಿನ್ನೆಲೆಯಲ್ಲಿ ಅದಕ್ಕೆ ಪರ್ಯಾಯವಾಗಿ ಪ್ಲಾಸ್ಟಿಕ್ ಲೋಟಗಳ ಬದಲು ಬಳಸಿ ಎಸೆಯುವ ಪರಿಸರ ಸ್ನೇಹಿ ಮಣ್ಣಿನ ಲೋಟ(ಕಪ್)ಗಳನ್ನು ತಯಾರಿಸಲು ಯೋಜನೆ ರೂಪಿಸಿದೆ. ಈ ಸಂಘವು ಸುತ್ತಮುತ್ತಲಿನ ಗ್ರಾಮದ ಕುಶಲಕರ್ಮಿಗಳು ಕುಂಬಾರಿಕೆ ಮೂಲಕ ತಯಾರಿಸಿದ ಮಣ್ಣಿನ ಪರಿಕರಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ 1958ರಲ್ಲಿ ಮಡಕೆ ತಯಾರಕರ ಸಹಕಾರಿ ಸಂಘ ಎಂಬ ಹೆಸರಿನಲ್ಲಿ ಪೆರ್ಡೂರಿನಲ್ಲಿ ಸ್ಥಾಪನೆಗೊಂಡಿತ್ತು. ಅದಕ್ಕಾಗಿ ಪೆರ್ಡೂರಿನಲ್ಲಿ ಶೋರೂಂ ಸ್ಥಾಪಿಸಿ ಆ ಮೂಲಕ ಗ್ರಾಹಕರಿಗೆ ಮಣ್ಣಿನ ಪರಿಕರ ತಲುಪಿಸುವ ಕಾರ್ಯವನ್ನು ಆರಂಭಿಸಿತು. ನಿರಂತರ ಶ್ರಮದಿಂದ ಇದೀಗ ಹೊಸ ಮೈಲಿಗಲ್ಲು ಸಾಧಿಸಿರುವ ಸಂಘವು ಪೆರ್ಡೂರಿನಲ್ಲಿ ಒಂದೇ ಸೂರಿನಡಿ ಸುಮಾರು 1.5ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಕಾರ್ಯಾಗಾರದಲ್ಲಿ ಪಾರಂಪರಿಕ ಮತ್ತು ಆಧುನಿಕತೆ ಸಮ್ಮಿಲನದ ತಂತ್ರಜ್ಞಾನ ಬಳಸಿ ಮಣ್ಣಿನ ಪರಿಕರಗಳನ್ನು ತಯಾರಿಸುವ ಕಾರ್ಯ ಆರಂಭಿಸಿದೆ.
ಅಗ್ಗದ ದರದ ಮಣ್ಣಿನ ಲೋಟ:
ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಅನ್ನು ನಿಷೇಧಿಸಿರುವುದರಿಂದ ಅದಕ್ಕೆ ಪರ್ಯಾಯವಾಗಿ ಹುಟ್ಟಿಕೊಂಡಿರುವ ಪೇಪರ್ ಲೋಟದಷ್ಟೇ ಅಗ್ಗದ ದರದಲ್ಲಿ ಮಣ್ಣಿನ ಲೋಟವನ್ನು ತಯಾರಿಸುವುದು ಬಹಳ ದೊಡ್ಡ ಸವಾಲು ಆಗಿದೆ. ಈ ನಿಟ್ಟಿನಲ್ಲಿ ಸಂಘದ ಪದಾಧಿಕಾರಿಗಳು ಕಡಿಮೆ ಬೆಲೆಯಲ್ಲಿ ಮಣ್ಣಿನ ಲೋಟ ತಯಾರಿಸುವ ಕುರಿತು ಅಧ್ಯಯನ ಕೈಗೊಂಡಿದ್ದಾರೆ.
ಉತ್ತರ ಭಾರತದಲ್ಲಿ ಬಹುಬೇಡಿಕೆಯಲ್ಲಿರುವ ಈ ಮಣ್ಣಿನ ಲೋಟಕ್ಕೆ ಕರ್ನಾಟಕದಲ್ಲೂ ಮಾರುಕಟ್ಟೆ ಹಾಗೂ ಬೇಡಿಕೆ ಬರುವಂತೆ ಮಾಡುವ ಉದ್ದೇಶ ಈ ಸಂಘದ ಮುಂದೆ ಇದೆ. ಅದಕ್ಕಾಗಿ ಸಂಘದ ನಿಯೋಗ ಈಗಾಗಲೇ ರಾಜಸ್ಥಾನ, ಗುಜರಾತ್, ಪಶ್ಚಿಮಬಂಗಾಲ ರಾಜ್ಯಗಳಿಗೆ ತೆರಳಿ ಅಲ್ಲಿನ ಕುಂಬಾರಿಕೆ ಬಗ್ಗೆ ಅಧ್ಯಯನ ನಡೆಸಿದೆ.
ಪೇಪರ್ ಲೋಟದಂತೆ ಮಣ್ಣಿನ ಲೋಟಗಳನ್ನು ಕೂಡ ಜನರಿಗೆ ಕೈಗೆಟಕುವ ದರದಲ್ಲಿ ನೀಡಬೇಕಾದರೆ ಅದರ ಉತ್ಪಾದನಾ ವೆಚ್ಚ ಕಡಿಮೆ ಮಾಡಬೇಕಾಗುತ್ತದೆ. ಅದಕ್ಕಾಗಿ ತುಂಬ ಕಡಿಮೆ ವೆಚ್ಚದಲ್ಲಿ ಮಣ್ಣಿನ ಲೋಟಗಳನ್ನು ತಯಾರಿಸುವ ಯಂತ್ರೋಪಕರಣಗಳನ್ನು ಅಳವಡಿಸುವ ಉದ್ದೇಶವನ್ನು ಹೊಂದಲಾಗಿದೆ. ಈ ನಿಟ್ಟಿನಲ್ಲಿ ಸದ್ಯದಲ್ಲೇ ಚೀನಾ ದೇಶಕ್ಕೆ ತೆರಳಲಾಗುವುದು. ಈ ರೀತಿಯ ಯಂತ್ರಕ್ಕೆ ಸುಮಾರು 10-15ಲಕ್ಷ ರೂ. ವೌಲ್ಯ ಇರಬಹುದು ಎಂಬುದು ನಮ್ಮ ಅಂದಾಜು ಎನ್ನುತ್ತಾರೆ ಸಂಘದ ಅಧ್ಯಕ್ಷ ಪಕ್ಕಾಲು ಸಂತೋಷ್ ಕುಲಾಲ್.
30 ಬಗೆಯ ಪರಿಕರ ತಯಾರಿ:
ಸಂಘವು ಪೆರ್ಡೂರಿನಲ್ಲಿ ನಿರ್ಮಿಸಿರುವ ನಾಲ್ಕು ಮಹಡಿಯ ಕಟ್ಟಡದಲ್ಲಿ ಒಂದು ಮಹಡಿ ಸಂಪೂರ್ಣ ಪರಿಕರಗಳ ತಯಾರಿಕೆಗೆ ಮೀಸಲಿರಿಸಿದೆ. ಇಲ್ಲಿ ಕುಂಬಾರಿಕೆಗೆ ಆಧುನಿಕತೆಯ ಸ್ಪರ್ಶ ನೀಡಲಾಗಿದ್ದು, ಪಾರಂಪರಿಕ ಹಾಗೂ ವಿದ್ಯುತ್ ಉಪಕರಣಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆವೆ ಮಣ್ಣಿನಿಂದ ತಯಾರಿಸಿದ ಹಸಿ ಪರಿಕರಗಳನ್ನು ಬೇಯಿಸಲು ಬಾಯ್ಲರ್ ಯಂತ್ರವನ್ನು ಉಪಯೋಗಿಸಲಾಗುತ್ತಿದೆ. ಅಲ್ಲದೆ, ವೀಲಿಂಗ್ ಯಂತ್ರ, ಪಾತ್ರೆ ಅಚ್ಚು ಮಾಡಲು ಮೋಲ್ಡಿಂಗ್ ಯಂತ್ರ ಕೂಡ ಇಲ್ಲಿ ಅಳವಡಿಸಲಾಗಿದೆ. ಇಲ್ಲಿ ಒಟ್ಟು 30 ಬಗೆಯ ಮಣ್ಣಿನ ಪರಿಕರಗಳನ್ನು ತಯಾರಿಸಲಾಗುತ್ತಿದ್ದು, ಸುಮಾರು 40-50 ವರ್ಷಗಳ ಅನುಭವ ಇರುವ ಒಟ್ಟು ಆರು ಮಂದಿ ಸ್ಥಳೀಯ ಕುಶಲಕರ್ಮಿಗಳು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಬಹು ಬೇಡಿಕೆಯ ಮಡಿಕೆೆ, ಬಿಸಲೆ, ಹಂಡೆ, 20ಲೀಟರ್ವರೆಗಿನ ನೀರಿನ ಹೂಜಿ, ಬಾಣಲೆ, ಕಾವಲಿ, ಮಣ್ಣಿನ ಒಲೆ, ಕೊಡ, ವಿವಿಧ ರೀತಿಯ ಮಣ್ಣಿನ ಅಡುಗೆ ಪಾತ್ರೆಗಳು, ಚಟ್ಟಿ ಹೀಗೆ ವಿವಿಧ ಬಗೆಯ ಪರಿಕರಗಳು ಇಲ್ಲಿ ಸಿದ್ಧವಾಗುತ್ತಿವೆ.
ಈ ಬಾರಿ ದೀಪಾವಳಿಯ ಹಣತೆಯನ್ನು ಕೂಡ ತಯಾರಿಸಲಾಗುತ್ತಿದೆ. ಅವುಗಳನ್ನು ಸಂಘದ ಶೋರೂಂನಲ್ಲೇ ಮಾರಾಟ ಮಾಡಲಾಗುತ್ತದೆ. ನಮ್ಮಲ್ಲಿ ಅಡುಗೆ ಮಾಡುವ ಪಾತ್ರೆಗಳ ತಯಾರಿಕೆಗೆ ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಕೆ ಮಾಡುವುದಿಲ್ಲ. ಸಂಪೂರ್ಣ ಆರೋಗ್ಯಕರವಾದ ನೈಸರ್ಗಿಕ ಮಣ್ಣಿನಿಂದ ತಯಾರಿಸಿದ ಪರಿಕರಗಳನ್ನೇ ಮಾರಾಟ ಮಾಡಲಾಗುತ್ತದೆ ಎಂದು ಪಕ್ಕಾಲು ಸಂತೋಷ್ ಕುಲಾಲ್ ತಿಳಿಸಿದರು.
► ಮಣ್ಣಿನ ರೆಫ್ರಿಜರೇಟರ್, ಕುಕ್ಕರ್!
ಕುಂಬಾರರ ಗುಡಿ ಕೈಗಾರಿಕೆ ಸಂಘವು ಹೊಸ ಹೊಸ ಪ್ರಯೋಗಗಳ ಮೂಲಕ ಹೊಸತನವನ್ನು ಪರಿಚಯಿಸುವ ಕಾರ್ಯಕ್ಕೆ ಕೈ ಹಾಕಿದೆ. ಅದರಲ್ಲಿ ಮುಖ್ಯವಾಗಿ ಈಗಾಗಲೇ ಗುಜರಾತ್ನಲ್ಲಿ ಚಾಲ್ತಿಯಲ್ಲಿರುವ ಮಣ್ಣಿನ ರೆಫ್ರಿಜರೇಟರ್. ಆವೆಮಣ್ಣಿನಿಂದ ತಯಾರಿಸಲಾಗುವ ಬಾಕ್ಸ್ ಮಾದರಿಯ ಈ ರೆಫ್ರಿಜರೇಟರ್ ಒಳಗೆ 14ಡಿಗ್ರಿ ಸೆಲ್ಸಿಯಸ್ ತಂಪು ಇರುತ್ತದೆ. ಇದರಿಂದ ನೀರು ತಂಪಾಗಿರುವುದಲ್ಲದೆ ತರಕಾರಿಗಳನ್ನು ಕೂಡ ಹಾಳಾಗದಂತೆ ಇಡಬಹುದಾಗಿದೆ. ಈ ನಿಟ್ಟಿನಲ್ಲಿ ಸಂಘವು ಗುಜರಾತಿನಿಂದ ಮಣ್ಣಿನ ರೆಫ್ರಿಜರೇಟರ್ನ್ನು ಇಲ್ಲಿಗೆ ತಂದು ಅಧ್ಯಯನ ನಡೆಸಲು ಯೋಜನೆ ಹಾಕಿಕೊಂಡಿದೆ. ಇದರ ಜೊತೆಗೆ ಕೂಲರ್ ಮತ್ತು ಮಣ್ಣಿನ ಕುಕ್ಕರ್ಗಳನ್ನು ಕೂಡ ತಾರಿಸುವ ಇರಾದೆ ಸಂಘದ ಮುಂದಿದೆ.
———————————————————————
ಜನರು ಪೇಪರ್ ಲೋಟದಷ್ಟೇ ಕಡಿಮೆ ಬೆಲೆಯಲ್ಲಿ ಮಣ್ಣಿನ ಲೋಟ ಸಿಕ್ಕಿದರೆ ಖರೀದಿಸುತ್ತಾರೆ. ಅದಕ್ಕೆ ಮಣ್ಣಿನ ಲೋಟಗಳನ್ನು ತಯಾರಿಸುವ ಮೊದಲು ಮಾರುಕಟ್ಟೆಯ ಬಗ್ಗೆ ಅಧ್ಯಯನ ನಡೆಸಬೇಕಾಗಿದೆ. ಯಾವುದೇ ಅಧ್ಯಯನ ಇಲ್ಲದೆ ಮಾಡಿದರೆ ನಾವು ವಿಫಲರಾಗುವ ಸಾಧ್ಯತೆ ಇರುತ್ತದೆ. ಈ ಮಣ್ಣಿನ ಲೋಟಗಳನ್ನು ಟೀ, ನೀರು, ಜ್ಯೂಸ್ ಕುಡಿಯಲು ಹೊಟೇಲ್ಗಳಲ್ಲಿ ಬಳಕೆ ಮಾಡಬಹುದು. ಅಲ್ಲದೆ, ಮದುವೆಯಂತಹ ಶುಭ ಕಾರ್ಯದಲ್ಲೂ ಮಜ್ಜಿಗೆ ಸೇರಿದಂತೆ ಇತರ ಪಾನೀಯಗಳನ್ನು ಸೇವಿಸಲು ಉಪಯೋಗಿಸಬಹುದಾಗಿದೆ. ಪರಿಸರ ಸ್ನೇಹಿಯಾಗಿರುವ ಮಣ್ಣಿನ ಲೋಟಕ್ಕೆ ಬೇಡಿಕೆ ಬರುವಂತೆ ಮಾಡಲಾಗುವುದು.