ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಇಂಗ್ಲೀಷ್ ನಲ್ಲೊಂದು ಮಾತಿದೆ… “ನೀನು ಕಲಾವಿದನಾಗಿಯೇ ಜನಿಸಿದ್ದರೆ, ನಿನಗೆ ಬದುಕಿನ ಆಯ್ಕೆಗೆ ಬೇರೆ ಮಾರ್ಗದ ಅವಶ್ಯಕತೆ ಇಲ್ಲ. ಆದರೆ ಕಲಾವಿದನಾಗಿ ಮುಂದುವರೆಯಲು ಹೋರಾಡಬೇಕು” ಹೌದು.. ಹುಟ್ಟು ಕಲಾವಿದರಾಗಿರುವವರಿಗೆ ಈ ಮಾತು ಅನ್ವಯಿಸುತ್ತದೆ. ಹಿರಿಯರು ಕಲಾವಿದರಾಗಿದ್ದಲ್ಲಿ ಬಹುತೇಕ ಸಂದರ್ಭದಲ್ಲಿ ಅವರ ಮನೆ ಮಕ್ಕಳೂ ಕಲಾವಿದರಾಗುತ್ತಾರೆ. ಅಂದರೆ ಅಭಿನಯದ ಕಲೆ ಅವರ ರಕ್ತದಲ್ಲೇ ಬಂದಿರುತ್ತದೆ. ಇಂತಹ ಒಬ್ಬ ಅಭಿಜಾತ ರಂಗಕಲಾವಿದೆ ವಿಟ್ಲದಲ್ಲಿದ್ದಾರೆ . ಅವರೇ ತುಳು ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಉದಯೋನ್ಮುಖ ಕಲಾವಿದೆ ವೈಶಾಲಿ ಕುಲಾಲ್.
ಬಾಲ್ಯದಲ್ಲಿಯೇ ಬಣ್ಣದ ಬದುಕಿನ ಒಡನಾಟವನ್ನು ಹೊಂದಿರುವ ವೈಶಾಲಿ ಅವರು ತನ್ನ ನೈಜ ಅಭಿನಯಕ್ಕಾಗಿ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೇ ಉತ್ಸಾಹದಲ್ಲಿ ನಾಟಕ ಕ್ಷೇತ್ರದಲ್ಲಿ ಮಿಂಚಬೇಕೆಂಬ ಅದಮ್ಯ ಬಯಕೆ, ಕನಸುಗಳಿರುವ ಈಕೆ ಅಡ್ಯನಡ್ಕ ಅಮೈ ನಿವಾಸಿ ನಾರಾಯಣ ಕುಲಾಲ್ ಹಾಗೂ ಮಾಲತಿ ಕುಲಾಲ್ ದಂಪತಿಯ ಮೂವರು ಪುತ್ರಿಯರಲ್ಲಿ ಹಿರಿಯಾಕೆ. ಬಿಎಸ್ ಡಬ್ಲ್ಯೂ ಪದವೀಧರೆ.
ಅಡ್ಯನಡ್ಕ ಜನತಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕಲ್ಲಂಗಳ ಸರಕಾರಿ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಜನತಾ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ, ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್ ಡಬ್ಲ್ಯೂ ಪದವಿ ಪಡೆದಿದ್ದಾರೆ. ಪ್ರಸ್ತುತ ಲೈಫ್ ಸ್ಟೈಲ್ ಇಂಟರ್ನ್ಯಾಷನಲ್ ಪ್ರೈ ಲಿ. ನ ಮ್ಯಾಕ್ಸ್ ಶೋರೂಮ್ ನಲ್ಲಿ ರೆಟೈಲರ್ ಆಗಿ ಕಾರ್ಯನಿರ್ವಹಿಸುತ್ತಿರುವ ವೈಶಾಲಿ, ವೃತ್ತಿ ಬದುಕಿನೊಂದಿಗೆ ಅಭಿನಯವನ್ನು ಪ್ರವೃತ್ತಿಯಾಗಿ ಬೆಳೆಸಿಕೊಂಡು ಬರುತ್ತಿದ್ದಾರೆ.
ವೈಶಾಲಿ ಅವರ ಮನೆತನವೇ ಕಲಾ ಪರಂಪರೆಯದ್ದು. ಅವರಿಗೆ ಕಲೆ ರಕ್ತಗತವಾಗಿಯೇ ಹರಿದು ಬಂದಿದೆ ಎನ್ನಬಹುದು. ವೈಶಾಲಿ ತಂದೆ ವೃತ್ತಿಯಲ್ಲಿ ಪೋಸ್ಟ್ ಮ್ಯಾನ್ ಆದರೂ ಓರ್ವ ಅಪ್ಪಟ ಕಲಾವಿದರು. ಅಡ್ಯನಡ್ಕ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಲ್ಲಿ ಹವ್ಯಾಸಿ ಕಲಾವಿದನಾಗಿ ಪರಿಸರದಲ್ಲಿ ಪ್ರಸಿದ್ಧರು. ರಾವಣ, ಶು೦ಭ ಮೊದಲಾದ ಪಾತ್ರಗಳಲ್ಲಿ ಜಿಲ್ಲೆಯ ಎಲ್ಲೆಡೆ ಮಿಂಚಿದವರಾಗಿದ್ದರು. ಅಷ್ಟೇ ಅಲ್ಲ ನಾಟಕ ರಂಗದಲ್ಲೂ ಗುರುತಿಸಿಕೊಂಡಿದ್ದ ಅವರು ಅಡ್ಯನಡ್ಕದ ಸತ್ಯದಪ್ಪೆ ಕಲಾವಿದರು ತಂಡದಲ್ಲಿ `ಏಪ ಸರಿಯಾಪರ್?’ ಎಂಬ ನಾಟಕದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು.
ವೈಶಾಲಿ ಅವರ ಅಜ್ಜ ಕಿನ್ನು ಕುಲಾಲ್ ಯಕ್ಷಗಾನ ರಂಗದಲ್ಲಿ ದೊಡ್ಡ ಮಟ್ಟದ ಹೆಸರು ಗಳಿಸಿದವರು. ಅಡ್ಯನಡ್ಕ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಪ್ರಬುದ್ಧ ಬಣ್ಣದ ವೇಷಧಾರಿಯಾಗಿ ಸಹಸ್ರಕವಚ, ತಾರಕಾಸುರ, ನರಕಾಸುರ, ರಾವಣ, ಭೀಮ, ಶಬರಾಸುರ ಮೊದಲಾದ ಪಾತ್ರಗಳನ್ನು ನಿರ್ವಹಿಸಿ ಜನ ಮನ್ನಣೆ ಗಳಿಸಿದ್ದಾರೆ. ಇವರು ಸಂಪೂರ್ಣ ದೇವಿ ಮಹಾತ್ಮೆಯಲ್ಲಿ ಶುಂಭಾಸುರ ಪಾತ್ರ ಮಾಡಿದ್ದನ್ನು ನೋಡಿದ ಜನ ಇಂದಿಗೂ ಅವರ ಕಲಾನೈಪುಣ್ಯವನ್ನು ಹಾಡಿ ಹೊಗಳುತ್ತಾರೆ.
ತಮ್ಮ ಇಳಿವಯಸ್ಸಿನಲ್ಲೂ ತನ್ನ ಬಣ್ಣದ ನಂಟನ್ನು ಉಳಿಸಿಕೊಂಡಿರುವ ಕಲಾವಿದ ಕಿನ್ನು ಕುಲಾಲ್. ಇವರ ಮೊಮ್ಮಗಳಾಗಿ ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವಂತೆ ವೈಶಾಲಿ ಕುಲಾಲ್ ಚಿಕ್ಕಂದಿನಲ್ಲೇ ಬಣ್ಣದ ಬದುಕಿನ ಒಡನಾಟವನ್ನು ಹೊಂದಿದವರು. ಪ್ರೌಢ ಶಾಲೆಯಲ್ಲಿ ಕಲಿಯುತ್ತಿದ್ದ ಹೊತ್ತಿಗೇ ಮುಖಕ್ಕೆ ಬಣ್ಣ ಹಚ್ಚುವ ಮೂಲಕ ಯಕ್ಷರಂಗಕ್ಕೆ ಪಾದಾರ್ಪಣೆಗೈದರು. ಅವರ ಮೊದಲ ನಾಟ್ಯ ಗುರು ತನ್ನ ಸಹೋದರ ಸಂಬಂಧಿ ಜಗದೀಶ್ ನಲ್ಕ. ಆ ಬಳಿಕ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಹಿಳಾ ಮಂಡಳಿಯ ಗುರುಗಳಾದ ಉಂಡೆಮನೆ ಕೃಷ್ಣ ಭಟ್ ಇವರ ಬಳಿ ನಾಟ್ಯಾಭ್ಯಾಸ ಮಾಡಿ ನಿಶು೦ಭ, ದೇವೇಂದ್ರ, ಕೃಷ್ಣ, ವೀರಭದ್ರ, ದೇವಬಲ, ರಕ್ಕಸಬರಿ ಹೀಗೆ ಯಾವುದೇ ಪಾತ್ರಕ್ಕೆ ಸಮರ್ಥವಾಗಿ ಜೀವ ತುಂಬಬಲ್ಲ ಬಹುಮುಖ ಪ್ರತಿಭೆಯಾಗಿ ಬೆಳೆದರು. ಚಿಕ್ಕಂದಿನಲ್ಲೇ ಕಲೆಯಲ್ಲಿ ಆಸಕ್ತಿ ಹೊಂದಿದ್ದ ವೈಶಾಲಿ ಕುಲಾಲ್ ಅವರು ನೃತ್ಯ, ಛದ್ಮವೇಷ, ಪ್ರಹಸನ, ನಾಟಕ, ಏಕಪಾತ್ರಾಭಿನಯ ಮುಂತಾದವುಗಳಲ್ಲೂ ಎತ್ತಿದ ಕೈ.
ತುಳು ರಂಗಭೂಮಿಗೆ ಪಾದಾರ್ಪಣೆ
ಬಣ್ಣದ ಲೋಕಕ್ಕೆ ಒಮ್ಮೆ ಕಾಲಿಟ್ಟರೆ ಮುಗಿಯಿತು. ಬಣ್ಣದ ಗೀಳು ಅಷ್ಟು ಸುಲಭವಾಗಿ ಬಿಟ್ಟು ಹೋಗುವುದಿಲ್ಲ ಎನ್ನುವ ಮಾತಿದೆ. ವೈಶಾಲಿ ಕಾಲೇಜು ಮುಗಿಸಿ ವೃತ್ತಿಯ ಕಡೆಗೆ ಮುಖ ಮಾಡಿದರೂ ಬಣ್ಣದ ಲೋಕದ ಆಕರ್ಷಣೆ ಮತ್ತೆ ಮತ್ತೆ ಸೆಳೆದಿತ್ತು. ಹೀಗಾಗಿ 2015ರಲ್ಲಿ ಅಡ್ಯನಡ್ಕದ ಸತ್ಯದಪ್ಪೆ ತಂಡದ `ಸತ್ಯ ಗೊತ್ತಾನಗ’ ಎಂಬ ನಾಟಕದ ಮೂಲಕ ರಂಗಭೂಮಿಗೆ ಕಾಲಿಟ್ಟರು. ಈ ನಾಟಕದಲ್ಲಿ ಹಲವು ಕಡೆ ಅಭಿನಯಿಸಿ ಜನ ಮೆಚ್ಚುಗೆ ಗಳಿಸಿದ ವೈಶಾಲಿ ಅವರು ಬಳಿಕ `ಧರಿತ್ರಿ ಕಲಾವಿದರು ಕುಡ್ಲ’ ಸೇರಿದರು. ಪ್ರಸ್ತುತ ನಾವೂರು ಕಲಾನಿಧಿ ಕಲಾವಿದರು ಸಕ್ರೀಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.
ಸತ್ಯ ಗೊತ್ತಾನಗ, ಏಪ ಸರಿಯಾಪರ್? , ನಂಬೆರೆ ಬಲ್ಲಿ, ಎಲ್ಲೆ ಗೊತ್ತಾಪುಂಡು, ಪರತ್ತೆಟ್ ಪೊಸತುಂಡು, ಗುರುವಪ್ಪಗ್ ಗುರುವಾರ, ಇಂಚಾಂಡ ಎಂಚ?, ನನ ಏರುಲ್ಲೆರ್ ? ಮುಂತಾದ ನಾಟಕಗಳಲ್ಲಿ ನಟಿಸಿರುವ ವೈಶಾಲಿ ಅವರಿಗೆ ಗುರುವಪ್ಪಗ್ ಗುರುವಾರ ನಾಟಕ ಹೊಸ ತಿರುವನ್ನು ನೀಡುವ ಲಕ್ಷಣಗಳು ಕಾಣಿಸುತ್ತಿವೆ. ಈ ನಾಟಕವು ಈಗಾಗಲೇ ಹಲವು ಪ್ರದರ್ಶನಗಳನ್ನು ಕಂಡು, ಅವರಿಗೆ ಹೆಸರು ತಂದುಕೊಟ್ಟಿದೆ. ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಇವರ ವತಿಯಿಂದ ಕರಾವಳಿ ಕಲೋತ್ಸವ-೨೦೧೮ ಇದರ ಅಂಗವಾಗಿ ನಡೆದ ತಾಲೂಕು ಮಟ್ಟದ ತುಳು ನಾಟಕ ಸ್ಪರ್ಧೆಯಲ್ಲಿ ವೈಶಾಲಿ ಅವರ ನಟನೆಗೆ ಶ್ರೇಷ್ಠ ನಾಯಕ ನಟಿ ಪ್ರಶಸ್ತಿ ಲಭಿಸಿದೆ. ೨೦೧೭ರಲ್ಲಿ ನಡೆದ ಇದೇ ಸ್ಪರ್ಧೆಯಲ್ಲಿ ಅವರ ನೈಜ ಅಭಿನಯಕ್ಕಾಗಿ ಎರಡನೇ ಉತ್ತಮ ನಾಯಕ ನಟಿ ಪ್ರಶಸ್ತಿ ಲಭಿಸಿತ್ತು.
ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕಿಯಾಗಿ, ಶಿಬಿರಾರ್ಥಿಯಾಗಿ, ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಶಿಬಿರಗಳಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿರುವ ಅವರು, 2010ರಲ್ಲಿ ದಾವಣಗೆರೆಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಶಿಬಿರಕ್ಕೂ ಆಯ್ಕೆಯಾಗಿದ್ದರು. ಭಾವನಾ ಫೌಂಡೇಶನ್ ಹಾವಂಜೆ ಅವರು ಆಯೋಜಿಸಿದ್ದ ಕಿರುಚಿತ್ರ ಸ್ಪರ್ಧೆಯಲ್ಲಿ ವೈಶಾಲಿ ಅಭಿನಯದ “ತುತ್ತು” ಎಂಬ ಚಿತ್ರಕ್ಕೆ `ಭಾವನಾ ಮೆಚ್ಚಿದ ನಟಿ’ ಎಂಬ ಪ್ರಶಸ್ತಿ ದೊರೆತಿದೆ.
ಕಲಾವಿದೆಯಾಗಿ ಹುಟ್ಟಿರುವುದೇ ತನ್ನ ಭಾಗ್ಯ. ಪಾಲಕರ ಇಚ್ಛೆಯಂತೆ ಅದೇ ಪ್ರವೃತ್ತಿಯನ್ನು ಮುಂದುವರೆಸಿದ್ದೇನೆ. ಇಂದಿನ ದಿನಗಳಲ್ಲಿ ಜನರ ಪ್ರೋತ್ಸಾಹ ಸ್ವಲ್ಪ ಕಡಿಮೆ ಇದ್ದರೂ ತುಳು ನಾಟಕಗಳ ಪ್ರಾಮುಖ್ಯತೆ ಕಡಿಮೆ ಆಗಿಲ್ಲ. ಇಲ್ಲಿ ಕಷ್ಟ, ಸುಖ, ನೋವು, ನಲಿವು ಎಲ್ಲವೂ ಇದೆ. ಒಬ್ಬ ಕಲಾವಿದೆಯಾಗಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಜನರ ನಾಡಿಮಿಡಿತಗಳನ್ನು ಅರ್ಥ ಮಾಡಿಕೊಂಡು ಅಭಿನಯಿಸಬೇಕಾಗುತ್ತದೆ ಎನ್ನುವ ವೈಶಾಲಿ, ಇದೇ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುವ ಕನಸನ್ನು ಹೊಂದಿದ್ದಾರೆ.