ಪುತ್ತೂರು: ಮಣ್ಣಿನ ಪಾತ್ರೆ, ಅಲಂಕಾರಿಕ ಕಲಾಕೃತಿಗಳಿಗೆ ಸದಾ ಬೇಡಿಕೆ ಇದೆ. ತುಳುನಾಡಿನಲ್ಲಿ ಮಣ್ಣಿನ ಪಾತ್ರೆಗಳಿಂದಲೇ ಅಡುಗೆ ತಯಾರಿಸುವ ಪದ್ಧತಿ ಇನ್ನೂ ಉಳಿದಿದೆ. ಹಾಗಾಗಿ ವಾರದ ಸಂತೆದಿನ ಮಣ್ಣಿನ ಮಡಿಕೆ, ಗಡಿಗೆ, ಕಾವಲಿ, ಹೂಜಿ, ಹೂದಾನಿ ತಯಾರಿಸುವ ಕುಂಬಾರರಿಗೆ ಕೆಲಸವಿದೆ.
ವಂಶಪಾರಂಪರ್ಯವಾಗಿ ಕುಲಕಸುಬಾಗಿ ಕುಂಬಾರಿಕೆ ಮುಂದುವರಿಸುವವರಿಗೆ ಬೆಂಬಲವಾಗಿ ‘ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘ’ 1958 ಇಸವಿಯಲ್ಲಿ ಸ್ಥಾಪಿಸಲ್ಪಟ್ಟಿತು. 1982 ರಿಂದ ಪುತ್ತೂರು – ಮೈಸೂರು ಹೈದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಗುಡಿಕೈಗಾರಿಕಾ ತರಬೇತಿ ಘಟಕವನ್ನು ಆರಂಭಿಸಲಾಯಿತು. ಇದರಿಂದ ಕುಂಬಾರ ವೃತ್ತಿದಾರರಿಗೆ ಕರಕುಶುಲ ತಂತ್ರಗಾರಿಕೆಯ ಹಲವಾರು ವಿಧಾನಗಳನ್ನು ತಿಳಿಸುವ ಉದ್ದೇಶವಾಗಿತ್ತು. ಹಲವು ವಿನ್ಯಾಸದ ಮಣ್ಣಿನ ಪಾತ್ರೆಗಳನ್ನು ಹದಮಾಡುವ ‘ಓಂ ನಾಮ’ ನೂರಾರು ಕುಲಕಸುಬುದಾರಲ್ಲದವರಿಗೂ ಪ್ರಯೋಜನವಾಗಿದೆ ಎನ್ನುತ್ತಾರೆ ಸಹಕಾರ ಸಂಘದ ಕಾರ್ಯದರ್ಶಿ ಜನಾರ್ದನರವರು.
ವಿಶಿಷ್ಟ ರೀತಿಯ ಕಲಾಕೃತಿಗಳನ್ನೂ ರಚಿಸುವ ಪ್ರಾತ್ಯಕ್ಷಿಕೆ ಮೂಲಕ ಕುಂಬಾರ ಕಲೆಯನ್ನು ಬೆಳಕಿಗೆ ತರುವ ಯತ್ನದಲ್ಲಿ ಸಫಲರಾದ ತೃಪ್ತಿ ಇದೆ ಎನ್ನುತ್ತಾರೆ. ಉತ್ಪಾದನೆಗಳಿಗೆ ಬೇಡಿಕೆ ಇರುವುದನ್ನು ಗಮನವಿರಿಸಿ ನಾನಾ ಬಗೆಯ ಪಾತ್ರೆ-ಅಲಂಕಾರಿಕ ವಸ್ತುಗಳನ್ನು ತಯಾರಿಸುವ ನೈಪುಣ್ಯತೆಯನ್ನು ಕಲಿಸಿಕೊಡಲಾಗುತ್ತದೆನ್ನುವ ಜನಾರ್ಧನರವರು ‘ಕುಂಬಾರ ಕಲೆ’ ಉಳಿಸುವ ನಿಟ್ಟಿನಲ್ಲಿ ಕುಂಬಾರ ವೃತ್ತಿ ಕುಟುಂಬಸ್ಥರ ಕಲ್ಯಾಣಾಭಿವೃದ್ಧಿಗೂ ಪ್ರೋತ್ಸಾಹಿಸುತ್ತಿರುವರು.
ಪಂಚಭೂತಾತ್ಮಕ ಮಣ್ಣು
ನಿಸರ್ಗದ ಮಣ್ಣು ಮೂಲದ್ರವ್ಯವಾಗಿ ಬಳಸಲ್ಪಡುವುದು. ಪಂಚಮಹಾಭೂತಗಳಾದ ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಆಕಾಶ ಸಂಯೋಗದಿಂದ ‘ಘಟ’ ನಿರ್ಮಾಣಗೊಳ್ಳುತ್ತದೆ. ಜೇಡಿಮಣ್ಣಿಗಾಗಿ ಬೆಳ್ತಂಗಡಿ ತಾಲೂಕಿನ ದಿಡುಪೆ ಗ್ರಾಮವನ್ನು ಅವಲಂಬಿಸಿರುವ ಕೌಡಿಚ್ಚಾರು ಘಟಕದಲ್ಲಿ ವರ್ಷವಿಡೀ ಪಾತ್ರೆ ಮುಂತಾದ ವಸ್ತುಗಳು ಸಿದ್ಧಗೊಳ್ಳುತ್ತಿವೆ ಎಂದು ಮುಖ್ಯ ಕುಶಲಕರ್ಮಿ ರಮೇಶರವರು ಮಡಿಕೆ ಮಾಡುತ್ತಲೇ ತಿಳಿಸುತ್ತಾರೆ.
ಕೆಲಸ ಮಾಡುವಾಗ ಶ್ರದ್ಧೆಯೂ ಅನಿವಾರ್ಯ, ತಾಳ್ಮೆಯೂ ಬೇಕು. ಗ್ರಾಹಕರಿಗೆ ಇಷ್ಟವಾಗುವಂತೆ ಮಣ್ಣಿನ ಮಡಿಕೆ, ಕಲಶ, ರೊಟ್ಟಿಯ ಕಾವಲಿ ಹೆಚ್ಚುಕಾಲ ಉಪಯೋಗವಾಗುವಂತೆ ತಯಾರಿಸಲಾಗುತ್ತದೆಂದು ಇತರರಿಗೆ ತರಬೇತಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿಯೂ ಘಟಕದಲ್ಲಿ ಕಾರ್ಯನಿರತರಾಗಿರುವ ರಮೇಶರವರು ತಿಳಿಸುತ್ತಾರೆ.
ಕೌಶಲ್ಯ ತರಬೇತಿ
ನಾನಾ ವಿಧದ ಮಣ್ಣಿನ ಪಾತ್ರೆ, ಅಲಂಕಾರಿಕ ವಸ್ತುಗಳನ್ನು ರಚಿಸುವ ತರಬೇತಿಯನ್ನು ಆಸಕ್ತ ಯುವಕ-ಯುವತಿಯರಿಗೆ ನೀಡಲಾಗುತ್ತದೆ. ಕೇರಳ, ತಮಿಳ್ನಾಡು, ಆಂಧ್ರಪ್ರದೇಶ ಮತ್ತು ವಿದೇಶೀ ಆಸಕ್ತ ಪ್ರವಾಸಿಗರು ಭೇಟಿ ನೀಡಿರುವರು. ಮಣ್ಣಿನಿಂದ ಶಿಲ್ಪಕಲೆ ಅರಳುವ ಕೌಶಲ್ಯವನ್ನು ನೋಡಿ ಅಭಿನಂದಿಸಿದ್ದಾರೆ. ಬ್ರಹ್ಮಕಲಶ ಉತ್ಸವಕ್ಕಾಗಿ ಕಲಶಗಳಿಗೆ, ದೀಪಾವಳಿ ಸಮಯದಲ್ಲಿ ಹಣತೆಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ.
ಗುರುವಾಯನಕೆರೆ, ಕುಡ್ತಮುಗೇರು, ಮಾಣಿ, ಬೆಳ್ಳಾರೆ, ವಿಟ್ಲ, ಪುತ್ತೂರು, ಕೌಡಿಚ್ಚಾರಿನಲ್ಲಿ ಮಾರಾಟ ಮಳಿಗೆಗಳಿವೆ. ಹೂಕುಂಡ, ಹೂದಾನಿ, ಹೂಜಿ, ಅಲಂಕಾರಿಕ ದೀಪಸ್ತಂಭ, ಲೋಭಾನ ಕುಂಡ, ಟೆರ್ರಾಕೋಟಾ, ಆಟಿಕೆ ಸಾಮಾಗ್ರಿಗಳನ್ನು ತಯಾರಿಸಿ, ಮಾರಾಟ ಮಾಡುವ ‘ಮೇಕ್ ಇನ್ ಇಂಡಿಯಾ’ ಘಟಕವಾಗಿದೆ. ತರಕಾರಿ, ಹಣ್ಣುಹಂಪಲು ಶೇಖರಿಸಿಡುವ ಶೀತಲೀಕರಣ ಮಡಿಕೆ ಇತ್ತೀಚೆಗೆ ಗ್ರಾಹಕರನ್ನು ಆಕರ್ಷಿಸಿದೆ. ರೊಟ್ಟಿ ಓಡು (ಹೆಂಚು), ಕರ, ಬಿಸಿಲೆ, ಗದ್ದಾವು, ತಿಬಿಲೆ… ತುಳುಭಾಷೆಯಲ್ಲಿ ಮಣ್ಣಿನ ಪಾತ್ರೆಗಳು ಅಟ್ಟ ಸೇರಿದ್ದರೂ ಹಲವು ಬಗೆಯ ವಿಶಿಷ್ಟ ಖಾದ್ಯಗಳನ್ನು ಮಣ್ಣಿನ ಪಾತ್ರೆಯಲ್ಲಿ ಬೇಯಿಸುವುದು, ಶೇಖರಿಸುವುದು ಇಂದಿಗೂ ಆರೋಗ್ಯಕ್ಕೆ ಪೂರಕ ಎಂಬ ವಿಚಾರ ಗಮನಾರ್ಹವಾದುದು.
ತಲೆಹೊರೆಯಲ್ಲಿ ಮಡಿಕೆ-ಗಡಿಕೆ-ಕೊಡಪಾನ-ಬಿಸಿನೀರು ಮಾಡುವ ಹಂಡೆಗಳನ್ನು ಹಳ್ಳಿ ಹಳ್ಳಿಗಳ ಮನೆಮನೆ ಅಂಗಳಕ್ಕೆ ತಂದು ಮಾರಾಟ ಮಾಡುವ ಕಾಲವೊಂದಿತ್ತು. ಈ ತಲೆಹೊರೆಯ ಭಾರವನ್ನು ಇಳಿಸುವ ನಿಟ್ಟಿನಲ್ಲಿ ‘ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘ’ದ ಸ್ಥಾಪನೆಯಾಗಿತ್ತೆಂದು ಆಡಳಿತ ಮಂಡಳಿಯ ನಿರ್ದೇಶಕರಲ್ಲೊರ್ವರಾದ ಕೆ.ಕೃಷ್ಣಪ್ಪನವರು ನೆನಪಿಸಿಕೊಳ್ಳುತ್ತಾರೆ.
“ಮಣ್ಣಿನ ಪಾತ್ರೆ, ನಾನಾ ವಿನ್ಯಾಸದ ಅಲಂಕಾರಿಕ ವಸ್ತುಗಳನ್ನು ತಯಾರಿಸುವ, ಮಾರಾಟ ಮಾಡುವ ಮೂಲಕ ಕುಂಬಾರರ ಕೌಶಲ್ಯ ಹೆಚ್ಚಿಸಿ ಜೀವನ ಭದ್ರತೆಗಾಗಿ ಆದಾಯ ಗಳಿಕೆಗೆ ಪ್ರೇರಣೆ ನೀಡುತ್ತಿದ್ದೇವೆ. ಪಾರಂಪರಿಕ ಕುಂಬಾರಿಕೆಗೆ ಬೇಡಿಕೆ ಇದೆ ಮತ್ತು ಉತ್ಪಾದನಾ ಸಾಮಾಥ್ರ್ಯವನ್ನು ಹೆಚ್ಚಿಸಲು ಮಾನವಸಂಪನ್ಮೂಲ ಕ್ರೋಡಿಕರಿಸುವ ಕುಶಲಕರ್ಮಿಗಳಿಗೆ ಸದವಕಾಶ ಕಲ್ಪಿಸಿದ್ದೇವೆ” ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಸಂಪರ್ಕ: 08251-283297 ಕೌಡಿಚ್ಚಾರು.
ಕಾರ್ಯದರ್ಶಿ: ಜನಾರ್ಧನ – 9449318792
ಬರಹ: ಡಾ.ಎಸ್.ಎನ್.ಅಮೃತ