ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಎಂಬ ಪುಟ್ಟ ಊರಿನಿಂದ ಬಂದ ಕೇಶವ ವಿಟ್ಲ, ನಿಸರ್ಗದ ಬಗೆಗೆ ಅನನ್ಯ ಪ್ರೀತಿ ಇಟ್ಟುಕೊಂಡಿರುವ ಅಪರೂಪದ ಛಾಯಾಗ್ರಾಹಕ. ಫೋಟೊ ಜರ್ನಲಿಸ್ಟ್ ಆಗಿ ಸ್ಥಳೀಯ ಸಣ್ಣ ಪತ್ರಿಕೆಯಿಂದ ಹಿಡಿದು, ದೇಶ ವಿದೇಶಗಳ ಜನಪ್ರಿಯ ದಿನಪತ್ರಿಕೆಗಳು, ನಿಯತಕಾಲಿಕಗಳಿಗೆ ಫೋಟೊಗಳನ್ನು ರವಾನಿಸುತ್ತಲೇ ಮೂರು ದಶಕಗಳ ಕಾಲ ಕ್ಯಾಮರಾದೊಂದಿಗೇ ಕಳೆದವರು. ವಡ್ಡರ್ಸೆ ರಘುರಾಮಶೆಟ್ಟರ ಮುಂಗಾರು ದಿನಪತ್ರಿಕೆಯ ಫ್ರೀಲ್ಯಾನ್ಸ್ ಫೋಟೋಗ್ರಾಫರ್ ಆಗಿ ವೃತ್ತಿ ಬದುಕನ್ನು ಆರಂಭಿಸಿದ ಕೇಶವ ವಿಟ್ಲ, ಹತ್ತು ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿ, ಅಪಾರ ಅನುಭವ ಗಳಿಸಿ, ಈಗ ಸುದ್ದಿ ಮಾಧ್ಯಮಗಳ ಧಾವಂತದಿಂದ ಕೊಂಚ ದೂರ ಸರಿದಿದ್ದಾರೆ. ಹಾಗಂತ ಸುಮ್ಮನೆ ಕೂತಿಲ್ಲ. ಕ್ಯಾಮರಾವನ್ನು ಹೆಗಲಿಗೇರಿಸಿ ಕೊಂಡು ಇಡೀ ಕರ್ನಾಟಕವನ್ನು ಸುತ್ತಾಡಿದ್ದಾರೆ. ತಾವು ಕಂಡ ಕರ್ನಾಟಕವನ್ನು ಕ್ಯಾಮರಾ ಕಣ್ಣಲ್ಲಿ ಕಂಡಿರಿಸಿದ್ದಾರೆ. ಕೇಶವರ ಕ್ಯಾಮರಾಕ್ಕೆ ಕರ್ನಾಟಕ ಕಂಡಿರುವ ಬಗೆ ಬೆರಗು ಹುಟ್ಟಿಸುವಂತಿದೆ.
ಬೀದರ್ನ ಕೆರೆ, ಮಲೆನಾಡಿನ ಮಳೆ, ಜೋಗದ ಜಲಪಾತ, ಕಾವೇರಿ ನೀರು, ಕಲ್ಲು ಬಂಡೆಗಳು, ಕರೆ ಕಟ್ಟೆಗಳು, ಬಯಲು ಪ್ರದೇಶ, ಹಚ್ಚ ಹಸಿರಿನ ಕಾಡು… ಇದು ನಮ್ಮ ಕರ್ನಾಟಕದಲ್ಲಿದೆಯೇ ಎಂದು ಹುಬ್ಬೇರಿಸುವಂತಿದೆ. ಕಾಪಿ ಟೇಬಲ್ ಬುಕ್ ಸೈಜಿನ ‘ಫೇಸೆಟ್ಸ್ ಆಫ್ ಕರ್ನಾಟಕ’ ಎಂಬ ಪುಸ್ತಕದ ಬೆಲೆ ರೂ. 3500. ಪುಸ್ತಕದಲ್ಲಿ ಸುಮಾರು 400 ಚಿತ್ರಗಳಿವೆ. ಬಹು ವರ್ಣದಲ್ಲಿ ಅಚ್ಚುಕಟ್ಟಾಗಿ ಮುದ್ರಿಸಿರುವ ಈ ಪುಸ್ತಕ ಎರಡೂವರೆ ಕೇಜಿ ತೂಕವಿದ್ದು, 272 ಪುಟಗಳನ್ನು ಹೊಂದಿದೆ. ಕೇಶವರ ಪುಸ್ತಕವನ್ನು ನೋಡುತ್ತಾ ಹೋದರೆ ಇಡೀ ಕರ್ನಾಟಕವೇ ನಿಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ. ‘ನಮ್ಮ ಕರ್ನಾಟಕದ ಜನ ಇದ್ದಾರಲ್ಲ, ಅವರು ತೋರಿದ ಪ್ರೀತಿ ಇದೆಯಲ್ಲ, ಅದನ್ನು ನಾನೆಂದಿಗೂ ಮರೆಯುವುದಿಲ್ಲ’ ಎನ್ನುವ ಕೇಶವ 2005ರಿಂದ ಸತತವಾಗಿ ಹತ್ತು ವರ್ಷಗಳ ಕಾಲ ಕರ್ನಾಟಕದ ಮೂಲೆ ಮೂಲೆಗಳಿಗೆ ಹೋಗಿ, ಅಪರೂಪದಲ್ಲಿ ಅಪರೂಪವೆನ್ನಿಸುವ ಜಾಗಗಳನ್ನು ಕಂಡು ಪುಳಕಗೊಂಡು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಕ್ಯಾಮರಾ ಹೊತ್ತುಕೊಂಡು ಆ ಭೂ ಪ್ರದೇಶಗಳಲ್ಲಿ ಅಲೆಯುವಾಗ, ಅಲ್ಲಿಯ ಸ್ಥಳೀಯರು ತೋರಿದ ಪ್ರೀತಿಗೆ ಕರಗಿ ಹೋಗಿರುವ ಕೇಶವ, ‘ಕರೆದು ಊಟ ಹಾಕಿದ್ದಾರೆ. ತಾವು ಕಂಡ ಜಾಗಗಳಿಗೆ ಹೋಗಲು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸಹಕರಿಸಿದ್ದಾರೆ. ಎಂಥ ಜನ ಅಂದ್ರೆ…’ ಎಂದು ಮತ್ತೆ ಆ ಜಾಗಗಳಿಗೇ ಹೋಗಿಬಿಡುತ್ತಾರೆ.
ಕರ್ನಾಟಕದ ಉದ್ದಗಲಕ್ಕೂ ಅಡ್ಡಾಡಬೇಕು, ಅಪರೂಪದ ಜಾಗಗಳನ್ನು ವಸ್ತುಗಳನ್ನು ಪ್ರದೇಶಗಳನ್ನು ಚಿತ್ರಗಳಲ್ಲಿ ಸೆರೆ ಹಿಡಿಯಬೇಕು ಎನ್ನಿಸಿದ್ದು ಯಾವಾಗ, ಹೇಗೆ ಎಂಬ ಪ್ರಶ್ನೆಗೆ, ‘2004’ ರಲ್ಲಿ ಒಂದು ಸಲ ಇಂಡಿಯಾ ಟುಡೆ ಮ್ಯಾಗಜಿನ್ನವರು ರೈನಿಂಗ್ ಹಾಲಿಡೇ ಎಂಬ ಥೀಮ್ ಮೇಲೆ ಇಷ್ಯೂ ಮಾಡಿದ್ದರು. ಅದೇ ಸಂದರ್ಭದಲ್ಲಿ ನಾನು ಪಟ್ಟದಕಲ್ಲು, ಬಾದಾಮಿಯಲ್ಲಿದ್ದೆ. ಅಲ್ಲಿ ಮಳೆ ಬರುತ್ತಿತ್ತು. ‘ರೈನಿಂಗ್ ಕರ್ನಾಟಕ’ ಅಂತ ಥೀಮ್ ಇಟ್ಟುಕೊಂಡು ನಾನೇಕೆ ಚಿತ್ರಗಳನ್ನು ಕ್ಲಿಕ್ಕಿಸಬಾರದು ಅನ್ನಿಸಿತು. ಚಿತ್ರ ತೆಗೆಯುತ್ತಾ ಹೋದೆ. ಆ ಚಿತ್ರಗಳು ನಾಡಿನ ಬುದ್ಧಿಜೀವಿಗಳು, ಸಾಹಿತಿಗಳು, ಕಲಾವಿದರು, ಪತ್ರಕರ್ತರು, ರಾಜಕಾ ರಣಿಗಳು, ಗಣ್ಯರ ಮೆಚ್ಚುಗೆಗೆ ಪಾತ್ರವಾದವು. ಕೊನೆಗೊಂದು ದಿನ, ಇವುಗಳನ್ನು ಹೀಗೆಯೇ ಬಿಟ್ಟರೆ ಚಿತ್ರಗಳಿಗೆ ಕಾಲು ಬಂದು ಚದುರಿ ಹೋಗಬಹುದೆಂದು ಭಾವಿಸಿ ಪುಸ್ತಕದ ರೂಪದಲ್ಲಿ ತಂದು ದಾಖಲಿಸಲು ಮುಂದಾದೆ. ಈಗ ಸ್ವಂತ ಖರ್ಚಿನಲ್ಲಿ ಪುಸ್ತಕ ಮುದ್ರಿಸಿ, ಅದನ್ನು ನಿಮ್ಮ ಮುಂದಿಟ್ಟಿದ್ದೇನೆ. ಚಿತ್ರಗಳನ್ನು ಕುರಿತು ಯು.ಆರ್. ಅನಂತ ಮೂರ್ತಿ, ಟಿ.ಜೆ.ಎಸ್. ಜಾರ್ಜ್, ಗಿರೀಶ್ ಕಾಸರವಳ್ಳಿ, ರೋಹಿಣಿ ನಿಲೇಕಣಿ, ಚಂದ್ರನಾಥ್ ಆಚಾರ್ಯ, ಕೃಪಾಕರ- ಸೇನಾನಿಯಂತಹ ಹತ್ತು ಹಲವು ಕ್ಷೇತ್ರಗಳ ಗಣ್ಯರು ಮೆಚ್ಚಿ ಮಾತನಾಡಿದ್ದಾರೆ, ಬರೆದು ಕೊಟ್ಟಿದ್ದಾರೆ. ಇಷ್ಟು ಸಾಕೆನಿಸುತ್ತದೆ’ ಎನ್ನುತ್ತಾರೆ ಕೇಶವ ವಿಟ್ಲ.
ಒಂದು ರಾಜ್ಯ, ದೇಶದ ಏಕೀಕರಣವನ್ನು ಭೌಗೋಳಿಕವಾಗಿ ಕಲ್ಪಿಸಿಕೊಳ್ಳುತ್ತೇವೆ. ಆದರೆ, ನಿಜವಾದ ಏಕೀಕರಣ ಸಾಧ್ಯವಾಗುವುದು ಕಲೆಗಳ ಮೂಲಕ. ಸಾಹಿತ್ಯ, ಸಂಗೀತ, ಸಿನಿಮಾಗಳಂಥ ಸೃಜನಶೀಲ ಕಲೆಗಳು ‘ನಾವೆಲ್ಲ ಒಂದು’ ಎನ್ನುವ ಭಾವವನ್ನು ಭೌಗೋಳಿಕ ಚೌಕಟ್ಟಿನ ಹಂಗಿಲ್ಲದೆ ರೂಪಿಸುತ್ತವೆ. ಇಂಥದೊಂದು ಏಕತ್ರ ಸೂತ್ರವನ್ನು ಕರ್ನಾಟಕ ಹಾಗೂ ಕನ್ನಡದ ಮಟ್ಟಿಗೆ ಕೇಶವ ವಿಟ್ಲ ಅವರು ಛಾಯಾಚಿತ್ರಗಳ ಮೂಲಕ ಸಾಧಿಸಲು ಪ್ರಯತ್ನಿಸಿದಂತಿದೆ. ಈ ಪ್ರಯತ್ನದ ರೂಪವಾಗಿ ಅವರ Facets of Karnataka: A pictorial Journey ಕೃತಿಯನ್ನು ನೋಡಬಹುದು.
ಕೇಶವ ವಿಟ್ಲ ಅವರ ಕ್ಯಾಮೆರಾ ಚಿತ್ರಗಳಲ್ಲಿ ಪ್ರಾಕೃತಿಕ ಕರ್ನಾಟಕದ ಅನನ್ಯತೆ ಕಟ್ಟಿಕೊಡುವ ಹಲವು ಉದಾಹರಣೆಗಳಿವೆ. ಸ್ಥಿರ ಎನ್ನುವಂತೆ ಕಾಣಿಸುವ ಛಾಯಾಚಿತ್ರಗಳಲ್ಲಿ ಅಂತರ್ಗತವಾಗಿರುವ ಚಲನಶೀಲ ಗುಣವನ್ನು ಕಾಣಿಸಲು ವಿಟ್ಲ ಅವರು ಹಂಬಲಿಸಿದ್ದಾರೆ. ಕರ್ನಾಟಕದ ಜನಪ್ರಿಯ ಹಾಗೂ ಅಷ್ಟೇನೂ ಜನಪ್ರಿಯವಲ್ಲದ ಸ್ಥಳಗಳನ್ನು ಸುತ್ತಿರುವ ಅವರು, ತಮ್ಮ ನೋಟಕ್ಕೆ ದಕ್ಕಿದ ಬಂಡೆಗಳ ಪದರಗಳು, ನೀರಸೆಲೆಗಳು, ಮುದ್ದು ಕೋತಿಗಳು ಎಲ್ಲವನ್ನೂ ಕ್ಯಾಮೆರಾ ಕಣ್ಣಿಗೆ ಇಳಿಸಿದ್ದಾರೆ. ಈ ಬಿಡಿ ಬಿಡಿ ಚಿತ್ರಗಳು ನಾಡಿನ ಅನನ್ಯತೆಯನ್ನು ಚಿತ್ರಿಸುವುದರ ಜೊತೆಗೆ, ಅಖಂಡ ಕರ್ನಾಟಕದ ಪರಿಕಲ್ಪನೆಗೂ ಇಂಬು ಕೊಡುವಂತಿವೆ.
ಅಯ್ಯನಕೆರೆಯ ಮೌನ, ಅಬ್ಬೆ ಫಾಲ್ಸ್ನ ಶಬ್ದ, ಉತ್ತರ ಕನ್ನಡದ ಬಾಡ, ಬಾದಾಮಿಯ ಕೆಂಗಲ್ಲು, ಹಂಪಿಯ ಒಣಜಾಗದಲ್ಲೂ ಇಣುಕುವ ಸಣ್ಣ ನೀರು, ಬಲಮುರಿಯ ನೀರಿನ ಅಲೆ, ಬಳ್ಳಾರಿ ಕೋಟೆ, ಬಂಕಾಪುರದ ನವಿಲು, ಬೆಣ್ಣೆಹಳ್ಳದ ಬೆಣ್ಣೆಯಂಥ ನೀರು, ಕಬ್ಬನ್ ಉದ್ಯಾನದ ಬೃಹತ್ ಮರದ ಕಾಂಡ, ದಾಂಡೇಲಿಯ ತೆಪ್ಪ, ದುಬಾರೆಯ ಆನೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಹಸಿರು ಹೊದ್ದ ಪರಿಸರ, ಇರುಪ್ಪು ಜಲಪಾತದ ಬಳಿಯ ಬಂಡೆಗಳು, ಬಳ್ಳಾರಿಯ ಕಮಲಾಪುರ, ಕಲ್ಹತ್ತಿ ಫಾಲ್ಸ್ನ ನೋಟ, ಕಾರಂಜಿ ಕೆರೆಯ ಹಕ್ಕಿಗಳು… ಹೀಗೆ ಕನ್ನಡ ನಾಡಿನ ಹಲವು ಅದ್ಭುತ – ರಮ್ಯ ಮುಖಗಳು ಚಿತ್ರರೂಪದಲ್ಲಿ ಕೃತಿಯಾಗಿ ಮೂಡಿಬಂದಿವೆ.
ಶ್ರವಣ ಬೆಳಗೊಳದ ವಿಹಂಗಮ ನೋಟ ಬೆರಗು ಹುಟ್ಟಿಸುವಂತಿದ್ದರೆ, ಆ ಚಿತ್ರದ ಬೆನ್ನಿನಲ್ಲಿರುವ ಶಿಶಿಲದ ಮೀನುಗಳ ನೋಟ ಕಚಗುಳಿ ಇಡುವಂತಿದೆ. ಯಾಣದ ಬಂಡೆಗಳು ವಿಟ್ಲ ಅವರ ಕ್ಯಾಮೆರಾದಲ್ಲಿ ಮತ್ತಷ್ಟು ಅಗಾಧವಾಗಿ, ಕಾವ್ಯರೂಪಿಯಾಗಿ ಕಾಣಿಸುತ್ತವೆ. ಬಂಡೆಗಳನ್ನು ಅವರ ಕ್ಯಾಮೆರಾ ಹೆಚ್ಚು ಮೋಹಿಸಿರುವುದಕ್ಕೆ ಸಾಕಷ್ಟು ಉದಾಹರಣೆಗಳು ಈ ಚಿತ್ರಸಂಪುಟದಲ್ಲಿವೆ.
ಕರ್ನಾಟಕದ ಹಲವು ಸ್ಥಳಗಳ ಒಂದು ಮಟ್ಟದ ಚಿತ್ರಣ ದಕ್ಕಿಸಿಕೊಡುವ ಅವರ ಈ ‘ಫೋಟೊ ಕೃತಿ’ಯಲ್ಲಿ, ಪ್ರತಿ ಸ್ಥಳದ ಕುರಿತು ಇಂಗ್ಲಿಷ್ನಲ್ಲಿ ಕಿರು ಟಿಪ್ಪಣಿಗಳಿವೆ. ಸಮಗ್ರತೆಯ ಕಾರಣ ದಿಂದ ಕೇಶವ ವಿಟ್ಲ ಅವರ ‘Facets of Karnataka’ ಮುಖ್ಯ ವೆನ್ನಿಸುತ್ತದೆ. ಇಡೀ ಕೃತಿಯಲ್ಲಿ ಕೃತಿಕಾರರ ಶಿಸ್ತು ಎದ್ದು ಕಾಣುತ್ತದೆ. ನುಣುಪು ಕಾಗದದ ಮೇಲಿನ ವಿಶಾಲ ಚಿತ್ರಗಳನ್ನು ನೋಡುತ್ತಿದ್ದರೆ ಮನಸ್ಸು ಆರ್ದ್ರಗೊಳ್ಳದೇ ಇರದು. ಕುಳಿತಲ್ಲೇ ಪುಟಗಳನ್ನು ತಿರುವುತ್ತ ‘ಕರ್ನಾಟಕ ದರ್ಶನ’ ಮಾಡಬಹುದು. ಪುಸ್ತಕ ಖರೀದಿಸಿ ಕರ್ನಾಟಕವನ್ನು ಕಣ್ತುಂಬಿಕೊಳ್ಳಿ. ಪ್ರತಿಗಳಿಗಾಗಿ 8123486717 ಅಥವಾ 962055 9007ನ್ನು ಸಂಪರ್ಕಿಸಬಹುದು.
————-
ಕೇಶವ ವಿಟ್ಲ ಅವರು ಹೊರತಂದಿರುವ ಪುಸ್ತಕವು ಅಂತಾರಾಷ್ಟ್ರೀಯ ಮಟ್ಟದ್ದಾಗಿದೆ. ಈ ಪುಸ್ತಕವನ್ನು ಒಮ್ಮೆ ಅವಲೋಕಿಸಿದರೆ ಇಡೀ ಕರ್ನಾಟಕವನ್ನೇ ಸಂದರ್ಶಿಸಿ ಬಂದಂತಹ ಅನುಭವವಾಗುತ್ತದೆ. ಅಷ್ಟೇ ಅಲ್ಲ, ಪ್ರೇಕ್ಷಣೀಯ ತಾಣಗಳೆಲ್ಲವನ್ನೂ ನೋಡಬೇಕೆಂಬ ಹಂಬಲ ಉಂಟಾಗುತ್ತದೆ.
* ಮುಖ್ಯಮಂತ್ರಿ ಸಿದ್ದರಾಮಯ್ಯ
——————
ನಮ್ಮಂತಹ ಅಬ್ಬೆಪಾರಿಗಳನ್ನೆಲ್ಲ ಗುರುವಾಗಿ ಸಲುಹಿದ ವಡ್ಡರ್ಸೆ ರಘುರಾಮ ಶೆಟ್ಟಿಯವರ ‘ಕ್ಯಾಮೆರಾ’ ಕಣ್ಣಿಗೆ ಬಿದ್ದ ಹಳ್ಳಿಗಾಡಿನ ಪ್ರತಿಭೆ ಕೇಶವ ವಿಟ್ಲ. ಆ ಕಾಲದ ಬಾಲಪ್ರತಿಭೆ ಇಂದು ಅಂತರರಾಷ್ಟ್ರೀಯ ಪೋಟೋಗ್ರಾಪರ್ ಗಳ ಹೆಗಲಿಗೆ ಸಮನಾಗಿ ನಿಲ್ಲುವಂತಹ ದೈತ್ಯ ಪ್ರತಿಭೆಯಾಗಿ ಬೆಳೆದಿದ್ದಾನೆ.
ವಡ್ಡರ್ಸೆಯವರು ಯಾರ ತಲೆಗೆ ಕೈ ಇಟ್ಟಿದ್ದರೋ ಅವರ್ಯಾರೂ ಕಳೆದು ಹೋಗಿಲ್ಲ. ವೃತ್ತಿಯಲ್ಲಿ ಕಸುಬುಗಾರಿಕೆ, ಹೊಸ ಸವಾಲುಗಳನ್ನು ಹುಡುಕಿಕೊಂಡು ಹೋಗುವ ಸಾಹಸ ಮತ್ತು ಜನಪರವಾದ ಕಾಳಜಿ ವಡ್ಡರ್ಸೆಯವರ ಶಿಷ್ಯಕೋಟಿಯಲ್ಲಿ ಕಾಣಬಹುದಾದ ಸಾಮಾನ್ಯ ಗುಣಗಳು. ಇವೆಲ್ಲ ಗುಣಲಕ್ಷಣಗಳು ಈ ವಿಟ್ಲ ನೆಂಬ ‘ಬಾಲಕ’ನಲ್ಲಿದೆ.
ಈತನ ಮಹತ್ವಾಕಾಂಕ್ಷೆಯ ಚಿತ್ರಪುಸ್ತಕ ‘ಫೇಸೆಟ್ಸ್ ಆಫ್ ಕರ್ನಾಟಕ’. ಈ ಪುಸ್ತಕ ನಮ್ಮನ್ನು ಬೆರಗಿನ ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತದೆ. ತನ್ನ ಬಾಲಚೇಷ್ಠೆಯ ನಡುವೆಯೂ ಹತ್ತು ವರ್ಷಗಳ ಕಾಲ ನಡೆಸಿದ ತಪಸ್ಸಿನ ಫಲ ಈ ಪುಸ್ತಕ.
* ದಿನೇಶ್ ಅಮೀನ್ ಮಟ್ಟು









