ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಸಮುದಾಯದ ಅಭಿವೃದ್ಧಿಯಾಗಬೇಕಾದರೆ ಪ್ರತಿಯೊಬ್ಬರು ತಮ್ಮ ಸಮುದಾಯದ ಚಿಂತನೆ ಮಾಡಬೇಕು. ಒಗ್ಗಟ್ಟಿನಿಂದ ಮುನ್ನಡೆದಾಗ ಸಮಾಜದಲ್ಲಿ ಉತ್ತಮ ಸ್ಥಾನಕ್ಕೇರಬಹುದು ಎಂದು ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಹೇಳಿದರು.
ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಕಜೆಕಾರು ಮೂಲ್ಯರ ಯಾನೆ ಕುಲಾಲ ಕುಂಬಾರರ ಸೇವಾ ಸಂಘದ ಮೂರನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.
ಒಂದೇ ಸಮುದಾಯದವರೊಳಗೆ ಭಿನ್ನಾಭಿಪ್ರಾಯ ಬೇಡ, ಕಷ್ಟದಲ್ಲಿರುವವರ ಸಮಸ್ಯೆಗಳಿಗೆ ಸ್ಪಂದನೆ ಮಾಡಿಕೊಳ್ಳುವ ಮಾನಸಿಕ ಸ್ಥಿತಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು. ಕಜೆಕಾರಿನಲ್ಲಿ ಕಾರ್ಯಕ್ರಮ ನಡೆಸಿದಂತೆ ಇತರ ಹಳ್ಳಿಗಳಲ್ಲಿ ನಡೆದಾಗ ಕುಲಾಲರ ಸಂಘಟನೆ ರಾಜ್ಯಾದ್ಯಂತ ಗಟ್ಟಿಗೊಳ್ಳಲು ಸಾಧ್ಯ ಎಂದ ಅವರು , ಯುವಕರು ದಾರಿ ತಪ್ಪದಂತೆ ಧಾರ್ಮಿಕ ಶ್ರದ್ಧೆ ಬೆಳೆಯಬೇಕು. ಈ ಹಿನ್ನೆಲೆಯಲ್ಲಿ ನಾವು ಕುಟುಂಬ, ಜಾತಿ, ಗ್ರಾಮದವರು ಸೇರಿ ನಮ್ಮ ಆಚಾರ ವಿಚಾರ ಸಂಪ್ರದಾಯ ಗಳ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮ ಮಾಡಿದಾಗ ಸಂಘ, ಸಂಘಟನೆಗಳು ಬೆಳೆಯುತ್ತದೆ ಎಂದು ಹೇಳಿದರು.
ಮಂಗಳೂರಿನ ಉದ್ಯಮಿ ಅನಿಲ್ ದಾಸ್ ಅವರು ಮಾತನಾಡಿ, ಯುವಕರನ್ನು ರಾಜಕೀಯ ಪ್ರೇರಿತವಾಗಿ ಬಳಸಲಾಗುತ್ತದೆಯೇ ಹೊರತು, ಸಮುದಾಯಗಳ ಅಭಿವೃದ್ಧಿಗೆ ಅವರನ್ನು ಸದೃಢರಾಗಿಸುವ ಪ್ರಯತ್ನ ನಡೆಯುತ್ತಿಲ್ಲ. ಸಮಾಜಕ್ಕೆ ಮಾದರಿಯಾಗುವಂತಹ ಕೆಲಸಗಳು ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಕುಲಾಲ ಕುಂಬಾರ ಯಾನೆ ಮೂಲ್ಯರ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ಬಂಟ್ವಾಳ ಕುಲಾಲ ಸಂಘದ ಅಧ್ಯಕ್ಷ ಡಿ.ಎಂ. ಕುಲಾಲ್, ಉದ್ಯಮಿಗಳಾದ ಗಿರೀಶ್, ಯಶೋಧರ ಬಂಗೇರ, ಗಣೇಶ್ ಮೂಲ್ಯ ಅನಿಲಡೆ, ಮಚ್ಛೇಂದ್ರ ಕುಲಾಲ್ ಬಂಟ್ವಾಳ, ಮಾಡಪಲ್ಕೆ ಶಾಲೆಯ ಶಿಕ್ಷಕ ಹರೀಶ್ ಕಾರ್ಕಳ ಹಾಗೂ ಸಂಘದ ಪದಾಧಿಕಾರಿಗಳಾದ ಯಶೋಧರ ಸಾಲ್ಯಾನ್ ಪಟೀಲು, ಸದಾನಂದ ಕುಲಾಲ್ ಭ್ರಮರಿ ಮಿತ್ತೋಟು, ಪೂವಪ್ಪ ಮೂಲ್ಯ ಮಾಡಪಲ್ಕೆ, ಶ್ರೀಧರ ಕೇದಿಮೇಲು, ಡೀಕಯ್ಯ ದೆಲ್ಯಾಂತಬೈಲು, ಪತ್ರಕರ್ತ ರಂಜಿತ್ ಮಡಂತ್ಯಾರು, ಅಶೋಕ್ ಪಟೀಲು, ವಿಠಲ ಮೂಲ್ಯ ನರ್ಸಿಕುಮೇರು, ವಾಸು ಮೂಲ್ಯ ಕೊಡೆಂಚ್ಚಡ್ಕ, ಶಿವಪ್ಪ ಮೂಲ್ಯ ಅಬುರ ಅವರು ಉಪಸ್ಥಿತರಿದ್ದರು. ಉಪನ್ಯಾಸಕ ಡಾ.ದುಗ್ಗಪ್ಪ ಕಜೆಕ್ಕಾರು ಅವರು ಸ್ವಾಗತಿಸಿದರು, ವಿಠಲ ಅಬುರ ವಂದಿಸಿದರು. ಹರೀಶ್ ಕುಲಾಲ್ ನಿರಾರಿ ಅವರು ನಿರೂಪಿಸಿದರು.


