ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಒಂಬತ್ತು ವರ್ಷದ ಹುಡುಗಿ ತನ್ನ ಕೈಯ್ಯಲ್ಲಿದ್ದ ಒಂದಿಷ್ಟು ಚಿಲ್ಲರೆ ಕಾಸನ್ನು ಕೂಡಿಡಬೇಕು ಎಂಬ ಆಸೆಯಿಂದ ಮಣ್ಣಿನ ಹುಂಡಿ ತರಲು ಮೂರು ಮೈಲಿ ನೆಡದುಕೊಂಡು ರಾಮನಗರದ ಕರಕುಶಲ ವಸ್ತುವಿನ ಕುಂಬಾರಿಕೆ ವಿಭಾಗಕ್ಕೆ ಬಂದಳು. ಅಲ್ಲಿ ಮಣ್ಣಿನಿಂದ ವಿವಿಧ ರೀತಿಯ ಬೊಂಬೆಗಳ ತಯಾರಿಕೆಯನ್ನು ನೋಡುತ್ತಾ ನಿಂತ ಹುಡುಗಿಗೆ ತಾನು ಏಕೆ ಇಲ್ಲಿಗೆ ಬಂದೆ ಎಂಬುದೇ ಮರೆತು ಹೋಯಿತು. ಅಲ್ಲಿದ್ದ ಕಲಾವಿದ ಕರಿಯಪ್ಪ ಈಕೆಯ ಕುತೂಹಲವನ್ನು ಗುರುತಿಸಿ ಬೊಂಬೆ ಮಾಡುವುದನ್ನು ಕಲಿಯುತ್ತಿಯಾ ಮಗು ಎಂದು ಕೇಳಿದರು.
ಅಂದಿನಿಂದ ಹುಡುಗಿ ಮಣ್ಣಿನ ಗೀಳು ಹತ್ತಿಸಿಕೊಂಡಳು. ಇದಕ್ಕೆ ಮನೆಯವರು ಮೂಗು ಮುರಿದರು. ಬರೀ ಗಂಡಸರೇ ಇರುವ ಜಾಗಕ್ಕೆ ಏಕೆ ಹೋಗುತ್ತಿಯಾ ಎಂದು ಅಕ್ಕಪಕ್ಕದವರು ಪ್ರಶ್ನಿಸಿದರು. ಆ ಹುಡುಗಿ ಅದ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಮನಸಿನ ತುಂಬಾ ಕುಂಬಾರಿಕೆಯ ಕಲೆಯ ಗೀಳು ತುಂಬಿಸಿಕೊಂಡು ಕೂತುಬಿಟ್ಟಳು. ಶಾಲೆಗೆ ಹೋಗಲಿಲ್ಲ. ಮನೆಯಲ್ಲಿ ಅದು ಬೇಕು, ಇದು ಬೇಕು ಎಂದು ಕೇಳಲ್ಲಿಲ್ಲ. ಕುಂಬಾರಿಕೆಯ ತರಬೇತಿ ಪಡೆದಳು.
ದಿನ ಕಳೆದಂತೆ ಈ ಹುಡುಗಿಯ ಕೈಯಲ್ಲಿ ಮಣ್ಣು ರೂಪುಗೊಳ್ಳುವುದನ್ನು ನೋಡಿ ಅವರಿಗೆ ತರಬೇತಿ ಕೊಟ್ಟವರೂ ಅಚ್ಚರಿಗೊಂಡರು. ಹೀಗೆ ಮಣ್ಣಿನ ಜತೆ ನಂಟು ಬೆಳೆಸಿಕೊಂಡ ಹುಡುಗಿಗೆ ಮಣ್ಣೇ ಎಲ್ಲವೂ ಆದದ್ದು ಮುಂದಿನ ಕತೆ.
ದಿನವೊಂದಕ್ಕೆ ಹತ್ತು ಗಂಟೆ ಈ ಮಣ್ಣಿನ ಕೆಲಸದೊಳಗೆ ಮುಳುಗಿ ಹೋಗಿ ದಿನಕ್ಕೆ ರೂಪಾಯಿ ಹತ್ತು-ಇಪ್ಪತ್ತು ಸಂಪಾದನೆ ಮಾಡುತ್ತಿದ್ದ ದಿನಗಳಿದ್ದವು. ನಂತರ ಅನುಭವ ಹೆಚ್ಚುತ್ತಿದ್ದಂತೆ ಸಂಪಾದನೆ ದಿನಕ್ಕೆ ರೂಪಾಯಿ 100 ರಿಂದ 200 ಅನ್ನು ದಾಟಿತು. ಈ ಮಹಿಳೆ ತನ್ನ ಈ ಕಲೆಯಿಂದಲೇ ಇದೀಗ ತಿಂಗಳಿಗೆ ಐವತ್ತು ಸಾವಿರ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿದ್ದಾರೆ. ಅಂದ ಹಾಗೆ ಅವರ ಹೆಸರು ರಾಮನಗರದ ಆರ್.ವಿ. ಅನುಸೂಯಬಾಯಿ.
ರಾಮನಗರದ ಜಾನಪದ ಲೋಕದ ಕುಂಬಾರಿಕೆಯ ವಿಭಾಗದಲ್ಲಿ ಅನುಸೂಯಬಾಯಿ ತಯಾರಿಸುವ ಕರಕುಶಲ ವಸ್ತುಗಳಿಗೆ ಅಪಾರ ಬೇಡಿಕೆ ಇದೆ. ಮದ್ರಾಸ್, ಸೇಲಂ, ಹೈದರಾಬಾದ್, ಮುಂಬೈ ಮತ್ತಿತರ ನಗರಗಳಿಂದ ಬರುವ ಸಗಟು ವ್ಯಾಪಾರಿಗಳು ಇಲ್ಲಿಂದ ವಸ್ತುಗಳನ್ನು ಕೊಂಡೊಯ್ಯುತ್ತಾರೆ. ಈ ಮಹಿಳೆ ತಯಾರಿಸುವ ಬೊಂಬೆಗಳು ಶ್ರೀಮಂತರ ಮನೆಯ ‘ಶೋಕೇಶ್’ಗಳಲ್ಲಿ ಶೋಭಿಸುತ್ತಿವೆ. ಸಣ್ಣಸಣ್ಣ ಆನೆಗಳಿಂದ ಹಿಡಿದು ದೊಡ್ಡ ಹೂವಿನ ಕುಂಡಗಳು, ಕುದುರೆ, ಬಸವಣ್ಣ, ಗಣಪತಿ, ವಿವಿಧ ರೀತಿಯ ದೀಪಗಳು, ಪರಿಸರದಲ್ಲಿ ಕಾಣುಬ ಹೂಬಳ್ಳಿಗಳು, ಹಣ್ಣು ಕಾಯಿಗಳು ಹೀಗೆ ವಿವಿಧ ಕಲಾಕೃತಿಗಳು ಅನುಸೂಯಬಾಯಿ ಕೈಯ್ಯಲ್ಲಿ ರೂಪು ಪಡೆದಿವೆ.
ಈಗ ಜಾನಪದ ಲೋಕಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಭಾನುವಾರ, ರಜೆಯ ದಿನಗಳಲ್ಲಿ ಶಾಲಾ ಮಕ್ಕಳು, ಪ್ರವಾಸಿಗರು, ಹೊರದೇಶದವರು ಹೆಚ್ಚಾಗಿ ಬರುತ್ತಾರೆ. ಬಂದವರೆಲ್ಲರೂ ಅನುಸೂಯಮ್ಮ ತಯಾರು ಮಾಡುವ ಕರಕುಶಲ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ.
ಅನಕ್ಷರಸ್ಥೆಯಾದ, ಒಂಬತ್ತನೇ ವಯಸ್ಸಿಗೆ ಕರಕುಶಲ ಕಲೆಯನ್ನು ಕಲಿತ ಇವರು 1 ವರ್ಷ ಕಾವೇರಿ ಕರಕುಶಲ ತರಬೇತಿ ಕೇಂದ್ರದಲ್ಲಿ ಕೆಲಸ ಮಾಡಿದ್ದಾರೆ. ನಾಗೇಗೌಡ ಅವರು ಜಾನಪದ ಲೋಕದಲ್ಲಿ ಸ್ಥಳವನ್ನು ಕೊಟ್ಟ ಮೇಲೆ ಕಳೆದ 20 ವರ್ಷಗಳಿಂದ ಕುಂಬಾರಿಕೆ ಕೆಲಸ ಮಾಡುವುದನ್ನೇ ಕೆಲಸ ಮಾಡಿಕೊಂಡು, ಆರು ಮಂದಿಗೆ ಕೆಲಸವನ್ನು ನೀಡಿದ್ದಾರೆ.
ಜೀವನದಲ್ಲಿ ಹಂತಹಂತವಾಗಿ ಮೇಲೆ ಬಂದಿರುವ ಅನುಸೂಯಬಾಯಿ ಮಹಿಳೆಯರಲ್ಲಿ ಗುರಿ ಇದ್ದರೆ ಸಾಧನೆ ಮಾಡಲು ಸಾಧ್ಯ. ಛಲವಿದ್ದು ಸಾಧಿಸಲೇಬೇಕೆಂಬ ದಿಟ್ಟತನವಿದ್ದರೆ ಮಹಿಳೆಯೂ ಏನನ್ನಾದರೂ ಸಾಧಿಸಬಲ್ಲಳು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.