ಸಂಗೀತ ಲೋಕದ ಭರವಸೆಯ ಹಳ್ಳಿ ಪ್ರತಿಭೆ
ಕುಂದಾಪುರ (ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಈಕೆ ಸಂಗೀತ ಲೋಕದ ಭರವಸೆಯ ಹೊಂಬೆಳಕು. ಅವಳು ಹಾಡುತ್ತಿದ್ದರೆ ಸಭೆಗೆ ಸಭೆಯೇ ಎದ್ದು ನಿಂತು ಚಪ್ಪಾಳೆ ಹೊಡೆಯುತ್ತದೆ.. ಸಂಗೀತವನ್ನು ಆಸ್ವಾದಿಸುತ್ತದೆ. ರಾಗ-ತಾಳಗಳ ಸ್ಪಷ್ಟ ಜ್ಞಾನದೊಂದಿಗೆ ಪರಿಶುದ್ಧವಾಗಿರುವ ಈಕೆಯ ಗಾಯನ ಸಂಗೀತದ ದಿವ್ಯ ಅನುಭೂತಿಯನ್ನು ಪ್ರೇಕ್ಷಕನಿಗೆ ನೀಡುತ್ತದೆ. .. ಯಾವುದೇ ಹಾಡಿನ ಅಂತಸತ್ವವನ್ನು ಅರಿತು- ಅಸ್ವಾದಿಸಿ ಸುಂದರವಾಗಿ ಅಭಿವ್ಯಕ್ತಪಡಿಸುವ ಈಕೆ ಹಲವು ಪ್ರಶಸ್ತಿಗಳ ಸರದಾರೆ.. ಇವಳು ಇನ್ಯಾರು ಅಲ್ಲ.. ಕೋಗಿಲೆಯಷ್ಟು ಇಂಪಾಗಿ ಮತ್ತು ಆತ್ಮವಿಶ್ವಾಸದಿಂದ ಹಾಡುವ ಈ ಗಾನ ಪ್ರತಿಭೆ ಕುಂದಾಪುರದ ಕುಲಾಲರ ಕಾಶಿ ಎಂದೆನಿಸಿರುವ ಮೆಟ್ಟಿನಹೊಳೆಯ ಹೆಮ್ಮೆಯ ಕುವರಿ ವಿಜಯಲಕ್ಷ್ಮೀ ಕುಲಾಲ್.
ಬೈಂದೂರು ತಾಲೂಕಿನ ಮೆಟ್ಟಿನಹೊಳೆ ಪರಮನ ಮನೆಯ ಈ ಹೆಣ್ಣುಮಗಳು ಸಂಗೀತವನ್ನು ಒಂದು ಶ್ರೇಷ್ಠ ತಪಸ್ಸಿನಂತೆ ಸ್ವೀಕರಿಸಿ, ತುಂಬ ಕಷ್ಟದಿಂದ ಬೆಳೆದು ಬಂದಿರುವ ಗ್ರಾಮೀಣ ಪ್ರತಿಭೆ. ಸಂಗೀತದ ಬಗೆಗೆ ಇರುವ ಅಪಾರ ತುಡಿತ, ನಿರಂತರ ಕಲಿಕೆ, ಕಠಿಣ ಪರಿಶ್ರಮದಿಂದ ತಮ್ಮ ಸುಮಧುರ ಕಂಠದ ಮೂಲಕ ನಾಡಿನ ಜನತೆಯ ಹೃದಯಲ್ಲಿ ಮನೆ ಮಾಡಿ ಇಂದು ಹಲವು ಸ್ಪರ್ಧೆಗಳಲ್ಲಿ ಬಹುಮಾನವನ್ನು ಗಿಟ್ಟಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿರುವ ಪ್ರಚಂಡ ಪ್ರತಿಭೆ. ಸಣ್ಣ ವಯಸ್ಸಿನಲ್ಲಿಯೇ ಅತ್ಯಂತ ಪ್ರಬುದ್ಧವಾಗಿ ಹಾಡುವ ಈಕೆ ಮುಂದಿನ ದಿನಗಳಲ್ಲಿ ಪ್ರತಿಭಾನ್ವಿತ ಗಾಯಕಿಯಾಗುವ ಎಲ್ಲಾ ಲಕ್ಷ ಣಗಳನ್ನು ಪ್ರದರ್ಶಿಸುತ್ತಿದ್ದಾಳೆ.
ಮೆಟ್ಟಿನಹೊಳೆ ಪರಮನಮನೆಯ ರಾಮ ಕುಲಾಲ್ ಮತ್ತು ನಾಗು ಕುಲಾಲ್ ದಂಪತಿಗಳ ಪ್ರೀತಿಯ ಕುವರಿ. ಬಾಲ್ಯದಿಂದಲೂ ಸಂಗೀತದ ಬಗ್ಗೆ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡು ಮನೆಯವರ ಗುರು-ಹಿರಿಯರ ಬೆಂಬಲದಿಂದ ಸಂಗೀತವನ್ನು ಕಲಿಯುತ್ತಾ ಬೆಳೆದವಳು. ಉಪ್ಪುಂದದ ದುರ್ಗಾಪರಮೇಶ್ವರಿ ಸಂಗೀತ ವಿದ್ಯಾಲಯದ ಗುರುಗಳಾದ ರಾಘವೇಂದ್ರ ಉಪಧ್ಯಾಯ ಅವರಿಂದ ಹಿಂದೂಸ್ಥಾನಿ ಸಂಗೀತವನ್ನು ಕಲಿತು ಪ್ರಸ್ತುತ ಯಶಸ್ವಿಯಾಗಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.
ವಿಜಯಲಕ್ಷ್ಮೀ ಮೆಟ್ಟಿನಹೊಳೆ ಅವರು ಶಾಲಾ-ಕಾಲೇಜು ದಿನದಿಂದಲೂ ಹಲವು ಸಂಗೀತ ಸ್ಪರ್ಧೆಗಳಲ್ಲಿ, ಪ್ರತಿಭಾ ಕಾರಂಜಿಯಲ್ಲಿ ಗಾಯನ ಸುಧೆಯನ್ನು ಹರಿಸಿ ಬಹುಮಾನಗಳನ್ನು ಪಡೆದು ಬೆಳೆದು ಬಂದವರು. ಪ್ರಸ್ತುತ ಕುಂದಾಪುರದ ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಬಿ.ಕಾಂ ಪದವಿ ಮುಗಿಸಿ ಪೂರ್ಣಪ್ರಮಾಣದಲ್ಲಿ ಸಂಗೀತದಲ್ಲಿ ತೊಡಗಿಸಿಕೊಂಡಿರುವ ಇವರಿಗೆ ಸಿಕ್ಕ ಪ್ರಶಸ್ತಿಗಳು ಅಸಂಖ್ಯ.
ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ಉಡುಪಿ ಆಯೋಜನೆಯ ವಾಯ್ಸ್ ಆಫ್ ಉಡುಪಿ ಸೀಸನ್-5 ವಿನ್ನರ್ ಪ್ರಶಸ್ತಿ, ಕುಸುಮ ಪೌಂಡೇಶನ್ ನಾಗೂರು ಆಯೋಜನೆಯ ಗಾನಕುಸುಮ-2015 ಪ್ರಶಸ್ತಿ, ಉಳ್ತೂರು ಮಹಾಲಿಂಗೇಶ್ವರ ಯುವಕ ಮಂಡಲದ ಆಯೋಜನೆಯ ವಾಯ್ಸ್ ಆಫ್ ಉಳ್ತೂರು ಪ್ರಶಸ್ತಿ, ರೋಟರಿ ಬ್ರಹ್ಮಾವರ ಆಯೋಜನೆಯ ವಾಯ್ಸ್ ಆಫ್ ಕರಾವಳಿ-2 ಪ್ರಶಸ್ತಿ, ಸಿಂಗಿಂಗ್ ಸ್ಟಾರ್ ಆಫ್ ಬೊಳ್ಳಂಬಳ್ಳಿ, ನಾದಲಹರಿ 2017 ಪ್ರಶಸ್ತಿ ಸೇರಿದಂತೆ ಹಲವು ಶ್ರೇಷ್ಠ ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿ ಪ್ರಶಸ್ತಿಗಳ ಸರಮಾಲೆಯನ್ನೇ ಕೊರಳಿಗೆ ಹಾಕಿಸಿಕೊಂಡಿರುವ ವಿಜಯಲಕ್ಷ್ಮೀ ಸಂಗೀತ ಲೋಕದ ಗಾನ ಗಾರುಡಿ.
ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ ಸಂಗೀತ ಕಲಿಕೆಯಲ್ಲಿ ತೊಡಗಿಸಿಕೊಂಡಿರುವ ಇವರು ಕಳೆದ ಎರಡು ವರ್ಷಗಳಿಂದ ಪೂರ್ಣಕಾಲಿಕ ಸಂಗೀತ ಕಲಾವಿದೆಯಾಗಿ ತೊಡಗಿಸಿಕೊಂಡಿದ್ದಾರೆ. ಭಾವಗೀತೆ, ಸಿನಿಮಾ ಗೀತೆ, ಭಕ್ತಿಗೀತೆಗಳಿಗೆ ಭಾವಪೂರ್ಣ ವಾಗಿ ದನಿಯಾಗುವ ಇವರ ಗಾಯನಕ್ಕೆ ಎಲ್ಲರೂ ತಲೆಬಾಗುತ್ತಾರೆ. ಈಗಾಗಲೇ ಐವತ್ತಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಹಿಂದುಸ್ಥಾನಿ ಸಂಗೀತದಲ್ಲಿ ಹೆಚ್ಚಿನ ಅಭ್ಯಾಸದಲ್ಲಿರುವ ಈ ಕುಲಾಲ ಗಾನ ಕೋಗಿಲೆಗೆ ನಿಮ್ಮದೊಂದು ಶುಭಾಶಯ ಸದಾ ಇರಲಿ..
ವಿಜಯಲಕ್ಷ್ಮೀ ಮಾತು..
” ಸಂಗೀತ ನನ್ನ ಉಸಿರು. ಪೂರ್ಣಕಾಲಿಕ ಸಂಗೀತ ಕಲಾವಿದೆಯಾಗಿ ಬೆಳೆಯಬೇಕೆಂಬುದು ನನ್ನ ಆಸೆ. ಸಂಗೀತಾಸಕ್ತರ ಬೆಂಬಲ, ಸಂಘ ಸಂಸ್ಥೆಗಳ ಸಹಕಾರ ಸದಾ ನಿರೀಕ್ಷಿಸುತ್ತೇನೆ”.
ಬರಹ: ಮಂಜುನಾಥ ಹಿಲಿಯಾಣ, ಮಣಿಪಾಲ

















