ಮಂಗಳೂರು (ಕುಲಾಲ್ ವರ್ಲ್ಡ್ ಡಾಟ್ ಕಾಮ್): ಬಾಲ್ಯದಲ್ಲಿ ಅಜ್ಜ-ಅಜ್ಜಿ ಅಥವಾ ಹೆತ್ತವರು ಹೇಳಿಕೊಡುವ ಪೌರಾಣಿಕ, ಐತಿಹಾಸಿಕ ಕಥೆಗಳು ಹಲವು ಬಾರಿ ನಮ್ಮ ಮುಂದಿನ ಬದುಕಿನ ಮೇಲೆ ಒಂದಲ್ಲಾ ಒಂದು ರೀತಿಯಲ್ಲಿ ಪ್ರಭಾವ ಬೀರುತ್ತವೆ. ಮಾಡುವ ಕಾರ್ಯದಲ್ಲಿ, ಮೂಡುವ ಕಲಶಕ್ತಿಯಲ್ಲಿ ಇಲ್ಲವೇ ನಮ್ಮ ವ್ಯಕ್ತಿತ್ವದಲ್ಲಿ ಅದು ಅಭಿವ್ಯಕ್ತವಾಗುತ್ತದೆ. ಹಾಗೆಯೇ ಬಾಲ್ಯದಲ್ಲಿ ಅಪ್ಪ ಹೇಳುತ್ತಿದ್ದ ಕತೆಗಳನ್ನು ಕುತೂಹಲದಿಂದ ಆಲಿಸುತ್ತಿದ್ದ ಬಾಲೆಯೊಬ್ಬಳು ಇಂದು ಅದೇ ಪಾತ್ರಗಳಿಗೆ ತನ್ನ ನೃತ್ಯ ಸೊಗಡಿನ ಮೂಲಕ ಜೀವ ತುಂಬಿ ಜನಮನದಲ್ಲಿ ಸ್ಥಾನಗಳಿಸುತ್ತಿದ್ದಾರೆ. ತಾನು ಕೇಳಿದ ಕತೆಗಳನ್ನು ನೃತ್ಯ ರೂಪಕದ ಮೂಲಕ ಜನರ ಮುಂದಿಡುವ ಅಪರೂಪದ ಕಲಾವಿದೆಯೇ ನಿಶ್ಮಿತಾ ಕೆ ಮೂಲ್ಯ.
ಅಧ್ಯಾಪಕ ದಂಪತಿಗಳಾದ ಕೃಷ್ಣ ಮೂಲ್ಯ- ಶುಭವತಿ ಅವರ ಸುಪುತ್ರಿಯಾದ ನಿಶ್ಮಿತಾ ಮೂಲತಃ ಬದಿಯಡ್ಕದವರಾದರೂ ಪ್ರಸ್ತುತ ಬೇಕೂರಿನಲ್ಲಿ ನೆಲೆಸಿದ್ದಾರೆ. ತನ್ನ ನಾಲ್ಕನೆಯ ವಯಸ್ಸಿನಲ್ಲಿ ತಾಯಿಯಿಂದಲೇ ನೃತ್ಯಾಭ್ಯಾಸವನ್ನು ಪ್ರಾರಂಭಿಸಿದ ನಿಶ್ಮಿತಾ ತನ್ನ ಹತ್ತನೇ ವರ್ಷದಲ್ಲಿ ನೃತ್ಯ ತರಬೇತಿಯನ್ನು ನೀಡಲು ಪ್ರಾರಂಭಿಸಿದ ಪ್ರತಿಭಾವಂತೆ. ನೀಲೇಶ್ವರದ ರಾಜು ಮಾಸ್ತರ್ ಅವರ ಆಪ್ತ ಶಿಷ್ಯೆಯಾಗಿ ಭರತನಾಟ್ಯ, ಮೋಹಿನಿಯಾಟಂ, ಕೂಚುಪುಡಿಯನ್ನು ಅಭ್ಯಸಿಸಿರುವ ಇವರು ಕಮಲಾಕ್ಷನ್ ಮಾಸ್ತರ್ ಅವರಿಂದ ಸಂಗೀತವನ್ನೂ ಅಭ್ಯಸಿಸಿದ್ದಾರೆ.
ಉತ್ತಮ ಗಾಯಕಿಯೂ ಆಗಿರುವ ನಿಶ್ಮಿತಾ ತನ್ನ ಶಿಕ್ಷಣವನ್ನು ದುರ್ಗಿಪಳ್ಳದ ಉದಯ ಆಂಗ್ಲಮಾಧ್ಯಮ ಶಾಲೆ ಹಾಗೂ ಮಂಗಳೂರಿನ ಶ್ರೀ ರಾಮಕೃಷ್ಣ ಪಿ ಯು ಕಾಲೇಜಿನಲ್ಲಿ ಪೂರ್ತಿಗೊಳಿಸಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಸಂದರ್ಭದಲ್ಲಿ ಮನಃಶಾಸ್ತ್ರದಲ್ಲಿ ಪದವಿ ಪಡೆದರು. ಇವರ ಹಿರಿ ಸಹೋದರ ನಿತಿನ್ ಅವರೂ ಒಬ್ಬ ಕಲಾವಿದರಾಗಿದ್ದು, ಬೆಂಗಳೂರಿನಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ.
ನಿಶ್ಮಿತಾ ವಿವಿಧ ನೃತ್ಯ ಪ್ರಕಾರಗಳಾದ ಮೋಹಿನಿಯಾಟಂ, ಭರತನಾಟ್ಯ, ಕೂಚುಪುಡಿ, ತಿರುವಾದರಕಳಿ, ಒಪ್ಪನ, ಮಾರ್ಗಂಕಳಿ, ನವಿಲು ನರ್ತನ, ಫಿಲಂ ಡಾನ್ಸ್, ಜಾನಪದ ನೃತ್ಯಗಳಲ್ಲದೆ ತನ್ನದೇ ಹೊಸ ಶೈಲಿಯ ಪೌರಾಣಿಕ ನೃತ್ಯ ರೂಪಕ ಮುಂತಾದುವುಗಳನ್ನೂ ಸಲೀಸಾಗಿ ಮಾಡಬಲ್ಲ ಚಾಣಾಕ್ಷೆ.
ಇದರೊಂದಿಗೆ ಏಕಪಾತ್ರಾಭಿನಯದಲ್ಲೂ ಎತ್ತಿದ ಕೈ. ಜತೆಗೆ ಕರಾಟೆಯನ್ನೂ ಅಭ್ಯಸಿಸಿರುವ ಇವರು ಉತ್ತಮ ಬ್ಯಾಡ್ಮಿಂಟನ್ ಹಾಗು ತ್ರೋಬಾಲ್ ಆಟಗಾರ್ತಿಯೂ ಹೌದು. ಗಾರ್ಡನಿಂಗ್ ಹಾಗೂ ಅಡುಗೆ ಮಾಡುವುದು ಇವರ ಮೆಚ್ಚಿನ ಹವ್ಯಾಸಗಳಲ್ಲಿ ಸೇರಿದೆ.
ಪಿಯುಸಿ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಎಸ್ ಡಿಎಂ ಕಾಲೇಜು ನಡೆಸಿದ ಅಂತರಕಾಲೇಜು ನೃತ್ಯ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದ ನಿಶ್ಮಿತಾ ಅವರಿಗೆ ಅಗಾಧವಾದ ಶ್ರಮದಿಂದ ಏನಾದರೂ ಸಾಧಿಸಬೇಕೆಂಬ ಛಲವಿದೆ. ಆದುದರಿಂದಲೇ ಬಂದ್ಯೋಡು ಹಾಗೂ ಬದಿಯಡ್ಕದಲ್ಲಿ `ಡ್ಯಾನ್ಸ್ ಆಂಡ್ ಬೀಟ್ಸ್’ ಎಂಬ ನೃತ್ಯ ಶಾಲೆಯನ್ನು ಆರಂಭಿಸಿ ಹಲವಾರು ಮಕ್ಕಳಿಗೆ ನೃತ್ಯವನ್ನು ಧಾರೆ ಎರೆಯುತ್ತಿದ್ದಾರೆ. ಈಗಾಗಲೇ ಇವರ ಹಲವು ಶಿಷ್ಯೆಯರು ಟೀವಿ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ.
ಹಲವು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿರುವ, ಭಸ್ಮಾಸುರ ಮೋಹಿನಿ, ಮಹಾಭಾರತ, ಶಿವ ನೃತ್ಯ, ದ್ರೌಪತಿ ಕಥೆ ಮುಂತಾದ ನೃತ್ಯ ರೂಪಕಗಳನ್ನು ಸೃಷ್ಟಿಸಿ, ಕೆಥಾಪಾತ್ರಗಳಿಗೆ ಜೀವ ತುಂಬುವ ನಿಶ್ಮಿತಾ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿಯುವ ಕಲಾವಿದೆ. ರಾಜಸ್ಥಾನಿ ಉಡುಪು ಧರಿಸಿ ರಾಜಸ್ಥಾನಿ ಶೈಲಿಯ ನೃತ್ಯ ಮಾಡುತ್ತಿದ್ದರೆ ಕರತಾಡನಗಳ ಸುರಿಮಳೆ.
ರಂಗೀಲಾ ಮಾರೋ ಡೋಲ್ ನಾ… ಎಂಬ ಪಂಜಾಬಿ ಹಾಡಿಗೆ ನರ್ತಿಸಿದರೆ ನೋಡುಗರೂ ಜೊತೆಯಲ್ಲಿ ಹೆಜ್ಜೆ ಹಾಕುವಂತೆ ಮಾಡುವರು. ಇದರೊಂದಿಗೆ ನಾಗಿಣಿ ನೃತ್ಯವನ್ನು ತನ್ನದೇ ಶೈಲಿಯಲ್ಲಿ ಪ್ರದರ್ಶಿಸುವ ನಿಶ್ಮಿತಾ ಆಂಜನೇಯ, ಕೃಷ್ಣ ಹಾಗೂ ಗಣಪತಿಯ ಹಲವಾರು ಹಾಡುಗಳಿಗೆ ಶಾಸ್ತ್ರೀಯ ಶೈಲಿಯಲ್ಲಿ ತಾನು ಸ್ವತಃ ನೃತ್ಯ ಸಂಯೋಜನೆ ಮಾಡಿ ಹಲವು ಕಡೆಗಳಲ್ಲಿ ನರ್ತಿಸಿ ಪ್ರೇಕ್ಷಕರಿಂದ ಪ್ರಸಂಶೆ ಪಡೆದಿದ್ದಾರೆ.
ನೃತ್ಯ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವ ನಿಶ್ಮಿತಾ ರಾಜಸ್ಥಾನ್, ಪಂಜಾಬ್, ಮಹಾರಾಷ್ಟ, ಬಂಗಾಳಿ, ತಮಿಳ್ನಾಡು, ಆಂಧ್ರ, ಕರ್ನಾಟಕ, ಕೇರಳ ರಾಜ್ಯದ ನೃತ್ಯ ಪ್ರಕಾರಗಳೊಂದಿಗೆ ತುಳುನಾಡಿನ ನೃತ್ಯವನ್ನು ಸೇರಿಸಿ ಪ್ಯೂಷನ್ ನೃತ್ಯವನ್ನು ಸಂಯೋಜಿಸಿ ಓರ್ವ ಉತ್ತಮ ಸಂಯೋಜಕಿ ಎಂಬ ಕೀತಿಯನ್ನು ಗಳಿಸಿದ್ದಾರೆ.
ಈಗ ಹೊಸದಾಗಿ ಕಿಲಿಕಿ ಹಾಗು ಚಿಟ್ಟೆ ನೃತ್ಯಗಳನ್ನು ಪುಟ್ಟಮಕ್ಕಳಿಗಾಗಿ ಸಂಯೋಜಿಸುತ್ತಿದ್ದಾರೆ. ಈಗಾಗಲೇ ಗಡಿನಾಡ ಡಾನ್ಸರ್ ಎಂಬ ಬಿರುದನ್ನು ಪಡೆದಿರುವ ಈ ನಾಟ್ಯ ಮಯೂರಿಗೆ ಇತ್ತೀಚೆಗೆಷ್ಟೇ ಮಡಿಲು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನೀಡಲಾಗುವ `ಮಡಿಲು ಸಮ್ಮಾನ್ ಪುರಸ್ಕಾರ 2018 ‘ ದೊರೆತಿದೆ. ಹಲವು ಸಂಘ ಸಂಸ್ಥೆಗಳು ಗೌರವಿಸಿದೆ.
ಲಲಿತಕಲೆಯನ್ನು ಉಸಿರಾಗಿಸಿರುವ ಸೃಜನಶೀಲ ಮಾತುಗಾರ್ತಿ ಆಗಿರುವ ನಿಶ್ಮಿತಾ ಸಹೃದಯ ಸಮಾಜ ಸೇವಕಿಯೂ ಹೌದು. ಪ್ರಿಂಟಿಂಗ್ ಹಾಗು ಗ್ರಾಫಿಕ್ ಡಿಸೈನಿಂಗ್ ನಲ್ಲೂ ಪರಿಣಿತೆ. ಉಪ್ಪಳದಲ್ಲಿರುವ ಸೂರ್ಯ ಗ್ರಾಫಿಕ್ ಎಂಟರ್ಪ್ರೈಸಸ್ ಮತ್ತು ಡಿಸೈನಿಂಗ್ ಸಂಸ್ಥೆಯ ಮಾಲಕಿ.
ಎಲೆಮರೆಯ ಕಾಯಿಯಂತೆ ಇದ್ದ ನಿಶ್ಮಿತಾಳ ಪ್ರತಿಭೆಯನ್ನು ಹೊರಲೋಕಕ್ಕೆ ಪರಿಚಯಿಸಲು ಕಾರಣಕರ್ತರಾದರು ಆತ್ಮೀಯ ಸ್ನೇಹಿತ ರಂಜಿತ್. ಸದಾ ಜತೆಗಿರುವ ಹೆತ್ತವರ ಪ್ರೋತ್ಸಾಹ, ಗುರುಗಳ ಬೆಂಬಲ ತನಗೆ ಶ್ರೀರಕ್ಷೆ ಎನ್ನುವ ನಿಶ್ಮಿತಾ ಇತ್ತೀಚೆಗಷ್ಟೇ ಧೀಮಂತ್ ಎಂಬವರ ಜೊತೆ ಸಪ್ತಪದಿ ತುಳಿದಿದ್ದಾರೆ. ಇವರ ದಾಂಪತ್ಯ ಜೀವನ ಹಾಗೂ ಕಲಾ ಬದುಕು ಉಜ್ವಲವಾಗಲಿ ಎಂಬುದು `ಕುಲಾಲ್ ವರ್ಲ್ಡ್ ಡಾಟ್ ಕಾಮ್ ನ ಶುಭ ಹಾರೈಕೆ.
———————————————-
ಮಾಹಿತಿ ಕೃಪೆ : ಅಖಿಲೇಶ್ ನಗುಮುಗಂ (ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾರ್ಯದರ್ಶಿ)