ಮಂಗಳೂರು(ನ.೧೩, ಕುಲಾಲ್ ವರ್ಲ್ಡ್ ಡಾಟ್ ಕಾಮ್) : ರಾಜ್ಯದ ಭಾರತೀಯ ವೈದ್ಯಕೀಯ ಸಂಘಗಳ ಪೈಕಿ ಅತ್ಯಂತ ಹಳೆಯ ಸಂಘಗಳಲ್ಲೊಂದಾದ ಐಎಂಎ ಮಂಗಳೂರು ಶಾಖೆಯ 2019-20ನೇ ಸಾಲಿನ ಅಧ್ಯಕ್ಷರಾಗಿ ಖ್ಯಾತ ವೈದ್ಯ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಪ್ರಸ್ತುತ ಐಎಂಎ ಕರ್ನಾಟಕ ರಾಜ್ಯ ಘಟಕದ ರಾಜ್ಯ ವಕ್ತಾರ ರಾಗಿರುವ ಡಾ. ಕುಲಾಲ್, ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ ಹಾಗೂ ಪ್ರಾಧ್ಯಾಪಕರಾಗಿದ್ದಾರೆ. 2018-19 ಹಾಗೂ 2019-20ನೇ ಸಾಲಿನ ಅಧ್ಯಕ್ಷರ ಆಯ್ಕೆ ಏಕಕಾಲಕ್ಕೆ ನಡೆದಿದ್ದು, ಪ್ರಶಕ್ತ ವರ್ಷದ ಅಧ್ಯಕ್ಷರಾಗಿ ಡಾ. ಬಿ ಸಚ್ಚಿದಾನಂದ ರೈ ಆಯ್ಕೆ ಆಗಿದ್ದಾರೆ. ನಗರದ ಪ್ರಥಮ ಎಂಬಿಬಿಎಸ್ ವೈದ್ಯ ಎನ್ನಲಾದ ಕುಳಾಯಿ ರಾಘವೇಂದ್ರ ಕಿಣಿ 1924ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವೈದ್ಯರ ಸಂಘವನ್ನು ಸ್ಥಾಪಿಸಿದ್ದರು. ಆರಂಭಿಕ ದಿನಗಳಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳೇ ಇದರ ಅಧ್ಯಕ್ಷರಾಗುವಂತೆ ಕೋರಲಾಗಿತ್ತು. ಸಂಘವನ್ನು ಕಟ್ಟಿ ಬೆಳೆಸುವಲ್ಲಿ ಅಪಾರ ಶ್ರಮ ವಹಿಸಿದ್ದ ಕಿಣಿಯವರ ಪ್ರಯತ್ನದಿಂದ 1930ರಲ್ಲಿ ಇದು ಐಎಂಎ ಸಂಘವಾಗಿ ಅಸ್ತಿತ್ವಕ್ಕೆ ಬಂದಿತು.