ಬಂಟ್ವಾಳ(ಅ.೧೬,ಕುಲಾಲ ವರ್ಲ್ಡ್ ಡಾಟ್ ಕಾಮ್): ಸಾಮಾನ್ಯವಾಗಿ ಈ ವಯಸ್ಸಿನ ಮಕ್ಕಳು ಅಂಬೆಗಾಲಿಡುತ್ತಾ, ಆಟವಾಡುತ್ತಾ ತಮ್ಮ ಲೋಕದಲ್ಲಿ ಮಗ್ನರಾಗಿರುತ್ತಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ದೈಪಲದ ಈ ಪುಟ್ಟ ಪೋರಿ ಮಾತ್ರ ತನ್ನ ಮಧುರ ಕಂಠದಿಂದ ಭಜನಾ ಗೀತೆಗಳನ್ನು ಹಾಡಿ, ಸ್ಪಷ್ಟ ಉಚ್ಚಾರಣೆಯಲ್ಲಿ ಮಂತ್ರಗಳನ್ನು ಪಠಿಸಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದ್ದಾಳೆ. ಈಕೆಯ ಅಸಾಧಾರಣ ಪ್ರತಿಭೆ ಈಗ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ.
ಕೇವಲ ಎರಡು ವರ್ಷ ಒಂಭತ್ತು ತಿಂಗಳ ಹರೆಯದಲ್ಲೇ ಈ ಪುಟಾಣಿ ಪ್ರತಿಭೆಯು ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ (India Book of Records) ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡು ‘IBR Achiever’ ಗೌರವಕ್ಕೆ ಪಾತ್ರಳಾಗಿದ್ದಾಳೆ. ನಾಲ್ಕು ಸಂಸ್ಕೃತ ಮಂತ್ರಗಳನ್ನು ಅತ್ಯಂತ ಶುದ್ಧವಾಗಿ ಪಠಿಸಿ, ಕನ್ನಡ ಮತ್ತು ತುಳು ಭಾಷೆಗಳಲ್ಲಿ ಒಟ್ಟು ಐದು ಭಜನಾ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಕೌಶಲ ಮೆರೆಯುವ ಮೂಲಕ ಈ ಸಾಧನೆ ಮಾಡಿದ್ದಾಳೆ. ಯಾದವ್ ಮತ್ತು ವಿಜಯಲಕ್ಷ್ಮಿ ದಂಪತಿಯ ಮುದ್ದಿನ ಮಗಳಾದ ಪ್ರದ್ಯಾ ವೈ ಕುಲಾಲ್, ತನ್ನ ಎಳೆವೆಯಲ್ಲೇ ಈ ಅಪರೂಪದ ಸಾಧನೆ ಮಾಡುವ ಮೂಲಕ ಇಡೀ ಕರಾವಳಿಗೆ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿದ್ದಾಳೆ. ಈಕೆ ಎಸ್.ವಿ.ಎಸ್. ನರ್ಸರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ . ಪುಟ್ಟ ಕಂದಮ್ಮನ ಈ ಅದ್ಭುತ ಸಾಧನೆಗೆ ಕುಟುಂಬದವರು, ಶಿಕ್ಷಕರು ಹಾಗೂ ಊರಿನ ಹಿತೈಷಿಗಳು ಹರ್ಷ ವ್ಯಕ್ತಪಡಿಸಿ, ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮುಂದುವರಿದು ಈ ಪ್ರತಿಭೆ ಮತ್ತಷ್ಟು ಎತ್ತರಕ್ಕೆ ಬೆಳೆದು ನಾಡಿಗೆ ಕೀರ್ತಿ ತರಲಿ ಎಂದು ಹಾರೈಸಿದ್ದಾರೆ.

ಭಜನೆ, ಧಾರ್ಮಿಕ ಪರಿಸರ ಪ್ರೇರಣೆ:
ಈ ಕುರಿತು ಮಾತನಾಡಿದ ಪ್ರಾಧ್ಯಾಳ ತಾಯಿ ವಿಜಯಲಕ್ಷ್ಮೀ ತಮ್ಮ ಮಗಳ ಅಸಾಧಾರಣ ಪ್ರತಿಭೆಯ ಕುರಿತು ವಿವರಿಸಿ, “ನಮ್ಮ ಮನೆಯಲ್ಲಿ ಪ್ರತಿದಿನ ಶ್ಲೋಕ ಪಠಣ ಹಾಗೂ ಶುಕ್ರವಾರದಂದು ಭಜನೆ ಮಾಡುತ್ತೇವೆ. ಪ್ರಾಧ್ಯಾಳ ಅಕ್ಕ ಸಾನಿಧ್ಯ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ನಿತ್ಯವೂ ಶ್ಲೋಕಗಳನ್ನು ಹೇಳುವುದನ್ನು ಈಕೆ ಗಮನಿಸುತ್ತಿದ್ದಳು. ಜತೆಗೆ, ದೈಪಲದ ಸ್ಥಳೀಯ ಶ್ರೀರಾಮ ಭಜನಾ ಮಂದಿರದಲ್ಲಿ ಬುಧವಾರ ನಡೆಯುವ ಭಜನೆಗಳಿಗೆ ಮಗಳನ್ನು ಕರೆದುಕೊಂಡು ಹೋಗುತ್ತಿದ್ದೆವು. ಕೇವಲ ಒಂದೂವರೆ ವರ್ಷದ ಪ್ರಾಯದಲ್ಲೇ ಅವಳು ತನ್ನಷ್ಟಕ್ಕೇ ತಾನೇ ರಾಗಬದ್ಧವಾಗಿ ಭಜನೆಗಳನ್ನು ಗುನುಗಲು ಆರಂಭಿಸಿದಳು. ಅವಳ ಈ ಅಪೂರ್ವ ನೆನಪಿನ ಶಕ್ತಿಯನ್ನು ಗುರುತಿಸಿದ ಕುಟುಂಬಸ್ಥರು ಹಾಗೂ ಹಿತೈಷಿಗಳು ಪ್ರೋತ್ಸಾಹಿಸಿದ್ದರಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ಅರ್ಜಿ ಸಲ್ಲಿಸಿದೆವು” ಎಂದು ಹೇಳಿದ್ದಾರೆ.
ಪ್ರತಿಭೆಗೆ ಸಂದ ಗೌರವ:
ಕೇವಲ 2 ವರ್ಷ 9 ತಿಂಗಳ ವಯಸ್ಸಿನಲ್ಲಿಯೇ (ಜನನ: 11 ನವೆಂಬರ್ 2023), 5 ಸಂಸ್ಕೃತ ಶ್ಲೋಕಗಳನ್ನು ಈಕೆ ಪಠಿಸಿ ಗಮನ ಸೆಳೆದಿದ್ದಾಳೆ. ಗಣಪತಿ, ಶ್ರೀರಾಮ, ಭದ್ರಕಾಳಿ ಹಾಗೂ ಶಾರದಾ ದೇವಿಯ ಸ್ತುತಿ ಶ್ಲೋಕಗಳನ್ನು ಸುಲಲಿತವಾಗಿ ಪಠಿಸುತ್ತಾಳೆ. ಕನ್ನಡ ಹಾಗೂ ತುಳು ಭಾಷೆಯ ಒಟ್ಟು 4 ಭಕ್ತಿಗೀತೆಗಳನ್ನು ಸ್ಪಷ್ಟವಾಗಿ ಗಾಯನ ಮಾಡುತ್ತಾಳೆ. ಈ ಅಸಾಧಾರಣ ಸಾಧನೆಯನ್ನು ಪರಿಶೀಲಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯು ಆಕೆಯನ್ನು ಅಧಿಕೃತವಾಗಿ ಐಬಿಆರ್ ಅಛೀವರ್ ಎಂದು ಘೋಷಿಸಿ ಪ್ರಮಾಣಪತ್ರ ಹಾಗೂ ಪದಕ ನೀಡಿ ಗೌರವಿಸಿದೆ. ಪ್ರಸ್ತುತ ಬಾಲಕಿ ಎಸ್.ವಿ.ಎಸ್ ವಿದ್ಯಾಗಿರಿ ಶಾಲೆಯಲ್ಲಿ ನರ್ಸರಿ ಕಲಿಯುತ್ತಿದ್ದಾಳೆ.
“ಮಗಳು ಅಷ್ಟು ಚಿಕ್ಕ ವಯಸ್ಸಿಗೆ ಭಜನೆ, ಶ್ಲೋಕಗಳನ್ನು ಕೇಳಿದ ತಕ್ಷಣವೇ ಕಂಠಪಾಠ ಮಾಡಿಕೊಳ್ಳುತ್ತಿದ್ದಳು. ಮನೆಯಲ್ಲಿ ಅಕ್ಕ ಶ್ಲೋಕ ಹೇಳುವಾಗ ಹಾಗೂ ದೇವಸ್ಥಾನದ ಭಜನೆಗಳನ್ನು ಕೇಳಿ ತಾನಾಗಿಯೇ ಹಾಡಲು ಕಲಿತಳು. ಅವಳಲ್ಲಿದ್ದ ಈ ವಿಶೇಷ ನೆನಪಿನ ಶಕ್ತಿಯನ್ನು ನೋಡಿ ಎಲ್ಲರೂ ಪ್ರೋತ್ಸಾಹಿಸಿದರು. ನಮ್ಮ ಮಗಳು ಇಷ್ಟು ಚಿಕ್ಕ ಪ್ರಾಯದಲ್ಲೇ ನಮ್ಮ ಊರಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವುದು ನಮಗೆ ಅತೀವ ಸಂತಸ ಮತ್ತು ಹೆಮ್ಮೆ ತಂದಿದೆ” ಎಂದು ಪ್ರಾಧ್ಯಾಳ ತಾಯಿ ವಿಜಯಲಕ್ಷ್ಮೀ ಸಂತಸ ವ್ಯಕ್ತಪಡಿಸಿದ್ದಾರೆ.
“ಮನೆಯ ಸಾಂಪ್ರದಾಯಿಕ ಹಾಗೂ ಭಕ್ತಿಪೂರ್ವಕ ವಾತಾವರಣವೇ ಮಗುವಿನ ಈ ಬೆಳವಣಿಗೆಗೆ ಮುಖ್ಯ ಕಾರಣ. ಯಾವುದೇ ಒತ್ತಡವಿಲ್ಲದೆ ಆಕೆಯ ಸ್ವಂತ ಆಸಕ್ತಿಯಿಂದಲೇ ಇಷ್ಟೆಲ್ಲಾ ಶ್ಲೋಕ, ಹಾಡುಗಳನ್ನು ಕಲಿತಿದ್ದಾಳೆ. ಆಕೆಯ ಈ ಸಾಧನೆಗೆ ರಾಷ್ಟ್ರಮಟ್ಟದ ಮನ್ನಣೆ ದೊರೆತಿರುವುದು ನಮ್ಮ ಕುಟುಂಬಕ್ಕೆ ಧನ್ಯತಾಭಾವ ಮೂಡಿಸಿದೆ” ಎಂದು ಆಕೆಯ ತಂದೆ ಯಾದವ ಕುಲಾಲ್ ತಿಳಿಸಿದರು.
ಪುಟ್ಟ ಪ್ರಾಯದಲ್ಲೇ ಭಕ್ತಿ ಮತ್ತು ಆಧ್ಯಾತ್ಮಿಕ ಸಂಸ್ಕಾರವನ್ನು ರೂಢಿಸಿಕೊಂಡು, ತೊದಲು ನುಡಿಯಲ್ಲೇ ದೇವರ ಸ್ತುತಿಗಳನ್ನು ಪಠಿಸುತ್ತಿರುವ ಈ ಬಾಲ ಪ್ರತಿಭೆ ಪ್ರಾಧ್ಯಾಳಿಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.
