“ಕಾಲಿಗೆ ಸೆಗಣಿ ಮೆತ್ತಿದ್ರೆ ಕಾಲು ತೊಳಕ್ಕೊಂಡು ಒಳಗೆ ಬರಬಹುದು. ಆದರೆ ಸಂಸಾರಕ್ಕೆ ಸೆಗಣಿ ಮೆತ್ತಿದ್ರೆ ತೊಳೆಯೋಕೆ ಆಗಲ್ಲ: ಮೆತ್ತದಂತೆ ಮೊದಲೇ ಜಾಗ್ರತೆ ವಹಿಸಬೇಕಷ್ಟೇ”
ಬೇಸಿಗೆಯ ಮಟ-ಮಟ ಮಧ್ಯಾಹ್ನ. ಮೈಸುಡುವ ಬಿಸಿಲಿನ ಧಗೆ. ಗಂಜಿತೆಳಿಯನ್ನು ಬಟ್ಟಲಿಗೆ ಎರೆದುಕೊಂಡು ಮಾವಿನ ಹಣ್ಣಿನ ಗೊಜ್ಜನ್ನು ನೆಚ್ಚಿಕೊಂಡು ಮಧ್ಯಾಹ್ನದ ಊಟದ ಶಾಸ್ತ್ರವನ್ನು ಮುಗಿಸಿದ ಗಿರಿಜಮ್ಮ ಮಂಚಕ್ಕೆ ಮೈಯೊಡ್ಡಿ ನಿಮಿಷಗಳೂ ಕಳೆದಿರಲಿಲ್ಲ. ಮನೆ ಹೊರಗಡೇ ಆಟೋ ರಿಕ್ಷಾವೊಂದು ಬರ್ರ್.. ಎಂದು ಸಾಗಿ ಬಂದು ನಿಂತ ಶಬ್ಧ ಕೇಳಿಸಿತು ‘ಈ ರಣ-ರಣ ಬಿಸಿಲಲ್ಲಿ ಯಾರಪ್ಪ ಬಂದಿರಬಹುದು’ ಎಂಬ ಕುತೂಹಲದಿಂದ ಮಲಗಿದ್ದಲ್ಲಿಂದಲೇ ಕಿಟಕಿಯ ಕಿಂಡಿಗಳಲ್ಲಿ ಇಣುಕಿ ನೋಡಿದರು ಗಿರಿಜಮ್ಮ. ಕೈಯಲ್ಲಿ ಮಣಭಾರದ ಲಗೇಜನ್ನು ಹಿಡಿದು ತಮ್ಮ ಮಗಳು ಹರಿಣಿ ರಿಕ್ಷಾದಿಂದ ಮೆಲ್ಲಗೆ ಇಳಿದು ಅಂಗಳ ದಾಟಿ ಬರುತ್ತಿರುವುದು ಗೋಚರಿಸಿತು. ‘ಅರೇ ಹರಿಣಿ!? ತಾನು ಗಂಡನ ಮನೆಯಿಂದ ತವರಿಗೆ ಬರುವ ಯಾವ ಮನ್ಸೂಚನೆಯನ್ನೂ ನೀಡದೇ ಅಚಾನಕ್ಕಾಗಿ ಬಂದಳಲ್ಲ..ಏಕಿರಬಹುದು?’ ಎಂಬ ಪ್ರಶ್ನಾರ್ಥಕ ಭಾವ ಅವರ ಮುಖದಲ್ಲಿ ಆ ಕ್ಷಣದಲ್ಲಿ ಮೂಡಿ ಮರೆಯಾಯ್ತು. ಆದರೆ ಅದನ್ನು ಮುಖದಲ್ಲಿ ಪ್ರಕಟಿಸದೇ ಬಾಗಿಲು ತೆರೆದು ನಗುಮೊಗದಿಂದಲೇ ತವರಿಗೆ ಬಂದ ಮಗಳನ್ನು ಸ್ವಾಗತಿಸಿದರು ಗಿರಿಜಮ್ಮ.
ಹರಿಣಿಗೆ ಮದುವೆಯಾಗಿ ಮೂರು ತಿಂಗಳಾಗುತ್ತಿತ್ತಷ್ಟೇ. ಅವಳೇ ಇಷ್ಟ ಪಟ್ಟು ಪ್ರೀತಿಸಿದ ಕಾಲೇಜ್ ಮೇಟ್ಸ್ ನಿತೀಶನೊಂದಿಗೆ ಅವಳ ಮದುವೆಯನ್ನು ಅದ್ಧೂರಿಯಿಂದ ಮಾಡಿ ಮುಗಿಸಿದ್ದರು. ಹುಡುಗ ಸದ್ಗುಣವಂತನೇ. ಕೃಷಿ-ವಿಜ್ಞಾನದಲ್ಲಿ ಎಮ್ ಎಸ್ಸಿ ಪದವಿ ಗಿಟ್ಟಿಸಿಕೊಂಡಿದ್ದ ನಿತೀಶ ಹಳ್ಳಿಯ ತನ್ನ ಪಿತ್ರಾರ್ಜಿತ ಕೃಷಿ ಭೂಮಿಯಲ್ಲಿ ವೈಜ್ಞಾನಿಕ ಪದ್ಧತಿಯಿಂದ ಕೃಷಿ ಮಾಡಿ ಒಳ್ಳೆಯ ಇಳುವರಿ ಪಡೆದು ಮಾದರಿ ಕೃಷಿಕ ಎನಿಸಿದ್ದ. ‘ಯಶಸ್ವಿ ಕೃಷಿ ಪಂಡಿತ’ ಎಂಬ ಬಿರುದು ಸಮ್ಮಾನವನ್ನು ಎಲ್ಲೆಡೆಯಿಂದ ಪಡೆದಿದ್ದ. ತಾನು ನಿತೀಶನನ್ನು ಪ್ರೀತಿಸುತ್ತಿದ್ದೇನೆ, ಅವನೊಂದಿಗೆ ಮದುವೆ ಮಾಡಿಸಿ ಎಂದು ಮಗಳು ಹಠ ಹಿಡಿದಾಗ ಯಾವೊಂದು ವಿರೋಧದ ಮಾತುಗಳನ್ನಾಡದೇ ಸಮ್ಮತಿಸಿ ಗ್ರ್ಯಾಂಡಾಗಿಯೇ ಮಗಳ ಮದುವೆಯನ್ನು ಮಾಡಿ ಹರಸಿ ಗಂಡನ ಮನೆಗೆ ಕಳುಹಿಸಿದ್ದರು ಗಿರಿಜಮ್ಮ ದಂಪತಿಗಳು.
‘ಗಂಡನ ಮನೆಯಲ್ಲಿ ಅತ್ತೆ-ಮಾವ ಎಲ್ಲ ಆರಾಮನಾ? ಒಬ್ಬಳೇ ಬಂದಿದ್ದಿಯಲ್ಲ..ಅಳಿರಾಯರು ಬರಲಿಲ್ವೇ?’ ಬಿಸಿಲಿನಲ್ಲಿ ದಣಿದು ಬಂದು ಸೊಪಾದಲ್ಲಿ ದೊಪ್ಪೆಂದು ಕುಳಿತು ಸುಧಾರಿಸಿಕೊಳ್ಳುತ್ತಿದ್ದ ಮಗಳಿಗೆ ತಣ್ಣಗಿನ ಮಜ್ಜಿಗೆ ಕೊಡುತ್ತಾ ನುಡಿದರು ಗಿರಿಜಮ್ಮ.
‘ಅವರಿಗೇನು ಧಾಡಿ.. ಆರಾಮಿದ್ದಾರೆ. ಇವರಿಗೆ ಬರೋಕೆ ಪುರುಸೊತ್ತಿಲ್ವಂತೆ..ಬ್ಯುಸಿ. ಅದ್ಕೆ ನಾನೊಬ್ಬಳೆ ಬಂದೇ.. ಈ ರಣ ಹೊಡೆವ ಬಿಸಿಲಿನಲ್ಲಿ ಬಂದು ಸಾಕೋ..ಸಾಕಾಯ್ತು ’ ಮಗಳ ಉತ್ತರದಲ್ಲಿ ಯಾವುದೋ ಸಣ್ಣ ಸಿಡುಕು, ಅಸಮಾಧಾನದ ಎಳೆ ಇಣುಕುತ್ತಿರುವುದು ಗಿರಿಜಮ್ಮನ ಗಮನಕ್ಕೆ ಬಂತು. ಹಸಿದು ಬಂದ ಮಗಳಲ್ಲಿ ಕೆದಕಿ ಪ್ರಶ್ನೆ ಕೇಳದೆ ‘ಸರಿ..ನಿಂಗೆ ಇಷ್ಟವಾದ ಮಾವಿನ ಹಣ್ಣಿನ ಗೊಜ್ಜು ರೆಡಿ ಇದೆ. ಗಂಜಿ ಇದೆ. ಬಾಗಿಸಿ ಅನ್ನಮಾಡಿ ಕೊಡ್ತೇನೆ. ಬಾ..ಉಣ್ಣುವಿಯಂತೆ’ ಮಗಳನ್ನು ಅಹ್ವಾನಿಸಿದರು. ಹಸಿದು ದಣಿದಿದ್ದ ಹರಿಣಿ ಮರು ಮಾತನಾಡದೇ ಬಚ್ಚಲಿಗೆ ಹೋಗಿ ಪ್ರೆಷಾಗಿ ಬಂದು ಅಮ್ಮನ ಅಡುಗೆಯ ಸವಿಯನ್ನು ಮೆದ್ದು ಉಂಡೆದ್ದಳು.
‘ಏನಾಯ್ತು ಮಗಳೇ.. ಒಂಥರಾ ಇದ್ದೀಯಲ್ಲ.. ಮುಖದಲ್ಲಿ ಯಾವುದೋ ಬೇಸರಿಕೆಯ ಭಾವ ಕಾಣ್ತಾ ಉಂಟು? ತುಂಬಾ ಇಳಿದು ಬೇರೆ ಹೋಗಿದ್ದೀಯಾ? ತಾಯಿ ಹತ್ರ ಎನು ಮುಚ್ಚಿಡುವುದು? ಎನಾಯ್ತು ಹೇಳು’ ಉಂಡು ಆರಾಮಾಗಿ ಸೋಫಾದಲ್ಲಿ ಕುಳಿತಿದ್ದ ಮಗಳ ಸಮೀಪ ಬಂದು ತಲೆ ನೇವರಿಸಿ ಕೇಳಿದರು ಗಿರಿಜಮ್ಮ.
ಮಾತೃತ್ವದ ಆ ಪಿಯೂಷ ಧಾರೆಗೆ ಕರಿಗಿದಳು ಹರಿಣಿ. ಅಮ್ಮನ ಮಡಿಲೊಳಗೆ ತಲೆಯಾನಿಸಿ ಬಿಕ್ಕಿ ಬಿಕ್ಕಿ ಅತ್ತಳು.
‘ಅಮ್ಮಾ..ನಂಗೆ ಗಂಡನ ಮನೇಲಿ ಬದುಕ್ಲಿಕ್ಕೆ ಆಗ್ತಾ ಇಲ್ಲ. ಹಾಳು ಕೊಂಪೆಗೆ ಹೋಗಿ ಬಿದ್ದು ಬಿಟ್ಟೇ ಅನ್ನಿಸ್ತಾ ಉಂಟು’
‘ಅಯ್ಯಯ್ಯೋ.. ಅಂತಹದ್ದು ಏನಾಯ್ತೇ..? ಅತ್ತೆ ಮಾವ ಜೋರಾ? ಗಂಡ ಬಯ್ಯುತ್ತಾನಾ? ಕೆಟ್ಟ ಚಟ ಉಂಟೇ? ಏನಾಯ್ತು?’ ಕಕ್ಕುಲತೆಯಿಂದ ಮಗಳ ತಲೆ ನೇವರಿಸಿ ಕೇಳಿದರು ಗಿರಿಜಮ್ಮ.
‘ಅದು ಯಾವುದು ಅಲ್ಲಮ್ಮಾ.. ಅತ್ತೆ ಮಾವ ಜೋರೆನಿಲ್ಲ..ಇವರು ಪಾಪದವರೇ..ಆದರೆ? ತೊದಲಿದಳು ಹರಿಣಿ.
ಆದರೆ..ಆದರೆ ಏನು? ಹುಬ್ಬುಗಂಟಿಕ್ಕಿ ಪ್ರಶ್ನಿಸಿದರು ಗಿರಿಜಮ್ಮ.
‘ಅಮ್ಮಾ.. ಆದರೆ ಅದು ಹಾಳು ಹಳ್ಳಿ ಬದುಕು.. ಈ ಸಿಟಿಯಲ್ಲಿ ಬೆಳೆದ ನಂಗೆ ಚೂರು ಅಡ್ಜೆಸ್ಟ್ ಆಗ್ತಾ ಇಲ್ಲ. ಎಷ್ಟು ಮಾಡಿದರೂ ಮುಗಿಯದ ಕೃಷಿ, ಗದ್ದೆ ತೋಟದ ಕೆಲಸಗಳು, ದನ-ಕರು ಎಮ್ಮೆಯ ಚಾಕರಿಗಳು.. ಸಿಟಿಗೆ ಬರಬೇಕಾದರೆ ಹದಿನೈದು ಕಿ.ಮೀ ಬರಬೇಕು. ಒಂದು ಸಿನಿಮಾ ಥಿಯೇಟರ್ ಆಗಲಿ, ಶಾಪಿಂಗ್ ಮಾಲ್ ಆಗಲಿ ಯಾವುದೂ ಅಲ್ಲಿಲ್ಲ. ನಂಗೆ ಆ ಕಾಡ ಬಂಗಲೇಲಿ ಒಬ್ಬಳೇ ಕುಳಿತು ಮರ್ಲು ಹಿಡಿದ ಹಾಗಾಗುತ್ತೆ.. ವಾರಕ್ಕೊಮ್ಮೆಯೂ ಶಾಪಿಂಗ್ ಮಾಡುವುದಕ್ಕೆ, ಔಟಿಂಗ್ ಹೋಗುವುದಕ್ಕೆ ಇವರಿಗೆ ಪುರುಸೊತ್ತಿರಲ್ಲ. ಯಾವಾಗಲೂ ತೋಟ, ಗದ್ದೆ, ಯಂತ್ರ ಅಂತ ತಿರುಗ್ತಾ ಇರ್ತಾರೆ…ಬೋರು ಅಂದ್ರೆ ಯಮಾ ಬೋರು..ಈ ಮೂರು ತಿಂಗಳಲ್ಲಿ ಅಂಡಮಾನಿನ ಜೈಲಿನಲ್ಲಿ ಇಟ್ಟ ಹಾಗೇ ಫೀಲ್ ಆಗಿದೆ.. ಇನ್ನೂ ಅಲ್ಲಿ ಇರೋಕೇ ಆಗಲ್ಲ ಅಂತ ಇಂದು ಬೆಳಗ್ಗೆ ಇವರತ್ರ ಜಗಳ ಮಾಡ್ಕೊಂಡು ಬಂದೆ. ನಾನಿನ್ನು ಅಲ್ಲಿಗೆ ಹೋಗಲ್ಲ..ಹೆಂಡತಿ ಬೇಕಾದ್ರೆ ಅವರೇ ಇಲ್ಲಿಗೆ ಬರ್ಲಿ..ಹೇಗೂ ಕೈಯಲ್ಲಿ ಎಮ್. ಎಸ್ಸಿ ಅಗ್ರಿಕಲ್ಚರ್ ಪದವಿ ಉಂಟು..ಟ್ರೈ ಮಾಡಿದರೇ ಇಲ್ಲೆ ಎಲ್ಲಾದ್ರೂ ಆರಾಮದ ಕೆಲಸ ಸಿಗುತ್ತೆ. ಆ ಹಾಳು ಹಳ್ಳಿ ಕೊಂಪೆಯಲ್ಲಿ ನಂಗೆ ಬದುಕೋಕೆ ಆಗಲ್ಲ..ಅವರ ಮನೆಯ ತಟ್ಟೆ ಲೋಟ ತೊಳ್ಕೊಂಡು ಬಿಟ್ಟಿ ಚಾಕರಿ ಮಾಡೋಕೆ ನನ್ನ ನೀವು ಮದುವೆ ಮಾಡಿಕೊಟ್ಟಿದ್ದಾ?’ ಹರಿಣಿ ಬಿಕ್ಕುತ್ತಾ ಹೇಳಿದಳು..
ಗಿರಿಜಮ್ಮ ಕುಳಿತಲ್ಲೇ ಮೌನವಾದರು.. ನಿಮಿಷಗಳ ನಂತರ ದೀರ್ಘ ಉಸಿರನ್ನು ಹೊರಚೆಲ್ಲಿದರು. ಮೆಲ್ಲಗೆ ‘ಅತ್ತೆ-ಮಾವ ಹೇಗೆ? ಅಳಿಯ ಹೇಗೆ? ಹೊಂದಿಕೊಂಡು ಹೋಗ್ತಾರಾ?’ ಮೆಲ್ಲಗೆ ಪ್ರಶ್ನೆ ಎಸೆದರು.
‘ಹೊಂದಿಕೊಳ್ಳುವುದೇನು ಮಣ್ಣು..ಅತ್ತೆ-ಮಾವ ಇಬ್ರೂ ಕೆಲಸದ ಮುದ್ದೆಗಳು. ಒಂದ್ಹೊತ್ತು ನೆಮ್ಮದಿಯಿಂದ ಊಟ ಮಾಡಲ್ಲ ಅಂತೀನಿ..ಯಾವಾಗಲೂ ತೋಟ, ಗದ್ದೆ, ಬಾಳೆ, ಅಡಿಕೆ ಅಂತಾರೆ.. ಇವರಂತೂ ಅವರಿಬ್ಬರ ತದ್ರೂಪು.. ಹೊಸದಾಗಿ ಮದುವೆಯಾದ ಹೆಂಡತಿ ಮನೆಯಲ್ಲಿ ಒಬ್ಬಳೆ ಇರ್ತಾಳೆ .ಅವಳ ಬೇಕು ಬೇಡ ವಿಚಾರಿಸ್ಬೇಕು ಅನ್ನೋ ಚೂರು ಕಾಳಜಿ ಇವರಿಗೆ ಇಲ್ಲ. ಇವರ ಕೆಲಸಕ್ಕೆ ಹೊತ್ತು-ಗುತ್ತೂ ಇಲ್ಲಮ್ಮ. ಸಂಡೇ ಅಂತಾನು ಇರಲ್ಲ. ಬೆಳಗ್ಗೆಯಿಂದ ಸಂಜೆ ತನಕ ಆ ದೊಡ್ಡ ಬಂಗಲೆಯಲಿ ನಾ ಒಬ್ಬಳೇ ಭೂತದ ತರಹ ಇರಬೇಕು. ಹೊರಗೆ ಬಂದ್ರೆ ಅದೇ ದನ, ಕರು, ಸಗಣಿ, ಗಂಜಳ, ತೋಟ, ಕೆಲಸಗಾರರು ಬಿಟ್ಟರೇ ಇನ್ಯಾರು ಇಲ್ಲ. ಪ್ರೆಂಡ್ಸ್ ಜೊತೆ ಹರಟೆ ಹೊಡೆಯುವ ಅಂದ್ರೆ ಮೊಬೈಲ್ ನೆಟ್ ವರ್ಕೂ ಇಲ್ಲ. ನಂಗಂತೂ ಒಬ್ಬಳೇ ಇದ್ದೂ ಇದ್ದೂ ಈ ಮೂರು ತಿಂಗಳಲ್ಲಿ ಮಂಡೆಯೆಲ್ಲ ಕೆಟ್ಟು ಹೋಗಿದೆ. ನಾನಿನ್ನು ಅಲ್ಲಿಗೆ ಹೋಗುವುದೇ ಇಲ್ಲ ಅಂತ ತೀರ್ಮಾನ ಮಾಡಿ ಲಗೇಜು ತಕ್ಕೊಂಡೇ ಬಂದಿದ್ದೇನೆ’ ದೃಢ ನಿಶ್ಚಯ ಮಾಡಿ ಬಂದವಳ ಹಾಗೇ ಗಟ್ಟಿ ದನಿಯಲ್ಲಿ ಹೇಳಿದಳು ಹರಿಣಿ.
ಗಿರಿಜಮ್ಮ ಏನೊಂದು ಪ್ರತಿಕ್ರಿಯಿಸದೇ ಮೌನಕ್ಕೆ ಶರಣಾದರು.
ಕಳೆದ ಮೂರು ತಿಂಗಳಲ್ಲಿ ನಿಷ್ಕ್ರೀಯವಾಗಿದ್ದ ತನ್ನ ಮೊಬೈಲಿಗೆ ಜೀವಂತಿಕೆ ಕೊಟ್ಟ ಹರಿಣಿ ವಾಟ್ಸಾಪು, ಪೇಸ್ಬುಕ್ಕಿನಲ್ಲಿ ಕಳೆದು ಹೋಗತೊಡಗಿದಳು.
……………………………………………………………………………………………………………………..
ಪಡುವಣದ ಬಾನು ನೀಳ ದಿಗಂತದಲ್ಲಿ ಅಸ್ತಾಂಗತನಾದ. ಆಗಸ ಕೆಂಪಡರಿತು. ಬೈಹೊತ್ತಾಯಿತು.!
ಪೋನ್ ಸ್ನೇಹಿತರಿಗೆಲ್ಲ ಹಾಯ್..ಬಾಯ್ ಸಂದೇಶ ಕಳುಹಿಸಿ ಗಡದ್ದಾಗಿ ನಿದ್ದೆ ಹೋಗಿದ್ದ ಹರಿಣಿ ರೂಮಿನಿಂದ ಮೆಲ್ಲಗೆ ಹೊರ ಬಂದು ಫ್ರೆಶ್ಶಾದಳು. ಅಮ್ಮ ಬಿಸಿ ಬಿಸಿಯಾಗಿ ಮಾಡಿಟ್ಟಿದ್ದ ಕಾಫಿ ಕುಡಿದು ತಿಂಡಿ ತಿಂದು ಹೊರಬಂದಳು.. ಗಿರಿಜಮ್ಮ ಹೊರಾಂಗಣದಲ್ಲಿ ಕುಳಿತು ಮಲ್ಲಿಗೆಯ ಮಾಲೆ ಹೆಣೆಯುತ್ತಿದ್ದರು.
‘ಅಮ್ಮಾ ಗಂಟೆ ಆರಾಯ್ತು.. ಪಪ್ಪಾ ಎಲ್ಲಿ? ಡೈಲಿ ಇಷ್ಟೊತ್ತಿಗೆ ಕೆಲಸ ಬಿಟ್ಟು ಬರ್ತಾ ಇದ್ರಲ್ಲ.. ಏನಂತೆ ಲೇಟು?’ ಕೇಳಿದಳು ಹರಿಣಿ.
‘ಅವರೀಗ ಮನೆಗೆ ಬರುವಾಗ ಪ್ರತಿ ದಿನ ರಾತ್ರಿ ಹತ್ತರ ಮೇಲಾಗುತ್ತೆ ಕಣಮ್ಮ’ ಗಿರಿಜಮ್ಮನ ಉತ್ತರ.
ಅರೇ.. ಯಾಕೆ ಅಷ್ಟು ಲೇಟು?
‘ಅವರೀಗ ಆಫೀಸು ಕೆಲಸ ಮುಗಿದ ಮೇಲೆ ಅದೇನೋ ಹೆಚ್ಚುವರಿ ಕೆಲಸಕ್ಕೆ ಸೇರ್ಕೊಂಡಿದ್ದಾರಂತೆ ಕಣಮ್ಮ. ಅದ್ಯಾವುದೊ ಕಿರಾಣಿ ಅಂಗಡಿಯಲ್ಲಿ ಲೆಕ್ಕ ಬರೆಯುದಂತೆ. ತಿಂಗಳಿಗೆ ನಾಲ್ಕು ಸಾವಿರ ಕೊಡ್ತಾರಂತೆ. ಅದ್ಕೆ?’
‘ಈ ಇಳಿ ವಯಸ್ಸಿನಲ್ಲಿ ಅವರಿಗ್ಯಾಕಮ್ಮ ಕಿರಾಣಿ ಅಂಗಡಿಯಲ್ಲಿ ಲೆಕ್ಕ ಬರೆಯೋ ಕೆಲಸ? ಹರಿಣಿಯ ಸಿಡುಕಿನ ಪ್ರಶ್ನೆ.
‘ಯಾಕಂದ್ರೆ ಮಗಳ ಮದುವೆಗೆ ಮಾಡಿರೋ ಸಾಲ ಉಂಟಲ್ಲ..ತೀರಿಸ್ಬೇಕಲ್ಲಮ್ಮ..ಅದ್ಕೆ’ ಬಿಲ್ಲಿನಿಂದ ಬಿಟ್ಟ ಬಾಣದ ಹಾಗೇ ಹರಿತವಾಗಿ ತಟ್ಟನೆ ಉತ್ತರಿದರು ಗಿರಿಜಮ್ಮ.
ಹರಿಣಿ ಒಮ್ಮಗೆ ಪೆಚ್ಚಾದಳು.. ಏನು ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ಅಮ್ಮನ ಮುಖವನ್ನು ಮೆಲ್ಲಗೆ ನೋಡಿದಳು.
‘ಹೌದು ಹರಿಣಿ.. ಅವರ ಇಷ್ಟು ದಿನದ ಸಂಪಾದನೆ ಮನೆ ಕಟ್ಲಿಕ್ಕೆ, ನಿನ್ನ ಓದಿಗೆ ಖರ್ಚಾಯ್ತಲ್ಲಮ್ಮ.. ಪಿ.ಎಫ್ ಹಣ ಅದು ಇದೂ ಅಂತ ಎಲ್ಲಾ ಸೇವಿಂಗ್ಸ್ ತೆಗೆದು ಇರೋ ಒಬ್ಬಳೇ ಮಗಳು ನಿನ್ನ ಮದುವೆಯನ್ನು ಜಬರ್ದಸ್ತಾಗಿ ಮಾಡಿ ಮುಗಿಸಿದ್ರು.. ಸೇವಿಂಗ್ಸ್ ಸಾಕಾಗದೇ ಸುಮಾರು ಸಾಲನೂ ಆಯ್ತಂತೆ..ತೀರೀಸ್ಬೇಕಲ್ಲ.. ಅದಕ್ಕೆ ದೇಹ ಕೇಳದಿದ್ರೂ ಆಫೀಸು ಕೆಲಸ ಮುಗಿದ ಮೇಲೆ ಕಿರಾಣಿ ಅಂಗಡಿಯಲ್ಲಿ ಲೆಕ್ಕ ಬರೆಯೋಕೆ ಹೋಗ್ತಾರೆ..ಅದಕ್ಕೆ ಬರುವುದು ಲೇಟಾಗುತ್ತೆ’ ಗಿರಿಜಮ್ಮ ಮೆಲ್ಲಗೆ ಮಗಳಿಗೆ ವಿವರಿಸಿದರು.
ಹರಿಣಿ ಬೆಪ್ಪಾದಳು. ಮೆಲ್ಲಗೇ ಸುಧಾರಿಸಿಕೊಂಡು ತಮ್ಮ ಸುದರ್ಶನನ ಬಗ್ಗೆ ಪ್ರಶ್ನಿಸಿದಳು.
‘ಅಲ್ಲಾ ಈ ಸುಧೀ ಎಲ್ಲಿಗೆ ಹೋದ. ಇಷ್ಟೋತ್ತಿಗೆ ಕಾಲೇಜು ಬಿಟ್ಟು ಬರ್ಬೇಕಿತ್ತಲ್ಲ? ಈಗ್ಲೂ ಕಾಲೇಜು ಫ್ರೆಂಡ್ಸ್ ಅಂತ ಊರು ಮೇಲೆ ತಿರುಗ್ತಾ ಇರ್ತಾನಾ?’
‘ಇಲ್ಲ ಹರಿಣಿ..ಅಕ್ಕನಿಗೆ ಮದುವೆಯಾದ ಮೇಲೆ ಅವನಿಗೇ ತುಂಬಾ ಜವಾಬ್ದಾರಿ ಬಂದು ಬಿಟ್ಟಿದೆ. ಅಪ್ಪ ಕಷ್ಟದಲ್ಲಿರುವಾಗ ಕಾಲೇಜು ಫೀಸಿಗೆ, ಪಾಕೆಟ್ ಮನೀಗೆ ಹಣ ಕೇಳುವುದು ಸರಿಯಾಗಲ್ಲ ಅಂತ ಅವನೇ ಈಗ ಪಾರ್ಟ್ ಟೈಮು ಜಾಬಿಗೆ ಸೇರ್ಕೊಂಡಿದ್ದಾನೆ. ಅದೇನೋ ಫೈವ್ ಸ್ಟಾರ್ ಹೊಟೇಲ್ ಅಂತೆ. ಅಲ್ಲಿ ಕೆಲಸ ಮಗಿಸಿ ಮನೆಗೆ ಬರುವಾಗ ರಾತ್ರಿ ಹತ್ತರ ಮೇಲಾಗುತ್ತೆ..’ ಗಿರಿಜಮ್ಮ ಗಂಭೀರವಾಗಿ ಅರುಹಿದರು.
ಯಾಕೋ ಹರಿಣಿ ಕುಳಿತಲ್ಲೆ ಅಧೀರಳಾದಳು.. ಅವಳ ನೇತ್ರದ್ವಯಗಳು ಕಂಬನಿ ಉದುರಿಸಲು ಸಿದ್ಧಗೊಂಡವು. ತಗ್ಗಿಸಿದ ತಲೆಯನ್ನು ಮೆಲ್ಲಗೆ ಮೇಲೆತ್ತುತ್ತಾ ಪ್ರಶ್ನಸಿದಳು. ‘ನನ್ನ ಮದುವೆಯಾದ ಮೇಲೆ ಮನೆಯಲ್ಲಿ ಇಷ್ಟೂ ಕಷ್ಟ ಆಗ್ತಾ ಇದಿಯೇನಮ್ಮಾ.. ನೀನೂ ಅಪ್ಪ ಇಬ್ರೂ ನನ್ನತ್ರ ಒಂದು ದಿನಾನು ಏನೂ ಹೇಳ್ಕೊಂಡಿಲ್ವಲ್ಲ..ಏಕೆ?’
‘ನೀನು ಗಂಡನ ಮನೆಯಲ್ಲಿ ನೆಮ್ಮದಿಯಲ್ಲಿ ಇರ್ಲಿ ಅಂತ’ ರಪ್ಪನೇ ಉತ್ತರಿಸಿದ ಗಿರಿಜಮ್ಮ ಸ್ವಲ್ಪ ಹೊತ್ತು ಮೌನವಾದರು. ಮೆಲ್ಲಗೆ ಮತ್ತೆ ನುಡಿದರು.
‘ನಿನ್ನ ಮದುವೆ ಮಾಡ್ಲಿಕ್ಕೆ ನಿನ್ನ ಅಪ್ಪ ಎಷ್ಟು ಕಷ್ಟ ಪಟ್ಟಿದ್ದಾರೆ ಅಂತ ಗೊತ್ತೇನಮ್ಮ ನಿನಗೆ? ತಾನು ಜೀವನಪೂರ್ತಿ ದುಡಿದು ಸೇವಿಂಗ್ಸ್ ಅಂತ ಕೂಡಿಟ್ಟ ಎಲ್ಲಾ ಹಣ ಸೇರಿಸಿ ನಿಂಗೆ ಏನೊಂದು ಕಡಿಮೆ ಮಾಡದೇ ನೀನೇ ಪ್ರೀತಿಸಿದ ಹುಡುಗನೊಂದಿಗೆ ಗ್ರ್ಯಾಂಡಾಗಿ ಮದುವೆ ಮಾಡ್ಸಿದ್ರಲ್ಲ..ಏಕ್ಹೇಳು? ಇರೋ ಒಬ್ಳೇ ಮಗಳು ನೆಮ್ಮದಿಯಲ್ಲಿ ಇರ್ಲಿ ಅಂತ.. ಆದರೆ ನೀನು ಮದುವೆಯಾಗಿ ಮೂರು ತಿಂಗಳಾಗಿಲ್ಲ.. ಗಂಡನ ಮನೆ ಬಿಟ್ಟು ಮನೆಗೆ ಬಂದು ಕೂರ್ತಿನಿ ಅಂತಿದ್ದಿಯಲ್ಲಾ? ಇದು ಸರೀನಾ? ಈ ಚಂದಕ್ಕೆ ನಿನ್ನ ಮದುವೆ ಮಾಡ್ಸಿದ್ದಾ?’
ತಗ್ಗಿಸಿದ ತಲೆಯನ್ನು ಮೇಲೆತ್ತಲಾಗಲಿಲ್ಲ ಹರಿಣಿಗೆ.. ಗಿರಿಜಮ್ಮ ಗಂಭೀರ ಧ್ವನಿಯಲ್ಲಿ ಮಗಳಿಗೆ ಬುದ್ಧಿ ಹೇಳಿದರು..
‘ನೋಡು ಹರಿಣಿ..ಸಂಸಾರ ಅಂದ್ರೆ ಆಟ ಅಲ್ಲಮ್ಮಾ.. ಹೊಂದಾಣಿಕೆ ಸಂಸಾರಕ್ಕೆ ಅತೀ ಮುಖ್ಯವಾಗಿ ಬೇಕು..ಹಳ್ಳಿ ಕೊಂಪೆ ನಂಗೆ ಅಡ್ಜೆಸ್ಟ್ ಆಗಲ್ಲ.. ದನದ ಸಗಣಿ, ಗಂಜಳ ಕಾಲಿಗೆ ಮೆತ್ತಿಕೊಳ್ಳುತ್ತೆ ಅಂತಿಯಲ್ಲಮ್ಮ, ಟೈಮ್ ಹೋಗಲ್ಲ.. ಬೋರಿಂಗ್.. ಫ್ರೆಂಡ್ಸ್ ಇಲ್ಲ, ಮೊಬೈಲ್ ನೆಟ್ ವರ್ಕ್ ಇರಲ್ಲ..ಅದ್ಕೆ ಗಂಡನ ಮನೆ ಬಿಡ್ತೇ..ಮನೆಗೆ ಬಂದು ಇರ್ತೆ ಅಂತೀಯಲ್ಲ..ನಿನಗೆ ಸಂಸಾರ ಅಂದರೆ ಏನು? ಸಂಸಾರದ ಕಷ್ಟ ಅಂದರೆ ಏನು, ಹೇಗಿರುತ್ತೆ ಅಂತ ಗೊತ್ತಿದೆಯಾ?
‘ಆಚೆ ಮನೆ ಸೀತಮ್ಮ ಇದ್ದಾಳಲ್ಲ..ಅವಳ ಮಗಳ ಗಂಡ ದಿನಪೂರ್ತಿ ಕುಡ್ಕೊಂಡು ಹೆಂಡತಿ ಮೇಲೆ ದಬ್ಬಾಳಿಕೆ ಮಾಡ್ತಾನಂತೆ. ನಾನೇ ಎಷ್ಟೋ ಸಲ ಅವನು ರಸ್ತೆ ಬದಿಯಲ್ಲಿ ಕುಡ್ಕೊಂಡು ಬಿದ್ದಿದ್ದು ನೋಡಿದ್ದೇನೆ. ಮೂಲೆ ಮನೆ ಕಾವೇರಿಯಕ್ಕ ಇದ್ದಾರಲ್ಲ..ಅವರ ಮಗಳ ಗಂಡನ ಮನೆಯವರು ಆ ಪಾಪದ ಹೆಣ್ಣಗೆ ಕೊಡಬಾರದ ಹಿಂಸೆ ಕೊಡ್ತಾ ಇದ್ದಾರಂತೆ.. ಒಂದು ಮುಷ್ಟಿ ಗಂಜಿ ಜಾಸ್ತಿ ಊಟ ಮಾಡಿದ್ರೆ ತಪ್ಪು ಅಂತಾರಂತೆ.. ಹಾಗಿದೇಯನಮ್ಮ ನಿನ್ನ ಸಂಸಾರ? ಗಂಡನ ಮನೆಯಲ್ಲಿ ನಿಂಗೆ ಉಣ್ಣುವುದಕ್ಕೆ, ತಿಣ್ಣುವುದಕ್ಕೆ ಏನಾದ್ರೂ ಕಡಿಮೆ ಆಗಿದೇಯಾ? ಗಂಡ ದೌರ್ಜನ್ಯ ಮಾಡ್ತಾನ? ಅತ್ತೆ ಮಾವ ಬರೆ ಹಾಕ್ತಾರ? ಹೇಳು ನಂಗೆ’
‘ನಿನ್ನ ಗಂಡನಿಗೆ ಮನೆ-ಕೆಲಸದ ಮೇಲೆ ಇರುವ ಜವಬ್ದಾರಿಯನ್ನು ನೋಡಿ ಖುಷಿ ಪಡು. ಇಷ್ಟು ಇಳಿ ವಯಸ್ಸಲ್ಲೂ ನಿನ್ನ ಅತ್ತೆ ಮಾವ ಗದ್ದೆ ತೋಟದ ಬಗ್ಗೆ ತಲೆಕೆಡಿಸಿಕೊಳ್ತಾರಲ್ಲ ಅದ್ಕೆ ಹೆಮ್ಮೆ ಪಡು. ದನದ ಕೊಟ್ಟಿಗೆಗೆ ಹೋದ್ರೆ ಕಾಲಿಗೆ ಸೆಗಣಿ ಮೆತ್ತುತ್ತದೆ, ತೋಟಕ್ಕೆ ಹೋದ್ರೆ ಸೊಳ್ಳೆ ಕಡಿತದೇ ಅಂತ ದೂರಬೇಡ.. ನಾವೆಲ್ಲ ಅದೇ ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದು ಮದುವೆಯಾಗಿ ಈ ಸಿಟಿ ಜೀವನಕ್ಕೆ ಬಂದವರು..ಕೃಷಿ ಕೆಲಸದಲ್ಲಿ ಇರೋ ಆತ್ಮತೃಪ್ತಿ ಮಲ್ಟಿನ್ಯಾಷನಲ್ ಕಂಪೆನಿಯಲಿ ಕೆಲಸ ಮಾಡಿದ್ರೂ ಸಿಗಲ್ಲ.. ತಿಳುಕೋ’
‘ಗಂಡನ ಮನೆಯವರ ಪ್ಲೇಟು-ತಟ್ಟೇ ತೊಳೆಯುದೇ ದೊಡ್ಡ ಚಾಕರಿ ಅಂತೀಯಲ್ಲ..ನಿನ್ನ ತಮ್ಮ ಯಾವುದೋ ಹೊಟೇಲಿನಲ್ಲಿ ಯಾರ್ಯಾರೋ ತಿಂದುಂಡು ಹೋದ ತಟ್ಟೇ ಪ್ಲೇಟು ಎತ್ತಿ ತೊಳಿಬೇಕಲ್ಲ ಇದ್ಕೆ ಏನು ಅಂತೀಯಾ?’
‘ನಂಗೊತ್ತು ಹರಿಣಿ.. ತಪ್ಪು ನಿನ್ನದೇ.. ನೀ ನನ್ನ ಮಗಳು ಅಂತ ನಿನ್ನ ಪರವಾಗಿ ನಾ ಮಾತಾಡಲ್ಲ.. ನಾನು ತಿಳಿದುಕೊಂಡ ಹಾಗೇ ನಿನ್ನ ಗಂಡ, ಅತ್ತೇ-ಮಾವ ಒಳ್ಳೆಯವರು. ಈ ಸಿಟಿಯಲ್ಲಿ ಬೆಳೆದ ನಿಂಗೆ ಆ ಹಳ್ಳಿ ಬದುಕಿಗೆ ಹೊಂದಿಕೊಳ್ಳಲು ಸಮಯ ಬೇಕಾಗಬಹುದು.. ಆದರೆ ನೀನು ಹೊಂದಿಕೊಂಡು ಹೋಗಬೇಕು. ಅದೇ ಸಂಸಾರ. .ನಿನ್ನ ಮೊಂಡಾಟ, ಅಹಂಕಾರನ ಬದಿಗಿಡು. ಎಲ್ಲವನ್ನೂ, ಎಲ್ಲರನ್ನೂ ಪ್ರೀತಿಸಿ ಬದುಕುವುದನ್ನು ಕಲಿತ್ಕೊ. ನಿನ್ನ ಕೈಯಾರೇ ನಿನ್ನ ಸಂಸಾರ ಹಾಳು ಮಾಡ್ಕೋಬೇಡ..ಪೀತಿ ವಿಶ್ವಾಸದಿಂದ ಬದುಕು. ಕಾಲಿಗೆ ಸೆಗಣಿ ಮೆತ್ತಿದ್ರೆ ಕಾಲು ತೊಳಕ್ಕೊಂಡು ಒಳಗೆ ಬರಬಹುದು. ಆದರೆ ಸಂಸಾರಕ್ಕೆ ಸೆಗಣಿ ಮೆತ್ತಿದ್ರೆ ತೊಳೆಯೋಕೆ ಆಗಲ್ಲ: ಮೆತ್ತದಂತೆ ಜಾಗ್ರತೆ ವಹಿಸಬೇಕಾಗದದ್ದು ಹೆಣ್ಣಾಗಿ ನಿನ್ನ ಜವಬ್ದಾರಿ..ನೆನಪಿಟ್ಕೊ’
ಗಂಭೀರವಾಗಿ ಹೇಳಿದ ಗಿರಿಜಮ್ಮ ಹೆಣೆದ ಮಲ್ಲಿಗೆಯ ಜಡೆಯನ್ನು ಕೈಯಲ್ಲಿಡಿದು ರಪ್ಪನೇ ಒಳನಡೆದರು. ಕಾದ ಸೀಸದ ಬರೆಯಷ್ಟು ಹರಿತವಾದ ಅಮ್ಮನ ಮಾತಿಗೆ ಹರಿಣಿ ಕುಳಿತಲ್ಲೆ ಬೆವತು ಹೋದಳು. ಮನಸ್ಸಿನ ತುಂಬಾ ಆವರಿಸಿದ ಅಹಂಕಾರ, ಮೌಡ್ಯತೆಯ ಪರದೆ ಪರ್ರನೆ ಹರಿದು ಚೂರಾಯ್ತು.
‘ಹೌದು. ನಿಜವಾಗಲೂ ನನ್ನಮ್ಮ ಹೇಳಿದ್ದು ನೂರಕ್ಕೆ ನೂರರಷ್ಟು ನಿಜ. ತನ್ನ ಅತ್ತೆ-ಮಾವ, ಗಂಡ ಎಲ್ಲರೂ ಒಳ್ಳೆಯವರೇ.. ನಾನೇ ಅವರನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತು ಹೋದೆ. ತನ್ನ ಕಲ್ಪನೆಯ ಹಾಗೇ ಸಂಸಾರ, ಗಂಡನ ಮನೆ ಇರಲ್ಲ..ನಾನೇ ಅಲ್ಲಿ ಅಡ್ಜೆಸ್ಟ್ ಆಗಬೇಕಿತ್ತು’
‘ಹಳ್ಳಿ ಬದುಕಾದರೇ ಏನು? ನೆಮ್ಮದಿ ಮುಖ್ಯ..ಅದು ನನಗೆ ಅತ್ತೆ-ಮಾವ, ಗಂಡನಿಂದ ಧಾರಾಳವಾಗಿ ಸಿಗ್ತಿತ್ತು. ನಾನೇ ತಪ್ಪು ಮಾಡಿಬಿಟ್ಟೆ’
ಹರಿಣಿ ಭಾರದ ಹೆಜ್ಜೆ ಇಡುತ್ತ ತನ್ನ ರೂಮಿಗೆ ಧಾವಿಸಿದಳು. ಮನಸ್ಸು ತಿಳಿಯಾಗುವಷ್ಟು ಅತ್ತಳು. ಮೆಲ್ಲಗೆ ತನ್ನ ಮೊಬೈಲನ್ನು ಹುಡುಕಿ ಗಂಡ ನಿತೀಶನಿಗೆ ಕರೆ ಮಾಡಿದಳು.ನಾಳೆ ಬಂದು ತನನ್ನು ಕರೆದುಕೊಂಡು ಹೋಗುವಂತೆ ಪ್ರೀತಿಯಿಂದ ವಿನಂತಿಸಿಕೊಂಡಳು.
ಮುನಿಸಿಕೊಂಡು ಹೋಗಿದ್ದ ಹೆಂಡತಿಯ ಪೋನ್ ಕರೆಗೆ ದಿನವಿಡೀ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ನಿತೀಶ ಬದಲಾದ ಹೆಂಡತಿಯ ಮೃದು-ಮಧುರ ಮಾತುಗಳಿಂದ ಕರಗಿ ನೀರಾದ. ‘ಖಂಡಿತಾ ನಾಳೆ ಬರ್ತೇನೆ ಡಿಯರ್.. ನಿನ್ನ ಬಿಟ್ಟು ನಂಗೆ ಇರೋಕೆ ಆಗಲ್ಲ..ಲವ್ ಯೂ ಚಿನ್ನಾ’ ಎಂದು ಹೂ ಮುತ್ತು ನೀಡಿದ. ಕಿಲ ಕಿಲ ನಗು ಬೀರಿದಳು ಹರಿಣಿ.
ಅಡಿಗೆ ಮನೆಯಲ್ಲಿದ್ದ ಗಿರಿಜಮ್ಮನಿಗೆ ಮಗಳ ಕಿಲ ಕಿಲ ನಗು ಇಂಪಾಗಿ ಕೇಳಿಸಿತು. ನೆಮ್ಮದಿಯ ಗಟ್ಟಿ ಉಸಿರೊಂದನ್ನು ಹೊರಚೆಲ್ಲಿದ್ದ ಗಿರಿಜಮ್ಮ ಹೆಣೆದ ಮಲ್ಲಿಗೆಯ ಮೊಗ್ಗನ್ನು ದೇವರ ಪದತಲಕ್ಕಿಟ್ಟು ತುಪ್ಪದ ದೀಪ ಹಚ್ಚಿ ಕೈಮುಗಿದರು.
-ಮಂಜುನಾಥ್ ಹಿಲಿಯಾಣ



