‘ಖಂಡಿತಾ ಇಂದು ಹೆಣ್ಣು ಮನೆಯೊಳಗೆ ಇರುವ ಒಂದು ವಸ್ತು ಅಲ್ಲ; ಗಂಡಿನಂತೆ ಅವಳಿಗೂ ಸಮಾನ ಹಕ್ಕುಗಳಿದೆ. ಆದರೆ ಪ್ರಕೃತಿ ಹೆಣ್ಣಿಗೆಂದೇ ನೀಡಿದ ತಾಯ್ತನವನ್ನೆ ಮುಂದೆ ಹಾಕುವುದು, ಒಡಲಿನಲ್ಲಿ ಅರಳುತ್ತಿರುವ ಕಂದಮ್ಮನನ್ನೆ ಚಿವುಟಲು ಹೊರಡುವುದು.. ಇಂದಿನ ಕೆಲವು ಆಧುನಿಕ ನಾರಿಯರ ಗುಣ ಆಗುತ್ತಿದೆಯಲ್ಲಾ.. ಇದಕ್ಕೇನನ್ನುವುದು?’
ರೈಟ್ ಟರ್ನ್ ತೆಗೆದುಕೊಂಡ ಕಾರು ಮುಖ್ಯ ರಸ್ತೆಗೆ ಬಂದು ಬರ್ರ್ ಎಂದು ಮುಂದೆ ಸಾಗಿತು!
ಡ್ರೈವಿಂಗ್ ಸೀಟ್ನಲ್ಲಿ ಕುಳಿತಿದ್ದ ಸುಧಾಕರ ಓರೆ ನೋಟದಿಂದ ಪಕ್ಕದಲ್ಲಿ ಕುಳಿತಿದ್ದ ಪತ್ನಿ ಮನೋಹರಿಯನ್ನ ನೋಡುತ್ತಾ ಮಾತಿಗಾರಂಭಿಸಿದ..
‘ಮನೂ..ಮತ್ತೊಮ್ಮೆ ಯೋಚಿಸಿ ನೋಡು..ನಾವು ಮದುವೆಯಾಗಿ ನಾಡಿದ್ದು ಜೂನ್ಗೆ ಮೂರು ವರ್ಷ ಕಳೆಯುತ್ತೆ. ನೀನು ಈವಾಗ ಪ್ರಗ್ನೆಂಟ್ ಆಗಿದ್ದೀಯಾ! ನಮ್ಮ ಸ್ಥಿತಿಯಲ್ಲಿ ಬೇರೆ ಯಾರೇ ಇದ್ದಿದ್ರೂ ಎಷ್ಟು ಖುಷಿ ಪಡ್ತಾ ಇದ್ರು ಗೊತ್ತಾ? ಊರಿಂದಂತೂ ಅಮ್ಮ ಕಾಲ್ ಮಾಡಿದಾಗ್ಲೆಲ್ಲಾ ಹೆಂಡತಿದು ಏನೂ ವಿಶೇಷ ಇಲ್ವೇನೋ ಅಂತ ಕೇಳ್ತಾಳೆ. ಈ ವಿಷಯ ಗೊತ್ತಾದ್ರೆ ಅವಳೆಷ್ಟು ಖುಷಿ ಪಡ್ತಿದ್ಲು ಗೊತ್ತಾ? ಇದೆಲ್ಲ ತಿಳಿದು ತಿಳಿದೂ ನನಗೆ ಈವಾಗ್ಲೆ ಮಗು ಬೇಡ. ಅಬಾರ್ಷನ್ ಮಾಡಿಸಿಕೊಳ್ತಿನಿ ಅಂತಿದ್ದಿಯಲ…ಪ್ಲೀಸ್ ಕಣೆ ನಿನ್ನ ನಿರ್ಧಾರನ ಈ ಕೊನೆ ಕ್ಷಣದಲ್ಲಾದರೂ ಬದಲಾಯಿಸು..ಮಗು ಇರಲಿ..’
ಇದಕ್ಕುತ್ತರವೇನೋ ಅನ್ನುವಂತೆ ಮನೋಹರಿ ಗಂಡನತ್ತ ಉರಿ ನೋಟವನ್ನ ಬೀರಿದಳೆ ವಿನಃ ಏನನ್ನೂ ಪ್ರತಿಕ್ರೀಯಿಸಲಿಲ್ಲ.. ಸುಧಾಕರ ಮತ್ತೆ ನುಡಿದ.
“ಯೋಚನೆ ಮಾಡು ಮನು..ನಂಗೂ ಈಗಾಗಲೇ ವಯಸ್ಸು ಮೂವತ್ಮೂರರ ಗಡಿ ದಾಟ್ತಾ ಇದೆ. ನಿಂಗೂ ಮೂವತ್ತರ ಹತ್ರ ಆಗಿದೆ. ಈ ವಯಸ್ಸಿನಲ್ಲಿ ನೀನು ತಾಯಿ ಆಗದೇ ಇನ್ಯಾವಾಗ ಆಗುವುದು? ಪ್ಲೀಸ್ ಕಣೆ.. ಅಬಾರ್ಷನ್ ಮಾಡಿಸಿಕೊಳ್ಳುವುದು ಬೇಡ. ನಿನ್ನ ಈ ನಿರ್ದಾರ ನಂಗೆ ಚೂರು ಇಷ್ಟ ಆಗ್ತಿಲ್ಲ .”
ಗಂಡನತ್ತ ನೆಟ್ಟಿದ್ದ ತನ್ನ ನೋಟವನ್ನ ಮತ್ತಷ್ಟು ಹರಿತಗೊಳಿಸಿ ಮನೋಹರಿ ಮಾತಿಗಾರಂಭಿಸಿದಳು.
‘ರೀ..ನೀವು ನಿಮ್ಮ ನೇರಕ್ಕೆ ಯೋಚನೆ ಮಾಡುವುದನ್ನ ಬಿಟ್ಟು ನನ್ನ ಬಗ್ಗೆಯಾಗಲಿ, ನನ್ನ ಕೇರಿಯರ್ ಬಗ್ಗೆಯಾಗ್ಲಿ ಸ್ವಲ್ಪವಾದರೂ ಯೋಚನೆ ಮಾಡಿದ್ದೀರಾ? ನಾನಿರುವುದು ಮಾಡೆಲಿಂಗ್ನಲ್ಲಿ..ಅಲ್ಲಿ ಯೌವನಕ್ಕೆ ಮಾತ್ರ ಬೆಲೆ..ನಾನೊಂದು ವೇಳೆ ಒಂದು ಮಗುವಿನ ತಾಯಿ ಆಗ್ಬಿಟ್ರೆ ಅಲ್ಲಿಗೆ ನನ್ನ ಭವಿಷ್ಯ ಮುಗಿದಂತೆ. ಈವಾಗ ನೂರಾರು ಅವಕಾಶಗಳು ನಾನಿದ್ದಲ್ಲಿಗೆ ಬಂದು ಕೂತಿರುವಾಗ ಅದನ್ನೆಲ್ಲ ಬಿಟ್ಟು ಮಗುನ ಹೆತ್ತು, ಅದರ ಚಾಕರಿ ಮಾಡ್ತಾ ಕುರೂಕೇ ನಂಗೆ ಖಂಡಿತಾ ಟೈಮಿಲ್ಲ. ಅಲ್ರಿ..ನಿಮ್ಮೊಬ್ಬರ ದುಡಿಮೆನಾ ಮಾತ್ರ ನಂಬಿಕೊಂಡು ಕೂತಿದ್ರೆ ಈ ಪ್ಲ್ಯಾಟ್ನಲ್ಲಿ ವಾಸಿಸೋಕೆ, ಈ ಕಾರ್ನಲ್ಲಿ ಜುಮ್ ಅಂತ ತಿರುಗೋಕೆ, ಈ ಸಿಟೀಲಿ ಬದುಕು ನಡೆಸುವುದಕ್ಕೆ, ಸಾಧ್ಯವಾಗುತ್ತಿತ್ತೇನ್ರಿ? ಸದ್ಯಕ್ಕೆ ಮಾಡೆಲಿಂಗ್ ಅಲ್ಲಿ ಒಳ್ಳೆ ಅವಕಾಶ ಸಿಕ್ಕಿದೆ. ಈ ಮಗು, ಬಾಣಂತನ, ಚಾಕರಿಯೆಲ್ಲ ಇದ್ದದ್ದೆ.. ಸದ್ಯಕ್ಕೆ ಬೇಡ..ಮುಂದೆ ನೋಡೋಣ.’
ಹೆಂಡತಿಯ ಮಾತಿಗೆ ಕಾರು ನಿಲ್ಲಿಸಿ ನಾಲ್ಕು ಬಾರಿಸುವಷ್ಟು ಕೋಪ ಸುಧಾಕರನಿಗೆ ಬಂದರೂ ಅದನ್ನ ತೋರ್ಪಡಿಸಿಕೊಳ್ಳದೇ ಭಾವುಕನಾಗಿ ಹೇಳಿದ.
‘ಪ್ಲೀಸ್ ಮನೂ..ನಾನೇನು ನಿನ್ನ ಜೊತೆ ವಾದಕ್ಕಿಳಿತಿಲ್ಲ. ನಾವು ನಮ್ಮ ಬಿಝಿ ಲೈಫ್ ಗಾಗಿ, ಕೇರಿಯರ್ಗಾಗಿ ನಮಗೆ ಮಗು ಬೇಡ, ಅದನ್ನು ಸಾಕ್ಲಿಕ್ಕೆ ಟೈಮಿಲ್ಲ ಅಂತ ಕಾರಣ ಕೊಟ್ಟು ಹೊಟ್ಟೇಲಿರೋ ಪಾಪುನ ಈ ಪ್ರಪಂಚವೇ ಕಾಣಬಾರದಂತೆ ಮಾಡುವುದು ತಪ್ಪಲ್ವೇನೆ? ಭ್ರೂಣ ಹತ್ಯೆ ಪಾಪ ಅಂತ ಕಾನೂನಿದೆ. ವಿದ್ಯಾವಂತರಾದ ನಾವೇ ಇದನ್ನು ಬ್ರೇಕ್ ಮಾಡುವುದು ಸರಿನಾ? ಪ್ಲೀಸ್.. ಒಂದು ಜಡ ವಸ್ತುವಿನಂತೆ ವರ್ತಿಸಬೇಡ..ಮನುಷ್ಯಗಳಾಗಿ ಮಾನವೀಯತೆಯಿಂದ ವರ್ತಿಸು..’
‘ರೀ..ದಯವಿಟ್ಟು ನಿಮ್ಮ ಉಪನ್ಯಾಸನ ಯಾವುದಾದರೂ ವೇದಿಕೇಲಿ ಇಟ್ಕೊಳ್ಳಿ.. ನನಗೆ ಅದರ ಅಗತ್ಯ ಇಲ್ಲ. ನಾನು ಪ್ರಗ್ನೆಂಟ್ ಲೇಡಿ ನನಗೆ ದೊಡ್ಡ ಶಾಕ್.. ನಾನು ತಾಯಿ ಆಗೋಕೇ ಇನ್ನೂ ಸಿದ್ಧವಾಗಿಲ್ಲ..ತೆಗೆಸುವುದು ಅಂತ ಮನೆಯಿಂದ ನಿರ್ಧಾರ ಮಾಡಿ ಹೊರಟ ಮೇಲೆ ಇನ್ನೂ ಚೇಂಜ್ ಮಾಡೋ ಪ್ರಶ್ನೇನೆ ಇಲ್ಲ. ಹೆಣ್ಣಾಗಿ ನನಗಿಲ್ಲದ ತಲೆ ಬಿಸಿ ನಿಮಗ್ಯಾಕ್ರಿ? ನೀವು ಸುಮ್ನೇ ಮಯೂರ ಹಾಸ್ಪಿಟಲ್ ಕಡೆ ಡ್ರೈವ್ ಮಾಡಿ. ಸುಮ್ನೆ ತಲೆ ತಿನ್ನಬೇಡಿ’
ಮನೋಹರಿ ಮಾತಿನಿಂದ ಸುಧಾಕರ ತತ್ತರಿಸಿ ಹೋದ.. ಹತಾಶೆ ಕೋಪದಿಂದ ಅವಳತ್ತ ನೋಡಿದ. ಮುಖವನ್ನ ಕೆಂಪು ಮಾಡಿ ಸೈಡ್ ಮಿರರ್ನ ನೋಡುತ್ತಾ ಕುಳಿತಿದ್ದಳು.
‘ಛೇ.. ಈ ಹೆಣ್ಣಿನ ಮನಸ್ಥಿತಿನಾ ಬದಲು ಮಾಡುವುದು ಹೇಗಪ್ಪಾ.. ದೇವರೇ ಇವಳಿಗೆ ವರವಾಗಿ ನೀಡಿದ ತಾಯ್ತನದ ಆನಂದವನ್ನು ಅನುಭವಿಸುವುದಕ್ಕಿಂತ ನೋಟಿನದ್ದೆ, ಕೇರಿಯರ್ ನದ್ದೆ ಚಿಂತೆ ದೊಡ್ಡದಾಯ್ತಲ್ಲ. ಚೂರು ಜಾಸ್ತಿ ಹೇಳಿದ್ರೆ ಇದು ಇಪ್ಪತ್ತೊಂದನೇ ಶತಮಾನ ಕಣ್ರಿ.. ಹೆಣ್ಣು ಮಗು ಹೆರುವ ಮಷೀನ್ ಅಲ್ಲ..ಅವಳಿಗೂ ಸ್ವಾತಂತ್ರ್ಯ ಇದೆ ಅಂತ ವಾದಿಸ್ತಾಳೆ’
ಖಂಡಿತಾ ಇಂದು ಹೆಣ್ಣು ಮನೆಯೊಳಗೆ ಇರುವ ಒಂದು ವಸ್ತು ಅಲ್ಲ..ನಾನದನ್ನು ಒಪ್ಪುತ್ತೇನೆ. ಗಂಡಿನಂತೆ ಅವಳಿಗೂ ಸಮಾನ ಹಕ್ಕುಗಳಿದೆ. ಆದರೆ ಪ್ರಕೃತಿ ಹೆಣ್ಣಿಗೆಂದೇ ನೀಡಿದ ತಾಯ್ತನವನ್ನೇ ಮುಂದೆ ಹಾಕುವುದು, ಒಡಲಿನಲ್ಲಿ ಅರಳುತ್ತಿರುವ ಕಂದಮ್ಮನನ್ನೆ ಚಿವುಟಲು ಹೊರಡುವುದು.. ಇದೆಲ್ಲವೂ ಮನೋಹರಿಯಂತಹ ಆಧುನಿಕ ನಾರಿಗೆ ಹೇಳಿಮಾಡಿಸಿದ ಗುಣವೇ? ಛೇ..’
ತನ್ನದೇ ಯೋಚನಾ ಸರಣಿಯೊಳಗೆ ಮುಳುಗಿ ಡ್ರೈವ್ ಮಾಡುತಿದ್ದ ಸುಧಾಕರ ಯಾಕೋ ತೀರಾ ಭಾವುಕನಾದ. ಎಡ ಕಣ್ಣಿನಿಂದ ಕಂಬನಿಯ ಬಿಂದುವೊಂದು ಹೊರ ಚಿಮ್ಮಿತು. ಬಲದ ಕೈಯಲ್ಲಿ ಸ್ಟೇರಿಂಗ್ನ ಹಿಡಿದು ಇನ್ನೊಂದು ಕೈಯಲ್ಲಿ ಪ್ಯಾಂಟ್ನ ಕಿಸೆಯಲಿದ್ದ ಕರ್ಚಿಫನ್ನು ಮೆಲ್ಲಗೆ ಹೊರತೆಗೆದು ಕಣ್ಣಿಗೊತ್ತಿಕೊಂಡ ಅಷ್ಟೆ! ಈ ಸಮಯಕ್ಕಾಗಿಯೇ ಆ ವಿಧಿ ಕಾಯುತ್ತಿದ್ದನೊ ಏನೋ? ಆಚಾನಕ್ಕಾಗಿ ಎಡಬದಿಯಿಂದ ಮೃತ್ಯು ವೇಗದಿಂದ ಸಾಗಿ ಬಂದ ಮ್ಯಾಂಗನೀಸ್ ಲಾರಿಯೊಂದು ಇವರಿದ್ದ ಕಾರಿನ ಮೇಲೆ ಭರ್ರೆಂದು ಹರಿದು ಹೋಯ್ತು.
……………………………………………………………………………………………………………..
ಮನೋಹರಿಗೆ ಪ್ರಜ್ಞೆ ಬಂತು. ಮುಚ್ಚಿದ ಕಣ್ಣುಗಳನ್ನು ಪ್ರಯಾಸದಿಂದ ಮೆಲ್ಲಗೆ ತೆರೆದು ನೋಡಿದಳು.
ಗರ-ಗರನೆ ತಿರುಗುತ್ತಿರುವ ಸೀಲಿಂಗ್ ಪ್ಯಾನ್, ಅತ್ತಿಂದಿತ್ತ ಓಡಾಡುತ್ತಿರುವ ಬಿಳಿಯುಡುಗೆ ಧರಿಸಿದ ನರ್ಸ್ಗಳು, ಕೈಗೆ ಚುಚ್ಚಿರುವ ಸಿರೀಂಜ್ ಮೂಲಕ ಹನಿ-ಹನಿಯಾಗಿ ದೇಹದೊಳಗೆ ಸೇರಿಕೊಳ್ಳುತ್ತಿರುವ ಗ್ಲುಕೋಸ್…
ತಾನಿರುವುದು ಆಸ್ಪತ್ರೆಯ ಒಳಗೆ ಎಂಬ ಅರಿವಾಗಲು ಮನೋಹರಿಗೆ ಕೆಲ ಸಮಯ ಕಳೆದುಹೋಯ್ತು. ಮರುಕ್ಷಣ ಮನದಲ್ಲಿ ಮೂಡಿದ “ತನ್ನವರೆಲ್ಲಿ?” ಎಂಬ ಪ್ರಶ್ನೆಗೆ ಉತ್ತರ ಸಿಗುತ್ತೇನೂ ಅಂತ ಮೆಲ್ಲಗೆ ಪಕ್ಕದಲ್ಲಿರುವ ಬೆಡ್ನೆಡೆಗೆ ಕುತ್ತಿಗೆಯನ್ನ ಹೊರಳಿಸಿ ನೋಡಿದಳು. ಊಹುಂ..ಯಾರು ಗೋಚರಿಸಲಿಲ್ಲ.. ಹಾಗಾದರೆ? ಅವ್ಯಕ್ತವಾದ ಭಯವೊಂದು ಅವಳನ್ನ ಕಾಡಲಾರಂಭಿಸಿತು.
ಅದೇ ಸಮಯಕ್ಕೆ ಇಬ್ಬರು ನರ್ಸ್ ಇವಳ ರೂಮಿನೊಳಗೆ ಸಾಗಿ ಬಂದರು. ಮೆಲ್ಲಗೆ ತಮ್ಮ ತಮ್ಮಲ್ಲೇ ಮಾತಿಗಾರಂಭಿಸಿದರು. ಅವರ ಆ ಮಾತು ತನ್ನ ಕುರಿತಾಗಿಯೇ ಇರುವುದನ್ನು ಗಮನಿಸಿದ ಮನೋಹರಿ ಕಿವಿಯಾನಿಸಿ ಮೆಲ್ಲಗೆ ಕೇಳಿಸಿಕೊಳ್ಳಲಾರಂಬಿಸಿದಳು.
ಒಬ್ಬಳು ನರ್ಸ್ ಹೇಳಿದಳು..
‘ಅಯ್ಯೊ..ಪಾಪ ಕಣೆ ಈ ಪೇಷೆಂಟ್..ಕಾರ್ ಆ್ಯಕ್ಸಿಡೆಂಟ್ ಆಗಿದ್ದಂತೆ. ಡ್ರೈವಿಂಗ್ ಸೀಟಿನಲಿದ್ದ ಇವಳ ಗಂಡ ಸ್ಪಾಟ್ ಡೆತ್ ಆಗ್ಬಿಟ್ರಂತೆ. ಇವರಿಗೂ ಸಾಕಷ್ಟು ಪೆಟ್ಟಾಗಿದೆ. ಎರಡು ಕಾಲು ಜಜ್ಜಿ ಹೋಗಿದೆ. ಜೀವನಪೂರ್ತಿ ವೀಲಿಂಗ್ ಚೇಯರ್ ನಲ್ಲೆ ಲೈಪ್ ಸಾಗಿಸಬೇಕು.. ಪಾಪ..’
ಅವಳ ಮಾತಿಗೆ ಮತ್ತೊಬ್ಬ ನರ್ಸ್ ದನಿಸೇರಿಸಿ ಹೇಳಿದಳು..
“ಹೌದಂತೆ.. ಇನ್ನೊಂದು ವಿಷಯ ಗೊತ್ತಾ? ..ಇವರು ಟೂ ಮಂತ್ ಪ್ರಗ್ನೆಂಟ್ ಆಗಿದ್ರಂತೆ.. ಆ್ಯಕ್ಸಿಡೆಂಟ್ ಹೊಡೆತಕ್ಕೆ ಇವರ ಗರ್ಭಕೋಶನೇ ತೆಗಿಬೇಕಾಯ್ತು. ಮುಂದೆ ಮಕ್ಕಳಾಗುವ ಭಾಗ್ಯನೂ ಇವರು ಕಳಕ್ಕೊಂಡ್ರು..ಪಾಪ ಅಲ್ವೇನೆ’
ನರ್ಸ್ ಮಾತನಾಡುತ್ತಲೆ ಇದ್ದರು. ಮಲಗಿದ ಮನೋಹರಿಗೆ ಇಡೀ ಆಸ್ಪತ್ರೆಯೇ ಗರ-ಗರನೇ ತಿರುಗಿ ತನ್ನ ಮೇಲೆ ಬಿದ್ದಾಂತಾಯ್ತು..ಮನದಲ್ಲಿ ಭೀಕರ ತ್ಸುನಾಮಿಯ ಅಲೆ ಎದ್ದಿತು. ಮೇಲಿನಿಂದ ವಿಧಿ ತನ್ನನ್ನ ನೋಡಿ ಗಹ-ಗಹನೇ ನಕ್ಕಂತಾಗಿ ಮತ್ತೆ ಪ್ರಜ್ಞೆ ತಪ್ಪಿತು.
-ಮಂಜುನಾಥ್ ಹಿಲಿಯಾಣ