ಮಂಗಳೂರು (ಮಾ.೨೫, ಕುಲಾಲ್ ವರ್ಲ್ಡ್ ನ್ಯೂಸ್): ರೆಡ್ ಎಫ್ಎಂ ತುಳು ಫಿಲಂ ಅವಾರ್ಡ್ಸ್–2018 ಇದರಲ್ಲಿ ಕುಲಾಲ ಸಮುದಾಯದ ಇಬ್ಬರು ಪ್ರತಿಭಾನ್ವಿತರು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ತುಳು ರಂಗಭೂಮಿ/ಚಿತ್ರರಂಗದ ಜೀವನ ಪರ್ಯಂತ ಸಾಧನೆಗಾಗಿ ಎಂ.ಕೆ ಸೀತಾರಾಮ್ ಕುಲಾಲ್ ಅವರು `The Lifetime Achievement award’ ಪಡೆದರೆ, ತಮ್ಮ ಚೊಚ್ಚಲ ಚಿತ್ರ `ಕುಡ್ಲ ಕೆಫೆ’ಯಲ್ಲಿ ತಾನು ನಿರ್ವಹಿಸಿದ ಖಳನಾಯಕನ ಪಾತ್ರಕ್ಕೆ ಮನೋಜ್ ಕುಲಾಲ್ ಪುತ್ತೂರು ಅವರು ಬೆಸ್ಟ್ ವಿಲನ್ ಅವಾರ್ಡ್ ಪಡೆದಿದ್ದಾರೆ. ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಮಾ.೨೪ರಂದು ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
ನೂರಾರು ಜನ ಕಲಾವಿದರ ಬದುಕನ್ನು ಮುನ್ನಡೆಸುತ್ತಿರುವ ತುಳು ಚಿತ್ರರಂಗ ಹಾಗೂ ಲಕ್ಷಾಂತರ ತುಳು ಭಾಷಿಗರ ಮನರಂಜಿಸುತ್ತಿರುವ ಆ ಎಲ್ಲ ಗೌರವಾನ್ವಿತ ಕಲಾವಿದರು ತಂತ್ರಜ್ಞರನ್ನು ಅಭಿನಂದಿಸಿ ಅವರನ್ನು ಪ್ರೋತ್ಸಾಹಿಸಿ ಗೌರವಿಸುವ ಒಂದು ಪ್ರಾಮಾಣಿಕ ಪ್ರಯತ್ನವೇ ರೆಡ್ ಎಫ್ಎಂ ತುಳು ಫಿಲಂ ಅವಾರ್ಡ್ಸ್. 93.5 ರೆಡ್ ಎಫ್.ಎಂ. ದೇಶದ ಪ್ರತಿಷ್ಠಿತ ಮಾಧ್ಯಮ ಕಂಪೆನಿಯಾದ ‘ಸನ್ ಟಿವಿ ನೆಟ್ವರ್ಕ್’ ನ ಅಂಗ ಸಂಸ್ಥೆಯಾಗಿದ್ದು, ಕಳೆದ 8 ವರ್ಷಗಳಿಂದ ಮಂಗಳೂರಿನ ಜನಮಾನಸದಲ್ಲಿ ತನ್ನ ಸಾಮಾಜಿಕ ಸಾಂಸ್ಕತಿಕ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿದೆ. ಮೊಟ್ಟ ಮೊದಲ ಬಾರಿಗೆ ತುಳು ಹಾಡುಗಳನ್ನು ಪ್ರಸಾರ ಮಾಡಲು ಆರಂಭಿಸಿ, ತುಳು ನಾಡಿನ ಸಾಧಕರನ್ನು ಗುರುತಿಸಿ ಅವರಿಂದ ‘ಕುಡ್ಲ ಎಕ್ಸಪ್ರೆಸ್’ ಅನ್ನುವ ಸಂಪೂರ್ಣ ತುಳು ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಿದ್ದು, ಸಾಮಾಜಿಕ ಕಳಕಳಿಯ ಹಲವಾರು ಕಾರ್ಯಕ್ರಮಗಳನ್ನು ನಡೆಸಿದೆ. ತುಳು ಭಾಷೆ ಹಾಗೂ ತುಳುನಾಡಿನ ಪ್ರತಿಭೆಗಳನ್ನು ಗೌರವಿಸುವ ಪ್ರಾಮಾಣಿಕ ಪ್ರಯತ್ನವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ.