`ವಾಯ್ಸ್ ಆಫ್ ಕರಾವಳಿ ಸೀಸನ್-2′ ಸಂಗೀತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ
ಉಡುಪಿ(ಫೆ.೨೬, ಕುಲಾಲ್ ವರ್ಲ್ಡ್ ಡಾಟ್ ಕಾಮ್) : ರೋಟರಿ ಕ್ಲಬ್ ಬ್ರಹ್ಮಾವರ ಇವರ ನೇತೃತ್ವದಲ್ಲಿ ಹಾಗೂ ಬೀಯಿಂಗ್ ಸೋಶಿಯಲ್ ಮತ್ತು ಡೈಜಿವರ್ಲ್ಡ್ ಸಹಯೋಗದೊಂದಿಗೆ ನಡೆದ `ವಾಯ್ಸ್ ಆಫ್ ಕರಾವಳಿ ಸೀಸನ್-2′ ಸಂಗೀತ ಸ್ಪರ್ಧೆಯಲ್ಲಿ ವಿಜಯಲಕ್ಷ್ಮೀ ಕುಲಾಲ್ ಮೆಟ್ಟಿನಹೊಳೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇದರ ಜೊತೆಗೆ `ಜನ ಮೆಚ್ಚಿದ ಗಾಯಕಿ’ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಪ್ರಶಸ್ತಿಯ ಜೊತೆಗೆ 10,000 ನಗದು ಹಾಗೂ ಆಕರ್ಷಕ ಟ್ರೋಫಿ ಮತ್ತು ಪ್ರಮಾಣ ಪತ್ರ ಪಡೆದಿದ್ದಾರೆ.
ಬ್ರಹ್ಮಾವರದ ಸಿಟಿ ಸೆಂಟರ್ ಎದುರಿರುವ ವೆಲೆಂಟೈನ್ ಕಂಪೌಂಡಿನಲ್ಲಿನ ವೇದಿಕೆಯಲ್ಲಿ ಫೆಬ್ರವರಿ 25, ರವಿವಾರ ನಡೆದ ಫೈನಲ್ ಸ್ಪರ್ಧೆಯಲ್ಲಿ ಒಟ್ಟು 13 ಹಾಡುಗಾರರು ಭಾಗವಹಿಸಿದ್ದರು. ಖ್ಯಾತ ಕನ್ನಡ ಸಂಗೀತ ನಿರ್ದೇಶಕ, ಉಡುಪಿಯವರೇ ಆದ ಯಶವಂತ್ ಆಚಾರ್ಯ ಸ್ಪರ್ಧಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದರು. ಇನ್ನೊಬ್ಬ ಖ್ಯಾತ ಗಾಯಕ ವಿದ್ವಾನ್ ಅಶೋಕ್ ಆಚಾರ್ಯ ಅವರು ಕಾರ್ಯಕ್ರಮದ ತೀರ್ಪುಗಾರರಾಗಿದ್ದರು. ಈ ಹಿಂದೆ ನಡೆದ `ವಾಯ್ಸ್ ಆಫ್ ಉಡುಪಿ- ಸೀಸನ್ -5′ ಸ್ಪರ್ಧೆಯಲ್ಲಿ ವಿಜಯಲಕ್ಷ್ಮೀ ಅವರು ಪ್ರಥಮ ಸ್ಥಾನ ಪಡೆದಿದ್ದರು.





