ಮಂಗಳೂರು: ತುಳು ಭಾಷೆ, ಸಾಹಿತ್ಯ, ನಾಟಕ ಕ್ಷೇತ್ರ ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮೂರು ಜನ ಗಣ್ಯರನ್ನು ಅಕಾಡೆಮಿಯ 2014 ರ ಗೌರವ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ತುಳು ನಾಟಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಯಮ್. ಕೆ ಸೀತಾರಾಮ್ಕುಲಾಲ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಗೌರವ ಪ್ರಶಸ್ತಿಯು ರೂ.10,000 ನಗದು, ಶಾಲು, ಹಾರ, ಫಲತಾಂಬೂಲ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ತುಳು ಸಾಹಿತ್ಯ ಕ್ಷೇತ್ರದಲ್ಲಿ ಕನರಾಡಿ ವಾದಿರಾಜ್ ಭಟ್, ತುಳು ಸಿನಿಮಾ ಕ್ಷೇತ್ರದಲ್ಲಿ ರಾಮ್ ಶೆಟ್ಟಿ ಪ್ರಶಸ್ತಿ ಪಡೆದುಕೊಂಡ ಇತರರು.
ಮಂಗಳೂರಿನ ಎಮ್.ಕೆ.ಕುಲಾಲ್ ಕನ್ನಡ ತುಳು ನಾಟಕ ರಂಗಗಳಿಗೆ ಸಲ್ಲಿಸಿದ ಅಮೂಲ್ಯ ಕೊಡುಗೆಗಳಿಂದ ಬಹುಮಾನ್ಯರಾದವರು. ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಇವರು, ಎಳವೆಯಿಂದಲೂ ನಾಟಕ ಸಾಹಿತ್ಯದ ಕೃಷಿಯನ್ನು ನಡೆಸುತ್ತಾ ಬಂದವರು. ಇವರ ಪ್ರಥಮ ನಾಟಕ ‘ದಾಸಿಪುತ್ರ’. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಅರುತ್ತೊಂಬತ್ತು ನಾಟಕಗಳನ್ನು ರಚಿಸಿದ್ದು, ‘ಮಣ್ಣ್ದ ಮಗಲ್ ಅಬ್ಬಕ್ಕ’ ನಾಟಕ ಅತ್ಯಂತ ಯಶಸ್ವಿ ಪ್ರಯೋಗಗಳನ್ನು ಕಂಡಿದೆ. ಕನ್ನಡದ ಅಬ್ಬಕ್ಕ ನಾಟಕ 1962ರಲ್ಲೇ ಆಗಿನ ಜಿಲ್ಲಾಧಿಕಾರಿ ಯಚ್. ನಾಗೇ ಗೌಡರು ಕೊಡಮಾಡಿದ ಪ್ರಥಮ ಬಹುಮಾನ ಗಳಿಸಿಕೊಂಡಿದೆ.
ದೃಶ್ಯ ರೂಪಕಗಳನ್ನು ರಚಿಸಿ ಶಾಲೆಗಳಲ್ಲಿ ಪ್ರದರ್ಶಿಸುವುದೂ ಇವರ ಮೆಚ್ಚಿನ ಹವ್ಯಾಸವೇ. ತುಳು ಕನ್ನಡ ನಾಟಕಗಳಿಗೆ ಮುನ್ನೂರೈವತ್ತಕ್ಕೂ ಮೀರಿ ಹಾಡುಗಳನ್ನು ರಚಿಸಿ ಜನಮೆಚ್ಚಿಗೆ ಗಳಿಸಿದ ಶ್ರೀ ಕುಲಾಲ್ ತುಳು ಸಿನೇಮಾಗಳಿಗೂ ತನ್ನ ಹಾಡುಗಳಿಂದಲೇ ವಿಶೇಷ ಮನ್ನಣೆ ತಂದು ಕೊಟ್ಟವರು. ‘ಶ್ರೀ ಕ್ಷೇತ್ರ ಕಟೀಲು’ ಭಕ್ತಿಗೀತೆಗಳ ಧ್ವನಿಸುರುಳಿ, ‘ತುಳುವ ಮಲ್ಲಿಗೆ’ ಧ್ವನಿಸುರುಳಿಯ ಹಾಡುಗಳು ತುಂಬ ಪ್ರಖ್ಯಾತವಾಗಿವೆ. ‘ಕಡಲನಾಡ ಕಲಾವಿದರು’ ಸಂಸ್ಥೆಯಲ್ಲಿದ್ದು 51 ವರ್ಷ ಈ ಸಂಸ್ಥೆಯನ್ನು ನಡೆಸಿಕೊಂಡು ಬಂದ ಸೀತಾರಾಮ ಕುಲಾಲ್ ಸ್ವತ: ನಟಿಸಿದ ಎಂಟು ನಾಟಕಗಳು ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಗೆದ್ದಿವೆ. ‘ಉಡಲ್ದ ತುಡರ್’ ತುಳು ಚಿತ್ರದ ಕಥೆ ಮತ್ತು ಸಂಭಾಷಣೆಗೆ ಪ್ರಶಸ್ತಿಗಳು ಸಂದಿವೆ. ಇವರು ರಚಿಸಿದ ಸಿನೇಮಾ ಮತ್ತು ನಾಟಕದ ಬಹಳಷ್ಟು ಹಾಡುಗಳು ತುಳು ನಾಡಿನವರ ಬಾಯಲ್ಲಿ ನಿರಂತರ ಅನುರಣಿಸುವಂಥವೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸೀತಾರಾಮ ಕುಲಾಲ್ ಹಲವಾರು ಸಾಧನೆಗಳಿಗಾಗಿ ಅಭಿನಂದನಾರ್ಹರು. ‘ತುಳುಭವನ’ಕ್ಕೆ ಸರಕಾರದಿಂದ ನಿವೇಶನವನ್ನು ಪಡೆದುದು, ತುಳು ಪಠ್ಯ ಯೋಜನೆಗೆ ಬುನಾದಿ ಹಾಕಿದ್ದು, ತುಳುಲಿಪಿ ಓಲೆಗಳ ಸಂಗ್ರಹದ ಪ್ರಯತ್ನ, ಕುಪ್ಪಂ ವಿಶ್ವವಿದ್ಯಾಲಯದ ಸಂಪರ್ಕದಲ್ಲಿ ಪಿಯಚ್.ಡಿ, ಎಮ್.ಫಿಲ್.ಯೋಜನೆ ಆರಂಭಿಸಿದ್ದು, ಅಕಾಡೆಮಿಯ ವತಿಯಿಂದ ಹತ್ತು ಸಿ.ಡಿ. ಗಳಲ್ಲಿ ತುಳು ಜಾನಪದ ನೃತ್ಯ, ದೈವದ ಕುಣಿತ, ತುಳುನಾಡಿನ ಪ್ರೇಕ್ಷಣೀಯ ಸ್ಥಳಗಳು, ಅಕಾಡೆಮಿ ನಡೆದು ಬಂದ ದಾರಿ ಇತ್ಯಾದಿಗಳನ್ನು ದಾಖಲಿಸಿದ್ದು, ತುಳುವನ್ನು ಸಂವಿಧಾನದಲ್ಲಿ ಸೇರ್ಪಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದು, ‘ಬಲೇ ತುಳು ಕಲ್ಪುಗ’ ಕಾರ್ಯಕ್ರಮವನ್ನು ಆರಂಭಿಸಿದ್ದು ಇತ್ಯಾದಿ ಇಲ್ಲಿ ಉಲ್ಲೇಖನಾರ್ಹ ಸಾಧನೆಗಳು.
‘ರಂಗಕಲಾಭೂಷಣ’ ‘ತುಳು ರತ್ನ’ ‘ಪೆರ್ಮೆದ ತುಳುವೆ’ ‘ತುಳುಸಿರಿ’ ‘ತುಳು ಸಾಹಿತ್ಯ ರತ್ನಾಕರ’ ‘ತೌಳವ ಪ್ರಶಸ್ತಿ’ ಇತ್ಯಾದಿ ಪ್ರಶಸ್ತಿಗಳಿಂದ ಪುರಸ್ಕೃತರಾಗಿ, ಊರು, ಪರವೂರು, ಪರರಾಜ್ಯ, ಪರದೇಶಗಳಲ್ಲಿ ಸನ್ಮಾನಿತರಾಗಿ, ಸದಾ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಯ ಮೇಲ್ಮೆಗಾಗಿ ದುಡಿಯಲು ಮುಂದಾಗುವ ಶ್ರೀ ಸೀತಾರಾಮ ಕುಲಾಲ್ರವರ ಬಹುಮುಖ ಪ್ರತಿಭೆ, ಬಹುಮುಖ ಸಾಧನೆಗಳನ್ನು ಪರಿಗಣಿಸಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2014ರ ಸಾಲಿನ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ.