ಬೆಂಗಳೂರು(ಕುಲಾಲ್ ವರ್ಲ್ಡ್ ನ್ಯೂಸ್): ಮಯೂರ ಕನ್ನಡ ಪ್ರತಿಭಾನ್ವೇಷಣೆ ಸ್ಪರ್ಧೆ-2016-17 ಇದರಲ್ಲಿ ಭಾಗವಹಿಸಿದ ಹಾವೇರಿ ಜಿಲ್ಲೆ ಬ್ಯಾಡಗಿ ಬಿಇಎಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ವೀಣಾ ಕುಂಬಾರ ಅವರು ಪ್ರಥಮ ಸ್ಥಾನ ಗಳಿಸಿ ‘ಮಯೂರ ಅಕ್ಷರವೀರ’ ಪ್ರಶಸ್ತಿ ಜೊತೆಗೆ 50 ಸಾವಿರ ರೂ. ಬಹುಮಾನ ಗೆದ್ದಿದ್ದಾರೆ.

ಕನ್ನಡದ ಮೊದಲ ಅರಸ ಮಯೂರವರ್ಮ. ಅವರ ಸ್ಮರಣೆಯಲ್ಲಿ ಶಿರಾಳಕೊಪ್ಪದ ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿಗೆ ಕನ್ನಡ ಪ್ರತಿಭಾನ್ವೇಷಣೆ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಶುದ್ಧ ಕನ್ನಡ, ಪದರಚನೆ, ಅಕ್ಷರಮಂಥನ, ಪರ್ಯಾಯ ಪದ, ಅಕ್ಷರ ಅವಲೋಕನ, ಶಬ್ದಸಾಮರ್ಥ್ಯ, ಸುಳಿವು ಓದಿ ಪದ ಬರೆಯಿರಿ, ಪದತರ್ಕ, ಪದಕೌಶಲ, ಪದಮಂಥನ ಸೇರಿದಂತೆ ಹಲವು ಹಂತಗಳಲ್ಲಿ ಸ್ಪರ್ಧೆ ನಡೆಸಲಾಗಿತ್ತು. ಸಾಹಿತಿ ನಾ. ಡಿಸೋಜ ಹಾಗೂ ಕಾದಂಬರಿಕಾರ ಕುಂ. ವೀರಭದ್ರಪ್ಪ ನೇತೃತ್ವದಲ್ಲಿ ಪ್ರತಿಭಾವಂತ ಮಕ್ಕಳನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಲಾಗಿದೆ.

