ಕರುಳಬಳ್ಳಿಯ ಹಂಚಿಕೊಂಡಿಲ್ಲ
ಅರಶಿಣ ದಾರಕ್ಕೆ ಕತ್ತು ಬಗ್ಗಿಸು
ಅಂತ ನೀ ಕರೆಯಲಿಲ್ಲ
ನಿನ್ನ ಕೈಗೊಂದು ರೇಷ್ಮೆಯ ದಾರ
ಸುತ್ತಲು ನನಗೆ ಅನಿಸಲೂ ಇಲ್ಲ
ತೋರಿಸೋಣವೆಂದರೆ
ಒಂದು ಗುರುತುಚೀಟಿಯೂ ಇಲ್ಲ
ಹೇಗೆ ಒಪ್ಪಿಸಲಿ ಜಗಕೆ
ಈ ಒಲವಿನ ಉದ್ದ – ಅಗಲಗಳ ಲೆಕ್ಕ ಗಾಲಿಬ್?
…… …. …. …. … …
ಇದು ಅದಲ್ಲ ಅಂದುಕೊಂಡೆ
ತಪ್ಪೇನು?
ಬಣ್ಞ ರೂಪವಿರಲಿ ಗಂಧಕ್ಕೂ ಇತ್ತು
ಹೊಸ ಮತ್ತು
ಅಥವಾ
ಹಾಗೊಂದು ಭ್ರಮೆ
ನನಗೇ ಬೇಕಿತ್ತು
ತೇಲುವ ದೋಣಿಗೆ ತೆರೆಗಳ ಸಖ್ಯ
ಬೇಕಿಲ್ಲ ನದಿಯಾಳದ ಸತ್ಯ
ಹೊಸ ಶೀಶೆಯಲ್ಲಿ ತುಳುಕಿದ್ದು
ಮತ್ತದೇ ಹಳೆಯ
ಅಹಮಿಕೆಯ ಮದ್ಯ
ಭರಿಸುವುದೆಂತು
ಮತ್ತೆ ಮತ್ತೆ ರುಚಿಗೆಡುವ ಈ ದಿಗಿಲ ಗಾಲಿಬ್!
……. …. …. … … …
ನಿನ್ನುಸಿರಿನ ತೇವವಾಗಿ
ನನ್ನೊಂದು ಕಣವಾದರೂ
ಲೀನವಾಗುವ ಖಾತ್ರಿ ಇದ್ದಿದ್ದರೆ
ನಿಂತ ನೆಲೆಯಲ್ಲೇ
ಲಯವಾಗಿ ಕಣಕಣವಾಗಿ
ಹರಿದು ಬಿಡಬಹುದಿತ್ತು ಗಾಲಿಬ್!
* ಪ್ರತಿಭಾ ಕುಡ್ತಡ್ಕ