ಮಂಗಳೂರು(ಡಿ.೦೪, ಕುಲಾಲ್ ವರ್ಲ್ಡ್ ನ್ಯೂಸ್): ಬದುಕಿನಲ್ಲಿ ಎದುರಾಗುವ ಆಕಸ್ಮಿಕ ದುರ್ಘಟನೆ ಕತ್ತಲಲೋಕಕ್ಕೆ ತಳ್ಳಿಬಿಡುತ್ತದೆ. ಶ್ರಮದ ದುಡಿಮೆಯಿಂದ ಬಾಳಬಂಡಿ ಸಾಗಿಸುತ್ತಿದ್ದ ಈ ಯುವಕನ ಕುಟುಂಬದ ಸ್ಥಿತಿಯೀಗ ಅಕ್ಷರಶಃ ಅತಂತ್ರ. ಕಾಲನ ವಿಪರ್ಯಾಸಕ್ಕೆ ಸಿಕ್ಕಿ ಅಕಾಲಿಕವಾಗಿ ಎಡಗಾಲಿನ ಪಾದವನ್ನು ಕಳೆದುಕೊಂಡು ಅಸಹಾಯಕರಾಗಿ ಪರಿತಪಿಸುತ್ತಿರುವ ಯುವಕನನ್ನು ಕಂಡರೆ ಎಂಥವರ ಕರಳು ಹಿಂಡುತ್ತದೆ.
ಇವರ ಹೆಸರು ರೋಹಿತಾಶ್ವ. ವಯಸ್ಸು 39 ವರ್ಷ. ಉಳ್ಳಾಲ ಸಮೀಪದ ಕುಂಪಲದ ನಿವಾಸಿ, ದಿವಂಗತರಾದ ಉಮೇಶ್ ಕುಲಾಲ್- ಶಾರದಾ ಎಂಬವರ ಪುತ್ರ. ಗಾರೆ ಮೇಸ್ತ್ರಿಯೊಬ್ಬರ ಜೊತೆ ಸಹಾಯಕನಾಗಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಹೀಗಿರುವಾಗ ವಿಧಿಯು ಅವರ ಜೀವನದಲ್ಲಿ ಕ್ರೂರ ಆಟ ಆಡಿಸಿ ಬಿಟ್ಟಿತು. 2017 ಮೇ. 25, ರೋಹಿತಾಶ್ವ ಅವರ ಪಾಲಿಗೆ ಕರಾಳದಿನ. ಆ ದಿನದಂದು ರೋಹಿತಾಶ್ವ ಅವರು ತನ್ನ ಸ್ಕೂಟಿಯಲ್ಲಿ ಕುಂಪಲದಿಂದ ಸಂಬಂಧಿಕರನ್ನು ಕೂರಿಸಿಕೊಂಡು ಮಂಗಳೂರಿಗೆ ತೆರಳುತ್ತಿದ್ದಾಗ ಯಮವೇಗದಲ್ಲಿ ಬಂದ ಮೀನಿನ ಲಾರಿಯೊಂದು ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಇವರ ಎರಡೂ ಕಾಲಿನ ಮೇಲೆ ಲಾರಿಯ ಚಕ್ರ ಹರಿದು ಬಿಟ್ಟಿತು. ಎರಡೂ ಕಾಲಿನ ಮೂಳೆ ಮುರಿತಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿ ಎಜೆ ಆಸ್ಪತ್ರೆಗೆ ದಾಖಲಾದ ಇವರ ಬಲ ಕಾಲು ಚಿಕಿತ್ಸೆಗೆ ಸ್ಪಂದಿಸಿದರೆ, ಎಡಗಾಲಿನ ಪಾದವನ್ನೇ ಕಳೆದುಕೊಳ್ಳಬೇಕಾಯಿತು.
ಚಿಕಿತ್ಸೆಗಾಗಿ ಸಾಲ: ಎರಡು ಕಾಲಿಗೂ ಸ್ಟೀಲ್ ರಾಡ್ ಅಳವಡಿಸಿ ಹಲವು ದಿನ ಚಿಕಿತ್ಸೆ ಪಡೆದ ರೋಹಿತಾಶ್ವ ಅವರ ಆಸ್ಪತ್ರೆ ಬಿಲ್ ನಾಲ್ಕು ಲಕ್ಷ ರೂ. ದಾಟಿತ್ತು. ಪರಿಚಯಸ್ಥರು/ಸಂಬಂಧಿಕರಿಂದ ಸಾಲಸೋಲ ಮಾಡಿ ಆಸ್ಪತ್ರೆ ಬಿಲ್ ಪಾವತಿಸಿ ಬಿಡುಗಡೆಗೊಂಡರೂ ಬಲಗಾಲಿಗೆ ಹಾಕಿಸಿಕೊಂಡ ಸ್ಟೀಲ್ ರಾಡ್ ನ್ನು ಇನ್ನಷ್ಟೇ ತೆಗೆಯಬೇಕಾಗಿದೆ.
ಬಡ ಸಂಸಾರ : ರೋಹಿತಾಶ್ವ ಅವರಿಗೆ ಮೂರು ವರ್ಷದ ಹಿಂದೆ ಬಡ ಕುಟುಂಬದ ಲೇಖನಾ ಅವರೊಂದಿಗೆ ವಿವಾಹವಾಗಿದ್ದು, ರಿಷಿಕ್ ಎಂಬ ಆರು ತಿಂಗಳ ಪುಟ್ಟ ಮಗುವಿದೆ. ರೋಹಿತಾಶ್ವ ಅವರ ದುಡಿಮೆಯನ್ನೇ ನಂಬಿ ಬದುಕುತ್ತಿದ್ದ ಇವರ ಆರ್ಥಿಕ ಸ್ಥಿತಿ ತೀರಾ ಅತಂತ್ರವಾಗಿದ್ದು, ಎಲ್ಲರೊಡನೆ ಕೂಡಿ, ಬೆರೆತು ಬದುಕುವ ಕಾಲದಲ್ಲಿ ವಿಧಿಯ ಕ್ರೂರತೆಗೆ ಬಲಿಯಾಗಿ ಎಲ್ಲವನ್ನೂ ಕಳಕೊಂಡು ಪರರನ್ನು ಅವಲಂಬಿಸಿ ಜೀವಿಸುವ ಅಸಹಾಯಕ ಪರಿಸ್ಥಿತಿ ಎದುರಾಗಿದೆ. ಮಾಲೇಮಾರ್ ಸಮೀಪ ಬಾಡಿಗೆ ಮನೆಯಲ್ಲಿದ್ದ ಈ ಕುಟುಂಬ ಅಪಘಾತದ ಬಳಿಕ ಬಾಡಿಗೆ ನೀಡಲಾಗದೇ ರೋಹಿತಾಶ್ವ ಅವರ ಅಕ್ಕನ ಮನೆಯಲ್ಲಿ ಆಶ್ರಯ ಪಡೆದಿದೆ.
ಆರ್ಥಿಕ ಮುಗ್ಗಟ್ಟು : ಒಂದು ಕಾಲು ಜಖಂಗೊಂಡು ಕಾಲಿನ ಶಕ್ತಿ ಕಳೆದುಕೊಂಡಿದ್ದರೆ, ಮತ್ತೊಂದು ಕಾಲಿನ ಪಾದವೇ ತುಂಡಾದ್ದರಿಂದ ಇದೀಗ ಇನ್ನೊಬ್ಬರ ಸಹಾಯವಿಲ್ಲದೆ ನಡೆದಾಡಲಾಗುತ್ತಿಲ್ಲ. ಹೀಗಾಗಿ ಕೆಲಸವಿಲ್ಲದೇ ಬೇರೆ ಯಾವುದೇ ಸಂಪಾದನೆಯ ಮೂಲವೂ ಇಲ್ಲದೆ ವಿಧಿಯ ಕ್ರೂರತೆಗೆ ರೋಹಿತಾಶ್ವ ಕುಟುಂಬ ಇತರರನ್ನು ಆಶ್ರಯಿಸಬೇಕಾದ ಅಸಹಾಯಕ ಸ್ಥಿತಿ ಎದುರಾಗಿದೆ. ಈ ಮಧ್ಯೆ ಮುಂದಿನ ತನ್ನ ಚಿಕಿತ್ಸೆಗೆ ಹಣ ಹೊಂದಿಸಬೇಕಾದ ಅನಿವಾರ್ಯತೆ ಕೂಡಾ ಇದೆ. ಕೃತಕ ಪಾದವನ್ನು ಜೋಡಿಸಿದಲ್ಲಿ ಕನಿಷ್ಟ ನಡೆದಾಡಲು ಸಾಧ್ಯ ಎಂಬ ನಿರೀಕ್ಷೆ ಅವರಲ್ಲಿ ಹುಟ್ಟಿಕೊಂಡಿದೆ. ಅವರ ಈಗಿನ ಸ್ಥಿತಿಯಲ್ಲಿ ದುಬಾರಿ ವೆಚ್ಚದ ಪರಿಕರವನ್ನು ಖರೀದಿಸುವುದು ಅಸಾಧ್ಯ. ಚಿಕಿತ್ಸೆ, ಮದ್ದಿಗಾಗಿ ಈಗಾಗಲೇ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಕೈ ಬರಿದು ಮಾಡಿಕೊಂಡಿರುವ ರೋಹಿತಾಶ್ವ ಅವರ ಜೀವನ ನಿರ್ವಹಣೆಗೆ ಸಹೃದಯಿ ದಾನಿಗಳ ನೆರವು ಎದುರು ನೋಡುತ್ತಿದ್ದಾರೆ.
ನೆರವಿಗಾಗಿ ಮೊರೆ ಇಡುತ್ತಿರುವ ರೋಹಿತಾಶ್ವ ಅವರಿಗೆ ಸಹಾಯ ಮಾಡಲಿಚ್ಛಿಸುವ ದಾನಿಗಳು ಅವರ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು.
Rohithashva
Corporation Bank
Ashoknagar Branch
Mangalore, Karnataka
SB A/c No. 520101000592869
Ifsc code : CORP 0001199
Mobile No : 9164522827
—————————————–
ಚಿತ್ರ-ಮಾಹಿತಿ : ಹೇಮಂತ್ ಕುಮಾರ್, ಕಿನ್ನಿಗೋಳಿ