ಸಿದ್ಧರಾಮಯ್ಯನವರೇ.. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ತಾನು ಮುಖ್ಯಮ೦ತ್ರಿಯಾದರೆ ರಾಜ್ಯಮಟ್ಟದ ಕುಂಬಾರ ಮಂಡಳಿ ಸ್ಥಾಪನೆ ಮಾಡಿ, ಅದಕ್ಕೆ ಕುಂಬಾರ ಜನಾಂಗದವರನ್ನೇ ಅಧ್ಯಕ್ಷರನ್ನಾಗಿ ಮಾಡುತ್ತೇನೆ ಎಂದು ಹೇಳಿ ಕಾಟಾಚಾರಕ್ಕೆ ಎಂಬಂತೆ ಒಬ್ಬರು ಅಧ್ಯಕ್ಷರನ್ನು ನೇಮಿಸಿದಿರಿ. ಆದರೆ ಇದನ್ನು ದೇವರಾಜ ಅರಸು ನಿಗಮದಿಂದ ಪತ್ರ್ಯೇಕ ಮಾಡಿ, ಅನುದಾನ ಕೊಡಿ ಎಂದರೆ `ಹೋಗಯ್ಯಾ ರಾಜ್ಯದಲ್ಲಿ ಕುಂಬಾರರು ಮಾತ್ರ ಇರೋದಲ್ಲ’ ಎಂದು ಹೀಯಾಳಿಸಿದಿರಿ.. ಇಲ್ಲಿಯವರೆಗೆ ಕುಂಬಾರರನ್ನು ಕಡೆಗಣಿಸಿದ್ದು ಸಾಕಾಗದೆ ಇದೀಗ ಬಲಿಷ್ಠ ಸಮುದಾಯಕ್ಕೆ ಭೂಮಿ ನೀಡಿ, ಅತಿ ಹಿಂದುಳಿದ ಕುಂಬಾರರಿಗೆ ಅನ್ಯಾಯ ಮಾಡಲು ಹೊರಟಿದ್ದೀರಿ.. ಇದ್ಯಾವ ನ್ಯಾಯ? ಕುಂಬಾರರು ತಾಳ್ಮೆಯ ಸಾಕಾರಮೂರ್ತಿಗಳು. ನೀವು ಮಾಡಿದ್ದೆಲ್ಲವನ್ನೂ ಸಹಿಸಿಕೊಳ್ಳುತ್ತಾರೆ ಎಂದು ಭಾವಿಸಬೇಡಿ. ಸಮಯ ಮೀರಿಲ್ಲ ಇನ್ನಾದರೂ ಎಚ್ಚೆತ್ತುಕೊಳ್ಳಿ.. ಗಟ್ಟಿ ಧ್ವನಿ ಇಲ್ಲದ ಸಮಾಜಕ್ಕೆ ಧ್ವನಿಯಾಗುವ ಕೆಲಸವನ್ನು ಮಾಡಬೇಕಾದ ನೀವು ಓಟ್ ಬ್ಯಾಂಕಿನ ಲೆಕ್ಕಾಚಾರ ಹಾಕುತ್ತಾ ಕೀಳು ರಾಜಕೀಯ ಮಾಡಬೇಡಿ.
ಸಿದ್ಧರಾಮಯ್ಯ ಸರಕಾರ ಕುಂಬಾರ ಜನಾಂಗದವರವನ್ನು ಮತ್ತೆ ಮತ್ತೆ ಕಡೆಗಣಿಸುತ್ತಿದೆ. ಈ ಜನಾಂಗಕ್ಕೆ ಸಾಮಾಜಿಕ ನ್ಯಾಯ ಕೊಡಿ ಎನ್ನುವ ಕೂಗಿಗೆ ರಾಜ್ಯದ ಕಾಂಗ್ರೆಸ್ ಸರಕಾರ ಧ್ವನಿಯಾಗುತ್ತಿಲ್ಲ ಎಂಬುವುದಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ. ವಿಧಾನಸಭೆ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ರಾಜ್ಯದ ಸುಮಾರು 36 ಜಾತಿ, ಸಮುದಾಯಗಳಿಗೆ ಮಠ ಮಾನ್ಯಗಳನ್ನು ಕಟ್ಟಿಕೊಳ್ಳಲು ಭೂಮಿ ಕೊಟ್ಟಿರುವ ಸಿದ್ಧರಾಮಯ್ಯ ಕುಂಬಾರ ಸಮುದಾಯವನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದಾರೆ. ಈ ಮೂಲಕ ರಾಜ್ಯದ ಕುಂಬಾರ ಸಮುದಾಯವನ್ನು ವ್ಯವಸ್ಥಿತವಾಗಿ ತುಳಿಯುವ ಕೆಲಸವು ಪ್ರಸಕ್ತ ರಾಜಕೀಯದಲ್ಲಿ ಆಗುತ್ತಿದೆಯೇ ಎಂಬ ಸಂಶಯ ಮೂಡಿದೆ.
ಬಾಯಿ ಬಿಟ್ಟರೆ ಸಿದ್ಧರಾಮಯ್ಯ ಸಾಮಾಜಿಕ ನ್ಯಾಯ, ಸಮಬಾಳು-ಸಮಪಾಲು ಎಂದು ಘೋಷಣೆ ಮಾಡಿ ಮಾತನಾಡುತ್ತಾರೆ. ಆದರೆ ಜಾರಿಯಲ್ಲಿ ಮಾತ್ರ ಇಲ್ಲದಂತಾಗಿದೆ. ಸದಾ ಅಹಿಂದ ಜಪ ಜಪಿಸುತ್ತಿದ್ದ ಸಿದ್ಧರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ಬಳಿಕವಾದರೂ ಶತ-ಶತಮಾನಗಳಿಂದಲೂ ಶೋಷಣೆಗೆ ಒಳಗಾಗುತ್ತಿರುವ, ಹಿಂದುಳಿದ ಕುಂಬಾರ ಸಮುದಾಯಕ್ಕೆ ನ್ಯಾಯ ಸಿಗಬಹುದು ಎಂಬ ಭರವಸೆ ಇದೀಗ ಸಂಪೂರ್ಣ ಮಣ್ಣು ಪಾಲಾಗಿದೆ. ಇದು ನಿಜಕ್ಕೂ ದುಃಖದ ಸಂಗತಿ.
ಡಿ.೧೧ರಂದು ಸಚಿವ ಸಂಪುಟ ಸಭೆಯಲ್ಲಿ ಹಲವು ಹಿಂದುಳಿದ ಜಾತಿಯವರಿಗೆ ಜಾಗ ನೀಡುವ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಗುತ್ತಿಗೆ ಆಧಾರದ ಮೇಲೆ ಬೆಂಗಳೂರಿನ ಹೊರವಲಯದಲ್ಲಿ ಬೆಲೆ ಬಾಳುವ 58.20 ಎಕರೆ ಭೂಮಿ ಮಂಜೂರು ಮಾಡಿದೆ. ಈ ಜಾತಿಯಲ್ಲಿ ಕುರುಬ, ಈಡಿಗ, ವಿಶ್ವಕರ್ಮ, ಕುರುಹಿನ ಶೆಟ್ಟಿ, ಪದ್ಮಸಾಲಿ, ಮಡಿವಾಳ, ಒಕ್ಕಲಿಗ, ವೀರಶೈವ, ಗಾಣಿಗ, ಉಪ್ಪಾರ ಸೇರಿದಂತೆ 36 ಜಾತಿ ಸಂಘಟನೆಗಳು, ಸಮುದಾಯ, ಮಠ, ಸೇವಾ ಸಂಘ ಸಂಸ್ಥೆಗಳಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲಾಗಿದೆ. ಈ ಜನಾಂಗದ ಶೈಕ್ಷಣಿಕ ಸಂಸ್ಥೆಗಳು, ವಿದ್ಯಾರ್ಥಿನಿಲಯ ಸ್ಥಾಪನೆ ಸೇರಿದಂತೆ ಜನಾಂಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಈ ಭೂಮಿ ಮಂಜೂರು ಮಾಡಲಾಗಿದೆ. ಆದರೆ ಈ ಪಟ್ಟಿಯಲ್ಲಿ ಕುಂಬಾರ ಸಮುದಾಯವನ್ನು ಪರಿಗಣಿಸಿಲ್ಲ. ಇದಕ್ಕೆ ಕಾರಣ ಏನು ? ರಾಜ್ಯ ಸರಕಾರ ಎಲ್ಲ ಜಾತಿ, ಜನಾಂಗದವರನ್ನು ಸಮಾನವಾಗಿ ಕಾಣುತ್ತಿಲ್ಲ ಯಾಕೆ ? ಈ ಸಮುದಾಯ ರಾಜಕೀಯವಾಗಿ ಬಲಿಷ್ಠವಿಲ್ಲ ಎನ್ನುವ ಕಾರಣಕ್ಕಾಗಿಯೇ ? ಇತರ ಸಮುದಾಯಗಳಿಗೆ ಕಲ್ಪಿಸಿದ ವಿಶೇಷ ಸೌಲಭ್ಯಗಳನ್ನು ಪಡೆಯಲು ಕುಂಬಾರ ಸಮುದಾಯದವರು ಯೋಗ್ಯರಲ್ಲವೇ ? ಸಾಂ ಪ್ರದಾಯಿಕವಾಗಿ ಇದ್ದ ವೃತ್ತಿಯನ್ನೂ ಬಿಡುವಂತಾಗಿರುವ ಸಮುದಾಯದ ಲಕ್ಷಾಂತರ ಕುಟುಂಬಗಳಿಗೆ ಸೂಕ್ತ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಪ್ರಾತಿನಿಧ್ಯ ಮರೀಚಿಕೆಯೇ ?
ಈ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ತಳಮಟ್ಟದಿಂದ ಮಣ್ಣುಹೊತ್ತು ದುಡಿದ, ದುಡಿಯುತ್ತಿರುವ ಸಮುದಾಯದ ನಾಯಕರು ಏನು ಮಾಡುತ್ತಿದ್ದಾರೆ? ಈ ಕುರಿತು ಸಿದ್ಧರಾಮಯ್ಯ ಅವರ ಗಮನಸೆಳೆಯಲು ಅವರಿಗೆ ಸಾಧ್ಯವಾಗುತ್ತಿಲ್ಲವೇಕೆ ? ಸಮುದಾಯದ ಕಾರ್ಯಕರ್ತರನ್ನು ತಮಗೆ ಬೇಕಾದಂತೆ ಉಪಯೋಗಿಸಿಕೊಂಡು ಅಧಿಕಾರ ಸಿಕ್ಕಾಗ ಅವರನ್ನು ಮರೆತುಬಿಡುವ ಕುರಿತು ಗಟ್ಟಿಧ್ವನಿ ಯಾಕೆ ಎತ್ತಲಾಗುತ್ತಿಲ್ಲ? ಮುಖ್ಯಮಂತ್ರಿ ಬಳಿ ಸಮುದಾಯದ ಸಮಸ್ಯೆಯನ್ನು ತೆರೆದಿಟ್ಟು ಅವರಿಗೆ ಅರಿವು ಮೂಡಿಸುವ ಕೆಲಸವನ್ನು ನಮ್ಮ ನಾಯಕರಿಗೆ ಯಾಕೆ ಮಾಡಲಾಗುತ್ತಿಲ್ಲ ?
ಇತರ ಸಮೂದಾಯವನ್ನು ನಿಂದಿಸದೆ ನೋಯಿಸದೆ ಸಂಘಟಿತ ಕುಂಬಾರ ಸಮೂದಾಯ ನಿರ್ಮಿಸುವ ಸಮಯ ಬಂದಿದೆ. ಈಗಲಾದರೂ ಎಚ್ಚೆತ್ತುಕೊಳ್ಳೋಣ. ಸಮೂದಾಯದ ಸಂಘಟನೆಗೆ ಕೈ ಜೋಡಿಸಿ. ಕುಂಬಾರರ ಶಕ್ತಿ ಸಾಮರ್ಥ್ಯಗಳ ಬಗೆಗೆ ಯಾರಿಗೂ ಅನುಮಾನವಿಲ್ಲ. ಕುಂಬಾರರು ಒಮ್ಮೆ ಹೂಂ..ಕರಿಸಿ ಬೆಂಗಳೂರತ್ತ ಸಂಘಟಿತ ಹೆಜ್ಜೆ ಇಡಬೇಕಾಗಿದೆ. ಕುಂಬಾರ ವಿರೋಧಿ, ದಮನಕಾರಿ ನೀತಿ ಅನುಸರಿಸುತ್ತಿರುವ ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ. ಇನ್ನಾದರೂ ಹೋರಾಡೋಣ ಕುಂಬಾರರ ಶಕ್ತಿ ಮತ್ತು ಸಾಮರ್ಥ್ಯವನ್ನು ನಿರೂಪಿಸೋಣ. ಇಂದಿನ ರಾಜಕೀಯದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುವ ಕುಲಾಲ-ಕುಂಬಾರ ಸಮಾಜಕ್ಕೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟಿರುವ ಎಲ್ಲರೂ ಇದಕ್ಕಾಗಿ ಧ್ವನಿ ಸೇರಿಸಬೇಕಾಗಿದೆ.
ಸಿದ್ಧರಾಮಯ್ಯರೇ.. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ತಾನು ಮುಖ್ಯಮ೦ತ್ರಿಯಾದರೆ ರಾಜ್ಯಮಟ್ಟದ ಕುಂಬಾರ ಮಂಡಳಿ ಸ್ಥಾಪನೆ ಮಾಡಿ, ಅದಕ್ಕೆ ಕುಂಬಾರ ಜನಾಂಗದವರನ್ನೇ ಅಧ್ಯಕ್ಷರನ್ನಾಗಿ ಮಾಡುತ್ತೇನೆ ಎಂದು ಹೇಳಿ ಕಾಟಾಚಾರಕ್ಕೆ ಎಂಬಂತೆ ಒಬ್ಬರು ಅಧ್ಯಕ್ಷರನ್ನು ನೇಮಿಸಿದಿರಿ. ಆದರೆ ಇದನ್ನು ದೇವರಾಜ ಅರಸು ನಿಗಮದಿಂದ ಪತ್ರ್ಯೇಕ ಮಾಡಿ, ಅನುದಾನ ಕೊಡಿ ಎಂದರೆ `ಹೋಗಯ್ಯಾ ರಾಜ್ಯದಲ್ಲಿ ಕುಂಬಾರರು ಮಾತ್ರ ಇರೋದಲ್ಲ’ ಎಂದು ಹೀಯಾಳಿಸಿದಿರಿ.. ಇಲ್ಲಿಯವರೆಗೆ ಕುಂಬಾರರನ್ನು ಕಡೆಗಣಿಸಿದ್ದು ಸಾಕಾಗದೆ ಇದೀಗ ಬಲಿಷ್ಠ ಸಮುದಾಯಕ್ಕೆ ಭೂಮಿ ನೀಡಿ, ಅತಿ ಹಿಂದುಳಿದ ಕುಂಬಾರರಿಗೆ ಅನ್ಯಾಯ ಮಾಡಲು ಹೊರಟಿದ್ದೀರಿ.. ಇದ್ಯಾವ ನ್ಯಾಯ? ಕುಂಬಾರರು ತಾಳ್ಮೆಯ ಸಾಕಾರಮೂರ್ತಿಗಳು. ನೀವು ಮಾಡಿದ್ದೆಲ್ಲವನ್ನೂ ಸಹಿಸಿಕೊಳ್ಳುತ್ತಾರೆ ಎಂದು ಭಾವಿಸಬೇಡಿ. ಸಮಯ ಮೀರಿಲ್ಲ ಇನ್ನಾದರೂ ಎಚ್ಚೆತ್ತುಕೊಳ್ಳಿ.. ಗಟ್ಟಿ ಧ್ವನಿ ಇಲ್ಲದ ಸಮಾಜಕ್ಕೆ ಧ್ವನಿಯಾಗುವ ಕೆಲಸವನ್ನು ಮಾಡಬೇಕಾದ ನೀವು ಓಟ್ ಬ್ಯಾಂಕಿನ ಲೆಕ್ಕಾಚಾರ ಹಾಕುತ್ತಾ ಕೀಳು ರಾಜಕೀಯ ಮಾಡಬೇಡಿ.
ದಿನೇಶ್ ಬಂಗೇರ ಇರ್ವತ್ತೂರು





