ಸಂಸ್ಕೃತಿ ಎಂಬುದು ಸಮೂಹ ಸಮ್ಮತ ಜೀವನ ಪದ್ಧತಿ. ಈ ಜೀವನ ಕ್ರಮದೊಳಗೆ ಸಮಾಜದ ಎಲ್ಲ ವರ್ಗಗಳೂ ನಿರ್ದಿಷ್ಟ ಪಾಲನ್ನು ಪಡೆದುಕೊಂಡಿರುತ್ತವೆ. ಹಾಗಾಗಿ ಪ್ರತಿವರ್ಗವೂ ಆ ಸಂಸ್ಕೃತಿಯ ಅವಿಭಾಜ್ಯ ಅಂಗಗಳು. ಅವುಗಳ ಸಂಪೂರ್ಣ ಪಾಲುದಾರಿಕೆ ಸಂಸ್ಕೃತಿಯೊಂದನ್ನು ಬಹುಮುಖಿಯಾಗಿ ರೂಪಿಸುತ್ತದೆ. ತುಳುವರ ದೇವರು-ನಾಗ-ದೈವಾರಾಧನೆಯೂ ತುಳುವ ಸಮಾಜದ ವಿವಿಧ ಜಾತಿಗಳ, ಸಮುದಾಯಗಳ ಭಾಗವಹಿಸುವಿಕೆಯಿಂದ ರೂಪುಗೊಂಡು ಬೆಳೆದು ಬಂದಿದೆ. ಈ ಆಚರಣೆಗಳಲ್ಲಿ ಎಲ್ಲರೂ ಒಂದಾಗಿ ತಮಗಾಗಿ ಪರಂಪರೆ ಕಾಯ್ದಿರಿಸಿದ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಹೀಗೆ ತುಳುನಾಡಿನ ದೇವರು-ದೈವಾರಾಧನೆಗೂ ಕುಲಾಲ ಸಮುದಾಯಕ್ಕೂ ಬಹಳ ವಿಶೇಷವಾದ ನಂಟಿದೆ. ದೈವ-ದೇವರ ಸೇವೆಯಲ್ಲಿ ಕೆಲವೆಡೆ ಕುಲಾಲರು ಪ್ರಮುಖ ಅರ್ಚಕರಾಗಿ, ಪಲ್ಲಕ್ಕಿ ಹೊರುವ ಸೇವಕರಾಗಿ, ಅಡುಗೆ ತಯಾರಿಸುವುದು ಮುಂತಾದ ಸೇವೆಗಳನ್ನು ಅನಾದಿಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ. ಹೀಗಾಗಿ ಈ ಸಮುದಾಯಕ್ಕೆ ವಿಶೇಷ ಮರ್ಯಾದೆ ನೀಡುವ ಪದ್ಧತಿಯೂ ಇತ್ತು. ಕಾಲಾಂತರದಲ್ಲಿ ಇಂತಹ ಆಚರಣೆಗಳು ಕಡೆಗಣಿಸಲ್ಪಟ್ಟ ಉದಾಹರಣೆಗಳೂ ಇವೆ. ಆದರೆ ಕೆಲವೆಡೆ ಇಂದಿಗೂ ಇಂಥ ಪದ್ಧತಿ ಆಚರಣೆಯಲ್ಲಿದೆ ಎನ್ನುವುದೇ ಸಮಾಧಾನದ ಸಂಗತಿ.

ಪುರಾಣ ಕಾಲದಲ್ಲಿ ಕುಲಾಲ ಸಮುದಾಯದ ಹಿರಿಯರು ಮಾಡಿದ ಸೇವೆಗೆ ಪ್ರತಿಯಾಗಿ ಇಂದಿಗೂ ತಮ್ಮ ವಾರ್ಷಿಕ ಜಾತ್ರೆಯ ಸಂದರ್ಭ ವಿಶೇಷ ಮರ್ಯಾದೆಯನ್ನು ನೀಡುತ್ತಾ ಬಂದಿರುವ ಕ್ಷೇತ್ರವೊಂದಿದೆ. ಅದುವೇ ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ. ತುಳುನಾಡಿನ ಧಾರ್ಮಿಕ, ಸಾಂಸ್ಕೃತಿಕ ಹಿನ್ನೆಲೆಯುಳ್ಳ ಮಣ್ಣಿನ ಮೂಲ ಆರಾಧನೆಗೆ ವೈದಿಕ ಮೆರುಗನ್ನು ನೀಡಿದ ಈ ದೇವಳದ ಷಷ್ಠಿ ಹಾಗೂ ವಾರ್ಷಿಕ ಮಹೋತ್ಸವದ ದಿನ ಕುಲಾಲ-ಮೂಲ್ಯ ಸಮುದಾಯದ ಗ್ರಾಮಸ್ಥರಿಗೆ ವಿಶೇಷ ಗೌರವವನ್ನು ಇಂದಿಗೂ ನೀಡುತ್ತಾ ಬಂದಿದೆ. ಹಿಂದಿನ ಕಾಲದಲ್ಲಿ ತೋಕೂರು ಆಸುಪಾಸಿನ ಹತ್ತೊಂಬತ್ತು ಗ್ರಾಮಗಳಲ್ಲಿ ಕುಂಬಾರಿಕೆಯನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ಹಲವಾರು ಕುಲಾಲ ಕುಟುಂಬಗಳು ಇದ್ದವು. ಆದ್ದರಿಂದ ಇಲ್ಲಿಯ ಕುಂಬಾರಿಕೆಗೂ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಅವಿನಾಭಾವ ಸಂಬಂಧವಿತ್ತು.

ಈ ಕುರಿತು ಇರುವ ಪುರಾಣ ಕಥೆಯೊಂದರ ಪ್ರಕಾರ ಮಾಂಟ್ರಾಡಿ ಸುಬ್ರಾಯ ಶಾನುಭೋಗರಿಗೆ ಕೆರೆಕಾಡಿನಲ್ಲಿ ದನ ಮೇಯಿಸುವಾಗ ಒಬ್ಬ ಮಾಣಿಯು ತೋಕೂರಿಗೆ ಹೋಗುವ ದಾರಿಯನ್ನು ಕೇಳುತ್ತಾನೆ. ಅದರಂತೆ ದಾರಿ ತೋರಿಸಲು ಶಾನುಭೋಗರು ಮುಂದಾಗಿ ಮಾಣಿಯನ್ನು ತನ್ನ ಹಿಂಬಾಲಿಸಲು ಹೇಳುತ್ತಾರೆ. ತೋಕೂರು ಹತ್ತಿರವಾಗುತ್ತಿದ್ದಂತೆ ಹಿಂತಿರುಗಿ ನೋಡಿದರೆ ಆ ಮಾಣಿ ತನ್ನ ಹಿಂದೆ ಕಾಣಿಸದೇ ಮಾಯವಾಗಿರುವುದು ಕಂಡು ಬಂತು. ಅಲ್ಲಿಂದ ಹಿಂತಿರುಗಬೇಕೆನ್ನುವಷ್ಟರಲ್ಲಿ ಶಾನುಭೋಗರಿಗೆ ಅಲ್ಲಿಯೇ ಇರುವ ಅಮಟೆ ಮರದ ಕೆಳಗೆ ಮುಳ್ಳಿನ ರಾಶಿಯಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಸುಂದರ ಮೂರ್ತಿಯೊಂದು ಕಾಣಿಸಿತು. ಅದನ್ನು ಊರಿನ ಅರಸರ/ಹಿರಿಯರ ಮುಂದಾಳುತ್ವದಲ್ಲಿ ಮುಳಿಹುಲ್ಲಿನ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ. ಕ್ರಮೇಣ ಪಂಚಮಿ ಹಾಗೂ ಷಷ್ಠಿ ಈ ಎರಡು ದಿವಸಗಳಲ್ಲಿ ಉತ್ಸವ ಆಚರಿಸಲ್ಪಡುತ್ತದೆ. ಆ ಉತ್ಸವದ ಸಂದರ್ಭ ಅನ್ನ ಸಂತರ್ಪಣೆಯನ್ನು ಮಾಡಲು ಹಲವು ದೊಡ್ಡ ಪಾತ್ರೆಗಳ ಅವಶ್ಯಕತೆ ಇತ್ತು. ಆ ದಿನಗಳಲ್ಲಿ ಸುಬ್ರಾಯ ಶಾನುಭೋಗರ ಒಕ್ಕಲಿನಲ್ಲಿ ಐತು ಮೂಲ್ಯ ಹಾಗೂ ಅವರ ಮಗ ಸೋಮ ಮೂಲ್ಯ ಎಂಬವರು ವಾಸವಿದ್ದರು. ಇವರು ಕುಂಬಾರಿಕೆ ವೃತ್ತಿಯನ್ನು ಮಾಡುತ್ತಿದ್ದು ಪಾತ್ರೆ-ಪಗಡಿಗಳನ್ನು ತಯಾರಿಸುತ್ತಿದ್ದರು. ಅಂತಹ ಬಡತನದ ದಿನಗಳಲ್ಲಿ ಊರಿನ ಶ್ರೀ ಸುಬ್ರಹ್ಮಣ್ಯ ದೇವರ ಉತ್ಸವಕ್ಕೆ ಅನ್ನ ಸಂತರ್ಪಣೆಗಾಗಿ ದೊಡ್ಡ ಪಾತ್ರೆಗಳನ್ನು ತಯಾರಿಸಿಕೊಡಲು ಇವರ ಬಳಿ ಶಾನುಭೋಗರು ಕೇಳಿಕೊಳ್ಳುತ್ತಾರೆ. ಆಗ ಐತು ಮೂಲ್ಯರು ಈ ಕೆಲಸವನ್ನು ಬಹಳ ಸಂತಸದಿಂದ ಒಪ್ಪಿಕೊಂಡು ಪಾತ್ರೆಗಳನ್ನು ತಯಾರಿಸಿ ಕೊಡುತ್ತಾರೆ. ವಿಶೇಷವೆಂದರೆ ಇಂತಹ ಉತ್ಸವದ ಅನ್ನ ಸಂತರ್ಪಣೆಗಾಗಿ ನಿರ್ಮಿಸಿಕೊಟ್ಟ ದೊಡ್ಡ ದೊಡ್ಡ ಪಾತ್ರೆಗಳನ್ನು ಮತ್ತೆಂದೂ ತನ್ನ ಜೀವಮಾನದಲ್ಲಿ ಮಾಡಲಾಗಲಿಲ್ಲವಂತೆ. ಐತು ಮೂಲ್ಯರು ದೇವರ ಸೇವೆಗೆ ಒದಗಿಸಿಕೊಟ್ಟ ಪಾತ್ರೆಯಿಂದ ಖುಷಿಗೊಂಡ ಶಾನುಭೋಗರ ಹೇಳಿಕೆಯ ಪ್ರಕಾರ ಸುಬ್ರಹ್ಮಣ್ಯ ದೇವರ ಷಷ್ಠಿಯ ಪ್ರಥಮ ದಿನದಂದು ರಾತ್ರಿ ಚಂದ್ರಮಂಡಲ ಬಲಿ ಸೇವೆಯ ಬಳಿಕ ತೋಕೂರು ವ್ಯಾಪ್ತಿಗೆ ಸಂಬಂಧಪಟ್ಟ 19 ಗ್ರಾಮಗಳ ಕುಲಾಲ ಯಾನೆ ಮೂಲ್ಯ ಬಂಧುಗಳ ಏಳು ಸುತ್ತುಬಲಿ ಮತ್ತು ಅಜಕಾಯಿ (ತೆಂಗಿನಕಾಯಿ) ಮರ್ಯಾದೆ ಆರಂಭವಾಯಿತು. ಕುಲಾಲ ಬಂಧುಗಳ ಈ ಬಲಿಸೇವೆಯು ಇಂದಿಗೂ ಮುಂದುವರಿಯುತ್ತಿದ್ದು, ಕುಲಾಲ ಸಮಾಜದ ಹಿರಿ-ಕಿರಿಯರು ಈ ಸೇವೆಯಲ್ಲಿ ಭಯ ಭಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ.
ಸಮುದಾಯದ ನಿರಾಸಕ್ತಿ !
ದೇವಳವೊಂದರಲ್ಲಿ ಐತಿಹಾಸಿಕವಾಗಿ ಕುಲಾಲ ಸಮುದಾಯಕ್ಕೆ ನೀಡುತ್ತಿರುವ ವಿಶೇಷ ಗೌರವ ಇದಾಗಿದ್ದರೂ ಕ್ರಮೇಣ ಈ ಪದ್ಧತಿಯಲ್ಲಿ ಸಮುದಾಯ ಬಂಧುಗಳ ಭಾಗವಹಿಸುವಿಕೆಯಲ್ಲಿ ನಿರಾಸಕ್ತಿ ಮಾತ್ರ ಎದ್ದು ಕಾಣುತ್ತಿರುವುದು ಸ್ಪಷ್ಟವಾಗುತ್ತಿದೆ. ಹಳ್ಳಿಜೀವನದ, ಆಧುನಿಕ ಸೌಕರ್ಯ-ಸೌಲಭ್ಯಗಳಿನ್ನೂ ಕಾಲಿಟ್ಟಿರದ ಅವತ್ತಿನ ದಿನಗಳಲ್ಲಿ ಈ ಸೇವೆಯಲ್ಲಿ ಗ್ರಾಮದ ಸಾವಿರಾರು ಬಂಧುಗಳು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ ಕೃತಾರ್ಥರಾಗುತ್ತಿದ್ದರು. ಊರಿನ ಜಾತ್ರೆಯೆಂದರೆ ಊರಿನ ಕಳೆಯೇ ಬದಲಾಗುತ್ತಿತ್ತು ಊರ ಜಾತ್ರೆಗೆ ಯಾರಿಗೂ ಆಮಂತ್ರಣ ಕೊಡುವ ಪ್ರಮೇಯವೇ ಇರುತ್ತಿರಲಿಲ್ಲ. ದೇಶ-ವಿದೇಶಗಳಲ್ಲಿರುವ ಗ್ರಾಮಸ್ಥರು ಅವರ ಸಂಬಂಧಿಕರು ಇನ್ನಿಲ್ಲದ ಉತ್ಸಾಹದಿಂದ ಜಾತ್ರೆಯ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ತೇರು ಎಳೆಯಲು/ ಸುತ್ತು ಬಲಿಯಲ್ಲಿ ನೂಕುನುಗ್ಗಲು ಉಂಟಾಗುವ ಪ್ರಮೇಯ ಇರುತ್ತಿತ್ತು. ಜಾತ್ರೆಯಲ್ಲಿ ಬೆಳಗ್ಗಿನವರೆಗೂ ಜನಸಂದಣಿ ಗಿಜಿಗುಡುತ್ತಿತ್ತು. ಆದರೆ ಈಗೀಗ ಮಾತ್ರ ಇದರಲ್ಲಿ ಸಮುದಾಯ ಬಂಧುಗಳ ಆಸಕ್ತಿ ತೀರಾ ಕಡಿಮೆಯಾಗಿದೆ ಎನ್ನುವುದು ಮಾತ್ರ ತುಂಬಾ ದುಃಖದ ಸಂಗತಿ. ಈಗೀಗ ನಡುರಾತ್ರಿ ಬಳಿಕ ಕೆಲವೇ ಕೆಲವು ಮಂದಿ ಮಾತ್ರ ಭಕ್ತರು ಜಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಕುಲಾಲರಿಂದ ನಡೆಸಲ್ಪಡುವ `ಸುತ್ತುಬಲಿ’ಗೆ ನಿಲ್ಲಿ ಎಂದು ಗ್ರಾಮದ ಹಿರಿಯರು ಗೋಗರೆಯುವ ಸ್ಥಿತಿ. ಕುಲಾಲ ಬಂಧುಗಳ ಜನ ಸಂಖ್ಯೆಯಿಲ್ಲದೇ ಬೇರೆ ಸಮುದಾಯದವರು ಬಲಿಸೇವೆಯಲ್ಲಿ ಕಾಣಿಸಿಕೊಳ್ಳಬೇಕಾದ ದುಃಸ್ಥಿತಿ ಒದಗಿ ಬಂದಿದೆ.
ಎಚ್ಚೆತ್ತ ಯುವ ಸಮುದಾಯ
ಪರಂಪರಾಗತವಾಗಿ ನಡೆದುಬಂದ ಜಾತ್ರೆಯ ಸಂಪ್ರದಾಯದ ಭಾಗವಹಿಸುವಿಕೆಯಲ್ಲಿ ಸಮುದಾಯ ಬಂಧುಗಳ ಈ ಪರಿಯ ನಿರಾಸಕ್ತಿ ಊರಿನ ಕೆಲವರ ಆತಂಕಕ್ಕೆ ಕಾರಣವಾಗಿದೆ. ಜಾತ್ರೆಯೆಂದರೆ ಕೇವಲ ದೇವರ ಆರಾಧನೆಗೆಂದು ಮಾಡಿದ ಆಡಂಬರದ ಆಚರಣೆಯಲ್ಲ. ಊರ ಜನರೆಲ್ಲ ಒಟ್ಟಾಗಿ ಸಂಭ್ರಮಿಸುವ ಸಲುವಾಗಿ ಮಾಡಿಕೊಂಡ ಪದ್ದತಿ. ಇಂತಹ ಕ್ರಮ ಯಾವುದೇ ಅಡೆ-ತಡೆಗಳಿಲ್ಲದೇ ಸಮಾರೋಪವಾಗಬೇಕು. ಇದೆಲ್ಲಾ ಊರವರ ಬೆಂಬಲವಿಲ್ಲದೇ ಸಾಧ್ಯವೇ ಇಲ್ಲ. ತಲೆ ತಲಾಂತರದಿಂದ ಆಚರಿಸಿಕೊಂಡು ಬಂದ ದೇವಳದ ಪದ್ಧತಿ ಸ್ವಜಾತಿ ಬಾಂಧವರ ನಿರಾಸಕ್ತಿಯಿಂದ ನಿಂತುಹೋಗಬಾರದು ಎಂಬ ನಿಟ್ಟಿನಲ್ಲಿ ಸಮಾನಮನಸ್ಕ ಯುವಕರ ತಂಡ ಎಚ್ಛೆತ್ತುಕೊಂಡಿದೆ. ಅಸಡ್ಡೆ ಮುಂದುವರಿದರೆ ಮುಂದೊಂದು ದಿನ ಪದ್ಧತಿ ಸಂಪೂರ್ಣ ನಿಂತುಹೋಗುವ ಸಂದರ್ಭ ಎದುರಾಗುವುದು ಖಂಡಿತ ಎಂಬುದನ್ನು ಮನಗಂಡ ತಂಡ ಊರ ಯುವಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವುದು ಸಮಾಧಾನದ ಸಂಗತಿ. ಊರಿನ ಯುವಕರು ವಾಟ್ಸಪ್ ಗ್ರೂಪ್ ಒಂದನ್ನು ರಚಿಸಿ, ತಿಂಗಳ ಮೊದಲೇ ತೋಕೂರು ಷಷ್ಠಿಗೆ ಸಂಬಂಧಪಟ್ಟಂತೆ ಸಭೆಯೊಂದನ್ನು ಕರೆದು ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸಿ, ಇದರ ಮಹತ್ವವನ್ನು ತಿಳಿಸಿ, ದೇವರ ಸೇವೆಯಲ್ಲಿ ಊರಿನ ಸಮಾಜದ ಬಾಂಧವರು ಸಕ್ರಿಯವಾಗಿ ಭಾಗವಹಿಸುವಂತೆ ವಿನಂತಿಸಿದೆ. ಇಂತಹ ಹಿಂದಿನ ಎಲ್ಲಾ ಪದ್ದತಿಗಳು, ಆಚರಣೆಗಳು ಜೀವನದ ಖುಷಿಯನ್ನು ಹೆಚ್ಚಿಸಬಲ್ಲದು. ನಮ್ಮ ಬದುಕಲ್ಲಿ ಹೊಸತೇನೋ ಇದೆ ಎಂಬ ಹುರುಪು ಮೂಡಿಸಬಲ್ಲದು. ಈ ನಿಟ್ಟಿನಲ್ಲಿ ಸಭೆಯಿಂದ ನಿರೀಕ್ಷಿತ ಫಲ ಲಭಿಸಿದರೆ ಯುವಕರ ಶ್ರಮ ಸಾರ್ಥಕವೆನಿಸುತ್ತದೆ.
ದೈವಿಕ ಪ್ರಭಾವಲಯದಲ್ಲಿ, ಸಂಸ್ಕೃತಿ-ಸಂಸ್ಕಾರಗಳ ನೆರಳಲ್ಲಿ ನಾವು ಬೆಳೆದಷ್ಟು ನಮ್ಮ ಬದುಕು ಇನ್ನಷ್ಟು ಅರ್ಥಪೂರ್ಣವಾಗುತ್ತದೆ. ಹೀಗಾಗಿ ನಮ್ಮ ಸಮುದಾಯದ ಸಂಪದ್ಭರಿತ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ಕುರಿತು, ವೈವಿಧ್ಯಮಯ ಪರಂಪರೆಯ ಸೊಗಡು, ದೈವ-ದೇವಸ್ಥಾನಗಳಲ್ಲಿ ಕುಲಾಲ ಸಮುದಾಯದ ಪಾತ್ರಗಳ ಬಗ್ಗೆ ತೋಕೂರು ಯುವಕರಂತೆ ಮುಂದಿನ ಪೀಳಿಗೆಗೆ ತಿಳಿ ಹೇಳುವ ಕೆಲಸಗಳು ಆಯಾಯ ಗ್ರಾಮಗಳಲ್ಲಿ ನಡೆಯಬೇಕಾಗಿದೆ. ಮಾನವನ ಬೌದ್ಧಿಕ ಪ್ರಗತಿ, ಸಾಮಾಜಿಕ ಸ್ಥಿತ್ಯಂತರ, ನೈತಿಕ ಮೌಲ್ಯಗಳ ಹಿನ್ನೆಲೆಯಲ್ಲಿ ಪರಂಪರೆಯ ರಕ್ಷಣೆಗೆ ನಮ್ಮ ಸಮಾಜ ಕಾರ್ಯಪ್ರವೃತ್ತವಾದಲ್ಲಿ ಮುಂದಿನ ಪೀಳಿಗೆಗೆ ನಾವು ನೀಡುವ ಕೊಡುಗೆ ಅಪಾರ ಎನಿಸಬಲ್ಲದು. ಅಂದ ಹಾಗೆ ಈ ಬಾರಿಯ ತೋಕೂರು ಷಷ್ಠಿ ಜಾತ್ರೆ ಇದೇ ನವೆಂಬರ್ 24ರಂದು ನಡೆಯಲಿದೆ.
ದಿನೇಶ್ ಬಂಗೇರ ಇರ್ವತ್ತೂರು
(ವ್ಯವಸ್ಥಾಪಕ ಸಂಪಾದಕರು)


