‘ಹೌದ ಗಂಡಸೆ.. ದೇವರ ಹಾವ್ವು ಮನಿಯೊಳಗೆ ಬಂದು ಮನಿಕಂಬುಕೆ ಶುರುಮಾಡಿ ನಾಲ್ಕು ದಿನಾ ಆಯ್ತು. ಜಪ್ಪಯ್ಯ ಅಂದ್ರೂ ಹೊರಗೆ ಹ್ವಾತಿಲ್ಯ. ಮಕ್ಕಳು ಮರಿ ಓಡಾಡೋ ಜಾಗ. ಯಾರಿಗಾದ್ರೂ ಗಬಕ್ಕಂತ ಕಚ್ರೆ ಎಂಥದು ಮಾಡುವುದು..? ನೀವಿನ್ನೂ ಹಲ್ಲಿಗೆ ಕಡ್ಡಿ ಸಿಕ್ಕಿಸ್ತಾ ಆಕಾಶ ನೋಡ್ತಾ ಕುಕಂತ್ರ್ತ್ರ್ಯಾ ಅಥವಾ ಶ್ಯಾಮ ಭಟ್ಟರ ಮನಿಗೆ ಹೋಯಿ ಇದೆಂತಕೆ ಹೀಗೆ ಅಂದಳಿ ವಿಚಾರಿಸ್ತ್ರ್ಯಾ.. ಎಲ್ಲ ಆಟ ಆಗಿ ಹೊಯ್ತಲ.. ಎಂತ ಹೇಳುವುದು ನಿಮಗೆ..’
ನಾನ್ ಸ್ಟಾಪ್ ಒರಲುತ್ತಿದ್ದ ಹೆಂಡತಿಯ ಕಿರುಚು ದನಿಗೆ ಶಂಕ್ರ ನಡುಗಿ ಹೋದ. ಮನೆಯೊಳಗೆ ಮಕಾಡೆ ಮಲಗಿರುವ ನಾಗರ ಹಾವಿಗೆ ಎಂತದದ್ದು ಮಾಡುವುದು ಎಂಬ ಮಂಡೆಬಿಸಿ ಮೂರು ದಿನದಿಂದ ಅವನಿಗೂ ಇತ್ತು. ಮತ್ತೆ ತಡಮಾಡದೇ ಮೆಟ್ಟು ಮೆಟ್ಟಿ ನಿಂತವನೇ ಬರಾಕಿನಿಂದ ಭಟ್ಟರ ಮನೆಗೆ ಧಾವಿಸಿದ. ‘ಹೀಗಾಯ್ತು ಅಯ್ಯಾ..ದೇವರ ಹಾವು ಮನಿಯೊಳಗಿಂದ ಹೊರಗೆ ಹ್ವಾತಿಲ್ಯ.. ಗಿರಕ್ಕಿ ಹಾಕಿ ಮನ್ಕಂಡಿದೆ. ಎಂತದು ಮಾಡುವುದು.? ಎನಾದ್ರೂ ಉಪದ್ರ ಕಾಣುತ್ತಾ ಕಾಣಿ’ ಕೈಮುಗಿದು ನಿಂತು ನುಡಿದ..
ಶ್ಯಾಮ ಭಟ್ಟರು ತಮ್ಮ ಬಿಳಿ ತುರುಬನ್ನು ಬಿಗಿದು ಕಟ್ಟಿ ಪದ್ಮಾಸನ ಹಾಕಿ ಕುಳಿತು ಕವಡೆ ಚೆಲ್ಲಿದರು.. ಗುಣಿಸಿ-ಕೂಡಿಸಿ-ಭಾಗಿಸಿ ಮೆಲ್ಲಗೆ ಅರುಹಿದರು..
‘ಅಲ್ಲನಾ ಶಂಕರ..ನಿಮ್ಮನೆ ನಾಗಬನ ಜೀರ್ಣೋದ್ಧಾರ ಆಗ್ಲಿಲ್ಲ ಅಂತ ಹುಟ್ಕತಿ ಬರ್ತಾ ಉಂಟು. ನಾಗನ ಕಲ್ಲು ಮಣ್ಣಿನಡಿ ಮುಚ್ಚಿ ಹೋಗೋ ಸ್ಥಿತಿ ತಲುಪಿತಲೆ. ಮಳೆ ಗಾಳಿಲಿ ನೆನೆಯುತ್ತಾ ಉಂಟು… ನಾಗ ನಿಮ್ಮನ್ನ ಸುಮ್ಮನೇ ಬಿಟ್ಟಿತನಾ ಹೇಳು ಕಾಂಬ.. ಅದ್ಕೆ ಸರ್ಪ ಮನೆ ಒಳಗೆ ಬಂದು ‘ಮಡಿ’ ಹಾಕಿ ಮಲಗಿದೆ. ಮೊದಲು ನಾಗ ಬನ ಶುಚಿ ಮಾಡಿ. ನಾಗ ದರ್ಶನ ಮಾಡಿ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಿ. ಶುದ್ದ ಕಳಶ ಮಾಡ್ತೆ ಅಂತ ಹರಕೆ ಕಟ್ಟಿಸಿಕೊಳ್ಳಿ. ಎಲ್ಲ ಸಮಾ ಆಗುತ್ತೆ..ಆಗದಾ’ ತಪ್ಪಿತಸ್ಥ ಭಾವದಿಂದ ಶಂಕರ ಕೈ ಮುಗಿದು ಮೆಲ್ಲಗೆ ನುಡಿದ..
‘ಆಯ್ತು ಭಟ್ಟರೆ..ಕಷ್ಟನೋ ಸುಖನೊ ಖಂಡಿತಾ ಜೀರ್ಣೋದ್ದಾರ ಮಾಡಿಸ್ತೆ. ಆದರೆ ಮಕ್ಕಳು ಮರಿ ಒಡಾಡೋ ಮನೆ ನಮ್ಮದು. ಅವಕ್ಕೇನು ತೊಂದ್ರೆ ತಾಪತ್ರ ಆಗಬಾರದು. ಬರುವ ಸಂಕ್ರಮಣದೊಳಗೆ ನಾಗ ಬನ ಜೀರ್ಣೋದ್ಧಾರ ಮಾಡಿ ನಾಗನ ಕಲ್ಲು ಪುನಃ ಪ್ರತಿಷ್ಠೆ ಮಾಡಿಸ್ತೆ. ಸದ್ಯಕ್ಕೆ ತಪ್ಪು ಕಾಣಿಕೆ ತೆಗೆದು ಇಡಿ. ನೀವೆ ಮುಂದೆ ನಿಂತು ಎಲ್ಲ ಮಾಡ್ಸಿ ಕೊಡಬೇಕು. ಅಕಾ ಅಯ್ಯಾ…’ ಭಟ್ಟರು ಹ್ಹುಂಗುಟ್ಟಿದರು. ತಪ್ಪು ಕಾಣಿಕೆ ತೆಗೆದಿರಿಸಿ ಶಂಕ್ರನಿಗೆ ಭರವಸೆ ನೀಡಿ ಕಳಿಸಿದರು. ಶಂಕ್ರ ಮನೆ ಹತ್ತಿರವಿರುವ ಆ ಪುರಾತನ ನಾಗ ಬನದ ಜೀರ್ಣೋದ್ಧಾರ ಕಾರ್ಯ ಆರಂಭ ಮಾಡುವ ದೃಡ ಸಂಕಲ್ಪವನ್ನು ಭಕ್ತಿಯಿಂದ ಮಾಡಿಯೇ ಬಿಟ್ಟ!
ಆಲದ ಮರದಿಂದ ಇಳಿದು ಬಂದಿದ್ದ ನೂರಾರು ಬೀಳುಗಳ ಮಧ್ಯೆ ನಿಸರ್ಗದತ್ತ ತಂಪು ಪರಿಸರದಿಂದ ರುದ್ರ ರಮಣೀಯವಾಗಿ ಆ ನಾಗ ಬನ ನೂರಾರು ವರ್ಷಗಳಿಂದ ಅಲ್ಲಿತ್ತು. ಗಿಡ-ಪೂದೆ-ಕಗ್ಗಂಟಿಗಳ ಗಾಡ ಹೊದಿಕೆಯಿದ್ದ ಆ ಬನದೊಳಗೆ ನಾಗರ ಹಾವುಗಳು ಮರಿ ಮೊಟ್ಟೆಗಳನ್ನು ಇಟ್ಟು ಸ್ವಂಚದ್ದವಾಗಿ ಸುತ್ತೆಲ್ಲ ಹರಿದಾಡುತ್ತಿದ್ದವು. ನಿಜವಾದ ಅರ್ಥದಲ್ಲಿ ಅದು ನಾಗನ ಬನವಾಗಿತ್ತು.!
ಭಟ್ಟರ ಅಣತಿಯಂತೇ ಆ ಬನದ ‘ಜೀರ್ಣೋದ್ದಾರ’ ಆರಂಭಗೊಂಡಿತು. ಮೂಲ ನಾಗ ಭನವನ್ನು ಬುಡ ಸಮೆತ ಕಡಿದು ಸ್ವಚ್ಚಗೊಳಿಸಲಾಯಿತು. ಕಲ್ಲು ಸಿಮೆಂಟುಗಳಿಂದ ಕೂಡಿದ ಸ್ವಚ್ಛ ಸುಂದರ ನೂತನ ಪೀಠವನ್ನು ನಿರ್ಮಿಸಿ ಅಲ್ಲಿ ಹೊಸ ನಾಗನ ಕಲ್ಲುಗಳನ್ನು ಪ್ರತಿಷ್ಠೆಗೊಳಿಸಲಾಯಿತು. ಬನದ ಸುತ್ತ ಇದ್ದ ಹಳು, ಪೂದೆ ಸಧೆ-ಸೌದಿಗಳನ್ನು ಕತ್ತರಿಸಿ ಕಾಂಕ್ರೀಟನ್ನು ಎರೆಯಲಾಯಿತು. ಕೆಲವೆ ದಿನಗಳಲಿ ನಾಗಬನ ನೊಡುಗರ ಕಣ್ಮನ ಸೆಳೆಯುವಂತೆ ಜೀರ್ಣೋದ್ದಾರಗೊಂಡಿತು.
ಕೆಲ ದಿನಗಳ ಹಿಂದೆ ಅಹಾರ ಹುಡುಕಿ ಶಂಕ್ರನ ಮನೆಯೊಳಗೆ ಸೇರಿದ ಮಾರುದ್ದದ ನಾಗರ ಹಾವು ಅಲ್ಲೇನು ಸಿಗದಿದ್ದರಿಂದ ತೆವಳುತ್ತಾ ಹೊರಗೆ ಬಂದು ತನ್ನ ಅವಾಸ ಸ್ಥಾನ ಹುಡುಕಿ ಬಂದರೆ ನೊಡುವುದೇನು? ಕಾಂಕ್ರೀಟುಕರಣಗೊಂಡ ನೆಲ.ಮೈಸುಡುವ ಕಲ್ಲಿನ ಮಂಟಪ.. ಬಟಾ ಬಯಲಾದ ಜಾಗ!
ತನ್ನ ಇರುವಿಕೆಗಿದು ಯೊಗ್ಯ ಸ್ಥಳವಲ್ಲ ಎಂದರಿತ ಆ ನಾಗರ ಹಾವು ತನ್ನೆಲ್ಲ ಬಳಗವನ್ನು ಕೂಡಿಕೊಂಡು ತನ್ನ ಮೂಲ ನೆಲೆ ತೊರೆದು ದಟ್ಟ ಕಾಡನ್ನು ಅರಸಿ ಹೊರಟಿತು. ನಿಮಿಷಗಳಲಿ ಸರ ಸರ ಹರಿದು ಅಲ್ಲಿಂದ ಕಣ್ಮರೆಯಾಯಿತು.
ನಾಗಬನ ಜೀರ್ಣೊದ್ದಾರದಿಂದ ದೇವರ ಹಾವು ಶಾಂತವಾಗಿ ಕುಟುಂಬಕ್ಕೆ ಉಪದ್ರ ಕೊಡುವುದನ್ನು ನಿಲ್ಲಿಸಿದೆ. ನಾಗದೆವರ ಮನಸ್ಸು ಸಂಪ್ರಿತಗೊಂಡಿದೆ ಎಂದು ಶಂಕ್ರ ಗಾಡವಾಗಿ ನಂಬಿದ. ಅವನ ಕುಟುಂಬ ಹಾವು ಬಾಧೆಯಿಂದ ಪಾರಾಗಿದ್ದಕ್ಕೆ ಸಂತೋಷ ಪಟ್ಟಿತು. ಪ್ರತಿಷ್ಟಾಪಿತ ನೂತನ ನಾಗಕಲ್ಲುಗಳಿಗೆ ಭಯ ಭಕ್ತಿಯಿಂದ ಹಾಲು, ಎಳನೀರು, ತನು ಸೇವೆ ಗೈಯುತ್ತಾ ಭಯ ಭಕ್ತಿಯಲಿ ಮಿಂದೆದ್ದಿತು!!