ಮೂಡಣದ ಗಿರಿವನಗಳೆಡೆಯಿಂದ ತೂರಿ ಬಂದ ಭಾಸ್ಕರನ ಎಳೆ ಕಿರಣಗಳು ಧರೆಯನ್ನಾವರಿಸಿದ ಹಿಮ ಚಾದರವನ್ನು ಛೇದಿಸಿ ಭುವಿಗೆ ಮುತ್ತಿಕ್ಕುವ ಸಂಘರ್ಷಮಯ ಸಂಭ್ರಮದ ಕ್ಷಣವದು. “ಸೊಂಯ್” ಎಂದು ಬೀಸುವ ಕುಳಿರ್ಗಾಳಿಯು ಕಂಬಳಿಯೊಳಗೆ ಸುರುಟುಗಟ್ಟಿ ಬೆಚ್ಚಗಾಗಿದ್ದ ದೇಹಕ್ಕೆ ತಣ್ಣನೆಯ ಕಚಗುಳಿಯಿಡುತಿದ್ದಂತೆ, ಮನೆಯ ಕೆಳ ಜಗಲಿಯ ಮೂಲೆಯಲ್ಲಿದ್ದ ಪುಟ್ಟ ಕರುವಿನ ಅಂಬಾ ಅನ್ನೋ ಕೂಗಿಗೆ, ಸುಖ ನಿದ್ರೆಯ ಮಂಪರಿನಿಂದ ಎಚ್ಚೆತ್ತ ಮನಸ್ಸು ವಾಸ್ತವ ಜಗತ್ತಿನತ್ತ ಹೊರಳಿತ್ತು. ಬಾಲ್ಯವೆಂಬ ಬದುಕಿನ ಕೈ ಜಾರಿ ಹೋದ ಸುವರ್ಣಯುಗದ ಅಪೂರ್ವ ಕ್ಷಣಗಳ ರಂಗು ರಂಗಿನ ಚಿತ್ತಾರವು ನೆನಪಿನಂಗಳದಲ್ಲಿ ಚುಕ್ಕಿಯಿಡತೊಡಗಿತು.
ಭಾವುಕ ಜೀವಿಗೂ, ಪ್ರಕೃತಿ ಪ್ರೇಮಿಗೂ ಮಲೆನಾಡೆಂದರೆ ಅದು ಸ್ವರ್ಗ. ಸೃಷ್ಟಿಯ ನಿಗೂಢ ರಹಸ್ಯಗಳೋ, ವೈವಿಧ್ಯಮಯ ಜೀವ ಸಂಕುಲವೋ ಕ್ಷಣದಿಂದ ಕ್ಷಣಕ್ಕೆ ಹೆಜ್ಜೆಯಿಂದ ಹೆಜ್ಜೆಗೆ ತೆರೆದುಕೊಳ್ಳುವ ಪ್ರಕೃತಿ ವಿಸ್ಮಯಗಳು ಅಚ್ಚರಿ ಆನಂದಕ್ಕೆ ಎಣೆಯಿಲ್ಲದ ಅಪೂರ್ವ ಅಧ್ಭುತಗಳ ಕಣಜವದು.
ಮಲೆನಾಡಿನ ಕುಗ್ರಾಮವೊಂದರಲ್ಲಿ ಕಳೆದ ಬಾಲ್ಯದ ಬದುಕಿನ ಉತ್ಕ್ರಷ್ಠವಾದ ದಿನಗಳನ್ನು ಬದುಕಿನುದ್ದಕ್ಕೂ ಮತ್ತೆ ಅರಸುವ ಪ್ರಯತ್ನ ನಿರಂತರವಾದರೂ ಫಲ ಮಾತ್ರ ಶೂನ್ಯ. ಅದಕ್ಕೆ ಬಾಲ್ಯದ ದಿನಗಳ ಸುವರ್ಣಯುಗವೆಂದು ವ್ಯಾಖ್ಯಾನಿಸಿದೆ. ಬಾಲ್ಯವು ಬುದ್ಧಿ ಬಲಿಯದ ಅತಿಬುದ್ಧಿವಂತಿಕೆಯ ಕಾಲಘಟ್ಟ . ಕುತೂಹಲಕ್ಕೆ ಸಾಗುವ ಪ್ರಯೋಗಗಳು ಅತಿರೇಕಕ್ಕೆ ತಲುಪಿ ಅಧಿಕ ಪ್ರಸಂಗಿತನವಾಗಿ ಬೆನ್ನು ಬಿಸಿಯೇರಿದ್ದ ಸಂದರ್ಭಗಳು ಹತ್ತು ಹಲವು. ಅಂತಹದ್ದೇ ಒಂದು ಪ್ರಸಂಗ ಅಮ್ಮನ ರೇಡಿಯೋ..
ವಿಪುಲ ಪ್ರಕೃತಿ ಸಂಪತ್ತಿನ ಅಗರವಾಗಿರುವ ಮಲೆನಾಡಿನಲ್ಲಿ ಮೂಲಭೂತ ಸೌಕರ್ಯಗಳು ಕಲ್ಪನೆಗೂ ನಿಲುಕದ ಸಮಯ. ಚಿಮಣಿ ಬುಡ್ಡಿಯ ಬೆಳಕು, ಸಾರಿಗೆಗೆ ಎತ್ತಿನ ಬಂಡಿಯ ಅವಲಂಬನೆ. ಬೆಂಕಿ ಪೊಟ್ಟಣ, ಉಪ್ಪು ದಿನಸಿ ಸಾಮಾನಿನ ಅಂಗಡಿಗೂ ಮೂರು ಕಿಲೋಮೀಟರ್ ನಿತ್ಯ ನಡೆಯುವ ಅನಿವಾರ್ಯತೆ. ಆಸ್ಪತ್ರೆ ಇನ್ನಿತರ ಅವಶ್ಯಕತೆಗಳಿಗೆ ಕಾಡು ನಾಡನ್ನು ಬೆಸೆಯುವ ಏಕೈಕ ಸಂಪರ್ಕ ಕೊಂಡಿಯಾಗಿದ್ದ ನಮ್ಮೂರಿನ ಶಿವಶಂಕರ ಬಸ್ಸು ಮುಂಜಾನೆ ಏಳಕ್ಕೆ ಹಳ್ಳಿಯಿಂದ ಇಪ್ಪತ್ಮೂರು ಕಿ. ಮೀ ದೂರದ ಪೇಟೆಗೆ ಹೊರಟರೆ ಮತ್ತೆ ಸಾಯಂಕಾಲ ಆರಕ್ಕೆ ಮರಳಿ ಗಮ್ಯ ( ಸ್ವಸ್ಥಾನ ) ಸೇರುತ್ತಿತ್ತು. ಇಂತಹ ಅವ್ಯವಸ್ಥೆಯಲ್ಲೂ ಸುವ್ಯವಸ್ಥಿತ ಬದುಕನ್ನು ಸಾಗಿಸುವ ಹಳ್ಳಿಗಾಡಿನ ಜನತೆಯ ಜೀವನ ಶೈಲಿಯ ರಹಸ್ಯವೆಂದರೆ ಅದು ಸ್ವಾವಲಂಬಿ ಬದುಕು. ಕೆಲವೇ ಕೆಲವು ಬೆರಳೆಣಿಕೆಯ ದೈನಂದಿನ ಅವಶ್ಯ ಸಾಮಗ್ರಿಗಳ ಹೊರತು ಪಡಿಸಿ ಮಿಕ್ಕೆಲ್ಲವನ್ನು ಸ್ವತ ಪರಿಶ್ರಮದಿಂದ ಬೆಳೆಯುತಿದ್ದರು. ಉತ್ಪಾದಿಸಿ ಕೊಳ್ಳುವ ನೈಪುಣ್ಯತೆ ಪಡೆದಿದ್ದರು.
ಇಂತಹ ಹಳ್ಳಿಯು ನವನಾಗರಿಕತೆಯತ್ತ ಅಂಬೆಗಾಲಿಕ್ಕುವ ಪೂರ್ವ ಕಾಲದಲ್ಲಿ ಪ್ರಪಂಚದ ಆಗು ಹೋಗುಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡುತ್ತಿದ್ದ ಧ್ವನಿ ಪೆಟ್ಟಿಗೆಯೊಂದು ನಮ್ಮೂರಿಗೆ ಲಗ್ಗೆ ಇಟ್ಟಿತು. ಆ ಕಾಲದಲ್ಲಿ ನಮಗೆ ಕಂಡ ಪ್ರಪಂಚದ ಎಂಟನೇ ಅಧ್ಭುತ ಅದು. ಅದೇನೆಂದು ತಿಳಿಯುವ ನಮ್ಮೂರಿನ ಜನರ ಕುತೂಹಲವು ಕಿವಿಯಿಂದ ಕಿವಿಗೆ ಹಾರುತ್ತಾ ರೇಡಿಯೋ ಅನ್ನೋ ಪದವು ತಾಂಬೂಲ ತುಂಬಿದ ಬಾಯೊಳಗೆ ಸಿಲುಕಿ ಜಗಿದು ಝರ್ಜರಿತಗೊಂಡು ” ರೇಡ್ಯಾ” ಅನ್ನೋವಷ್ಟರ ಮಟ್ಟಿನ ದುಸ್ಥಿತಿಗೆ ತಲುಪಿತ್ತು. ಅದೇನಿದ್ದರೂ ನಮ್ಮೂರಿಗರ ಕುತೂಹಲದ ಕೇಂದ್ರ ಬಿಂದು ರೇಡ್ಯಾ ಇದ್ದದ್ದು ಮಾತ್ರ ಜಮೀನ್ದಾರರ ಮನೆಯಲ್ಲಿ. ಸಾಯಂಕಾಲದ ಆರು ಗಂಟೆಗೆ ಸರಿಯಾಗಿ ಜಮೀನ್ದಾರರ ಮನೆಯ ಪಡಸಾಲೆಯಲ್ಲಿ ರೇಡಿಯೋಗಾಗಿಯೇ ಬೀಟೆ ಮರದಿಂದ ವಿಶೇಷವಾಗಿ ತಯಾರಿಸಿದ ಪೆಟ್ಟಿಗೆಯ ಬಾಗಿಲು ತೆರೆಯುತಿತ್ತು. ಪಕ್ಕದಲ್ಲಿ ತಮಗಾಗಿಯೇ ಕಾಯ್ದಿರಿಸಿದ ಆಸನದಲ್ಲಿ ಆಸೀನರಾಗಿ ಎಡಗೈಯಲ್ಲಿ ತಮ್ಮ ಗಿರಿಜಾ ಮೀಸೆಯನ್ನೊಮ್ಮೆ ತೀಡಿ ಬಲ ಕೈಯಲ್ಲಿ ರೇಡಿಯೋದ ಕಿವಿಯನ್ನು ತಿರುವಿದರೆಂದರೆ ಮನೆಯೊಳಗೂ ಹೊರಗೂ ಕಾತರದಿಂದಿದ್ದ ಹಲವಾರು ಕಿವಿಗಳು ನೆಟ್ಟಗಾಗುತಿದ್ದವು. ಜಮೀನ್ದಾರರ ಒಣ ಪ್ರತಿಷ್ಠೆಯ ಅಹಂ ತುಟಿಯಂಚಿನಲ್ಲಿ ಕಿರುನಗೆಯಾಗಿ ಮೂಡಿ ಮರೆಯಾಗುತಿತ್ತು.
ಕಾಲ ಕ್ರಮೇಣ ವಿಸ್ತರಣಾವಾದಿಗಳ ಧೊರಣೆಯಂತೆ ರೇಡಿಯೋ ಸಹ ತನ್ನ ಕಾರ್ಯ ಬಾಹುಳ್ಯವನ್ನು ಡೆಲ್ಲಿಯಿಂದ ಹಳ್ಳಿವರೆಗೆ ವಿಸ್ತರಿಸುತ್ತಾ ಹಳ್ಳಿಯನ್ನೆಲ್ಲಾ ಆಕ್ರಮಿಸಿತು. ಹಾಗೊಂದು ಶುಭ ದಿನದ ಶುಭ ಮುಹೂರ್ತದ ಶುಭ ಗಳಿಗೆಯಲ್ಲಿ ಆಕಾಶವಾಣಿಯು ನಮ್ಮನೆಯ ಚಾವಡಿಯಲ್ಲೂ ಧ್ವನಿಸಿತು. ಅದು ಮುಂಬೈಯಲ್ಲಿದ್ದ ಅಮ್ಮನ ಪ್ರೀತಿಯ ತಮ್ಮನ ಕೊಡುಗೆ. ವರುಷಕ್ಕೋ ಎರಡು ವರುಷಕ್ಕೊಮ್ಮೆ ಬರುತಿದ್ದ ತಮ್ಮನ ಮಮತೆಯನ್ನು ಮಡಿಲು ತುಂಬಿ ತಂದಿದ್ದ ರೇಡಿಯೋಗೆ ನಮ್ಮನೆಯಲ್ಲಿ ರಾಜಾತಿಥ್ಯ. ಮನೆಗಾಗಮಿಸಿದ ಹೊಸ ಅತಿಥಿಯಲ್ಲಿ ಅಮ್ಮನಿಗೋ ಅಪರಿಮಿತ ಕಾಳಜಿ. ಮನೆಯಲ್ಲೊಂದು ಹಬ್ಬದ ವಾತಾವರಣ. ರೇಡಿಯೋಗೆ ಹೊಸ ಪೆಟ್ಟಿಗೆ ತಯಾರಾಯಿತು. ಅದರೊಳಗೆ ಬೆಚ್ಚನೆ ಪವಡಿಸಿದ ರೇಡಿಯೋ ದಿನಕ್ಕೆ ಮೂರು ಬಾರಿ ಪೆಟ್ಟಿಗೆ ಬಾಗಿಲು ತರೆದಾಗ ಮಾತ್ರ ಉಲಿಯುತಿತ್ತು. ಮತ್ತದೇ ಮುಚ್ಚಿದ ಬಾಗಿಲೊಳಗೆ ಬಂಧಿಯಾಗಿ ತುಂಟ ಪೋಕರಿಗಳ ಕಾಟವಿಲ್ಲದ ಸುಖ ನಿದ್ರೆ. ನನಗೋ ಒಂದು ಬಾರಿಯಾದರೂ ರೇಡಿಯೋನ ಮುಟ್ಟಿ ಮೈದಡವಿ ಕಿವಿಗಿಂಡೋ ತವಕ ಆದರೆ ಅದಕ್ಕೆಲ್ಲಿಯ ಆಸ್ಪದ? ರೇಡಿಯೋ ಪೆಟ್ಟಿಗೆಯ ಬೀಗದ ಕೀ, ಕಪಾಟು, ಬೀರುವಿನ ಬೀಗದ ಕೀಯ ಜೊತೆಗೂಡಿ ಅಮ್ಮನ ಸೆರಗಿನಂಚಿನಲ್ಲಿ ಜೋಕಾಲಿಯಾಡುತಿದ್ದವು. ಮುಟ್ಟಿ ನೋಡುವ ನನ್ನಾಸೆಯು ದಿನದಿಂದ ದಿನಕ್ಕೆ ವೃದ್ಧಿಯಾಯಿತೇ ವಿನ: ಕೈಗೂಡುವ ಲಕ್ಷಣ ಗೋಚರಿಸಲಿಲ್ಲ. ಕೊನೆಗೆ ಕೈಗೆಟುಕದ ದ್ರಾಕ್ಷಿ ಹುಳಿಯಾದ ನರಿಯ ಕಥೆ ನೆನಪಿಸಿಕೊಂಡು ಸಮಾಧಾನ ಪಟ್ಟುಕೊಂಡೆ.
ವರುಷ ಒಂದೆರಡು ಕಳೆದಾಗ ರೇಡಿಯೋ ವರ್ಚಸ್ಸು ಕಳೆಗುಂದಿತ್ತು. ಅದಕ್ಕೀಗ ಮುಕ್ತ ಸ್ವಾತಂತ್ರ. ಅದರ ಉಸ್ತುವಾರಿ ಅಮ್ಮನಿಂದ ಅಕ್ಕನ ಕೈಗೆ ವರ್ಗಾಯಿಸಲ್ಪಟ್ಟಿತ್ತು. ಅಕ್ಕನ ಜೊತೆಗೆ ಅದು ಒಂದೊಂದು ಸಲ ಅಂಗಳಕ್ಕೋ, ಒಲೆ ಬುಡಕ್ಕೋ ಸುತ್ತಾಡ ಹತ್ತಿತ್ತು. ಕೊನೆಗೆ ಮದ್ಯ ಮಳೆಗಾಲದಲ್ಲೋ ಮೈ ಕೊರೆಯುವ ಚಳಿಗಾಲದಲ್ಲೂ ಅದಕ್ಕೆ ಗಂಟಲು ಕಟ್ಟಲು ಸುರುವಾಯಿತು. ಎರಡು ಮೂರು ಬಾರಿ ಕಾಳಜಿಯಿಂದ ಔಷದೋಪಚಾರ ನಡೆದರೂ ಗುಣವಾಗದ ರೋಗವೆಂದರಿವಾದಾಗ ಮತ್ತೆಲ್ಲರಿಂದ ಅದು ನಿರ್ಲಕ್ಷ್ಯಕ್ಕೊಳಗಾಯಿತು. ಅದರ ಜಾಗದಲ್ಲಿ ಈಗ ಹೊಸದೊಂದು ಟೇಪ್ ರೆಕಾರ್ಡರ್ ಬಂದು ಕುಳಿತಿತ್ತು. ಪರಿವರ್ತನೆ ಜಗದ ನಿಯಮವಲ್ಲವೇ ? ಜೀರ್ಣಾವಸ್ಥೆಯಲ್ಲಿದ್ದ ರೇಡಿಯೋ ಸ್ಥಿತಿಗೆ ಮಮ್ಮಲ ಮರುಗಿದ ಅಮ್ಮನ ಅಂತ:ಕರಣ ತಮ್ಮನ ನೆನಪಿನ ಕಾಣಿಕೆ ಎಂದು ಮತ್ತೆ ಅದನ್ನೆತ್ತಿ ಹಳೆ ಕಪಾಟಿನಲ್ಲಿ ಜೋಪಾನವಾಗಿಟ್ಟರು. ಉಪಯೋಗಕ್ಕೆ ಬಾರದ ವಸ್ತು ಯಾವುದೇ ಇರಲಿ ಅದು ತ್ಯಾಜ್ಯಕ್ಕೆ ಸಮ.
ಹೀಗೆ ಹಲವು ದಿನಗಳ ನಂತರ ನಾನೊಂದು ಬಾರಿ ಕಪಾಟನ್ನು ತಡಕಾಡುವಾಗ ದೂಳು ತಿನ್ನುತ್ತಾ ಬಿದ್ದಿದ್ದ ರೇಡಿಯೋ ನನ್ನ ಕೈಗೆ ಸಿಕ್ತು. ಬಹಳಷ್ಟು ಸಮಯದಿಂದ ನನ್ನೊಳಗೆ ಕಾಡಿದ ಕುತೂಹಲದ ಪ್ರಶ್ನೆ ರೇಡಿಯೋ ದ ಒಳಗೇನಿದೆ, ಮಾತನಾಡುವವರು, ಹಾಡುವವರು ಯಾರು ಎಂಬೆಲ್ಲಾ ಆ ವಯಸ್ಸಿನ ಅಪ್ರಬುಧ್ಧ ಪ್ರಶ್ನೆಗಳ ಉತ್ತರದ ಹುಡುಕಾಟಕ್ಕೆ ಮೆತ್ತಗೆ ಕಪಾಟಿನಿಂದ ರೇಡಿಯೋ ಹೊರತೆಗೆದು ಹಳೆ ಕರವಸ್ತ್ರದಿಂದ ಮೆತ್ತಿದ್ದ ಧೂಳನ್ನು ಶುಭ್ರಗೊಳಿಸಿ ನೀಟಾಗಿ ಅದನ್ನು ಬಿಚ್ಚಿದ್ದೆ. ಆದರೆ ಅದರೊಳಗೇನು ? ನನಗರ್ಥವಾಗದ ಮತ್ತೊಂದು ಪ್ರಪಂಚ. ಸಣ್ಣ ಸಣ್ಣ ಯಂತ್ರ ಗೋಜಲು ಗೋಜಲಾಗಿ ಜೋಡಿಸಿದ ವಯರ್ ಗಳ ನಡುವೆ ಎಲ್ಲಿ ಮುಟ್ಟ ಬೇಕೋ ಎಲ್ಲಿ ತಟ್ಟ ಬೇಕೋ ಒಂದು ಅರ್ಥವಾಗದೆ ಕಣ್ಣು ಬಾಯಿ ಬಿಟ್ಟು ನೋಡಿದ್ದೇ. ನನಗಿದು ಬೇಡದ ಉಸಾಬರಿ ಎಂದರ್ಥವಾಗಿ ಮತ್ತೆ ಕಟ್ಟುವ ಪ್ರಯತ್ನ ಮಾಡಿದೆ. ಆದರೆ ಮತ್ತೆ ಜೋಡಿಸುವುದು ಬಿಚ್ಚಿದಷ್ಟು ಸುಲಭವಾಗಿರಲಿಲ್ಲ. ಎಲ್ಲೊ ಒಂದು ಕಡೆ ತಾಳ ಮೇಳ ಹೊಂದಾಣಿಕೆ ಆಗುತ್ತಿರಲಿಲ್ಲ. ನಿರಂತರ ವಿಫಲ ಯತ್ನದ ಮಧ್ಯೆ ಕಪಾಟಿನ ಕೋಣೆಗೆ ಅಮ್ಮನ ಪ್ರವೇಶವಾಗಿತ್ತು. ನನ್ನ ತಡಬಡಿಕೆಯ ಚಲನೆಯನ್ನು ಗ್ರಹಿಸಿದ ಅಮ್ಮ ಮಾಡಿದ ಗಂಡಾಂತರಕ್ಕೆ ಬೈಗುಳದ ಸಹಸ್ರ ನಾಮಾರ್ಚನೆಗೈದು ನನ್ನ ಕೈಯಿಂದ ರೇಡಿಯೋ ಕಿತ್ತುಕೊಂಡು ಪಕ್ಕದಲ್ಲಿದ್ದ ಚೀಲದಲ್ಲಿ ತುಂಬಿ ಕಪಾಟಿನಲ್ಲಿಟ್ಟರು. ನಾನೋ ಅಪರಾಧಿ ಪ್ರಜ್ಞೆಯ ಪೆಚ್ಚು ಮೋರೆಯಲ್ಲಿ ಕೋಣೆಯಿಂದ ಹೊರ ನಡೆದಿದ್ದೆ. ನೆನಪಿನ ಪುಟಗಳನ್ನೊಮ್ಮೆ ತಿರುವಿದಾಗ ಮತ್ತೆ ಮತ್ತೆ ಕಾಡುವ ಅಮ್ಮನ ರೇಡಿಯೋ ನನಗಾಗ ಕಂಡಿದ್ದ ತಾಜ್ಯ, ಅದು ಅಮ್ಮನ ಭಾತೃತ್ವದ ಬಾಂಧವ್ಯದ ಅಮರ ಸಂಕೇತವಾಗಿತ್ತು. ಈಗಲೂ ಅಪ್ಪಿ ತಪ್ಪಿ ರೇಡಿಯೋ ವಿಚಾರ ಬಂದರೆ ನಿಲ್ಲದ ಅಮ್ಮನ ಗೊಣಗಾಟ ನನ್ನ ಮೇಲಿನ ಮುನಿಸು, ರೇಡಿಯೋ ಮೇಲಿನ ಮನಸ್ಸು.