ಅಂಕೋಲಾ: ತಾಲ್ಲೂಕಿನಲ್ಲಿ ಜೇನು ಕೃಷಿ ಜನಪ್ರಿಯವಾಗಿದ್ದು, ಮರದ ಪೆಟ್ಟಿಗೆಗಳಲ್ಲಿ ತುಡುವೆ ಜಾತಿಯ ಕೋಲುಜೇನುಗಳನ್ನು ಸಾಕುವುದು ವಾಡಿಕೆ. ಇತ್ತೀಚೆಗೆ ಮರದ ಪೆಟ್ಟಿಗೆ ಸಿದ್ಧಪಡಿಸುವುದು ವೆಚ್ಚದಾಯಕವಾಗಿದ್ದು, ಅದಕ್ಕೆ ಪರ್ಯಾಯ ಮಾರ್ಗದ ಕುರಿತು ಚಿಂತನೆ ನಡೆಸಿದ ಕೃಷಿಕ ವಾಸುದೇವ ಗುನಗ ತನ್ನ ಕುಂಬಾರಿಕೆ ಕಾಯಕದ ಕೈಚಳಕವನ್ನು ಬಳಸಿ ಮಣ್ಣಿನಿಂದಲೇ ಸುಂದರವಾದ ಜೇನು ಪೆಟ್ಟಿಗೆಯನ್ನು ಸಿದ್ಧಪಡಿಸಿ ಗಮನ ಸೆಳೆದಿದ್ದಾರೆ. ಹಲವಾರು ಕೃಷಿ ಮೇಳಗಳಲ್ಲಿ ಇವರ ಮಣ್ಣಿನ ಜೇನು ಪೆಟ್ಟಿಗೆಗಳಿಂದ ಜೇನು ಕೃಷಿಕರು ಆಕರ್ಷಿತರಾಗಿದ್ದಾರೆ.
ಉಪಯುಕ್ತತೆ: ಸಾಂಪ್ರದಾಯಿಕ ಮರದ ಪೆಟ್ಟಿಗೆಗಳಲ್ಲಿ ಜೇನು ಹುಳಗಳು ಅತಿಯಾದ ಉಷ್ಣತಾಮಾನ ಇರುವ ಇಲ್ಲಿನ ಪರಿಸರದಲ್ಲಿ ತಮ್ಮ ದೇಹದ ತಾಪಮಾನವನ್ನು ಕಾಯ್ದುಕೊಳ್ಳುವುದಕ್ಕಾಗಿ ಅಗತ್ಯಕ್ಕಿಂತ ಹೆಚ್ಚು ಬಾರಿ ರೆಕ್ಕೆಗಳನ್ನು ಬಡಿಯುವ ಮೂಲಕ ಉತ್ಪಾದಕತೆಯನ್ನು ಕಡಿಮೆಗೊಳಿಸುತ್ತವೆ. ಮಣ್ಣಿನ ಪೆಟ್ಟಿಗೆಯಲ್ಲಿ ಜೇನುಗಳನ್ನು ಸಾಕಿದರೆ ಅದು ವಾತಾನುಕೂಲಿತವಾಗಿರುವುದರಿಂದ ಸ್ವಾಭಾವಿಕ ತಾಪಮಾನವನ್ನು ನಿರ್ವಹಿಸುತ್ತದೆ.
ಸಹಜವಾಗಿ ಇದರಲ್ಲಿ ಸಾಕಾಣಿಕೆಯಾಗುವ ಜೇನಿನ ಉತ್ಪಾದಕತೆ ದ್ವಿಗುಣಗೊಳ್ಳುತ್ತದೆ ಎಂಬುದು ಜೇನು ತಜ್ಞರ ಅಭಿಪ್ರಾಯವಾಗಿದೆ. ಮರದ ಪೆಟ್ಟಿಗೆ ಮಳೆ ನೀರಿಗೆ ನೆನೆಯುವುದರಿಂದ, ಅದರ ಬಿರುಕುಗಳಲ್ಲಿ ಕಟ್ಟಿರುವೆ, ಗೆದ್ದಲು, ಮುಂತಾದ ಕೀಟಗಳು ನುಸುಳಿ ಜೇನು ಹುಳಗಳಿಗೆ ತೊಂದರೆ ನೀಡುತ್ತವೆ. ಇಲ್ಲಿನ ಪರಿಸರದಲ್ಲಿ ಮರದ ಪೆಟ್ಟಿಗೆಯ ಮೇಲೆ ಶಿಲೀಂಧ್ರ ಬೆಳೆಯುವುದರಿಂದ ಜೇನು ಕೃಷಿಕರಿಗೆ ಸಮಸ್ಯೆಯಾಗಿದೆ. ಈ ಎಲ್ಲಾ ತಾಪತ್ರಯಗಳಿಗೆ ಮಣ್ಣಿನ ಜೇನು ಪೆಟ್ಟಿಗೆಯು ಸೂಕ್ತ ಪರಿಹಾರ ಮತ್ತು ಪರ್ಯಾಯವಾಗಿದೆ.
ಈ ಮಣ್ಣಿನ ಪೆಟ್ಟಿಗೆಗಳನ್ನು ಪರಿಶೀಲಿಸಿರುವ ಅಂಕೋಲಾ ಜೇನು ಕೃಷಿ ಸಹಾಯಕ ಅಧಿಕಾರಿ ರವಿ ಶೆಟ್ಟಿ ‘ಜೇನು ಹುಳುಗಳು ಕೂಡ ಮಣ್ಣಿನಲ್ಲಿ ಗೂಡು ಕಟ್ಟಲು ಇಷ್ಟಪಡುತ್ತವೆ. ಬಯಲುಸೀಮೆಯ ಹೊಲಗದ್ದೆಗಳಲ್ಲಿ ಬಿರುಕುಬಿಟ್ಟ ಕೊರಕಲುಗಳಲ್ಲಿ ತುಡುವೆ ಜೇನುಗಳು ಭಾರೀ ಪ್ರಮಾಣದಲ್ಲಿ ಜೇನನ್ನು ಉತ್ಪಾದಿಸುವುದು ಕಂಡುಬಂದಿದೆ. ಆದ್ದರಿಂದ ಈ ಮಣ್ಣಿನ ಜೇನು ಪೆಟ್ಟಿಗೆಗಳು ಜೇನು ಕೃಷಿಗೆ ಸಹಕಾರಿಯಾಗಿವೆ.
ಇಂತಹ ಪೆಟ್ಟಿಗೆಗಳಲ್ಲಿ ಜೇನುತುಪ್ಪದ ಇಳುವರಿಯೂ ಕೂಡ ಅಧಿಕವಾಗುತ್ತದೆ’ ಎಂದು ಅಭಿಪ್ರಾಯ ಪಡುತ್ತಾರೆ. ಇಂತಹ ಪರಿಸರಸ್ನೇಹಿ ಜೇನು ಸಾಕಾಣಿಕಾ ಪರಿಕರವನ್ನು ಜೇನು ಕೃಷಿಕರು ಹೆಚ್ಚಿನ ಪ್ರಮಾಣದಲ್ಲಿ ಬಳಸುವಂತೆ ತೋಟಗಾರಿಕಾ ಇಲಾಖೆ ಜೇನು ಕೃಷಿಕರಿಗೆ ಮಾಹಿತಿ ನೀಡಬೇಕಾಗಿದೆ.
ಇದನ್ನು ರೂಪಿಸಿರುವ ಯುವ ರೈತನ ಕನಸುಗಳನ್ನು ಜನರಿಗೆ ತಲುಪಿಸಬೇಕಾಗಿದೆ. ಈ ಜೇನು ಪೆಟ್ಟಿಗೆಯು ವೈಜ್ಞಾನಿಕ ವಿನ್ಯಾಸವನ್ನು ಹೊಂದಿದ್ದು, ಸೂಕ್ತ ಬೆಂಬಲದ ಅಗತ್ಯ ಇದೆ. ಜೇನು ಕೃಷಿಯಲ್ಲಿ ಆಸಕ್ತಿಯಿರುವವರು ವಾಸುದೇವ ಗುನಗ (9902043446) ಅವರನ್ನು ಸಂಪರ್ಕಿಸಬಹುದು.
ಜೇಡಿ ಮಣ್ಣಿನಲ್ಲಿ ಜೇನುಪೆಟ್ಟಿಗೆ : ವಾಸುದೇವ ಗುನಗ ಕೈಚಳಕ
Kulal news
2 Mins Read