ಪುಣೆ: ಇಂದಿನ ದಿನಗಳಲ್ಲಿ ನೃತ್ಯಪ್ರಕಾರಗಳನ್ನು ಮೆಚ್ಚದ ರಸಿಕರೇ ಇಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರೂ ನೃತ್ಯಾಭ್ಯಾಸದ ನಂಟನ್ನು ಬಿಟ್ಟಿಲ್ಲ. ಹತ್ತಾರು ಪ್ರಕಾರದ ಪಾರಂಪರಿಕ ನೃತ್ಯ ಶೈಲಿಯೊಂದಿಗೆ ಆಧುನಿಕ ಸ್ಪರ್ಶಗಳನ್ನೂ ಸೇರಿಸಿಕೊಂಡು ನೋಡುಗರ ಕಣ್ಣುಗಳನ್ನು ಮಂತ್ರಮುಗ್ಧಗೊಳಿಸುವ ಅದ್ಭುತ ನೃತ್ಯ ಪ್ರಕಾರಗಳನ್ನು ನಾವು ನೋಡಬಹುದಾಗಿದೆ. ಅಂತೆಯೇ ಶಾಸ್ತ್ರೀಯ ಶೈಲಿಯ ಭರತನಾಟ್ಯಕ್ಕೆ ಮನಸೋಲದವರಿಲ್ಲ.
ನಿರಂತರ ಅಭ್ಯಾಸ, ಏಕಾಗ್ರತೆಯೊಂದಿಗೆ ಮನಸ್ಸನ್ನು ಧ್ಯಾನೀಕರಿಸಿ ವಿವಿಧ ಭಾವ ಭಂಗಿಗಳೊಂದಿಗೆ ದೇವರ ನಾಮಕ್ಕೆ ಪ್ರಸ್ತುತಪಡಿಸುವ ಭರತನಾಟ್ಯವನ್ನು ಅದೆಷ್ಟೋ ಕಲಾವಿದರು ಸಮೃದ್ಧಿಗೊಳಿಸಿದ್ದಾರೆ. ಇದೇ ರೀತಿ ಪುಣೆಯ ಕನ್ನಡತಿ ಸಹನಾ ಕುಲಾಲ್ ಎಂಬ ಅನನ್ಯ ನಾಟ್ಯ ಪ್ರತಿಭೆ ನೃತ್ಯವನ್ನು ಒಲಿಸಿಕೊಂಡು ನೋಡುಗರ ಕಣ್ಮನ ಸೆಳೆಯುವ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವುದು ಪ್ರಶಂಶನೀಯವಾಗಿದೆ. ವಿವಿಧ ಸಂಘ ಸಂಸ್ಥೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ತಮ ನೃತ್ಯ ಪ್ರದರ್ಶನದ ಮೂಲಕ ಗಮನಸೆಳೆಯುತ್ತಿದ್ದ ಸಹನಾ ಕುಲಾಲ್ ಮೇ. ೩೦ರಂದು ಪುಣೆಯ ಯಶವಂತರಾವ್ ಚವಾಣ್ ನಾಟ್ಯಗೃಹದಲ್ಲಿ ನೃತ್ಯಾ೦ಜಲಿ ನೃತ್ಯ ಸಂಸ್ಥೆ ವತಿಯಿಂದ ವೈಶಾಲಿ ಪಾರಸನೀಸ್ ಅವರ ನೃತ್ಯ ಸಂಯೋಜನೆಯಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿದರು.
ಶಿವಾರ್ಪಣಂ ಎನ್ನುವ ಕಾರ್ಯಕ್ರಮವು ಸೇರಿದ್ದ ಕಲಾರಸಿಕರನ್ನು ಮೋಡಿ ಮಾಡುವುದರಲ್ಲಿ ಯಶಸ್ವಿಯಾಯಿತು. ಈ ಕಾರ್ಯಕ್ರಮದಲ್ಲಿ ಸಹನಾ ಕುಲಾಲ್ ಅವರೊಂದಿಗೆ ವೈಶಾಲಿ ಪಾರಸನೀಸ್ ಅವರ ಶಿಷ್ಯೆಯರಾದ ಅಪರ್ಣಾ, ರೇಷ್ಮಾ ನಾಯರ್, ನೇಹಾ ಸುರೇಶ್, ಹರ್ಷದಾ ಕುಲಕರ್ಣಿ, ಸುದೇಶ್ನಾ ನಾಗಾಪುರೆ ಮತ್ತು ಅಂಕಿತಾ ಡಿಮ್ಲೇ ಇವರು ಶಿವನ ಕುರಿತಾದ ಹಾಡುಗಳಿಗೆ ನೃತ್ಯಗಳನ್ನು ಪ್ರಸ್ತುತಗೊಳಿಸಿದರು. ಋತುಜಾ ಪಾಠಕ್ ಹಾಗೂ ಸಯಾಲಿ ಪಾಠಕ್ ಕಾರ್ಯಕ್ರಮ ನಿರೂಪಿಸಿದರು.
ಪುಣೆಯಲ್ಲಿ ವಾಸ್ತವ್ಯವಿರುವ ಸಹನಾ ಕುಲಾಲ್ ಮೂಲತಃ ಬದಿಯಡ್ಕ ಚಂದ್ರಶೇಖರ ಕುಲಾಲ್-ಸರಸ್ವತಿ ಕುಲಾಲ್ ದಂಪತಿಯ ಪುತ್ರಿ. ಪ್ರಸ್ತುತ ೧೨ನೇ ತರಗತಿಯಲ್ಲಿ ಕಲಿಯುತ್ತಿರುವ ಸಹನಾ ಬಾಲ್ಯದಿಂದಲೂ ನೃತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದು ವೈಶಾಲಿ ಪಾರಸನೀಸ್ ಅವರಿಂದ ಭರತನಾಟ್ಯ ಅಭ್ಯಸಿಸಿದ್ದರು. ಈಗಾಗಲೇ ಹಲವಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿ ಪ್ರತಿಭಾನ್ವಿತೆಯಾಗಿ ಗುರುತಿಸಿಕೊಂಡಿರುವ ಸಹನಾ ಭವಿಷ್ಯದಲ್ಲಿ ಉತ್ತಮ ಪ್ರದರ್ಶನಗಳ ಮೂಲಕ ಪ್ರಸಿದ್ಧಿಯನ್ನು ಪಡೆಯಲೆಂದು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ನ ಶುಭ ಹಾರೈಕೆ.
ಬರಹ : ಕಿರಣ್ ಬಿ. ರೈ ಕರ್ನೂರು