ಮಂಗಳೂರು(ಮೇ.೨೩): ಗಡಿನಾಡಿನಲ್ಲಿ ಅರಳಿದ ಕಲಾ ಕುಸುಮವೊಂದು ಅಂತರ್ ದೇಶಿಯ ಮಟ್ಟದಲ್ಲಿ ಅಭಿಮಾನಕ್ಕೆ ಭಾಜನವಾಗಿ ರಂಗಭೂಮಿ, ಕಿರುತೆರೆ, ಚಲನಚಿತ್ರರಂಗದ ಮೂಲಕ ನಟನಾಗಿ,ನಿರ್ದೇಶಕನಾಗಿ, ಸಾಹಿತ್ಯಗಾರನಾಗಿ ಅನನ್ಯ ಸಾಧನೆಗಳನ್ನುಗೈಯುತ್ತಾ ತುಳುನಾಡಿನ ಕೀರ್ತಿ ಪತಾಕೆಯನ್ನು ಹಾರಿಸುತ್ತಿರುವುದು ಹೆಮ್ಮೆಯೇ ಸರಿ. ಅಂತಹ ಗೌರವಕ್ಕೆ ಪಾತ್ರವಾಗುವಲ್ಲಿ ರಾಜೇಶ್ ಮುಗುಳಿ ಎಂಬ ಜನ ಸಾಮಾನ್ಯ ಕಲಾವಿದನೊಬ್ಬನ ಪಾತ್ರ ಅಸಾಮಾನ್ಯವಾದುದಾಗಿದೆ. ಇವರ ಸಕ್ರಿಯ ಸಾಧನೆಗಳನ್ನು ಗುರುತಿಸಿ ಮೇ.24ಕ್ಕೆ ಕುಕ್ಕಾಜೆ ಶ್ರೀಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ ಜರಗುವ ಪತ್ತನಾಜೆ ಜಾತ್ರೆಯ ಸಾಂಸ್ಕೃತಿಕ ಸಭಾ ಕಾರ್ಯಕ್ರಮದಲ್ಲಿ ರಂಗ ಮಿತ್ರೆರ್ (ರಿ.)ಪೆರ್ಮುದೆ ತಂಡದಿಂದ ‘ತುಳುನಾಡ ಕಲಾ ಕದಿಕೆ’ ಬಿರುದು ನೀಡಿ ಸನ್ಮಾನಿಸಲಾಗುತ್ತದೆ.
ನಟನೆಯೊಂದರಿಂದಲೇ ಕಲಾಭಿಮಾನಿಗಳ ಕರತಾಡನಕ್ಕೆ ಪಾತ್ರನಾಗುವ ರಾಜೇಶ್ ಪ್ರಬುದ್ಧ ನಟನಾಗಿಯೂ, ರಂಗಭೂಮಿಯ ನಟರನ್ನು ಪಳಗಿಸುವಲ್ಲಿಯೂ ಸಮರ್ಥ ನಿರ್ದೇಶಕನೆಂದು ಗುರುತಿಸಿಕೊಂಡಿದ್ದಾರೆ. ಹಲವಾರು ನಾಟಕಗಳಿಗೆ ಸ್ವತಃ ಸಾಹಿತ್ಯ ರಚನೆ ಮಾಡಿರುವ ಇವರು ಉದಯೋನ್ಮುಖ ಕವಿಯಾಗಿಯೂ ಸಾಹಿತ್ಯ ವಲಯದಲ್ಲಿ ಸಕ್ರಿಯರಾಗಿದ್ದಾರೆ.
ನಿರ್ದೇಶಿಸಿದ ರಂಗಮಿತ್ರೆರ್ ತಂಡದ `ಕನಕಟ್ಟೊಡ್ಚಿ’ ನಾಟಕ ತುಳು ರಂಗಭೂಮಿಯಲ್ಲೊಂದು ಸಂಚಲನ ಸೃಷ್ಠಿಸಿತ್ತು. ನಟನಾಗಿ,ನಿರ್ದೇಶಕನಾಗಿ, ಸಾಹಿತ್ಯಗಾರನಾಗಿ ತುಳುರಂಗಭೂಮಿಯಲ್ಲಿ ಸಕ್ರಿಯರಾಗಿರುವ ರಾಜೇಶ್ ಮುಗುಳಿಯವರ ಕಿರಿಯ ವಯಸ್ಸಿನ ಹಿರಿಯ ಸಾಧನೆಯನ್ನು ಗುರುತಿಸಿ ರಂಗಮಿತ್ರೆರ್ ಪೆರ್ಮುದೆ ‘ತುಳುನಾಡ ಕಲಾ ಕದಿಕೆ’ ಬಿರುದು ನೀಡುತ್ತಿದೆ.
ಮೇ.24ಕ್ಕೆ ಸಂಜೆ 6 ಗಂಟೆಗೆ ಕುಕ್ಕಾಜೆ ಶ್ರೀಕಾಳಿಕಾಂಬ ಆಂಜನೇಯ ಕ್ಷೇತ್ರದ ಸಭಾಂಗಣದಲ್ಲಿ ಮಾಣಿಲ ಶ್ರೀಧಾಮದ ಶ್ರೀಶ್ರೀ ಮೋಹನದಾಸ ಸ್ವಾಮೀಜಿ ಹಾಗೂ ಕುಕ್ಕಾಜೆ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಅವರ ಸಮಕ್ಷಮದಲ್ಲಿ ಬಿರುದು ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಪತ್ರಕರ್ತ ಜಯ ಮಣಿಯಂಪಾರೆ ತಿಳಿಸಿದ್ದಾರೆ.