ಹುಣಸೂರು :ಮಡಿಕೆ ಮಾಡಿ ಕುಡಿಕೆಯಷ್ಟು ಗಂಜಿ ಕುಡಿದು ಜೀವನ ಸಾಗಿಸುವ ಕುಂಬಾರರ ಬದುಕು ಇಲ್ಲಿ ಮೂರಾಬಟ್ಟೆಯಾಗಿದೆ. ಜೇಡಿ ಮಣ್ಣನ್ನು ಹದ ಮಾಡಿ ಮಡಿಕೆ, ಕುಡಿಕೆ, ಓಲೆ, ಹೂ ಕುಂಡ ಸೇರಿದಂತೆ ವಿವಿಧ ಸಾಮಗ್ರಿ ವಸ್ತುಗಳನ್ನು ಮಾಡುವ `ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ’ ಎಂಬ ಗಾದೆ ಕುಂಬಾರರ ಜೀವನದಲ್ಲಿ ಇಲ್ಲಿ ಪ್ರಸ್ತುತವಾಗಿದೆ.
ಕುಂಬಾರರ ಪೀಳಿಗೆ ಗ್ರಾಮೀಣ ಪ್ರದೇಶದಿಂದ ಹಂತ, ಹಂತವಾಗಿ ಕಣ್ಮರೆಯಾಗುತ್ತಿದೆ. ಈ ಸಮಾಜದ ಯುವ ಪೀಳಿಗೆ ಮಣ್ಣಿನ ಕಾಯಕಕ್ಕೆ ಗುಡ್ ಬೈ ಹೇಳಿ ದೂರ ಸರಿಯುವ ಕಾಲ ಬಹಳ ಹತ್ತಿರದಲ್ಲಿದೆ. ಮುಂದಿನ ದಿನದಲ್ಲಿ ಮಡಿಕೆ, ಕುಡಿಕೆ ಮತ್ತು ಮಣ್ಣಿನಿಂದ ಮಾಡಿದ ಇನ್ನಿತರ ಸುಂದರ ವಸ್ತುಗಳು ಕಣ್ಮರೆಯಾಗುವ ದಿನ ಬಂದರೆ ಅಚ್ಚರಿ
ಏನಿಲ್ಲ.
ತಾಲೂಕಿನ ಗಾವಡಗೆರೆ ಸೇರಿದಂತೆ ವಿವಿಧೆಡೆ ವಾಸಿಸುವ ಈ ಕುಂಬಾರ ಜನಾಂಗ ತಮ್ಮ ವಂಶಪರಂಪರೆಯಾಗಿ ಕೃಷಿ ಜೊತೆಗೆ ಜೇಡಿ ಮಣ್ಣನ್ನು ತಂದು ಹದ ಮಾಡಿ, ಮರದ ಹಳೆ ಗಾಡಿ ಚಕ್ರವನ್ನು ಸಾಧನವಾಗಿಟ್ಟುಕೊಂಡು, ಇಟ್ಟಿನ ದೊಣ್ಣೆಯಂತ ತುಂಡಿನಿಂದ ತಟ್ಟಿ ಮಡಿಕೆ ಹಾಗೂ ತಯಾರಿಸಿದ ಇತರ ವಸ್ತುಗಳನ್ನು ಕಾರ್ಯರೂಪಕ್ಕೆ ತಂದ
ಮೇಲೆ, ಸೌದೆಯ ಇದ್ದಿಲನ್ನು ಬಳಸಿ ಮಣ್ಣಿನಿಂದ ನಿರ್ಮಿಸಿದ ಒಲೆಯಲ್ಲಿ ಬೇಯಿಸುವುದು ಪರಂಪರೆ. ನಂತರ ಪ್ರತ್ಯೇಕ ಕೊಠಡಿಯೊಳಗೆ ಶೇಖರಣೆ ಮಾಡಿ, ವಾರದ ದಿನಗಳಲ್ಲಿ ನಡೆಯುವ ಗ್ರಾಮೀಣ ಪ್ರದೇಶದ ಸಂತೆಗಳಿಗೆ ಸುತ್ತಿ, ಮಳೆ, ಬಿಸಿಲು ಎನ್ನದೆ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ನಿರ್ಲಕ್ಷ್ಯ: ಮಡಿಕೆ ಮಾಡುವ ಕುಂಬಾರರಿಗೆ ಮಾಜಿ ಮುಖ್ಯಮಂತ್ರಿ ದಿ.ಡಿ. ದೇವರಾಜು ಅರಸು ಅವರ ಕಾಲದಲ್ಲಿ, ತಮ್ಮ ಜನಾಂಗಕ್ಕೆ ನೀಡಿದ್ದ ಪ್ರಾತಿನಿಧ್ಯವನ್ನು ನಂತರ ಬಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಜನಾಂಗದತ್ತ ಗಮನವರಿಸಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಹಿಂದುಳಿದ ವರ್ಗಗಳ ಇಲಾಖೆಗೆ ಸರಕಾರ ಕೋಟಿಗಟ್ಟಲೆ ಹಣ ನೀಡುತ್ತಿದೆ ಎಂದು ದಾಖಲೆಯಲ್ಲಿ ಹೇಳುತ್ತಿದ್ದಾರೆ ವಿನಃ, ಈ ಕುಂಬಾರ ಜನಾಂಗಕ್ಕೆ ಸವಲತ್ತು ನೀಡಿ ಕಾರ್ಯಗತವಾಗಿರುವ ಒಂದೇ ಒಂದು ನಿದರ್ಶನಗಳಿಲ್ಲ. ಈ ಬಡ ಕುಟುಂಬಗಳನ್ನು ಸ್ಥಳೀಯ ಜನಪ್ರನಿಧಿಗಳು ನಿರ್ಲಕ್ಷ್ಯಿಸಿ, ಗಮನ ಹರಿಸುವರೇ ಇಲ್ಲ ಎಂಬುದು ಈ ಜನಾಂಗಗಳ ಕೂಗು.
ಜೀವನದ ಕಥೆ-ವ್ಯಥೆ: ಕಳೆದ 50 ವರ್ಷಗಳಿಂದ ಗಾವಡಗೆರೆ ಗ್ರಾಮದಲ್ಲಿ ವಾಸಿಸುತ್ತಿರುವ ಸಹೋದರಾದ ರಾಮಕೃಷ್ಣ ಮತ್ತು ಮಹದೇವಶೆಟ್ಟಿ ಎಂಬುವರು ಜೇಡಿ ಮಣ್ಣನ್ನು ಹುಡುಕಿ ತಂದು ಹದ ಮಾಡಿ ಮಡಿಕೆ, ಕುಡಿಕೆ, ಗಡಿಗೆ, ಹೂಕುಂಡ, ಓಲೆ, ಮತ್ತಿತರ ವಸ್ತುಗಳನ್ನು ತಯಾರು ಮಾಡಿ ಹುಣಸೂರು, ಕೆ.ಆರ್. ನಗರ, ರತ್ನಪುರಿ,
ಗೋಣಿಕೊಪ್ಪ, ವಿರಾಜಪೇಟೆ ಸಂತೆಗಳಲ್ಲಿ ಪ್ರತಿ ವಾರವು 1 ರಿಂದ 2 ಸಾವಿರ ರು. ವ್ಯಾಪಾರ ಮಾಡಿ, 200 ರಿಂದ 250 ರು. ಸಂಪಾದನೆ ಮಾಡಿ ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆಯಂತೆ ಜೀವನ ಸಾಗಿಸುತ್ತಿದ್ದಾರೆ. ಕೆಲವರು ಮುಂಗಡವಾಗಿ ವಸ್ತುಗಳ ಬೇಡಿಕೆ ನೀಡಿದ ವ್ಯಾಪಾರಸ್ಥರಿಗೆ ಅಂದ- ಚಂದವಾಗಿರುವ
ವಸ್ತುಗಳನ್ನು ತಯಾರಿ ಮಾಡಿಕೊಡುವ ಪ್ರವೃತ್ತಿಯೂ ಇದೆ. ಮಳೆಗಾಲದಲ್ಲಿ ಮಾಡುವ ಮಡಿಕೆಗಳು ಸುಡುವಾಗ ಮಳೆ ಬಂದರೆ ಹಾಳಾಗುತ್ತವೆ. ಬೇಸಿಗೆ ಕಾಲದಲ್ಲಿ ತೊಂದರೆಯಿಲ್ಲ. ಒಟ್ಟಾರೆ ಜೀವನ ಸಾಗಿಸಲು ಆರ್ಥಿಕ ಪರಿಸ್ಥಿತಿ ಮಾತ್ರ ಕಷ್ಟಕರವಾಗಿದೆ ಎನ್ನುತ್ತಾರೆ ಮಡಿಕೆ ತಯಾರು ಮಾಡುವ ರಾಮಕೃಷ್ಣ. ಮಡಿಕೆ ಮಣ್ಣು ಹದ ಮಾಡಲು ಸೂಕ್ತ ಸ್ಥಳಾವಕಾಶ, ಆಧುನಿಕ ಸಲಕರಣೆಗಳು ಮತ್ತು ಮಡಿಕೆ ಬೇಯಿಸಲು ತಂತ್ರಜ್ಞಾನದ ಗೂಡು, ಮಣ್ಣು ಶೇಖರಣೆಗೆ ಗೋದಾಮು ಮತ್ತು ಸರಕಾರದಿಂದ ಸಹಾಯಧನ, ಆರ್ಥಿಕ ನೆರವು ಮತ್ತು ಬ್ಯಾಂಕುಗಳಿಂದ ಸಾಲ ಸೌಲಭ್ಯಗಳ ನೆರವು ಒದಗಿಸಿ ಕೊಟ್ಟರೆ, ವರ್ಷದ ಎಲ್ಲ ದಿನದಲ್ಲೂ ಮಡಿಕೆ ಕಾಯಕದಲ್ಲಿ ತೊಡಗಿಸಿಕೊಳ್ಳಬಹುದು. ಹತ್ತಾರು ಜನರಿಗೆ ಉದ್ಯೋಗವನ್ನು ಲಭಿಸಿ ತಮ್ಮ ಜೀವನ ಮಟ್ಟವನ್ನು ಸಹ ಸುಧಾರಿಸಿಕೊಂಡು ನೆಮ್ಮದಿಯಾಗಿ ಬದುಕಬಹುದೆಂದು ಎಂಬುದು ಈ ಕುಂಬಾರರ ಅಭಿಮತ.