ಕುಂದಾಪುರ : ತಾಲೂಕಿನ ಅಮಾಸೆಬೈಲು ಕೆಳಾಸುಂಕ ನಿವಾಸಿ ಕೃಷಿಕ ರೈತನೊಬ್ಬ ಸಾಲಬಾಧೆ ತಾಳಲಾರದೆ. ವಿಷ ಸೇವಿಸಿ ಸಾವು ಬದುಕಿನ ನಡುವಿನ ಹೋರಾಟದಲ್ಲಿ ಕೊನೆಗೂ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ.
ಅಮಾಸೆಬೈಲು ಗ್ರಾಮದ ಕೆಳಾಸುಂಕದ ನಿವಾಸಿ ಪ್ರಸ್ತುತ ಕಾವ್ರಾಡಿಯ ಪಡುವಾಲ್ತೂರಿನಲ್ಲಿ ವಾಸವಿದ್ದ ನಲವತ್ತೈದು ವರ್ಷ ಪ್ರಾಯದ ಕೃಷಿಕ ರಾಮ ಕುಲಾಲ್ ಎಂಬವರೇ ಆತ್ಮಹತ್ಯೆ ಮಾಡಿಕೊಂಡ ರೈತ.
ಕೆಳಾಸುಂಕದ ನಿವಾಸಿ ಕಳೆದ ಸುಮಾರು ನಲವತ್ತೈದು ವರ್ಷಗಳಿಂದ ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡ ಎಂಭತ್ತು ವರ್ಷ ಪ್ರಾಯದ ಬಸವ ಕುಲಾಲ್ ಎಂಬುವರ ಹಿರಿಯ ಮಗ ರಾಮಕುಲಾಲ್ ತಂದೆಯ ಕೃಷಿಯನ್ನೇ ಅನುಸರಿಸಿ ಬದುಕು ಕಟ್ಟಿಕೊಂಡವರು. ಸಹೋದರ ಸುಬ್ಬ ಕುಲಾಲ್ ಜೊತೆಗೆ ಭತ್ತದ ಬೇಸಾಯ ಹಾಗೂ ಒಂದಿಷ್ಟು ಅಡಿಕೆ ತೋಟದ ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ರಾಮ ಕುಲಾಲ್ ಕೃಷಿ ಅಭಿವೃದ್ಧಿಗಾಗಿ ನಾಲ್ಕೂವರೆ ಲಕ್ಷ ರೂಪಾಯಿಗಳನ್ನು ಬೇರೆ ಬೇರೆ ಬ್ಯಾಂಕ್ಗಳಲ್ಲಿ ಹಾಗೂ ಕೈ ಸಾಲ ಪಡೆದಿದ್ದರೆನ್ನಲಾಗಿದೆ. ಇದರ ಜೊತೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರಾದರೂ ಮಾಡಿಕೊಮಡ ಸಾಲ ಬೆಟ್ಟದಂತಾಗಿ, ತೀರಿಸಲಾಗದೇ ತನ್ನ ಪತ್ನಿಯ ಮಾಂಗಲ್ಯ ಸರವನ್ನೂ ಅಡವಿಟ್ಟಿದ್ದರು. ಆದರೂ ಸಾಲ ತೀರಿಸಲಾರದಾದಾಗ ದಿಕ್ಕು ಕಾಣದೇ ತಮ್ಮ ಪತ್ನಿಯ ಮನೆಯಾದ ಕಾವ್ರಾಡಿಯಲ್ಲಿ ವಿಷ ಸೇವಿಸಿದ್ದರು.
ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದ ರಾಮ ಕುಲಾಲರನ್ನು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಪ್ರಯೋಜನವಾಗದಿದ್ದಾಗ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬುಧವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಕುಟುಂಬವೀಗ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ರಾಮ ಕುಲಾಲರ ಪತ್ನಿ ಸುಮತಿ ಕುಲಾಲ್ ಮಕ್ಕಳಾದ ವಿಜಯ ಹಾಗೂ ದೀಪಾ ಇದೀಗ ಮನೆಯ ಯಜಮಾನನನ್ನು ಕಳೆದುಕೊಂಡಿದ್ದು, ರಾಮ ಕುಲಾಲರ ತಂದೆ ಬಸವ ಕುಲಾಲ್ ಹಾಗೂ ತಾಯಿ ಲಕ್ಷ್ಮೀ ಕುಲಾಲ್ ಮತ್ತು ಮನೆಯವರ ಭವಿಷ್ಯ ಕತ್ತಲಲ್ಲಿದೆ. ರಾಮ ಕುಲಾಲ ಆತ್ಮಹತ್ಯೆಗೆ ಶರಣಾದ ಸುದ್ಧಿ ತಿಳಿಯುತ್ತಿದ್ದಂತೆ ಸಾಲ ಕೊಟ್ಟವರು ಒಬ್ಬೊಬ್ಬರಾಗಿ ಕುಟುಂಬದ ಬೆನ್ನು ಬಿದ್ದಿದ್ದು, ಕುಟುಂಬ ದಿಕ್ಕು ಕಾಣದಂತಾಗಿದೆ.
ಘಟನೆಯ ಮಾಹಿತಿ ಪಡೆದ ಕುಂದಾಪುರ ಉಪವಿಭಾಗಾಧಿಕಾರಿ ಚಾರುಲತಾ ಸೋಮಾಲ್, ತಹಸೀಲ್ದಾರ್ ಗಾಯತ್ರಿ ಎಸ್ ನಾಯಕ್, ಹಾಗೂ ಗ್ರಾಮ ಕರಣಿಕ ಸುನಿಲ್ ಕುಮಾರ್ ಸ್ಥಳಕ್ಕೆ ಭೇಟಿ ಘಟನೆಯ ವಿವರ ಹಾಗೂ ಸಾಲದ ವಿವರವನ್ನು ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಗುರುವಾರ ಸಂಜೆ ಅಮಾಸೆಬೈಲಿನ ರಾಮಕುಲಾಲರ ಮನೆಗೆ ಭೇಟಿ ನೀಡಿದ ಬಿಜೆಪಿ ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.
ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿಯೂ ಇದೀಗ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಸರ್ಕಾರ ಹಾಗೂ ಉಸ್ತುವಾರಿ ಸಚಿವರು ಮತ್ತು ಜನಪ್ರತಿನಿಧಿಗಳು ಮೃತ ರೈತ ಕುಟುಂಬಕ್ಕೆ ತಕ್ಷಣ ಪರಿಹಾರ ಘೋಷಿಸಬೇಕು. ಜೊತೆಗೆ ಮುಂದೆ ಇಂತಹಾ ರೈತರ ಆತ್ಮಹತ್ಯೆಗಳು ನಡೆಯದಂತೆ ಕ್ರಮ ಕೈಗೊಳ್ಲಬೇಕು. ರೈತರ ಸಾಲವನ್ನು ಬಡ್ಡಿ ಸಹಿತ ಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭ ಕಾವ್ರಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ್ಚಂದ್ರ ಶೆಟ್ಟಿ ಹಾಗೂ ಶೇಖರ ಕುಲಾಲ್ ಉಪಸ್ಥಿತರಿದ್ದರು.