ಪುಣೆ: ಸಂಘಟನೆ ಎಂಬುದು ಸಮಾಜ ಬಾಂಧವರ ಒಗ್ಗಟ್ಟಿಗೆ ಒಂದು ವೇದಿಕೆ. ಈ ಧ್ಯೇಯದೊಂದಿಗೆ ನಮ್ಮ ಹಿರಿಯರು ನಿಸ್ವಾರ್ಥ ಮನೋಭಾವದಿಂದ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇದನ್ನು ಹಿರಿಯರು, ಕಿರಿಯರು ಎಂಬ ಭೇದ- ಭಾವವಿಲ್ಲದೆ ಹೆಮ್ಮರವಾಗಿ ಬೆಳೆಸುವ ಕಾರ್ಯ ನಮ್ಮ ಮುಂದಿದೆ. ಜೇನು ಗೂಡಿನಂತಿರುವ ಸಂಘಟನೆಯಲ್ಲಿ ಸೇವಾ ಮನೋಭಾವದ ವ್ಯಕ್ತಿಗಳಿದ್ದರೆ ಅದು ಬಲಗೊಳ್ಳಲು ಸಾಧ್ಯ. ನಮ್ಮ ಸಂಸ್ಕಾರ, ಸಂಸ್ಕೃತಿಗೆ ಅನುಗುಣವಾಗಿ, ಹಿರಿಯರ ಸಲಹೆಯೊಂದಿಗೆ ಯುವ ಪೀಳಿಗೆಯು ಸಂಘದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಮಂಗಳೂರು ಶ್ರೀನಿವಾಸ ಮೆಡಿಕಲ್ ಕಾಲೇಜು ಮತ್ತು ಹಾಸ್ಪಿಟಲ್ ಇದರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್ ನುಡಿದರು.
ಅ. 4ರಂದು ಪುಣೆಯ ಶ್ಯಾಮರಾವ್ ಕಲ್ಮಾಡಿ ಕನ್ನಡ ಹೈಸ್ಕೂಲ್ ಸಭಾಭವನದಲ್ಲಿ ಜರಗಿದ ಪುಣೆ ಕುಲಾಲ ಸಂಘದ 37ನೇ ವಾರ್ಷಿಕೋತ್ಸವ ಹಾಗೂ ಸ್ನೇಹ ಸಮ್ಮಿಲನದಲ್ಲಿ ಮುಖ್ಯ ಅತಿಥಿಯಾಗಿದ್ದು ಮಾತನಾಡಿದ ಅವರು, ನಮ್ಮ ಬದುಕಿನಲ್ಲಿ ಆಯಾಯ ಕಾಲಘಟ್ಟಕ್ಕೆ ತಕ್ಕಂತೆ ಹೇಗೆ ಬದಲಾವಣೆಯನ್ನು ನಾವು ಕಾಣುತ್ತೇವೆಯೋ ಹಾಗೆ ಸಂಘಟನೆ ಕೂಡ ಬದಲಾವಣೆ ಕಾಣುವಂತಾಗಬೇಕು. ಮಾನವ ಬದುಕಿಗೆ ಬದಲಾವಣೆ ಅನಿವಾರ್ಯ. ಮಹಾ ಕವಿ ಸರ್ವಜ್ಞನ ಕುಲದವರಾದ ನಮಗೆ ನಮ್ಮದೇ ಆದಂಥ ಪಾವಿತ್ರ್ಯವಿದೆ. ಇದನ್ನು ಉಳಿಸುವ ಹೊಣೆ ನಮ್ಮ ಯುವ ಜನತೆಯದ್ದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುಣೆ ಕುಲಾಲ ಸಂಘದ ಅಧ್ಯಕ್ಷ ವಿಶ್ವನಾಥ ಉಡುಪಿ ಮಾತನಾಡಿ, ವ್ಯಕ್ತಿ ಕೇಂದ್ರವಾಗಿರದೆ ನಡೆದುಕೊಂಡು ಬರುತ್ತಿರುವ ನಮ್ಮ ಸಂಘವು ಇಂತಹ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಲು ಹಲವರು ಸಹಕರಿಸಿದ್ದಾರೆ. ಸಂಘದ ಇನ್ನಷ್ಟು ಬೆಳವಣಿಗೆಗೆ ನಿಮ್ಮೆಲ್ಲರ ಸಹಕಾರ ಬೇಕು. ನಮ್ಮ ಸಮಾಜದ ಯುವ ಪೀಳಿಗೆಗೆ ಯಾವ ರೀತಿಯ ಸಂಸ್ಕಾರವನ್ನು ನೀಡಬೇಕು ಎಂಬುದರ ಬಗ್ಗೆ ತೋನ್ಸೆ ವಿಜಯ ಕುಮಾರ್ ಶೆಟ್ಟಿ ಮಾರ್ಗದರ್ಶನ ನೀಡಿದ್ದಾರೆ. ಪೂಜ್ಯ ಮಾಣಿಲ ಶ್ರೀಗಳ ಪಾದಸ್ಪರ್ಶದಿಂದ ನಮ್ಮ ಮುಂದಿನ ಕಾರ್ಯಗಳಿಗೆ ಶುಭಸೂಚನೆ ಸಿಕ್ಕಂತಾಗಿದೆ ಎಂದರು.
ನಾವು ಬೆಳೆದ ರೀತಿ, ಸಂಸ್ಕಾರ, ಸಂಸ್ಕೃತಿ, ನಮ್ಮ ಕುಟುಂಬದ ಒಳಗಿನ ಸಂಬಂಧ, ಅಚಾರ, ವಿಚಾರಗಳು ನಮ್ಮ ಮಕ್ಕಳಿಗೆ ಸಿಗುವಂತಾಗಬೇಕು. ಸಂಬಂಧಗಳನ್ನು ಬೆಳೆಸುವ ಶಿಕ್ಷಣ ನೀಡಬೇಕು. ಸುಸಂಸ್ಕೃತ ಮನುಷ್ಯರ ನ್ನಾಗಿ ನಿರ್ಮಾಣ ಮಾಡುವ, ಬೋಧನೆ ನೀಡುವಂತಹ ಸಂಸ್ಥೆಯಾಗಿ ಸಂಘ ಬೆಳೆಯಬೇಕು. ಇದುವೇ ಸಂಸ್ಥೆಯ ಗುರಿಯಾಗಿರಲಿ ಎಂದು ಕಲಾಜಗತ್ತು ಮುಂಬಯಿಯ ತೋನ್ಸೆ ವಿಜಯ ಕುಮಾರ್ ಶೆಟ್ಟಿ ಹೇಳಿದರು.
ಸಂಘದ ಉಪಾಧ್ಯಕ್ಷ ದೊಡ್ಡಣ್ಣ ಮೂಲ್ಯ, ಜತೆ ಕಾರ್ಯದರ್ಶಿ ನವೀನ್ ಬಂಟ್ವಾಳ್, ಹಿರಿಯರಾದ ವಾಸುದೇವ ಬಂಟ್ವಾಳ್, ನಾರಾಯಣ ಮೂಲ್ಯ, ದೇವದಾಸ್ ಸಾಲ್ಯಾನ್, ರಮೇಶ್ ಕೊಡ್ಮನ್ಕರ್, ಕುಟ್ಟಿ ಮೂಲ್ಯ, ಜತೆ ಕೋಶಾಧಿಕಾರಿ ಹರೀಶ್ ಮೂಲ್ಯ, ಮಹಿಳಾ ವಿಭಾಗದ ಮೋಹಿನಿ ಡಿ. ಸಾಲ್ಯಾನ್ ಅವರು ವೇದಿಕೆಯಲ್ಲಿದ್ದರು. ಅತಿಥಿ ಗಣ್ಯರು ಹಾಗು ಪದಾಧಿಕಾರಿಗಳು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯದರ್ಶಿ ಹರೀಶ್ ಕುಲಾಲ್ ಮುಂಡ್ಕೂರು ಸಂಘದ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಮನೋಜ್ ಸಾಲ್ಯಾನ್ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಸಂಘದ ಸದಸ್ಯರು, ಮಕ್ಕಳು, ಮಹಿಳೆಯರಿಂದ ನೃತ್ಯ ಹಾಗೂ ಯಕ್ಷಗಾನ, ಕಲಾ ಜಗತ್ತು ತೋನ್ಸೆ ವಿಜಯ ಕುಮಾರ್ ಶೆಟ್ಟಿ ರಚಿಸಿ, ನಿರ್ದೇಶಿಸಿರುವ ಪಗರಿದ ಮಂಚವು ಹಾಗೂ
ಕಲಾಜಗತ್ತು ಅಮ್ಮ ಚಾವಡಿ ತಂಡದವರಿಂದ ಮೋಕ್ಷ ಎಂಬ ಎರಡು ನಾಟಕ ಪ್ರದರ್ಶನಗೊಂಡಿತು. ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀ ಧಾಮ ಮಾಣಿಲದ ಪರಮ ಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರನ್ನು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸ್ವಾಗತಿಸಿ, ಪಾದಪೂಜೆಗೈದರು.
ಸಮಾಜದ ಪ್ರಮುಖರಾದ ನವೀನ್ ಬಂಟ್ವಾಳ್, ನಾಗೇಶ್ ಕುಲಾಲ್ , ಮಹಾಬಲ ಮೂಲ್ಯ, ಕುಟ್ಟಿ ಕುಲಾಲ್, ದಾಮೋದರ್ ಮೂಲ್ಯ, ಸದಾಶಿವ ಮೂಲ್ಯ, ಗಣೇಶ್ ಮೂಲ್ಯ, ಸುರೇಂದ್ರ ಮೂಲ್ಯ, ಮಹಿಳಾ ವಿಭಾಗದ ಸರಸ್ವತಿ ಸಿ. ಕುಲಾಲ್ , ಯಶೋದಾ ಎಸ್. ಮೂಲ್ಯ, ಸುಜಾತಾ ಮೂಲ್ಯ, ಜಯಂತಿ ಸಾಲ್ಯಾನ್, ಶಾರದಾ ಮೂಲ್ಯ, ಕು| ಭಾಗ್ಯಶ್ರಿ ಮೂಲ್ಯ ಸಹಕರಿಸಿದರು.
ಈ ಕಾರ್ಯಕ್ರಮದ ಮಧ್ಯಾಂತರದಲ್ಲಿ ಭೋಜನ, ಉಪಾಹಾರದ ವ್ಯವಸ್ಥೆ ಇತ್ತು. ಸಂಘದ ಗೌರವ ಕಾರ್ಯದರ್ಶಿ ಹರೀಶ್ ಕುಲಾಲ… ಮುಂಡ್ಕೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಮ್ಮಾನ: ಕುಲಾಲ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಿರಿಯರಾದ ವಾಸುದೇವ ಬಂಟ್ವಾಳ್ ಹಾಗೂ ನಾರಾಯಣ ಮೂಲ್ಯ ದಂಪತಿಗಳನ್ನು ಶಾಲು ಹೊದೆಸಿ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು. ಸಂಘದ ಪ್ರಮುಖರು ಹಾಗೂ ಸಮಾರಂಭದಲ್ಲಿ ಉಪಸ್ಥಿತರಿದ್ದ ಪುಣೆಯ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಕುಲಾಲ ಸಂಘದ ಪರವಾಗಿ ಅಭಿನಂದಿಸಲಾಯಿತು.