ಕುಂಬಾರರ ನಿಗಮ/ಮಂಡಳಿಯ ಕನಸು ರಾಜ್ಯದ ರಾಜಕೀಯ ನಾಯಕರ ಪ್ರತಿಷ್ಠೆಯ ಸುಳಿಯೊಳಗೆ ಸಿಲುಕಿ, ತ್ರಿಶಂಕು ಸ್ಥಿತಿಯಿಂದ ಮೇಲೇಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತೆ ಹಿಂದಿನ ಬಿಜೆಪಿ ಸರಕಾರ ದೇವರಾಜ್ ಅರಸು ನಿಗಮದ ಅಧೀನ ಸ್ಥಾಪಿಸಿದ್ದ ಕುಂಭ ಕಲಾ ಅಭಿವೃದ್ಧಿ ಮಂಡಳಿಯನ್ನೂ ಈಗಿನ ಕಾಂಗ್ರೆಸ್ ಸರಕಾರ ಕಡೆಗಣಿಸಿ, ಕುಂಬಾರರಿಗೆ ನೀಡಲಾಗುವ ಯೋಜನೆಯನ್ನು ಈ ಸಮುದಾಯಕ್ಕೆ ಸಂಬಂಧವೇ ಇಲ್ಲದ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಮೂಲಕ ನೀಡಲು ಹೊರಟಿದೆ.
ಅವಸಾನದ ಅಂಚಿನಲ್ಲಿರುವ ವಂಶಪಾರಂಪರಿಕಾ ಉದ್ಯಮವಾದ ಕುಂಬಾರಿಕೆಗೆ ಉತ್ತೇಜನವನ್ನು ನೀಡುವ, ಗ್ರಾಮೀಣ ಪ್ರದೇಶದಲ್ಲಿ ಕುಂಬಾರಿಕ ಕಿರು ಉದ್ಯಮವನ್ನು ಸ್ಥಾಪಿಸುವ ಗುರಿಯೊಂದಿಗೆ ನಿರುದ್ಯೋಗಿಗಳು ಸ್ವಾವಲಂಬಿಯಾಗಲು `ಕುಂಬಾರ ಹಳ್ಳಿ’ ಯೋಜನೆಯನ್ನು ಆರಂಭಿಸಲು ಅನುದಾನವನ್ನು (1 ಕೋಟಿ ರೂ.)ಈ ಸಾಲಿನಿಂದ ಖಾದಿ ಗ್ರಾಮೋದ್ಯೋಗ ಇಲಾಖೆ ಮೂಲಕ ನೀಡಲಾಗುವುದು ಎಂದು ಸರಕಾರ ಘೋಷಿಸಿರುವುದು ಪ್ರತ್ಯೇಕ ಕುಂಬಾರ ಮಂಡಳಿ ಸ್ಥಾಪನೆ ಬಿಡಿ, ಈಗಿರುವ ಕುಂಭ ಕಲಾ ಅಭಿವೃದ್ಧಿ ಮಂಡಳಿಯನ್ನೂ ಮೂಲೆಗುಂಪಾಗಿಸುವ ತಂತ್ರವೇ ಎನ್ನುವ ಅನುಮಾನ ಮೂಡಿಸಿದೆ.
ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ ಕುಂಭ ಕಲಾ ಅಭಿವೃದ್ಧಿ ಮಂಡಳಿ ಸ್ಥಾಪಿಸಿ 13 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದ್ದರು. ಅದರಿಂದ ಆರ್ಥಿಕವಾಗಿ ತೀರಾ ಹಿಂದುಳಿದಿದ್ದ ಜನಾಂಗದವರು ಆರ್ಥಿಕವಾಗಿ ಮುಂದಾದರೂ ಸಬಲರಾಗಬಹುದೆಂದು ಕನಸು ಕಾಣುವಂತಾಗಿತ್ತು. ಅಲ್ಲದೆ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಕುಂಬಾರ ಭವನ ನಿರ್ಮಾಣಕ್ಕೆಂದು ರಾಜ್ಯ ಸರ್ಕಾರ ನಿವೇಶನ ಮತ್ತು ಅನುದಾನವನ್ನು ಮಂಜೂರು ಮಾಡಿದಾಗ ಇನ್ನೇನು ಕುಂಬಾರರ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ ಎಂದೇ ನಂಬಲಾಗಿತ್ತು. ಆದರೆ ಕುಂಭ ಕಲಾ ಮಂಡಳಿಯನ್ನು ದೇವರಾಜ ಅರಸು ನಿಗಮದ ಅಧೀನದಲ್ಲಿಟ್ಟ ಫಲವಾಗಿ ಇದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಯಿತು.
ಈ ನಿಗಮದ ಅಧಿಕಾರಿಗಳ ಕಾರುಬಾರಿನಲ್ಲೇ ಅಳೆದು ತೂಗಿ ಕುಂಬಾರರಿಗೆ ಮಡಿಕೆ ಮಾಡಲು ಹಾಗೂ ಶೆಡ್ ನಿರ್ಮಿಸಲು 25 ರಿಂದ 50 ಸಾವಿರ ಸಾಲ ಅದರ ಜೊತೆ ಸಬ್ಸಿಡಿ ಕೊಡುತ್ತಿದ್ದುದು ಬಿಟ್ಟರೆ, ಅದರ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸಲು ಸಮುದಾಯದ ಸೂಕ್ತ ಸದಸ್ಯರ ನೇಮಕವಾಗಲಿಲ್ಲ. ಆಗ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷರಾಗಿದ್ದ ಅಶೋಕ್ ಕಾಟ್ವೆ ಅವರಿಗೆ ಒತ್ತಡ ತಂದ ಕುಂಬಾರ ಸಮುದಾಯದ ನಾಯಕರಾದ ಶಿವಕುಮಾರ್ ಚೌಡ ಶೆಟ್ಟಿ ಹಾಗೂ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ನೇತೃತ್ವದ ತಂಡ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದ ಮೇಲೆ ಕುಂಭಕಲಾ ಅಭಿವೃದ್ಧಿ ಮಂಡಳಿಗೆ ಕರಾವಳಿಯಿಂದ ಉಡುಪಿಯ ಸತೀಶ್ ಕುಲಾಲ್ ಕಡಿಯಾಳಿ, ಬೆಂಗಳೂರಿನ ವಿಭಾಗದಿಂದ ನರಸ ಶೆಟ್ಟಿ ಹಾಗೂ ಉತ್ತರ ಕರ್ನಾಟಕದಿಂದ ಹುಲಗಪ್ಪ ಚೆಳ್ಳಕೆರೆಯವರನ್ನು ನೇಮಕ ಮಾಡಿಸುವಲ್ಲಿ ಕುಂಬಾರ ಸಂಘ ಯಶಸ್ವಿಯಾಯಿತು.
ಆ ಬಳಿಕ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಿದ್ದು, ಇನ್ನೇನು ಪ್ರತ್ಯೇಕ ಕುಂಬಾರ ನಿಗಮವನ್ನೇ ಸ್ಥಾಪಿಸಿ, ಅದಕ್ಕೆ ಕುಂಬಾರ ಸಮುದಾಯದ ನಾಯಕರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಾರೆ ಎಂದು ನಂಬಲಾಗಿತ್ತು. ಅಧಿಕಾರಕ್ಕೇರುವ ಮುನ್ನ ಸೀಎಂ ಸಿದ್ಧರಾಮಯ್ಯರ ವರಸೆಯೂ ಇದಕ್ಕೆ ಪೂರಕವಾಗಿತ್ತು. ಯಾವಾಗ ಕೈಗೆ ಅಧಿಕಾರ ಸಿಕ್ಕಿತೋ ಈ ಮಂಡಳಿಯಲ್ಲಿ ಖಾಲಿಬಿದ್ದ ಸದಸ್ಯರನ್ನೂ ನೇಮಿಸುವ ಕಾರ್ಯಕ್ಕೂ ಕಾಂಗ್ರೆಸ್ ಮುಂದಾಗಲಿಲ್ಲ. ಸಂಬಂಧಪಟ್ಟ ಎಲ್ಲಾ ಅರ್ಜಿಗಳನ್ನೂ ಕಡೆಗಣಿಸಿದ್ದು, ಇತ್ತೀಚೆಗಷ್ಟೇ ಚೌಡಶೆಟ್ಟಿ, ಅಣ್ಣಯ್ಯ ಅವರ ಒತ್ತಡದಿಂದ ಒಬ್ಬರು ಸದಸ್ಯರನ್ನು ಮೈಸೂರು ಭಾಗದಿಂದ ಆಯ್ಕೆ ಮಾಡಿ ತೆಪ್ಪಗೆ ಕುಳಿತಿದೆ. ಇನ್ನೊಂದೆಡೆ ದೇವರಾಜ್ ಅರಸು ನಿಗಮದ ಅಡಿ ಇರುವ ಕುಂಭ ನಿಗಮವನ್ನೂ ಬದಿಗೊತ್ತಿ ಖಾದಿ ಗ್ರಾಮೋದ್ಯೋಗದ ಮೂಲಕ ಕುಂಬಾರ ಹಳ್ಳಿ ಯೋಜನೆಗೆ ಮುಂದಾಗಿರುವುದು `ಎಲ್ಲ ಬಿಟ್ಟ ಬಂಗಿ ನೆಟ್ಟ’ ಎಂಬ ಗಾದೆ ಮಾತಿನಂತಾಗಿದೆ.
ಇಲ್ಲಿ ಹಿಂದಿನ ಸರಕಾರದ ಯೋಜನೆಯನ್ನು ಬೆಂಬಲಿಸಿ ಕಾರ್ಯರೂಪಕ್ಕೆ ತಂದರೆ ಅದರ ಕ್ರೆಡಿಟ್ ತಮಗೆ ಸಿಗುವುದು ಅನುಮಾನ ಎಂಬ ಆತಂಕ ಕಾಂಗ್ರೆಸ್ ನಾಯಕರಿಗಿರುವುದು ಸ್ಪಷ್ಟವಾಗಿದೆ. ಸರಕಾರ ಕುಂಬಾರರಿಗೆ ಸವಲತ್ತುಗಳನ್ನು ಪ್ರತ್ಯಪ್ರತ್ಯೇಕ ನಿಗಮಗಳಲ್ಲಿ ಅಲ್ಪಸ್ವಲ್ಪ ಅನುದಾನದೊಂದಿಗೆ ನೀಡಿ, ಸಮಾಧಾನ ಮಾಡಲು ಯೋಚಿಸುತ್ತಿದೆ. ಎಲ್ಲದರ ನಡುವೆ ಯಾರೋ ಹೆಣಗಾಡಿ ಸ್ಥಾಪಿಸಿರುವ ಮಂಡಳಿಯ ಖುರ್ಚಿಯಲ್ಲಿ ಕುಳಿತುಕೊಳ್ಳಲು ಕಾಂಗ್ರೆಸ್ ನಲ್ಲಿರುವ ಕುಂಬಾರ/ಕುಲಾಲ ಸಮುದಾಯದ ನಾಯಕರು ಹೋರಾಟ ನಡೆಸುತ್ತಿದ್ದಾರೆಯೇ ವಿನಃ, ಸರಕಾರಕ್ಕೆ ಸಮುದಾಯದ ಸಮಸ್ಯೆಯನ್ನು ಮನದಟ್ಟು ಮಾಡುವ ಗೋಜಿಗೇ ಹೋಗುತ್ತಿಲ್ಲ. ಹೀಗಾಗಿ ಸರಕಾರ ಕುಂಬಾರ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಮನಸ್ಸು ಮಾಡುತ್ತಿಲ್ಲ. ಒಟ್ಟಿನಲ್ಲಿ ರಾಜಕೀಯ ಪ್ರತಿಷ್ಠೆಗೆ ಸಿಲುಕಿ ಕುಂಬಾರರಿಗೆ ನ್ಯಾಯವಾಗಿ ದೊರಕಬೇಕಾದ ಉತ್ತಮ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳಿಸದೇ ಇರುವುದು ದುರ್ದೈವವೆಂದೇ ಹೇಳಬೇಕು.
ದಿನೇಶ್ ಬಂಗೇರ ಇರ್ವತ್ತೂರು
(ವ್ಯವಸ್ಥಾಪಕ ಸಂಪಾದಕ)




