ಅವರಿಬ್ಬರು ಮುದ್ದು ಮುದ್ದು ಪ್ರೇಮಿಗಳು. ಕಡಲ ತಡಿಯಲ್ಲಿ ಕಾಲು ಚಾಚಿ ಕುಳಿತಿದ್ದರು.!!
ಬೆಳ್ನೂರೆಯುಗುಳುತ್ತಾ ದಡಕ್ಕೆ ಮುತ್ತಿಕ್ಕುತ್ತಿದ್ದವು ಕಡಲ ತೆರೆಗಳು. ಬಿಳಿಯ ಮರಳಿನ ಅಂಚಿನಲಿ ಮೈದಳೆದು ನಿಂತ ತೆಂಗಿನ ಮಡಲಿನ ನೆರಳಿನಲಿ ಅವರಿಬ್ಬರು ಜೊತೆಸೇರಿದ್ದರು.
ಕಾಲು ಚಾಚಿ ಕುಳಿತಿದ್ದ ಆ ಯುವಕನ ತೋಳ ತೆಕ್ಕೆಯಲಿ ತಲೆಯಾನಿಸಿ ಆಕೆ ಪವಡಿಸಿದ್ದಳು. ಆತನ ಕೈಯೊಳಗೆ ತನ್ನ ನವಿರು ಬೆರಳುಗಳನ್ನು ಸೇರಿಸಿ ನುಡಿದಳು.
“ಪ್ರಿಯಾ.. ನೀ ಪ್ರತಿದಿನವೂ ಈ ಸಾಗರದ ಚೆಲುವನು ವರ್ಣಿಸುವಾಗೆಲ್ಲಾ ನನಗೂ ನಿನ್ನ ಹಾಗೇ ಈ ಚೆಲುವನು ಕಣ್ತುಂಬಿಕೊಳ್ಳಬೇಕು ಎಂಬ ಆಸೆ. ಆದರೇನು ಮಾಡ್ಲಿ? ನಾನು ಕುರುಡಿ. ಕತ್ತಲೆಯೇ ನನ್ನ ಬದುಕಾಯ್ತಲ್ಲ ಅನ್ನೋ ವ್ಯಥೆಯಲ್ಲೆ ಬೆಳೆದೆ. ಆದರೆ ಇವತ್ತು ನಿನಗೊಂದು ಗುಡ್ ನ್ಯೂಸ್ ಹೇಳ್ತೇನೆ ಕೇಳು.. ಅದ್ಯಾರೋ ಒಬ್ಬ ಮಹಾನುಭಾವ ಅಂತೆ. ನನಗೆ ಕಣ್ಣುಗಳನ್ನು ದಾನ ಮಾಡ್ತಾನಂತೆ..ನಾಳೆಯೇ ಜೋಡಿಸ್ತಾರಂತೆ.. ನಾನಿನ್ನು ಸುಮಾರು ದಿನ ನಿನಗೆ ಸಿಗಲ್ಲ. ಏನು ಮಾಡ್ತೀಯಾ?”
“ಏನು ಮಾಡುವುದಪ್ಪಾ ನಾನು..ನೀ ಬರುವರೆಗೆ ಹೀಗೆ ಸಮುದ್ರದ ಸೆರಗು ಲೆಕ್ಕ ಹಾಕುತ್ತಾ ಕುಳಿತುಕೊಳ್ಳುವೆ..ನೀ ಇಲ್ಲಿಯೇ ಬಂದು ಮತ್ತೆ ನನ್ನನ್ನು ಸಂಧಿಸು.” ಆತನ ಉತ್ತರ.
“ಕಣ್ಣು ಜೋಡಣೆಯಾಗಿ ಕಪ್ಪು ಪಟ್ಟಿ ತೆಗೆದ ಕೂಡಲೇ ನಾ ಓಡಿ ಬರುವೆ..ನಿನ್ನ ಬಿಟ್ಟು ನಾ ಬದುಕಲಾರೆ” ಆತನ ಬಿಗಿದಪ್ಪಿ ಆಕೆ ನುಡಿದಳು.. ಅವನು ಬೀಳ್ಗೊಂಡ!
…….. ……
ಪರಿವರ್ತನೆ ಈ ಜಗದ ನಿಯಮ. ಅನಿವಾರ್ಯತೆ ಬದುಕಿನ ನಿಯಮ..
ಅವಳಿಗೆ ಕಣ್ಣು ಜೋಡಣೆಗೊಂಡಿತು. ಇಷ್ಟು ದಿನ ಕಪ್ಪು ಕತ್ತಲಿನ ಸಾಮ್ರಾಜ್ಯದಲ್ಲಿ ಮುಳುಗಿಹೋಗಿದ್ದ ಆಕೆ ಈ ಜಗದ ಸೊಬಗನ್ನು ಸೊಜಿಗದಿ ನೋಡಿದಳು.. ಆನಂದಿಸಿದಳು.. ಅನುಭವಿಸಿದಳು.. ಸಂಭ್ರಮದ ಸೊಬಗಿನಲಿ ಹರಿಣಿಯಂತೆ ಕುಣಿದಾಡಿದಳು. ಹಳತೆಲ್ಲ ಆಕೆಗೆ ಮರೆತೇ ಹೊಯ್ತು.
ಈ ಬದುಕೇ ಅನಿರೀಕ್ಷಿತಗಳ ಸಂತೆ.? ಅವಳಿಗೆ ಕಂಗಳನ್ನು ಜೋಡಿಸಿದ ಆಸ್ಪತ್ರೆಯ ಪ್ರಸಿದ್ಧ ವೈದ್ಯ ಡಾ. ಶ್ರೀಕಾಂತ್ ಅವಳ ಮುದ್ದು ಮೊಗದ ಸೌಂದರ್ಯಕ್ಕೆ ಮಾರು ಹೋದ. ಅವಳ ಅಪ್ಪನಲಿ ನೇರವಾಗಿ ಮದುವೆಯ ಪ್ರಸ್ತಾಪಗೈದ. ಏನು ಎತ್ತ ಎಂದು ವಿಚಾರಿಸುವುದರೊಳಗೆ ಆಕೆ ಪ್ರಸಿದ್ದ ವೈದ್ಯನ ಬಾಳ ಸಂಗಾತಿಯಾದಳು.. ಈ ಸಮಾಜದ ಪ್ರತಿಷ್ಠಿತ ವ್ಯಕ್ತಿಯೆನಿಸಿದಳು..
ವರ್ಷಗಳುರುಳಿದವು. ಒಂದಿನ ತನ್ನ ಪತಿಯ ಕೈಹಿಡಿದು ಅದೇ ಆ ಸಾಗರದ “ಸನ್ ಸೆಟ್” ಸವಿಯಲು ಓಡಿ ಬಂದಳು. ದುತ್ತನೇ ಹಳೆಯ ಪ್ರೇಮಿಯ ನೆನಪಾಗಿ ಸುತ್ತೆಲ್ಲ ಹುಡುಕಾಡಿದಳು: ಎದೆಯ ಮೇಲೆ ಕೈಯಿಟ್ಟು ತಡಕಾಡಿದಳು. ಊಹೂಂ.. ಎಲ್ಲಿಯೂ ಅವಳ ಆ ಪ್ರೇಮಿಯ ಗೋಚರವೇ ಇಲ್ಲ! ಹುಡುಕಿ ಹುಡುಕಿ ಸುಸ್ತಾದಳು. ಇನ್ನು ಕಾಯುದರಲ್ಲಿ ಅರ್ಥವಿಲ್ಲ ಎಂದರಿತ ಆಕೆ ಗಂಡನ ಕೈಹಿಡಿದು ಭಾರದ ಹೆಜ್ಜೆಯೊಡನೇ ಕಾರಿನೆಡೆಗೆ ನೆಡೆಯಹತ್ತಿದಳು.
ಅಲ್ಲೊಬ್ಬ ಕುರುಡು ಭಿಕ್ಷುಕ ಕುಳಿತಿದ್ದ. ದಯನೀಯ ಸ್ಥಿತಿಯಲ್ಲಿದ್ದ. “ಅಮ್ಮಾ ಭಿಕ್ಷೆ ಹಾಕಿ..ಧರ್ಮ ಮಾಡಿ” ಎಂದು ಒರಲುತ್ತಿದ್ದ..
ಡಾ. ಶ್ರೀಕಾಂತ್ ಗೆ ಏನನ್ನಿಸಿತೋ..ನೂರರ ಗರಿ ಗರಿ ನೋಟೊಂದನ್ನು ಆತನ ತಟ್ಟೆಗೆ ಚೆಲ್ಲಲು ಪರ್ಸಿನಿಂದ ತೆಗೆದ. ಅವಳಿಗೆ ಸರ್ರನೇ ಸಿಟ್ಟು ಬಂತು. ತಡೆದಳು.
“ಥೂ.. ಎಲ್ಲಿ ಹೋದ್ರೂ ಈ ದರಿದ್ರ ಬಿಕ್ಷುಕರದ್ದು ಇದೇ ಕಾಟ. ದುಡಿದು ತಿನ್ನುವುದಕ್ಕೇನು ದಾಡಿ ಇವಕ್ಕೆ..ಒಂದು ರೂಪಾಯಿ ಹಾಕಬೇಡಿ..ಬನ್ನಿ ಸುಮ್ಮಗೆ”
ಪರ್ಸಿನಿಂದೆಳೆದ ನೂರು ರೂಪಾಯಿಯನ್ನು ಮತ್ತೇ ಪರ್ಸಿಗೆ ಸೇರಿಸಿ ಡಾ. ಶ್ರೀಕಾಂತ್ ಕಾರು ಸ್ಟಾರ್ಟ್ ಮಾಡಿದ.. ಭರ್ರೆಂದು ಕಾರು ಮುಂದೆ ಚಲಿಸಿತು..
ಇವರಿಬ್ಬರ ಮಾತುಗಳನ್ನು ಆ ಬಡ ಕುರುಡು ಭಿಕ್ಷುಕ ಸ್ಪಷ್ಟವಾಗಿ ಕೇಳಿಸಿಕೊಂಡ..ಅವಳ ಧ್ವನಿಯ ಗುರುತು ಹತ್ತಿತು.. ದಿಗ್ಬ್ರಾಂತನಾಗಿ ಎದ್ದು ಕುಳಿತ. ಕಾತುರತೆಯಿಂದ ಕೂಗಿ ಹೇಳಿದ.
“ಪ್ರಿಯೆ..ನೀ ಭಿಕ್ಷೆ ಹಾಕದಿದ್ದರೂ ಚಿಂತೆಯಿಲ್ಲ. ಆದರೆ ಕುರುಡನೆಂದು ತಿರಸ್ಕರಿಸದಿರು. ನನ್ನ ಮನ ಮರುಗಿತು. ಒಂದು ಮಾತು ಗೆಳತಿ.. ಸದಾ ನಿನ್ನ ಕಣ್ಣುಗಳನ್ನು ಜೋಪಾನ ಮಾಡಿಕೋ.. ಏಕೆಂದರೆ ಅವೆರಡು ನನ್ನದು..ನಾನೇ ನಿನಗೆ ಕಣ್ಣು ಕೊಟ್ಟ ದಾನಿ”..!!
ಕಡಲ ತುಂಬ ಕೆಂಪಗಿನ ರಕ್ತದೋಕುಳಿ ಹರಡಿದ ಆ ಬಾನ ಭಾಸ್ಕರ ದುಡುಮ್ಮನೇ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈದ. ಕಪ್ಪು ಕತ್ತಲು ಸುತ್ತೆಲ್ಲ ಹರಡಲಾರಂಭಿಸಿತು.!
ರಚನೆ: ಮಂಜುನಾಥ್ ಹಿಲಿಯಾಣ