ದೋಹಾ : ಕುಲಾಲ/ಕುಂಬಾರ ಸಮಾಜದ ಇತಿಹಾಸದಲ್ಲಿಯೇ ಪ್ರಪ್ರಥವಾಗಿ ವಿದೇಶದಲ್ಲಿ ಬಲಗೊಂಡ ಏಕೈಕ ಸಂಘ ಎಂದರೆ ಕತಾರ್ `ಕುಲಾಲ್ ಫ್ರೆಂಡ್ಸ್ ‘. ೨೦೧೨ ರಲ್ಲಿ ಉದಯವಾದ ಕುಲಾಲ್ ಫ್ರೆಂಡ್ಸ್ ಇದುವರೆಗೆ ಸಮಾಜದ ಹಲವು ಮಂದಿ ಅಸಹಾಯಕರಿಗೆ ಸಹಾಯಹಸ್ತ ಚಾಚುವುದರ ಮೂಲಕ ತನ್ನ ಸಾಮಾಜಿಕ ಕಳಕಳಿಯನ್ನು ಸಾಬೀತು ಮಾಡಿದೆ.
ಸರಕಾರದ ಅಧೀನ ಸಂಸ್ಥೆ ಕತಾರ್ ಕೆಮಿಕಲ್ಸ್ ಇದರ ಅಧಿಕಾರಿಯಾಗಿರುವ ಮೂಲತಃ ಕುಂದಾಪುರ ಕೆದೂರು ನಿವಾಸಿ ಆನಂದ ಕುಂಬಾರ ಅವರ ಮುತುವರ್ಜಿಯಲ್ಲಿ ೨೦೧೨ರ ಜೂನ್ ತಿಂಗಳಲ್ಲಿ ಆರಂಭಗೊಂಡ `ಕುಲಾಲ್ ಫ್ರೆಂಡ್ಸ್ ‘ಕೂಟ ವರ್ಷದಲ್ಲಿ ಹಲವು ಬಾರಿ ವಿವಿಧ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಸಕ್ರಿಯವಾಗಿದ್ದು, ಸುಮಾರು ಅರುವತ್ತು ಕ್ಕೂ ಹೆಚ್ಚು ಮಂದಿ ಸದಸ್ಯರನ್ನು ಹೊಂದಿದೆ.
ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕವೇ ಒಂದಾದ ಈ ಕೂಟ, ಫೇಸ್ ಬುಕ್ ಮೂಲಕ ಅಲ್ಲದೆ ಕುಂಬಾರ/ಕುಲಾಲ ಯುವ ವೇದಿಕೆ ಸುರತ್ಕಲ್ ಘಟಕದ ಮೂಲಕ ಸಮಾಜದ ಬಡ, ಸಹಾಯಕರಿಗೆ ಇದುವರೆಗೆ ರೂ. ೨ ಲಕ್ಷಕ್ಕೂ ಅಧಿಕ ಸಹಾಯಹಸ್ತ ನೀಡಿದೆ. ವಿವಿಧ ಸಮಸ್ಯೆಗಳಿಂದ ಆರ್ಥಿಕ ಸಂಕಟ ಎದುರಿಸುತ್ತಿದ್ದ ಬಂಟಕಲ್ ನ ಸಂಗೀತಾ ಮೂಲ್ಯ, ಬಂಟ್ವಾಳದ ಕೂಸಪ್ಪ ಮೂಲ್ಯ, ಮಂಗಳೂರಿನ ದಾಕ್ಷಾಯಿಣಿ ಬಂಗೇರ, ಸುರತ್ಕಲ್ ನ ಲಾವ್ಯ , ಹಿರಿಯಡ್ಕದ ಸುಭಾಸ್ ಕುಲಾಲ್, ಜೆಪ್ಪು ನಿವಾಸಿ ಭವಾನಿ, ಕುತ್ತೆತ್ತೂರಿನ ಸುನಿಲ್ , ಕುಂದಾಪುರ ಬಿದ್ಕಲ್ ಕಟ್ಟೆ ವಸಂತ ಕುಲಾಲ್ , ಮೂಡಬಿದಿರೆಯ ಭಾಸ್ಕರ ಮೂಲ್ಯ ಸಹಿತ ಹಲವು ಕುಟುಂಬಕ್ಕೆ ಸಹಾಯಹಸ್ತ ನೀಡುವ ಮೂಲಕ ಮಾನವೀಯತೆ ಮೆರೆದಿದೆ.