ಬಂಟ್ವಾಳ(ಮಾ.೦೭): ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ವಾರ್ಷಿಕೋತ್ಸವವು ಮಾ.19 ರಂದು ಬಿ.ಸಿ ರೋಡ್ ಪೊಸಳ್ಳಿಯಲ್ಲಿರುವ ಸಮುದಾಯ ಭವನದಲ್ಲಿ ನಡೆಯಲಿದೆ.
ಸಂಘದ ಅಧ್ಯಕ್ಷ ಬಿ.ಸತೀಶ್ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಂಜೇಶ್ವರ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಬಾಲಕೃಷ್ಣ ದೀಕ್ಷಾ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಲಕ್ಷ್ಮಣ ಕುಲಾಲ್ ಅಗ್ರಬೈಲು, ತಾಲೂಕು ಪಂಚಾಯತ್ ಸದಸ್ಯೆ ಮಂಜುಳಾ, ಬಂಟ್ವಾಳ ಉಪವಿಭಾಗದ ಅಬಕಾರಿ ಉಪ ನಿರೀಕ್ಷಕ ಚಂದ್ರಕಾಂತ್, ಎಪಿಎಂಸಿ ಸದಸ್ಯ ದಿವಾಕರ ಪಂಬದಬೆಟ್ಟು ಮುಂತಾದ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ವಿಶೇಷ ಆಕರ್ಷಣೆ : ಸಂಘದ ಸದಸ್ಯರ ಯಕ್ಷಗಾನ
ಸಭಾ ಕಾರ್ಯಕ್ರಮದ ಬಳಿಕ ಕಾರ್ಯಕ್ರಮದ ಆಕರ್ಷಣೆಯಾಗಿ ಯಕ್ಷಗಾನ ಬಯಲಾಟ ನಡೆಯಲಿದೆ. ಬಂಟ್ವಾಳ ಕುಲಾಲ ಸುಧಾರಕ ಸಂಘ, ಮಹಿಳಾ ಘಟಕ ಹಾಗೂ ಸೇವಾದಳದ ಸದಸ್ಯರೇ ಯಕ್ಷಗಾನ ಕಲಿತು ಪ್ರದರ್ಶನ ನೀಡುತ್ತಿರುವುದು ವಿಶೇಷ.
ಕುಲಾಲ ಸಂಘದ ವಾರ್ಷಿಕೋತ್ಸವದಲ್ಲಿ ಕುಲಾಲ ಬಂಧುಗಳೇ ಯಕ್ಷಗಾನ ಕಾರ್ಯಕ್ರಮ ನೀಡಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದವರು ಸೇವಾದಳ ದಲಪತಿ ಯಾದವ ಅಗ್ರಬೈಲು. ಸ್ವತಃ ಯಕ್ಷ ಕಲಾವಿದರಾಗಿರುವ ಯಾದವ-ಕವಿತಾ ದಂಪತಿಗಳು ಸಂಘದ ಸದಸ್ಯರನ್ನು ಸಂಘಟಿಸಿ ಯಕ್ಷ ಗುರು ಅಳದಂಗಡಿ ಯೋಗೀಶ್ ಆಚಾರ್ ಅವರಿಂದ ತರಬೇತಿ ಕೊಡಿಸುತ್ತಿದ್ದಾರೆ. ಬರೇ ಯಕ್ಷಗಾನ ನೋಡಿ ತಿಳಿದಿದ್ದ ಮಂದಿ ಚೆಂಡೆ, ಮದ್ದಳೆ, ತಾಳದ ನಿನಾದಕ್ಕೆ ಹೆಜ್ಜೆ ಹಾಕುತ್ತಿದ್ದಾರೆ. ಮಾ19 ರಂದು ಯಶಸ್ವಿ ಕಾರ್ಯಕ್ರಮ ನೀಡಲು ಸಿದ್ದತೆ ನಡೆಸುತ್ತಿದ್ದಾರೆ.
ಯಾದವ ಅಗ್ರಬೈಲು, ಕವಿತಾ ಯಾದವ್, ದೀಪಕ್ ಸಾಲ್ಯಾನ್, ಗಣೇಶ್ ದುಗನಕೋಡಿ, ಸದಾಶಿವ ಬಂಗೇರ, ಮನೋಹರ ನೇರಂಬೋಳು, ಸುಕುಮಾರ್ ಬಂಟ್ವಾಳ, ನಾರಾಯಣ ಪೆರ್ನೆ, ನಮಿತಾ, ಜಯಂತಿ ಟೀಚರ್, ಪ್ರೇಮ ಪೊಸಳ್ಳಿ, ಮೀನಾಕ್ಷಿ ಅಲೆತ್ತೂರು ಸೇರಿದಂತೆ 28 ಕಲಾವಿದರು ಯಕ್ಷಗಾನದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.