ಆಗದು ಎಂದು ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಎಂದೂ….ಎಂಬ ಹಾಡನ್ನು ಹಾಡಿರುವ ಡಾ.ರಾಜ್ ಅವರ ಈ ಹಾಡಿನ ಸಾಲನ್ನು ಕೇಳಿದರೆ ಎಂತಹ ಸೋಮಾರಿಗಳಾದರೂ ಸಾಧಕರಾಗಬಹುದು.ಹುಟ್ಟಿನಿಂದಲೇ ಅಂಗವೈಕ್ಯಲ್ಯತೆ ಕಾಡಿದರೂ ಭವಿಷ್ಯದ ಬಗ್ಗೆ ಚಿಂತಿಸದೇ ಹೆದರದೆ ಜಗ್ಗದೆ ಮುನ್ನಡೆದು ಸ್ವತಂತ್ರ ಬದುಕನ್ನು ರೂಪಿಸುವವರು ತುಂಬಾ ವಿರಳ. ಆದರೆ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದ ಚೆನ್ನಿಬೆಟ್ಟು ನಿವಾಸಿ ಬೊಗ್ಗು ಮೂಲ್ಯ ಎಂಬ ಭಿನ್ನಚೇತನ ಯುವಕ ಹುಟ್ಟಿನಿಂದಲೇ ತನ್ನ ಎರಡೂ ಕಾಲಿನ ಶಕ್ತಿಯನ್ನು ಶಾಶ್ವತವಾಗಿ ಕಳೆದುಕೊಂಡರು ಧೃತಿಗೆಡದೇ ಸಾಧನೆಯ ಛಲದಂಕಮಲ್ಲನಾಗಿ ಅಸಾಧ್ಯವೆನಿಸಿರುವುದನ್ನು ಸಾಧ್ಯವಾಗಿಸಿದ್ದಾರೆ.
ಚೆನ್ನಿಬೆಟ್ಟಿನ ಕೊರಗ ಮೂಲ್ಯ ಹಾಗೂ ಕಮಲಾ ದಂಪತಿಗಳ ಇಬ್ಬರು ಮಕ್ಕಳಲ್ಲಿ ಹಿರಿಯವರಾಗಿರುವ ಬೊಗ್ಗು ಮೂಲ್ಯ ತನ್ನ ಮೂರನೇ ವಯಸ್ಸಿನಲ್ಲೇ ಪೋಲಿಯೋ ಎಂಬ ಮಾರಕ ಖಾಯಿಲೆಗೆ ತುತ್ತಾಗಿ ತನ್ನ ಎರಡೂ ಕಾಲಿನ ಶಕ್ತಿಯನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಯಿತು.ಮನೆಯಲ್ಲಿ ಬಡತನವಿದ್ದರೂ ಕೊರಗ ಮೂಲ್ಯ ತನ್ನ ಮಗನಿಗೆ ಚಿಕಿತ್ಸೆ ಕೊಡಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬೊಗ್ಗು ಮೂಲ್ಯರಿಗೆ ಅಂಗವಿಕಲತೆ ಕಾಡುತ್ತಿದ್ದರೂ,ಎಲ್ಲಾ ಮಕ್ಕಳಂತೆ ತಾನೂ ಶಾಲೆಗೆ ಹೋಗಬೇಕೆಂಬ ಆಸೆಯಿದ್ದರೂ ಬಡತನವೆಂಬುವುದು ಅವರ ಕಲಿಕೆ ಅಡ್ಡಿಯಾಗಿ ವಿದ್ಯಾಭ್ಯಾಸವೆನ್ನುವುದು ಬೊಗ್ಗು ಮೂಲ್ಯರ ಪಾಲಿಗೆ ಕೇವಲ ಮರೀಚಿಕೆಯಾಯಿತು.
ವಿದ್ಯೆ ಕೈಕೊಟ್ಟರೂ ಕೃಷಿ ಕೈಹಿಡಿಯಿತು…..
ಬೊಗ್ಗು ಮೂಲ್ಯರಿಗೆ ಬಾಲ್ಯದಲ್ಲಿ ವಿದ್ಯೆಯೆನ್ನುವುದು ಗಗನ ಕುಸುಮವಾದರೂ ನಂತರ ಪ್ರೌಢಾವಸ್ಥೆಯಲ್ಲಿ ತನ್ನ ತಂದೆಯೊಂದಿಗೆ ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡು ಕೃಷಿಯಲ್ಲಿ ತಮ್ಮ ಬದುಕಿನ ಲಯ ಕಂಡುಕೊಂಡರು. ಕಾಲಿನ ಶಕ್ತಿ ಕಳೆದುಕೊಂಡರೂ ಕೈಗಳ ಸಹಾಯದಿಂದ ತೆವಳಿಕೊಂಡೇ ಹೋಗಿ ಕೃಷಿ ಕೆಲಸಕ್ಕೆ ತೊಡಗಿಕೊಳ್ಳುತ್ತಿದ್ದರು. ಬಾಳೆ,ಅಡಿಕೆ,ತೆಂಗಿನ ಹೊಂಡ ಅಲ್ಲದೇ ಕೃಷಿ ಜಮೀನಿಗೆ ಬೇಲಿ ನಿರ್ಮಾಣ ಮುಂತಾದ ಕೆಲಸಗಳನ್ನು ಯಶಸ್ವೀಯಾಗಿ ಮಾಡಿ ಮುಗಿಸುತ್ತಿದ್ದ ಬೊಗ್ಗು ಮೂಲ್ಯರು ಒಂದು ದಿನವೂ ಸೋಮಾರಿಯಂತೆ ಕುಳಿತುಕೊಂಡವರಲ್ಲ.
ವಾಹನಗಳ ಟೈರ್ ಪಂಕ್ಚರ್ ಪ್ರವೀಣ….!
ಬೊಗ್ಗು ಮೂಲ್ಯ ತಮ್ಮ ಬಿಡುವಿನ ವೇಳೆಯಲ್ಲಿ ಸಣ್ಣಪುಟ್ಟ ಖರ್ಚು ಗಳನ್ನು ನಿಭಾಯಿಸಲು ಮನೆಯಲ್ಲಿದ್ದುಕೊಂಡೇ ಬೈಕ್ ರಿಕ್ಷಾ,ಸೈಕಲ್ ಮುಂತಾದ ಲಘುವಾಹನಗಳ ಟಯರ್ ಪಂಕ್ಚರ್ ಹಾಕುವುದನ್ನು ಶರುಮಾಡಿದರು.ನಂತರ ದೂರದಲ್ಲಿ ಕೆಟ್ಟುನಿಂತ ವಾಹನಗಳ ಟಯರ್ ಪಂಕ್ಚರ್ ಹಾಕಲು ಹಾಗೂ ತಮ್ಮ ಓಡಾಟಕ್ಕೂ ಅನುಕೂಲವಾಗಲೆಂದು ತ್ರಿಚಕ್ರ ಸೈಕಲ್ ಖರೀದಿಸಿ ವಾಹನ ಮಾಲೀಕರಿಂದ ಕರೆ ಬಂದ ಕೂಡಲೇ ವಾಹನ ದುರಸ್ತಿಗೆ ಹಾಜರ್.
ಟಯರ್ ಪಂಕ್ಚರ್ ಹಾಕುತ್ತಿದ್ದ ಯುವಕ ರಿಕ್ಷಾ ಮಾಲೀಕನಾದ…
ಅಂದು ಕರೆದಲ್ಲಿ ಬಂದು ವಾಹನಗಳ ಟಯರ್ ಪಂಕ್ಚರ್ ಹಾಕುತ್ತಿದ್ದ ಬೊಗ್ಗು ಮೂಲ್ಯ ಇಂದು ರಿಕ್ಷಾ ಮಾಲೀಕರಾಗಿದ್ದಾರೆ. ಸ್ವಂತ ವಾಹನ ಖರೀದಿಸಿ ತಾನು ಏನಾದರೂ ಸಾಧಿಸಬೇಕೆಂಬ ಧೃಡನಿರ್ಧಾರದೊಂದಿಗೆ ಆರ್ಥಿಕ ಸಹಾಯಕ್ಕಾಗಿ ದೊಂಡೇರಂಗಡಿಯ ವಿಜಯಾ ಬ್ಯಾಂಕ್ ನಲ್ಲಿ ಆರ್ಥಿಕ ನೆರವು ಕೇಳಿದ್ದಕ್ಕೆ ಅಲ್ಲಿನ ಮ್ಯಾನೇಜರ್ ನಮ್ಮಲ್ಲಿ ಅಂಗವಿಲಕರಿಗೆ ಸಾಲ ಕೊಡಲು ಸಾಧ್ಯವಿಲ್ಲ ಎಂದು ವಾಪಾಸ್ಸು ಕಳಿಸಿದಾಗ ಬೊಗ್ಗು ಮೂಲ್ಯ ವಿಚಲಿತರಾಗದೇ ತನ್ನ ಸಂಬಂಧಿಕರ ಸಹಾಯದಿಂದ ಉಡುಪಿಯ ಕೆನರಾ ಬ್ಯಾಂಕಿನಲ್ಲಿ ರಿಕ್ಷಾ ಖರೀದಿಸಲು ಸಾಲ ಸೌಲಭ್ಯ ಕೇಳಿದಾಗ ಬ್ಯಾಂಕಿನ ಮ್ಯಾನೇಜರ್ ರಾಜೇಶ್ ಮರುಮಾತಿಲ್ಲದೇ ಇವರಿಗೆ 1ಲಕ್ಷ ಸಾಲವನ್ನು ಮಂಜೂರುಗೊಳಿಸಿದರು. ಬ್ಯಾಂಕಿನ ಸಾಲದೊಂದಿಗೆ ತಾನು ಕಷ್ಟಪಟ್ಟು ಸಂಪಾದಿಸಿದ್ದ 40ಸಾವಿರ ರೂ ಸೇರಿಸಿ ಹೊಸ ರಿಕ್ಷಾ ಖರೀದಿಸಿದರು. ಸ್ವತಃ ತಾವೇ ರಿಕ್ಷಾ ಚಲಾಯಿಸುತ್ತಿದ್ದುದರಿಂದ ಕಾಲಿನಲ್ಲಿ ನಿಯಂತ್ರಿಸುತ್ತಿದ್ದ ಬ್ರೇಕ್ ಪೆಡಲನ್ನು ಕೈಯಲ್ಲಿ ನಿಯಂತ್ರಿಸುವಂತೆ ವಿನ್ಯಾಸ ಮಾಡಲಾಯಿತು. ಮನೆ ಕೆಲಸ ಮಾಡಿಕೊಂಡು ಮನೆಯಿಂದಲೇ ರಿಕ್ಷಾದಲ್ಲಿ ಬಾಡಿಗೆ ಮಾಡುತ್ತಿರುವ ಬೊಗ್ಗು ಮೂಲ್ಯ ರಿಕ್ಷಾ ಖರೀದಿಸಿ ವರ್ಷಗಳಾಗಿದ್ದು ಸಾಲವನ್ನು ಮರುಪಾವತಿಸಿದ್ದಾರೆ.
ಮನೆಯಲ್ಲಿ ಅಲ್ಪಸ್ವಲ್ಪ ಕೃಷಿಯನ್ನು ಮಾಡಿಕೊಂಡಿರುವ ಬೊಗ್ಗು ಮೂಲ್ಯ ಬಾಡಿಗೆ ಇಲ್ಲದಿರುವ ವೇಳೆಯಲ್ಲಿ ಅಡಿಕೆ ಬೆಳೆಗಾರರ ಚಾಲಿ ಅಡಿಕೆಯನ್ನು ಸುಲಿಯುವ ಕೆಲಸನ್ನೂ ಮಾಡುತ್ತಿದ್ದಾರೆ.
ಬೊಗ್ಗು ಮೂಲ್ಯರವರು ಶೇ 75ರಷ್ಟು ಅಂಗವೈಕಲ್ಯತೆ ಹೊಂದಿದ್ದು ಸರಕಾರದಿಂದ ಮಾಸಿಕ 1ಸಾವಿರ ಅಂಗವಿಕಲ ವೇತನ ಪಡೆಯುತ್ತಿದ್ದಾರೆ. ಪತ್ನಿ ಲಕ್ಷ್ಮಿ ಹಾಗೂ ತಂದೆ ಕೊರಗ ಮೂಲ್ಯರನ್ನು ಸಾಕುವ ಜವಾಬ್ದಾರಿ ಹೊತ್ತಿರುವ ಬೊಗ್ಗು ಮೂಲ್ಯರ ಸಾಧನೆ ನಿಜಕ್ಕೂ ಶ್ಲಾಘನೀಯ.
ವರದಿ: ಕೃಷ್ಣ ಎನ್ ಅಜೆಕಾರು